ನಾಳೆಯಿಂದ ದಕ್ಷಿಣ ಭಾರತದ ಆಗ್ರೋ ಎಕ್ಸ್ ಪೋ

ತುಮಕೂರು

    ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ ಸಂಸ್ಥೆ)ದ ವತಿಯಿಂದ ಜುಲೈ 19 ರಿಂದ 21ರವರೆಗೆ 3 ದಿನಗಳ ಕಾಲ “ದಕ್ಷಿಣ ಭಾರತದ ಆಗ್ರೋ ಎಕ್ಸ್‍ಪೋ: ಕೃಷಿ ಮತ್ತು ಪೂರಕ ವಸ್ತು ಪ್ರದರ್ಶನ ಹಾಗೂ ಮಾರಾಟ”ವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಆರ್. ರಾಜು ತಿಳಿಸಿದರು.

     ಈ ವಸ್ತು ಪ್ರದರ್ಶನವನ್ನು ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಏರ್ಪಡಿಸಲಾಗಿದ್ದು, ಮೇಯರ್ ಲಲಿತಾ ರವೀಶ್ ಅವರು ಜುಲೈ 19ರ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಕೆಎಸ್‍ಎಸ್‍ಐಡಿಸಿ ಅಧ್ಯಕ್ಷ ಹಾಗೂ ಶಾಸಕ ಬಿ.ಎಸ್.ಸುರೇಶ್, ಎಂಎಸ್‍ಐ ಎಲ್ ಅಧ್ಯಕ್ಷ ಹಾಗೂ ಶಾಸಕ ಡಿ.ಸಿ.ಗೌರಿಶಂಕರ್, ಶಾಸಕ ಜ್ಯೋತಿಗಣೇಶ್, ಸರ್ಕಾರದ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಹಾಗೂ ಪ್ರಧಾನ ಕಾರ್ಯದರ್ಶಿ ಗೌರವ್‍ಗುಪ್ತ, ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ: ಏಕ್‍ರೂಪ್ ಕೌರ್, ಸೂಕ್ಷ್ಮ, ಸಣ್ಣ ಮತ್ತು ಮಧ್ಯ ಕೈಗಾರಿಕೆಗಳ ಇಲಾಖೆ ನಿರ್ದೇಶಕ ಎಸ್. ಜಿಯಾಉಲ್ಲಾ, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೆಚ್.ಪಿ. ಪ್ರಕಾಶ್, ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

    ಕಾಸಿಯಾ ಸಂಸ್ಥೆಯು ಈ ಹಿಂದೆ 2015ರಲ್ಲಿ ಬೆಳಗಾವಿ ಹಾಗೂ 2016ರಲ್ಲಿ ಮೈಸೂರಿನಲ್ಲಿ ಈ ವಸ್ತು ಪ್ರದರ್ಶನವನ್ನು ಏರ್ಪಡಿಸಿತ್ತು. ಅದೇ ರೀತಿ ತುಮಕೂರಿನಲ್ಲಿಯೂ ಕೆಎಸ್‍ಎಸ್‍ಐಡಿಸಿ, ಕೇಂದ್ರ ಸರ್ಕಾರದ ಎನ್‍ಎಸ್‍ಐಸಿ, ರಾಜ್ಯ ಕೃಷಿ ಇಲಾಖೆ ಸಹಯೋಗದಲ್ಲಿ ಜುಲೈ 19 ರಿಂದ 21ರವರೆಗೆ 3 ದಿನಗಳ ಕಾಲ ವಸ್ತುಪ್ರದರ್ಶನವನ್ನು ಆಯೋಜಿಸಿದೆ. ಅಲ್ಲದೆ ರೈತರಿಗಾಗಿ ಜುಲೈ 20ರಂದು ಬೆಳಿಗ್ಗೆ 11 ಗಂಟೆಗೆ ಸಿಎಫ್‍ಟಿಆರ್‍ಐ ವತಿಯಿಂದ ಆಹಾರ ಸಂಸ್ಕರಣಾ ಕಾರ್ಯಾಗಾರ ಹಾಗೂ ಜುಲೈ 21ರ ಬೆಳಿಗ್ಗೆ 11 ಗಂಟೆಗೆ ಆಗ್ರೋ ಪಾಲಿಸಿ ಕುರಿತು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

     ತುಮಕೂರು ಜಿಲ್ಲೆಯಲ್ಲಿ ಅಡಿಕೆ, ತೆಂಗು ಬೆಳೆಗಾರರು ಹೆಚ್ಚಾಗಿರುವುದರಿಂದ ವಸ್ತುಪ್ರದರ್ಶನಕ್ಕೆ ಈ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೃಷಿ ಚಟುವಟಿಕೆಯನ್ನೇ ತಮ್ಮ ಜೀವನಾಧಾರವಾಗಿಸಿಕೊಂಡಿರುವ ರೈತರಿಗೆ ಈ ಪ್ರದರ್ಶನ ಅನುಕೂಲವಾಗಲಿದೆ. ಪ್ರದರ್ಶನದಲ್ಲಿ ಕೃಷಿ/ ಕೃಷಿ ಕೈಗಾರಿಕೆಗಳ ವೈವಿಧ್ಯಮಯ ಕ್ಷೇತ್ರ, ಇಂಜಿನಿಯರಿಂಗ್ ಹಾಗೂ ಉತ್ಪಾದನೆ ಸೇರಿದಂತೆ ಕೃಷಿಗೆ ಸಂಬಂಧಿಸಿದ ಪೂರಕ ವಸ್ತುಪ್ರದರ್ಶನ, ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದಲ್ಲದೆ, ತಜ್ಞರಿಂದ ಕೃಷಿ/ ತೋಟಗಾರಿಕೆ/ ಪುಷ್ಪೋದ್ಯಮ/ ರೇಷ್ಮೆ/ ಜೈವಿಕ ತಂತ್ರಜ್ಞಾನ/ ಮೀನುಗಾರಿಕೆ/ ಪಶುಸಂಗೋಪನೆ/ ಡೈರಿ ಮತ್ತು ಕೋಳಿ ಸಾಕಾಣಿಕೆ ಕುರಿತು ಮಾಹಿತಿ ನೀಡಲಾಗುವುದು. ಅಲ್ಲದೆ ಕೃಷಿ ಉದ್ಯಮಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು, ಶೇಖರಣಾ ಮತ್ತು ಸಾರಿಗೆ ಕೈಗಾರಿಕೆಗಳು, ಇನ್‍ಪುಟ್ ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರದಲ್ಲಿ ಆವಿಷ್ಕರಿಸಿದ ನೂತನ ಯಂತ್ರೋಪಕರಣ ಮತ್ತು ಸಾಧನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

      ಸಂಘದ ಗೌರವ ಉಪಾಧ್ಯಕ್ಷ ಕೆ.ವಿ.ಅರಸಪ್ಪ ಮಾತನಾಡಿ, ಈ ಪ್ರದರ್ಶನಕ್ಕೆ ಎಲ್ಲರಿಗೂ ಉಚಿತ ಪ್ರವೇಶಾವಕಾಶವಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು. ಹಿಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗಳಿಂದಲೇ ನಿರ್ವಹಣೆ ಮಾಡಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಕೂಲಿ ಕಾರ್ಮಿಕರ ಕೊರತೆಯಿಂದ ವ್ಯವಸಾಯ ಮಾಡುವುದು ಕಷ್ಟಕರವಾಗಿದೆ. ಯಂತ್ರಗಳನ್ನು ಬಳಸಿ ಕೃಷಿಯಲ್ಲಿ ಆದಾಯ ಹೇಗೆ ಗಳಿಸಬಹುದೆಂದು ಮಾಹಿತಿ ನೀಡುವ ಸಲುವಾಗಿ ಆಗ್ರೋ ಎಕ್ಸ್‍ಪೋ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

      ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಹಲವಾರು ಸಣ್ಣ ಕೈಗಾರಿಕೆಗಳು ತಯಾರಿಸಿರುವ ಕೃಷಿ ಯಂತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಲಾಗುವುದು. ಪಟ್ಟಣ ಸೇರಿರುವ ಯುವಕರನ್ನು ಕೃಷಿಯೆಡೆಗೆ ಸೆಳೆಯುವ ಪ್ರಯತ್ನವನ್ನು ಸಹ ಈ ವಸ್ತುಪ್ರದರ್ಶನದ ಮೂಲಕ ಮಾಡಲಾಗುತ್ತಿದೆ. ಸುಮಾರು 20ಸಾವಿರ ರೈತರು/ ರೈತ ಕಾರ್ಮಿಕರು/ ಸಣ್ಣ ಕೈಗಾರಿಕೋದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.

      ಗೌರವ ಕಾರ್ಯದರ್ಶಿ ಎಂ.ಜಿ. ರಾಜ್‍ಗೋಪಾಲ್ ಮಾತನಾಡಿ ಕಳೆದ ಬಾರಿ ಬೆಳಗಾವಿ ಹಾಗೂ ಮೈಸೂರಿನಲ್ಲಿ ಏರ್ಪಡಿಸಿದ್ದ ವಸ್ತುಪ್ರದರ್ಶನದಲ್ಲಿ 450ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದು 100ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ಮಾಡಲಾಗಿತ್ತು ಎಂದು ತಿಳಿಸಿದರಲ್ಲದೆ, ಈ ಬಾರಿ ತುಮಕೂರಿನಲ್ಲಿ 150 ಮಳಿಗೆಗಳನ್ನು ತೆರೆಯಲಾಗುವುದು. ಪ್ರದರ್ಶನದಲ್ಲಿ ರೈತರಿಗೆ ಕಡಿಮೆ ಬೆಲೆಯಲ್ಲಿ ಹಾಗೂ ಕೈಗೆಟಕುವ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಮಾರಾಟ ಮಾಡಲಾಗುವುದು. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

       ಈ ಸಂದರ್ಭದಲ್ಲಿ ಸಂಘದ ಗೌರವ ಖಜಾಂಚಿ ಎಸ್.ಎಂ.ಹುಸೇನ್, ವೈಸ್ ಛೇರ್ಮನ್ ಬೋರೇಗೌಡ, ತುಮಕೂರು ವಲಯದ ಕಾರ್ಯಕಾರಿ ಸಮಿತಿ ಸದಸ್ಯ ಸದಾಶಿವ ಅಮಿನ್, ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link