ಬಳ್ಳಾರಿ:
ಏಷ್ಯಾದಲ್ಲೇ ಅತಿದೊಡ್ಡ ರೇಷ್ಮೆ ಮಾರುಕಟ್ಟೆ ಎನ್ನಲಾದ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಬಳ್ಳಾರಿ ರೇಷ್ಮೆ ಗೂಡುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರಸಕ್ತ ಸಾಲಿನಲ್ಲಿ ಬಳ್ಳಾರಿ ರೇಷ್ಮೆ ಗೂಡಿಗೆ ತೃತೀಯ ಬಹುಮಾನವೂ ಲಭಿಸಿದೆ. ಇಷ್ಟೊಂದು ಬೇಡಿಕೆಯಿರುವ ರೇಷ್ಮೆ ಕೃಷಿಯನ್ನು ಮತ್ತಷ್ಟು ವಿಸ್ತರಿಸಲು, ಉತ್ಪಾದನೆ ಹೆಚ್ಚಿಸಲು ಸಿಬ್ಬಂದಿಗಳ ಕೊರತೆ ಎದುರಾಗಿದ್ದು, ಕೆಲ ಪ್ರಮುಖ ಹುದ್ದೆಗಳ ನೇಮಕಾತಿಯೇ ಸ್ಥಗಿತಗೊಂಡಂತಾಗಿದೆ.
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಕೃಷಿಗೆ ಪರ್ಯಾಯವಾಗಿ ತೋಟಗಾರಿಕೆ, ರೇಷ್ಮೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಸಂಡೂರು, ಕೂಡ್ಲಿಗಿ, ಹ.ಬೊ.ಹಳ್ಳಿ, ಹಡಗಲಿ, ಹರಪನಹಳ್ಳಿ ತಾಲೂಕುಗಳಲ್ಲಿ 2500 ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಉತ್ತಮ ಗುಣಮಟ್ಟ ಹೊಂದಿರುವ ಜಿಲ್ಲೆಯ ರೇಷ್ಮೆ ಗೂಡಿಗೆ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಬೇಡಿಕೆಯೊಂದಿಗೆ ವರ್ಷದಿಂದ ವರ್ಷ ಬೆಲೆಯೂ ಹೆಚ್ಚುತ್ತಿದೆ. ಆದರೆ, ಜಿಲ್ಲೆಯ ರೈತರಲ್ಲಿ ರೇಷ್ಮೆ ಬೆಳೆಯ ಬಗ್ಗೆ ಜಾಗೃತಿ ಮೂಡಿಸಲು, ರೇಷ್ಮೆ ಬೆಳೆಯನ್ನು ಮತ್ತಷ್ಟು ವಿಸ್ತರಿಸಿ, ಉತ್ಪಾದನೆ ಹೆಚ್ಚಿಸಲು ರೇಷ್ಮೆ ಇಲಾಖೆ ಅಗತ್ಯ ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ.
ಬಳ್ಳಾರಿಯ ರೇಷ್ಮೆ ಇಲಾಖೆಯಲ್ಲಿ ರಾಜ್ಯ ವಲಯ ಕಚೇರಿ, ಜಿಲ್ಲಾ ವಲಯ ಕಚೇರಿ ಸೇರಿ ಒಟ್ಟು 98 ಹುದ್ದೆಗಳಿಗೆ ಸರ್ಕಾರ ಮಂಜೂರು ನೀಡಿದೆ. ಆದರೆ, ಇದರಲ್ಲಿ ಭರ್ತಿಯಾಗಿದ್ದಕ್ಕಿಂತ ಖಾಲಿ ಹುದ್ದೆಗಳ ಸಂಖ್ಯೆಯೇ ಹೆಚ್ಚಾಗಿದೆ. ಇಲಾಖೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿ ಉಪನಿರ್ದೇಶಕರ ಹುದ್ದೆಯೇ ಖಾಲಿಯಿದ್ದು, ಕೂಡ್ಲಿಗಿ ಸಹಾಯಕ ನಿರ್ದೇಶಕರೇ ಉಪನಿರ್ದೇಶಕರ ಹುದ್ದೆಯನ್ನು ನಿಭಾಯಿಸುತ್ತಿದ್ದಾರೆ. ಕಳೆದ ಎರಡು ದಶಕಗಳಿಂದ ರೇಷ್ಮೆ ವಿಸ್ತರಣಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯೇ ನಡೆದಿಲ್ಲ.
ಇನ್ನು ರೇಷ್ಮೆ ಬೆಳೆಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ, ರೈತರಿಗೆ ಅಗತ್ಯ ಮಾಹಿತಿ ನೀಡುವ ರೇಷ್ಮೆ ನಿರೀಕ್ಷಕರು, ರೇಷ್ಮೆ ಪ್ರದರ್ಶಕರು, ರೇಷ್ಮೆ ಪ್ರವರ್ತಕರ ಹುದ್ದೆಗಳು ಬಹುತೇಕ ಖಾಲಿಯಿದ್ದು, ಇಬ್ಬರು, ಮೂವರು ಮಾಡುವ ಕೆಲಸವನ್ನು ಒಬ್ಬರೇ ಮಾಡಬೇಕಾದ ಅನಿವಾರ್ಯತೆ ಸದ್ಯ ಕಾರ್ಯನಿರ್ವಹಿಸುತ್ತಿರುವ ರೇಷ್ಮೆ ನಿರೀಕ್ಷಕರು, ಪ್ರದರ್ಶಕರು, ಪ್ರವರ್ತಕರ ಮೇಲಿದೆ. ಆದಾಗ್ಯೂ ರೇಷ್ಮೆ ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಇರುವ ಸಿಬ್ಬಂದಿಗಳಿಂದಲೇ ಸರಿದೂಗಿಸುತ್ತಿದ್ದೇವೆ ಎನ್ನುತ್ತಾರೆ ಇಲಾಖೆಯ ಉಪನಿರ್ದೇಶಕ ವಿ.ಸುಧೀರ್.
61 ಹುದ್ದೆಗಳು ಖಾಲಿ
ಇಲಾಖೆಯಲ್ಲಿ ಇರುವ 1 ಉಪನಿರ್ದೇಶಕ ಹುದ್ದೆ ಖಾಲಿಯಿದೆ. ಸಹಾಯಕ ನಿರ್ದೇಶಕ 2ರಲ್ಲಿ 1 ಖಾಲಿ, 4 ಎಫ್‍ಡಿಎ ಹುದ್ದೆಗಳಲ್ಲಿ 2 ಭರ್ತಿಯಾಗಿದ್ದು, 3 ಖಾಲಿಯಿವೆ. 22 ರೇಷ್ಮೆ ನಿರೀಕ್ಷಕರಲ್ಲಿ ಕೇವಲ 5 ಹುದ್ದೆಗಳು ಭರ್ತಿಯಿದ್ದು, 17 ಹುದ್ದೆಗಳು ಖಾಲಿಯಿವೆ. ರೇಷ್ಮೆ ಪ್ರದರ್ಶಕರು 27ರಲ್ಲಿ 13 ಭರ್ತಿಯಾಗಿದ್ದು, 14 ಖಾಲಿಯಿವೆ. ರೇಷ್ಮೆ ಪ್ರವರ್ತಕರು 9 ಹುದ್ದೆಗಳಲ್ಲಿ 4 ಭರ್ತಿಯಾಗಿದ್ದು, 5 ಖಾಲಿಯಿವೆ. ದ್ವಿತೀಯ ದರ್ಜೆ ಸಹಾಯಕ 3 ರಲ್ಲಿ 2 ಭರ್ತಿಯಾಗಿದ್ದು, 1 ಖಾಲಿಯಿವೆ. ಬೆರಳಚ್ಚುಗಾರರ 5 ಹುದ್ದೆಗಳಲ್ಲಿ 4 ಖಾಲಿಯಿವೆ. 16 ಡಿ ಗ್ರೂಪ್ ನೌಕರರಲ್ಲಿ 6 ಭರ್ತಿಯಾಗಿದ್ದು, 10 ಖಾಲಿಯಿವೆ. ಹೀಗೆ ಒಟ್ಟು ಮಂಜೂರಾದ 98 ಹುದ್ದೆಗಳ ಪೈಕಿ ಕೇವಲ 37 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, 68 ಹುದ್ದೆಗಳು ಖಾಲಿಯಿವೆ. ಅಲ್ಲದೇ ಇಲಾಖೆಯಲ್ಲಿ ಈ ಮೊದಲು ಇದ್ದ ರೇಷ್ಮೆ ಮೊಟ್ಟೆ ಉತ್ಪಾದನಾ ಕೇಂದ್ರದಲ್ಲಿ ನಿರ್ವಹಿಸುತ್ತಿದ್ದ 10ಕ್ಕೂ ಹೆಚ್ಚು ಸಿಬ್ಬಂದಿಗಳು ನಿವೃತ್ತರಾದ ಬಳಿಕ ಕೇಂದ್ರವನ್ನು ಸ್ಥಗಿತಗೊಳಿಸಲಾಯಿತು. ಹಾಗಾಗಿ ಆ ಹುದ್ದೆಗಳಿಗೆ ತಾಂತ್ರಿಕ ಸಿಬ್ಬಂದಿಗಳನ್ನು ಸರ್ಕಾರದಿಂದ ಪುನಃ ನಿಯೋಜಿಸಿಲ್ಲ ಎನ್ನುತ್ತಾರೆ ಅವರು.
ಪೂರ್ವ ತಾಲೂಕುಗಳಲ್ಲಿ ಪೂರಕ ವಾತಾವರಣವಿಲ್ಲ
ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಬೆಳೆಯಲು ಪಶ್ಚಿಮ ತಾಲೂಕುಗಳಾದ ಹೊಸಪೇಟೆ, ಹ.ಬೊ.ಹಳ್ಳಿ, ಹಡಗಲಿ, ಹರಪನಹಳ್ಳಿ, ಕೂಡ್ಲಿಗಿಯಲ್ಲಿ ಇದ್ದಂತಹ ಪೂರಕ ವಾತಾವರಣ ಪೂರ್ವ ತಾಲೂಕುಗಳಾದ ಬಳ್ಳಾರಿ, ಸಿರುಗುಪ್ಪ, ಕುರುಗೋಡಿನಲ್ಲಿ ಇಲ್ಲ. ಇಲ್ಲಿನ ತಾಪಮಾನ, ಧೂಳಿನ ಸಮಸ್ಯೆಗೆ ರೇಷ್ಮೆ ಹುಳುಗಳು ಸಾಯುವ ಸಂಭವ ಹೆಚ್ಚು. ಹಾಗಾಗಿ ಜಿಲ್ಲೆಯಲ್ಲಿ ಈ ಮೂರು ಪೂರ್ವ ತಾಲೂಕುಗಳನ್ನು ಹೊರತುಪಡಿಸಿ, ಪಶ್ಚಿಮ ತಾಲೂಕುಗಳಲ್ಲಿ ರೇಷ್ಮೆ ಬೆಳೆಯಲು ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಪೂರ್ವ ತಾಲೂಕುಗಳನ್ನು ಇಲಾಖೆಯ ನಕ್ಷೆಯಿಂದಲೇ ಹೊರಗಿಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸುತ್ತಾರೆ.
ಜಿಲ್ಲೆಗೆ ತೃತೀಯ ಬಹುಮಾನ
ಬಳ್ಳಾರಿ ಜಿಲ್ಲೆಯಲ್ಲಿ ಬೆಳೆಯುವ ರೇಷ್ಮೆ ಗೂಡುಗಳಿಗೆ ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಜತೆಗೆ ರೇಷ್ಮೆ ಗೂಡುಗಳ ಬೆಲೆಯೂ ಹೆಚ್ಚುತ್ತಿದೆ. ಹಾಗಾಗಿ ಉತ್ತಮ ಗುಣಮಟ್ಟದೊಂದಿಗೆ ಎಕರೆಯಲ್ಲಿ 4 ರಿಂದ 5 ಬೆಳೆಯನ್ನು ಉತ್ಪಾದಿಸಿದ ಹಿನ್ನೆಲೆಯಲ್ಲಿ ಬಳ್ಳಾರಿಗೆ ತೃತೀಯ ಬಹುಮಾನ ಲಭಿಸಿದೆ. ಕೋಲಾರ ಮತ್ತು ಹಾಸನಕ್ಕೆ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಲಭಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆಯಂತೆ ರೇಷ್ಮೆ ಬೆಳೆಗೂ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ