ಬೆಂಗಳೂರು
ಬಿಜೆಪಿ ಸಂಸದರು ಬಕೆಟ್ ರಾಜಕೀಯ ಮಾಡುವುದನ್ನು ಬಿಟ್ಟು ಜನತೆಯ ಸಂಕಷ್ಟಕ್ಕೆ ಸ್ಪಂದಿಸುವುದು ಅತ್ಯವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದರು.ಸದ್ಭಾವನಾ ನಡಿಗೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಂಸದ ಪ್ರತಾಪ್ ಸಿಂಹ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರಿಗೆ ಹೋಲಿಸಿ ಮಾತನಾಡಿದ್ದಾರೆ. ಆದರೆ ಮೋದಿ ಅವರು ದೇವರಾಗಿದ್ದರೆ, ನೆರೆ ಸಂತ್ರಸ್ಥರಿಗೆ ಪರಿಹಾರದ ಹಣ ಬಿಡುಗಡೆ ಮಾಡುತ್ತಿದ್ದರು. ಆದರೆ ರಾಜಕೀಯ ದ್ವೇಷದಿಂದ ಇಂತಹ ಕೀಳುಮಟ್ಟದ ರಾಜಕೀಯ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಸಂಸದ ಪ್ರತಾಪ್ ಸಿಂಹ ಅವರು ಹೇಳಿಕೆ ನೀಡುವಾಗ ಸಭ್ಯತೆ ಮೀರಬಾರದು, ಯಾವ ವ್ಯಕ್ತಿಯನ್ನಾಗಲಿ ದೇವರಿಗೆ ಹೋಲಿಸಬಾರದು. ಪ್ರತಿಯೊಬ್ಬರಿಗೂ ಜನರೇ ದೇವರು, ಅವರ ಸಂಕಷ್ಟಕ್ಕೆ ಸ್ಪಂದಿಸಿದಾಗ ಮಾತ್ರ ದೇವರು ಒಲಿಯುತ್ತಾನೆ. ಅದನ್ನು ಬಿಟ್ಟು ವಿನಾಕಾರಣ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಟೀಕಿಸಿದರು.
ಉತ್ತರ ಕರ್ನಾಟಕ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸುಮಾರು ಎರಡು ತಿಂಗಳುಗಳಿಂದ ನೆರೆ ಹಾವಳಿಯಿಂದ ಲಕ್ಷಾಂತರ ಮಂದಿ ಮನೆ – ಮಠ ಕಳೆದುಕೊಂಡು ನಿರಾಶ್ರಿತರಾಗಿ ಬೀದಿಯಲ್ಲಿ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕೇಂದ್ರದ ಹಣಕಾಸು ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ, ಹಲವರು ವೈಮಾನಿಕ ಸಮೀಕ್ಷೆ ನಡೆಸಿ, ನೆರೆ ಹಾವಳಿಯ ಬಗ್ಗೆ ವಿಸ್ತೃತ ವರದಿ ನೀಡಿದ್ದರೂ, ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದೆ.
ಬಿಹಾರ, ಗುಜರಾತ್ ಸೇರಿದಂತೆ, ಇತರ ರಾಜ್ಯಗಳ ಬಗ್ಗೆ ಕಾಳಜಿ ವಹಿಸುವ ಪ್ರಧಾನಿ ಅವರು, ಕರ್ನಾಟಕದ ಬಗ್ಗೆ ಯಾವುದೇ ಕಾಳಜಿ ವಹಿಸದೆ, ಮೌನ ವಹಿಸಿರುವುದು ರಾಜಕೀಯ ವಿಪ್ಲವಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ದೂರಿದರು.ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಸೇರಿದಂತೆ, ಹಲವು ಕಾಂಗ್ರೆಸ್ ನಾಯಕರು, ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಹರಿಹಾಯ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ