ಯುಡಿಐಡಿ ಕಾರ್ಡ್‍ಗೆ ಮಧ್ಯವರ್ತಿಗಳ ಹಾವಳಿ

ದಾವಣಗೆರೆ :

   ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಮಾಡಿಕೊಡುವ ಆಸ್ಪತ್ರೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ ಎಂದು ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಆರೋಪಿಸಿದರು.

   ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಕುರಿತು ಜಿಲ್ಲಾ ಮಟ್ಟದ ಸಮಿತಿಯ ಸಬೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಒಂದು ಯುಡಿಐಡಿ ಕಾರ್ಡ್ ಮಾಡಿಸಿಕೊಡಲು ಎರಡು ಸಾವಿರ ಹಣ ಕೇಳುತ್ತಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣವೇ ಈ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

   ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ವಿಕಲಚೇತನರಿಗೆ ಉಚಿತವಾಗಿ ಯುಡಿಐಡಿ ಕಾರ್ಡ್ ಮಾಡಿಕೊಡ ಬೇಕಾಗಿದೆ. ವೈದ್ಯರು ಅಥವಾ ಮಧ್ಯವರ್ತಿಗಳು ಹಣ ಕೇಳಿದರೆ ಸಾರ್ವಜನಿಕರು ನೇರವಾಗಿ ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08192-257778ಕ್ಕೆ ಕರೆ ಮಾಡಿ ದೂರು ಸಲ್ಲಿಸಿದರೆ, ತಾವು ಈ ಬಗ್ಗೆ ಹಾಗೂ ಶೇಕಡವಾರು ಅಂಗವಿಕಲತೆ ಬಗ್ಗೆ ತಜ್ಞರ ಸಮಿತಿ ರಚಿಸಿ ಅಂಗವೈಕಲ್ಯದ ಬಗ್ಗೆ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

  ವಿಕಲಚೇತನರಿಗೆ ಯುಡಿಐಡಿ ಕಾರ್ಡ್ ಮಾಡಲಿಸಲು ಅನುಕೂಲವಾಗುವಂತೆ 15 ದಿನಗಳಿಗೊಮ್ಮೆ ಎಲ್ಲ ತಾಲ್ಲೂಕುಗಳಲ್ಲಿ ಶಿಬಿರ ನಡೆಸಬೇಕು. ಪ್ರತಿ ತಾಲ್ಲೂಕಿಗೆ ಪ್ರತಿ ತಿಂಗಳು 1,000 ಯುಡಿಐಡಿ ಕಾರ್ಡ್ ಮಾಡಿಸುವ ಗುರಿ ನೀಡುತ್ತೇನೆ. ಪ್ರತಿ ತಿಂಗಳು ಈ ಪ್ರಗತಿ ಕುರಿತು ವರದಿ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

   ಬಹುವಿಧ ಅಂಗವಿಕಲತೆ, ಬೌದ್ದಿಕ ಅಂಗವಿಕಲತೆ, ಆಟಿಸಂ ಮತ್ತು ಸೆರಿಬ್ರಲ್ ಪಾಲ್ಸಿ ಈ ನಾಲ್ಕು ಸಮಸ್ಯೆಯಿಂದ ಬಳಲುವವರಿಗಾಗಿ ಸರ್ಕಾರ ನಿರಾಮಯ ಎಂಬ ವಿಮಾ ಸೌಲಭ್ಯ ಜಾರಿಗೆ ತಂದಿದ್ದು, ಜಿಲ್ಲೆಯ ಸ್ಪೂರ್ತಿ ಮಕ್ಕಳ ಸಂಸ್ಥೆ ಜಿಲ್ಲಾ ನೋಡಲ್ ಸಂಸ್ಥೆ ಹಾಗೂ ಎಪಿಡಿ ಸಂಸ್ಥೆ ರಾಜ್ಯ ನೋಡಲ್ ಸಂಸ್ಥೆಯಾಗಿರುತ್ತದೆ. ಫಲಾನುಭವಿಗಳು 500 ರೂ. ಪಾವತಿಸಿ ವಿಮೆಗೆ ನೋಂದಣಿ ಮಾಡಿಸಿಕೊಳ್ಳಬೇಕು.

   ಫಲಾನುಭವಿಗಳು ತಮ್ಮ ಆಸ್ಪತ್ರೆ, ಔಷಧಿ ಸೇರಿದಂತೆ ವೈದ್ಯಕೀಯ ವೆಚ್ಚವನ್ನು ಒಂದು ಲಕ್ಷ ರೂ. ವರೆಗೆ ಕ್ಲೇಮು ಮಾಡಬಹುದು ಎಂದರು.
ಸ್ಪೂರ್ತಿ ಸಂಸ್ಥೆಯ ರೂಪಾ ನಾಯ್ಕ ಮಾತನಾಡಿ, ನಮ್ಮ ಸಂಸ್ಥೆಗಳಲ್ಲಿ ಫಲಾನುಭವಿಗಳು ವಿಮಾ ಮೊತ್ತವನ್ನು ಕ್ಲೇಮು ಮಾಡಿದ್ದಾರೆ. ಆದರೆ, ಹಂತ ಹಂತವಾಗಿ ಮೊತ್ತ ಬರುವುದರಂದ ತಮ್ಮ ಮೊಬೈಲ್‍ಗೆ ಬರುವ ಸಂದೇಶವನ್ನು ಫಾಲೊಅಪ್ ಮಾಡಿ ವಿಮೆ ಮೊತ್ತ ಪಡೆಯಬೇಕು. ತಡವಾಗಿ ಬಂದರೆ ಅನಾನುಕೂಲ ಆಗುತ್ತದೆ ಎಂದರು.

   ಎಡಿಪಿ ಸಂಸ್ಥೆಯ ರವಿ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ 15 ಶಾಲೆಗಳ ಅವಶ್ಯಕತೆ ಇರುವ ಮಕ್ಕಳಿಗೆ ಥೆರಪಿ ನೀಡಲಾಗುತ್ತದೆ. ಕೆಲವು ಶಾಲೆಗಳಲ್ಲಿ ವಿನಂತಿಸಿದರೂ ಥೆರಪಿಗಾಗಿ ಒಂದು ಪ್ರತ್ಯೇಕ ಕೊಠಡಿ ಒದಗಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಯಾವ ಶಾಲೆಯಲ್ಲಿ ಥೆರಪಿಗಾಗಿ ಕೊಠಡಿ ನೀಡುತ್ತಿಲ್ಲ ಎಂಬುದನ್ನು ಪರಿಶೀಲಿಸಿ, ಕೊಠಡಿ ಲಭ್ಯವಿರುವ ಶಾಲೆಗಳಲ್ಲಿ ಕೊಠಡಿ ಒದಗಿಸಲು ನಿರ್ದೇಶನ ನೀಡಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

   ಸಂಕಲ್ಪ ಸಂಸ್ಥೆಯ ಕಾರ್ಯದರ್ಶಿ ಸುರೇಶ್ ಮಾತನಾಡಿ, ಮಹಾನಗರಪಾಲಿಕೆ ವತಿಯಿಂದ ವಿಕಲಚೇತನರಿಗೆಂದು ಇರುವ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಅನೇಕ ರೀತಿಯ ಅಂಗವಿಕಲತೆ ಇದ್ದು, ಒಂದೇ ರೀತಿಯ ಅಂಗವಿಕಲತೆಗೆ ಅನುದಾನ ಬಳಕೆಯಾಗುತ್ತಿದೆ. ಉದಾಹರಣೆಗೆ ಪ್ರತಿ ವರ್ಷ ಅಂಧ ಮಕ್ಕಳ ಶಾಲೆಗೆ ಅನುದಾನ ನೀಡಲಾಗುತ್ತಿದ್ದರೆ, ಬೇರೆಯವರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.

   ಇದಕ್ಕೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರಿಗಾಗಿ ಮೀಸಲಿರುವ ಶೇ.5 ಅನುದಾನದ ಸಮರ್ಪಕ ಬಳಕೆ ಆಗಬೇಕು. ಶೇ.5 ಅನುದಾನ ಪ್ರಗತಿ ಪರಿಶೀಲನೆ ನಡೆಸಲು ಒಂದು ವಿಶೇಷ ಸಭೆ ಕರೆಯಬೇಕೆಂದು ವಿಕಲಚೇತನರ ಅಧಿಕಾರಿಗಳಿಗೆ ಸೂಚನೆ ನೀಡಿದರು.

   ಜಿಲ್ಲಾ ವಿಕಲಚೇತನರ ಅಧಿಕಾರಿ ಶಶಿಧರ್ ಮಾತನಾಡಿ, ವಿಕಲಚೇತನರ ಅನುಕೂಲಕ್ಕಾಗಿ ಅಡೆತಡೆರಹಿತ ವಾತಾವರಣ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಕ್ಸೆಸ್ ಆಡಿಟ್ ಸಮಿತಿ ರಚಿಸಲಾಗಿದ್ದು, ಜಿಲ್ಲೆಯ ಬಹುತೇಕ ಎಲ್ಲ ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ರ್ಯಾಂಪ್ಸ್ ಮತ್ತು ರೇಲಿಂಗ್ಸ್ ನಿರ್ಮಾಣ ಮಾಡಿ ಅಡೆತಡೆರಹಿತ ವಾತಾವರಣ ನಿರ್ಮಿಸಲಾಗಿದೆ ಎಂದರು.

   ವಿಶೇಷಚೇತನ ಯೋಗರಾಜ್ ಮಾತನಾಡಿ, ಎಲ್ಲ ಶಾಲೆಗಳಲ್ಲಿ ರ್ಯಾಂಪ್‍ಗಳಿಲ್ಲ. ಹಾಗೂ ಗ್ರಾ.ಪಂ ಗಳಲ್ಲಿ ಇಲ್ಲ. ಹಾಗೂ ಉದ್ಯಾನವನ, ಆಸ್ಪತ್ರೆಗಳಲ್ಲಿ ವಿಕಲಚೇತನರಿಗೆಂದು ವಿಶೇಷ ಶೌಚಾಲಯಗಳಿಲ್ಲ ಎಂದು ದೂರಿದರು.ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಆನಂದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವಿಜಯ್‍ಕುಮಾರ್, ವಿನಾಯಕ ಎಜುಕೇಷನ್ ಸೊಸೈಟಿಯ ಸದಸ್ಯ ಗೋಪಾಲಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ ಕುಂಬಾರ, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಹಿರಿಯ ನಾಗರೀಕರ ಪ್ರತಿನಿಧಿ ಶಿವಚಾರ್ಯ, ಸಾರಿಗೆ ಇಲಾಖೆಯ ವಿಭಾಗೀಯ ನಿಯಂತ್ರಣಾಧಿಕಾರಿ ರೇಖಾ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap