ನೀರನ್ನು ವ್ಯರ್ಥಗೊಳಿಸುವ ವಾಟರ್‍ಮನ್ ವಿರುದ್ಧ ಕ್ರಮ- ತಾ.ಪಂ. ಅಧ್ಯಯಕ್ಷ

ತುಮಕೂರು
    `ತುಮಕೂರು ತಾಲ್ಲೂಕಿನ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಿದ್ದೂ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡುವಾಗ ವಾಟರ್‍ಮನ್‍ಗಳ ನಿರ್ಲಕ್ಷೃದಿಂದ ದೊಡ್ಡ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತಿದೆಯೆಂಬ ದೂರುಗಳು ಕೇಳಿಬರುತ್ತಿವೆ. ಇದನ್ನು ಸಹಿಸಲು ಸಾಧ್ಯಯವಿಲ್ಲ. ಅಂತಹ ವಾಟರ್‍ಮನ್‍ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ತುಮಕೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ (ಬಿಜೆಪಿ) ಅವರು ಎಚ್ಚರಿಸಿದ್ದಾರೆ.
    `ವಾಟರ್‍ಮನ್‍ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆಯಾ ಗ್ರಾಮ ಪಂಚಾಯಿತಿಯ ಪಿ.ಡಿ.ಓ.ಗಳ ಸಭೆಯಲ್ಲಿ ಈ ಬಗ್ಗೆ ನಿರ್ದೇಶನ ಕೊಡಲಾಗಿದೆ. ಪ್ರತಿ ಪಿ.ಡಿ.ಓ. ಅವರು ತಮ್ಮ ಗ್ರಾ.ಪಂ. ವ್ಯಾಪ್ತಿಯ ವಾಟರ್‍ಮನ್‍ಗಳ ಕಾರ್ಯನಿರ್ವಹಣೆಯನ್ನು ಗಮನಿಸಬೇಕೆಂದು ತಿಳಿಸಲಾಗಿದೆ. ಆದ್ದರಿಂದ ನಿರ್ದಿಷ್ಟ ದೂರುಗಳು ಬಂದರೆ, ವಾಟರ್‍ಮನ್ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಅವರು ಹೇಳಿದ್ದಾರೆ. 
ನಿರ್ಲಕ್ಷೃದಿಂದ ನೀರು ವ್ಯರ್ಥ
    ಕೋರಾ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯೆ ಆರ್. ಕವಿತಾ ರಮೇಶ್ (ಬಿಜೆಪಿ) ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ವಾಟರ್‍ಮನ್‍ಗಳ ನಿರ್ಲಕ್ಷೃದಿಂದ ಕೊಳವೆಬಾವಿಗಳ ನೀರು ವ್ಯರ್ಥವಾಗುತ್ತಿದೆಯೆಂಬ ದೂರುಗಳಿವೆಯೆಂಬುದನ್ನು ತಾ.ಪಂ. ಅಧ್ಯಕ್ಷ ಗಂಗಾಂಜನೇಯ ಅವರ ಗಮನಕ್ಕೆ ತಂದಾಗ ಅವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.  
     ಬಹುತೇಕ ವಾಟರ್‍ಮನ್‍ಗಳು ಬೆಳಗ್ಗೆ ಬಂದು ಮೋಟಾರ್ ಅನ್ನು ಚಾಲನೆ ಮಾಡಿ ಮನೆಗೆ ಹೋದರೆ ಅದನ್ನು ಮಾಡಲು ಅವರು ಸಂಜೆ ಹೊತ್ತಿಗೆ ಬರುತ್ತಾರೆಂದು ಜನರು ದೂರುತ್ತಿದ್ದಾರೆ. ಅಷ್ಟೂ ಹೊತ್ತು ನೀರು ವ್ಯರ್ಥವಾಗಿ ಹರಿಯುತ್ತದೆ. ನೀರಿನ ಸರಬರಾಜು ಬಗ್ಗೆ ವಾಟರ್‍ಮನ್‍ಗಳು ಗಮನ ಹರಿಸುತ್ತಿಲ್ಲ. ಪೈಪ್‍ಲೈನ್‍ನಲ್ಲಿ ನೀರು ಸೋರಿಕೆಯಾಗುತ್ತಿದ್ದರೂ ಗಮನಿಸುತ್ತಿಲ್ಲ. ಅನೇಕ ವಾಟರ್‍ಮನ್‍ಗಳು ನೀರು ಪೂರೈಕೆಯ ಕೆಲಸವನ್ನು ಬಿಟ್ಟು ಮಿಕ್ಕ ಕೆಲಸ ಮಾಡುತ್ತಾರೆಂದು ಜನರೇ ಹೇಳುವಂತಾಗಿದೆ” ಎಂದು ಕವಿತಾ ರಮೇಶ್ ದೂರಿದರು.
 ಮನೆಗೆ 20 ಬಿಂದಿಗೆ ನೀರು
      ತಾವು ಪ್ರತಿನಿಧಿಸುತ್ತಿರುವ ಸ್ವಾಂದೇನಹಳ್ಳಿ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ನೀರಿನ ಅಭಾವ ಇದ್ದು, ಟ್ಯಾಂಕರ್‍ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರತಿ ಹಳ್ಳಿಗೆ 5 ಟ್ಯಾಂಕರ್‍ಗಳನ್ನು ಒದಗಿಸಿದ್ದು, ಪ್ರತಿ ಐದು ದಿನಗಳಿಗೊಮ್ಮೆ ಮಾತ್ರ ನೀರು ಪೂರೈಸಲಾಗುತ್ತಿದೆ. ಒಂದು ಮನೆಗೆ ಕೇವಲ 20 ಬಿಂದಿಗೆಗಳಷ್ಟು ಮಾತ್ರ ನೀರನ್ನು ನೀಡುತ್ತಿರುವ ಪರಿಸ್ಥಿತಿ ಇದೆ. ವಾಸ್ತವ ಹೀಗಿರುವಾಗ ನೀರನ್ನು ವ್ಯರ್ಥವಾಗುವುದನ್ನು ಸಹಿಸಲು ಸಾಧ್ಯವೇ ಇಲ್ಲ. ನಿರ್ದಿಷ್ಟ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಅಧ್ಯಕ್ಷ ಗಂಗಾಂಜನೇಯ ಅವರು ಹೇಳಿದ್ದಾರೆ.
.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap