ಬೆಂಗಳೂರು
ಜೆಡಿಎಸ್ ಪಕ್ಷದ ಬಗ್ಗೆಯಾಗಲೀ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆಯಾಗಲೀ ಯಾರೂ ಲಘುವಾಗಿ ಮಾತನಾಡುವುದನ್ನು ಮುಂದುವರೆಸಿದರೆ ಮುಂದೆ ಅದರ ಪರಿಣಾಮ ನೆಟ್ಟಗಿರದು ಹುಷಾರ್ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಮೈತ್ರಿ ಪಕ್ಷ ಕಾಂಗ್ರೆಸಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಒಂದೆಡೆ ಜಾತ್ಯಾತೀತ ಶಕ್ತಿಗಳು ಒಗ್ಗೂಡುವಿಕೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ನ ಪಾತ್ರ ಎಷ್ಟು ಮಹತ್ವದ್ದು ಎಂದು ಪ್ರತಿಪಾದಿಸಿದ ದೇವೇಗೌಡ, ಮತ್ತೊಂದೆಡೆ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಟೀಕೆಗಳ ಸುರಿಮಳೆಗೆರೆದರು.
ಜೆಡಿಎಸ್ ರಾಷ್ಟ್ರಿಯ ಮಹಾ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರಿಗೆ ನೋವುಂಟಾಗಿದ್ದು, ಅವರಿಗೆ ತಡೆದುಕೊಳ್ಳಲು ಸಾಧ್ಯವಾಗದೇ ಇರುವಂತಹ ವಾತಾವರಣ ನಿರ್ಮಾಣವಾಗಿದೆ. ಇದರಿಂದಾಗಿ ಅವರು ರಾಜೀನಾಮೆ ಎಂಬ ಶಬ್ದ ಪ್ರಯೋಗ ಮಾಡಿದ್ದಾರೆ. ತಮ್ಮೊಳಗೆ ಉರಿಯುತ್ತಿರುವ ಕಿಚ್ಚನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಕ್ ಪ್ರಹಾರ ನಡೆಸಿದರು.
2004 ರಲ್ಲಿ ಧರಂ ಸಿಂಗ್ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾದಾಗ ಜೆಡಿಎಸ್ ನಿಂದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು. ಆಗ ಯಾವುದೇ ಷರತ್ತು ಇರಲಿಲ್ಲ. ಸೋನಿಯಾಗಾಂಧಿ ಅವರ ಮೇಲೆ ದೇವೇಗೌಡರು ಒತ್ತಡ ಹೇರಿ ತಮ್ಮನ್ನು ಮುಖ್ಯಮಂತ್ರಿ ಮಾಡಲಿಲ್ಲ. ನಂತರ ಕಾಂಗ್ರೆಸ್ ಪಕ್ಷವನ್ನು ಸೇರಿ ಎಐಸಿಸಿ ನಾಯಕಿ ಸೋನಿಯಾಗಾಂಧಿ ಅವರ ಜೊತೆ ಹೋರಾಡಿ ಮುಖ್ಯಮಂತ್ರಿಯಾದೆ ಎಂದು ಹೇಳಿಕೊಂಡು ಖಾಸಗಿ ವಾಹಿನಿಗಳಿಗೆ ಸಂದರ್ಶನ ಕೊಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿ ಕೇವಲ 7 ತಿಂಗಳುಗಳು ಮಾತ್ರವೇ ಕಳೆದಿದೆ. ಕಡಿಮೆ ಅವಧಿಯಲ್ಲಿಯೇ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಾಗುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
2006 ರವರೆಗೆ ಜನತಾದಳದ ನೀತಿ, ಪಕ್ಷದ ಕಾರ್ಯಕ್ರಮಗಳೆಲ್ಲವೂ ಚೆನ್ನಾಗಿಯೇ ಇದ್ದವು ಎನ್ನುವ ಮೂಲಕ ಪಕ್ಷಕ್ಕೆ ಸಿದ್ದರಾಮಯ್ಯ ಅನ್ಯಾಯ ಮಾಡಿದ್ದಾರೆ ಎನ್ನುವುದನ್ನು ಪರೋಕ್ಷವಾಗಿ ಅವರು ಒತ್ತಿ ಹೇಳಿದರು.
1980ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ದೊಡ್ಡಹಳ್ಳಿಯಲ್ಲಿ ನಡೆದ ಗೋಲಿಬಾರ್ ಘಟನೆಯಲ್ಲಿ ಕುರುಬ ಸಮುದಾಯದ ವ್ಯಕ್ತಿ ಸಾವನ್ನಪ್ಪಿದಾಗ ತಾವು ಅದನ್ನು ಖಂಡಿಸಿ ಹಾಸನದಲ್ಲಿ ಬೃಹತ್ ಧರಣಿ ನಡೆಸಿದ್ದೆ. ಕುರುಬ ಸಮುದಾಯದ ಬಗ್ಗೆ ತಾವೇನು ಮಾಡಿಲ್ಲ ಎಂದು ಟೀಕಿಸುವುವರು ಇದನ್ನು ಅರಿತು ಮಾತನಾಡಬೇಕು ಎಂದು 40 ವರ್ಷಗಳ ಹಿಂದಿನ ಘಟನೆಯನ್ನು ಪ್ರಸ್ತಾಪಿಸಿ, ಸಿದ್ದರಾಮಯ್ಯ ವಿರುದ್ಧ ಮಾತಿನ ಪೆಟ್ಟು ಕೊಟ್ಟರು.
ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರೂ ಸಹ ಈಗಷ್ಟೇ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇದನ್ನು ಅವರಿಂದ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆ ಭರ್ತಿಯೊಂದನ್ನು ಬಿಟ್ಟು ಎಲ್ಲಾ ನಿಗಮ ಮಂಡಳಿಗಳ ಸ್ಥಾನಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಗೂ 3 ವರ್ಷ ಹಿಂದೆಯೇ ರೈತರ ಸಾಲಮನ್ನಾ ಬಗ್ಗೆ ಕುಮಾರಸ್ವಾಮಿ ಯೋಜನೆ ರೂಪಿಸಿದ್ದರು. ಸಿದ್ದರಾಮಯ್ಯ ನೀಡಿದ ಕಾರ್ಯಕ್ರಮಗಳನ್ನು ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರೆಸುವ ಬಗ್ಗೆ ಜೆಡಿಎಸ್ ಯಾವುದೇ ಚಕಾರವೆತ್ತರಲಿಲ್ಲ. ಹೀಗಿದ್ದರೂ ಸಹ ವೃದ್ಧಾಪ್ಯವೇತನ ಹೆಚ್ಚಳ, ಗರ್ಭಿಣಿಯರಿಗೆ ಮಾಸಾಶನ ಸೇರಿ ಕುಮಾರಸ್ವಾಮಿ ಅವರ ಕನಸಿನ ಯೋಜನೆಗಳಿಗೆ ತೊಂದರೆ ಕೊಟ್ಟು, ಅವರ ಹೆಸರಿಗೆ ಮಸಿ ಬಳಿಯುವ ಕೆಲಸ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.
ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಲೋಕಸಭಾ ಚುನಾವಣೆಯ ಮಹತ್ವದ ರಾಜಕೀಯ, ಆರ್ಥಿಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಇಲ್ಲಿಯವರೆಗೂ ದೇಶದಲ್ಲಿ ಮೂರು ಪ್ರಾದೇಶಿಕ ಪಕ್ಷಗಳು ಸಮ್ಮಿಶ್ರ ಸರ್ಕಾರದಲ್ಲಿ ರಚನೆಗೊಂಡಿದ್ದರೂ ಅವುಗಳ ಆಯುಷ್ಯ ಹೆಚ್ಚಿಗೆ ಇರಲಿಲ್ಲ. ಕಾಂಗ್ರೆಸ್ ಬೆಂಬಲದಿಂದಲೇ ತಾವು ಹಿಂದೆ ಪ್ರಧಾನಿಯಾಗಿದ್ದು, 10 ತಿಂಗಳು ಮಾತ್ರ ಆಡಳಿತ ಕೊಡಲು ಸಾಧ್ಯವಾಯಿತು. ಹೀಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಗಟ್ಟಿಯಾದ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಏರಬೇಕು. ಈ ನಿಟ್ಟಿನಲ್ಲಿ ಎಲ್ಲಾ ಜಾತ್ಯಾತೀತ ಶಕ್ತಿಗಳು ಒಗ್ಗೂಡುವಂತೆ ಕಾರ್ಯಕರ್ತರು ಕೆಲಸ ಮಾಡಬೇಕು ಎಂದರು.
ಫೆಬ್ರವರಿ 10 ರಂದು ಬಿಜಾಪುರದಲ್ಲಿ ಪಕ್ಷದದಿಂದ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ರಾಜ್ಯಸಮಾವೇಶ, ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ ರೈತ ಸಮಾವೇಶ ನಡೆಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ದೇವೇಗೌಡರು ತಿಳಿಸಿದರು.
ಚಿತ್ರದುರ್ಗದ ಮಹಿಳೆಯರು ಸಂಪೂರ್ಣ ಪಾನ ನಿಷೇಧಕ್ಕೆ ಆಗ್ರಹಿಸಿ ಪಾದಯಾತ್ರೆಗೆ ಸಂಬಂಧ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಸಾಧ್ಯವಿಲ್ಲ. ರಾಜ್ಯಕ್ಕೆ ಅತಿ ಹೆಚ್ಚು ಆದಾಯದ ಮೂಲವಾಗಿರುವ ಅಬಕಾರಿಯನ್ನು ಏಕಾಏಕಿ ನಿಷೇಧಿಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
