ಇಂಜಿನೀಯರ್ ಗುತ್ತಿಗೆದಾರರಿಗೆ ತಿಪ್ಪಾರೆಡ್ಡಿ ತರಾಟೆ

ಚಿತ್ರದುರ್ಗ:

        ನಗರೋತ್ಥಾನ ಯೋಜನೆಯಡಿ ಒಂದು ಕಡೆ ಗುಣಮಟ್ಟದ ರಸ್ತೆ ಡಾಂಬರೀಕರಣವಾಗುತ್ತಿದ್ದರೆ ಮತ್ತೊಂದು ಕಡೆ ಅಮೃತ್‍ಸಿಟಿ ಯೋಜನೆಯಡಿ ಹಿರಿಯೂರಿನ ವಾಣಿವಿಲಾಸ ಸಾಗರ ಹಾಗೂ ಶಾಂತಿಸಾಗರದಿಂದ ನಗರಕ್ಕೆ ಕುಡಿಯುವ ನೀರು ಪೂರೈಸಲು ರಸ್ತೆಗಳನ್ನು ಅಗೆಯುತ್ತಿರುವುದರಿಂದ ತಾಳ್ಮೆ ಕಳೆದುಕೊಂಡು ಕೆಂಡಮಂಡಲವಾದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗುತ್ತಿಗೆದಾರರು ಹಾಗೂ ನಗರಸಭೆ ಇಂಜಿನಿಯರ್‍ಗಳ ಮೇಲೆ ಘರ್ಜಿಸಿದರು.

         ಅಮೃತ್‍ಸಿಟಿ ಯೋಜನೆಯಡಿ ದೇಶದ ಪ್ರಧಾನಿ ನರೇಂದ್ರಮೋದಿ 140 ಕೋಟಿ ರೂ.ಗಳನ್ನು ನೀಡಿದ್ದಾರೆ. ಅದರಲ್ಲಿ ಎರಡನೆ ಹಂತದ ನೀರಿನ ಯೋಜನೆಗೆ 112 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದು, ಜೆ.ಸಿ.ಆರ್.ಹಾಗೂ ಮಟನ್‍ಮಾರ್ಕೆಟ್ ಸಮೀಪ ರಸ್ತೆಗಳನ್ನು ಅಗೆಯುತ್ತಿದ್ದಾರೆ. ಯಾವ ಬೋಮಗ ಆದರೆ ನನಗೇನು ಎಲ್ಲಿ ಥರ್ಢ್‍ಪಾರ್ಟಿ ಇನ್ಸ್‍ಪೆಕ್ಷನ್ ಮಾಡುವವರು ಎಂದು ಶಾಸಕರು ಗದರಿದಾಗ ಅಲ್ಲಿದ್ದ ನಗರಸಭೆ ಇಂಜಿನಿಯರ್ ಹಾಗೂ ಗುತ್ತಿಗೆದಾರರು ಮೌನಕ್ಕೆ ಶರಣಾಗಿದ್ದರು.

         ಆರು ಬಾರಿ ಶಾಸಕನಾಗಿರುವ ನಾನೇ ಎಲ್ಲವನ್ನು ನೋಡಲು ಆಗುವುದಿಲ್ಲ. ನಿಮ್ಮ ಕೆಲಸವೇನು ಎಂದು ನಗರಸಭೆ ಇಂಜಿನಿಯರ್‍ಗಳಾದ ಕೃಷ್ಣಮೂರ್ತಿ ಹಾಗೂ ರವಿಶಂಕರ್ ಇವರುಗಳನ್ನು ತರಾಟೆ ತೆಗೆದುಕೊಂಡ ಶಾಸಕರು ಮೊದಲು ಅಗೆದಿರುವ ರಸ್ತೆಗಳನ್ನು ಟಾರ್ ಹಾಕಿ ಸಮ ಮಾಡಿ ಬೇರೆ ರಸ್ತೆಗಳಿಗೆ ಕೈಹಾಕಿ ಇಲ್ಲವಾದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಪದೇ ಪದೇ ಹಣ ಎಲ್ಲಿಂದ ತಂದು ಹಾಕಲಿ ಎಂದು ಗುಟುರು ಹಾಕಿದರು.

         ರಸ್ತೆ ಡಾಂಬರೀಕರಣವಾದ ಮೇಲೆ ರಸ್ತೆಗಳನ್ನು ಅಗೆದು ಪೈಪ್‍ಲೈನ್ ಹಾಕುತ್ತಿದ್ದರೂ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದ್ದಾರೆ ಎಂದು ಆಕ್ರೋಶಗೊಂಡ ಶಾಸಕರು ಥರ್ಡ್‍ಪಾರ್ಟಿ ಇನ್ಸ್‍ಪೆಕ್ಷ್‍ನ್ ಮಾಡುವವರಿಗೆ ಮೂರು ಕೋಟಿ ರೂ.ನೀಡಲಾಗಿದೆ. ಪೂನಾ ಕಂಪನಿಯವರು ಹದಿನೆಂಟು ಕೋಟಿ ರೂ.ಗಳ ಬಿಲ್ ಪಡೆದಿದ್ದಾರೆ. ಇಷ್ಟಾದರೂ ಕೆ.ಯು.ಡಬ್ಯ್ಲು.ಎಸ್.ನವರಾಗಲಿ, ಇಂಜಿನಿಯರ್‍ಗಳಾಗಲಿ, ಡೈರೆಕ್ಟರೇಟ್‍ಗಳಾಗಲಿ ನಮಗೆ ಸಂಬಂಧವೇ ಇಲ್ಲವೆನೋ ಎಂಬಂತೆ ವರ್ತಿಸುತ್ತಿರುವುದು ಸರಿಯಲ್ಲ. ಎಲ್ಲಾ ಸೇರಿ ಒಂದು ಸಭೆ ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳಿ ಎಂದು ಸೂಚಿಸಿದರು.

           ಒಂದು ಕಡೆ ಗುಣಮಟ್ಟದ ರಸ್ತೆ ಮಾಡುವುದು. ಇನ್ನೊಂದು ಕಡೆ ನೀರಿಗಾಗಿ ಪೈಪ್‍ಲೈನ್ ಅಳವಡಿಸಲು ರಸ್ತೆ ಅಗೆಯುವುದು ಸರಿ ಕಾಣುವುದಿಲ್ಲ. ಥರ್ಡ್‍ಪಾರ್ಟಿ ಇನ್ಸ್‍ಪೆಕ್ಷ್‍ನ್ ಮಾಡುವವರು ನಾಪತ್ತೆಯಾಗಿದ್ದಾರೆ. ಎಷ್ಟೋ ಕಡೆ ನಾನು ಹೋಗುವಾಗ ಕಾರು ನಿಲ್ಲಿಸಿ ರಸ್ತೆ ಅಗೆಯುವವರನ್ನು ಗಲಾಟೆ ಮಾಡಿ ನಿಲ್ಲಿಸಿದ್ದೇನೆ. ನಗರಸಭೆ ಇಂಜಿನಿಯರ್‍ಗಳು ಕಂಡು ಕಾಣದಂತೆ ಅಸಹಾಯಕರಾಗಿದ್ದಾರೆ. ಕಾಳಜಿಯಿಟ್ಟು ಕೆಲಸ ಮಾಡಿ. ಇನ್ನು ಮುಂದೆ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ. ನಗರದ ಅಭಿವೃದ್ದಿಗೆ ಎಲ್ಲರ ಜವಾಬ್ದಾರಿಯಿದೆ. ನಗರಸಭೆಗೆ ನೂತನವಾಗಿ ಚುನಾಯಿತರಾಗಿರುವ ಸದಸ್ಯರುಗಳು ಹೆಚ್ಚಿನ ನಿಗಾಯಿಡಬೇಕು ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap