ತುಮಕೂರು
ಹುಣಸೆ ಹಣ್ಣಿನ ಬೆಲೆ ದಿಢೀರ್ ಕುಸಿತವಾದ ಹಿನ್ನೆಲೆಯಲ್ಲಿ ಹುಣಸೆ ಬೆಳೆಗಾರರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ, ಬೆಲೆ ಹೆಚ್ಚಳಕ್ಕೆ ಆಗ್ರಹಿಸಿದರು.
ಕಳೆದ ಎರಡುಮೂರು ವಾರಗಳ ಹಿಂದೆ ಒಂದು ಕ್ವಿಂಟಾಲ್ ಹುಣಸೆ ಹಣ್ಣಿಗೆ 20ರಿಂದ ಪ್ರಾರಂಭವಾಗಿ 40 ಸಾವಿರದವರೆಗೂ ಬೆಲೆ ಇತ್ತು. ಆದರೆ ಈ ವಾರ ಏಕಾಏಕಿ ಕುಸಿತವಾಗಿದೆ. 12ರಿಂದ15 ಸಾವಿರ ದರಕ್ಕೆ ಬೆಲೆ ಇಳಿಕೆಯಾಗಿದೆ. ಇದರಿಂದ ರೈತರು ನಷ್ಟ ಎದುರಿಸುವಂತಾಗಿದೆ. ಹಾಗಾಗಿ ಈ ಕಳೆದ ಎರಡು ವಾರಗಳ ಹಿಂದೆ ಇದ್ದ ಬೆಲೆಯನ್ನೇ ನೀಡಬೇಕು ಒತ್ತಾಯಿಸಿದರು.
ಕಳೆದ ಎರಡು ವಾರಗಳ ಹಿಂದಿನ ಬೆಲೆಯಂತೆಯೇ ಕೊಳ್ಳಬೇಕು. ಇಲ್ಲದಿದ್ದಲ್ಲಿ ಹುಣಸೆ ಹಣ್ಣು ಕೊಡುವುದೇ ಇಲ್ಲ. ಈ ತರ ಏಕಾಏಕಿ ಬೆಲೆ ಕಡಿಮೆ ಮಾಡುವುದಕ್ಕಿಂತ ಒಂದಿಷ್ಟು ವಿಷ ಕೊಟ್ಟುಬಿಡಿ. ಹುಣಸೆ ಹಣ್ಣನ್ನು ಮಾರುಕಟ್ಟೆಗೆ ತರುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಣಸೆ ಹಣ್ಣಿಗೆ ಉತ್ತಮ ಬೆಲೆ ಇದೆ ಎನ್ನುವ ಕಾರಣಕ್ಕೆ ಮರದಲ್ಲಿಯೇ 10 ಸಾವಿರ ಬೆಲೆ ನೀಡಿ ಕೊಂಡಿದ್ದೇನೆ. ಹುಣಸೆ ಹಣ್ಣು ಬಡಿಯುವುದಕ್ಕೆ ಹಾಗೂ ಅದನ್ನು ಕುಟ್ಟಿ ನಾರು, ಬೀಜ ತೆಗೆದು ಹಣ್ಣು ಮಾಡುವುದಕ್ಕೆ ಮೂರರಿಂದ ನಾಲ್ಕು ಸಾವಿರ ಖರ್ಚಾಗುತ್ತದೆ. ಒಂದು ಕ್ವಿಂಟಾಲ್ ಹಣ್ಣನ್ನು ಮಾರುಕಟ್ಟೆ ತರುವಷ್ಟರಲ್ಲಿ ಸುಮಾರು 12ರಿಂದ15 ಸಾವಿರ ಖರ್ಚಾಗುತ್ತದೆ. ಆದರೆ, ಈಗ ಏಕಾಏಕಿ ದರ ಕುಸಿತವಾಗಿದೆ. ಲಾಭವಿರಲಿ, ಅಸಲು ದಕ್ಕದಂತಾಗಿದೆ. ಹಾಗಾಗಿ ಈ ಹಿಂದೆ ನಿಗಧಿ ಮಾಡಲಾಗುತ್ತಿದ್ದ ಬೆಲೆಯನ್ನೇ ನೀಡಬೇಕು ಎಂದು ರಂಗಯ್ಯ ಆಗ್ರಹಿಸಿದರು.
ರೈತ ಕುಮಾರಯ್ಯ ಮಾತನಾಡಿ, ಬೆಲೆ ಕುಸಿತಕ್ಕೆ ಮೋಡ ಮುಸುಕಿದ ವಾತಾವರಣ ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎಂದೆಲ್ಲಾ ಹೇಳಲಾಗುತ್ತಿದೆ. ಆದರೆ ಹಿಂದೂಪುರ ಮಾರುಕಟ್ಟೆಯಲ್ಲಿ ಇಲ್ಲಿನ ಬೆಲೆಗಿಂತಲೂ ಹೆಚ್ಚಿದೆ. ಅಲ್ಲಿ ನಿಗಧಿಯಾಗುವ ಬೆಲೆಯಂತೆಯೇ ಇಲ್ಲಿಯೂ ನಿಗಧಿ ಮಾಡಲಿ. ಯಾವ ಕಾರಣಕ್ಕೆ ಬೆಲೆ ಕುಸಿತ ಮಾಡಬೇಕು. ಈ ಬೆಲೆ ಕುಸಿತದಿಂದ ಮಾರುಕಟ್ಟೆಗೆ ಹುಣಸೆ ತಂದು ರೈತರು ನಷ್ಟ ಅನುಭವಿಸುವಂತಾಗಿದೆ. ಕೊಂಚ ಆರ್ಥಿಕ ಸಬಲತೆ ಕಂಡುಕೊಳ್ಳಬಹುದೆನ್ನುವ ಕನಸಿಗೂ ತಣ್ಣೀರೆರಚಲಾಗಿದೆ ಎಂದು ನೋವು ತೋಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ