ಬೇಡಿಕೆಗನುಗುಣವಾಗಿ ರಸಗೊಬ್ಬರ ಪೂರೈಸಿ : ತಾ.ಪಂ ಅಧ್ಯಕ್ಷೆ

ಬ್ಯಾಡಗಿ:

    ತಾಲೂಕಿನಲ್ಲಿ ರಸಗೊಬ್ಬರದ ಕೊರತೆಯಾಗಿದ್ದು ಈ ಕೂಡಲೇ ತಾಲೂಕಿಗೆ ಹೆಚ್ಚಿನ ರಸಗೊಬ್ಬರ ಪೂರೈಕೆ ಮಾಡುವ ಮೂಲಕ ರೈತರಿಗೆ ರಸಗೊಬ್ಬರದ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ ಕೃಷಿ ಅಧಿಕಾರಿಗೆ ಸೂಚಿಸಿದ ಪ್ರಸಂಗವು ತಾಲೂಕಾ ಮಾಸಿಕ ಕೆಡಿಪಿ ಸಭೆಯಲಿ ಜರುಗಿತು.

    ಶನಿವಾರ ಅವರು ಸ್ಥಳೀಯ ತಾಲೂಕಾ ಪಂಚಾಯತ ಸಭಾಭವನದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಾ ಮಾಸಿಕ ಕೆಡಿಪಿ ಸಭೆಯಲ್ಲಿ ಕೃಷಿ ಇಲಾಖೆಯ ಮೇಲೆ ನಡೆದ ಚರ್ಚೆಯಲ್ಲಿ ಈ ವಿಷಯವನ್ನು ಕೃಷಿ ಅಧಿಕಾರಿಗೆ ತಿಳಿಸಿದರು. ಸಭೆಗೆ ಉತ್ತರಿಸಿದ ಸಹಾಯಕ ಕೃಷಿ ನಿರ್ಧೇಶಕ ಅಮೃತೇಶ್ವರ ಅವರು ಮಾತನಾಡಿ ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಎಲ್ಲಿಯೂ ಕಂಡು ಬಂದಿಲ್ಲಾ ಆದರೂ ಕೂಡಾ ಹೆಚ್ಚಿನ ರಸಗೊಬ್ಬರವನ್ನು ದಾಸ್ತಾನು ಮಾಡುವ ಮೂಲಕ ರೈತರ ಬೇಡಿಕೆಗಳಿಗ ನುಗುಣವಾಗಿ ರಸಗೊಬ್ಬರವನ್ನು ಪೂರೈಕೆ ಮಾಡಲಾಗುತ್ತಿದೆಯಲ್ಲದೇ ಮುಂದಿನ ಕೆಲವೇ ದಿನಗಳಲ್ಲಿ ಇನ್ನೂ ಹೆಚ್ಚಿನ ರಸಗೊಬ್ಬರವನ್ನು ತರಿಸಲಾಗುತ್ತದೆ

     ಎಂದರಲ್ಲದೇ ಪ್ರಸಕ್ತ ವರ್ಷದಲ್ಲಿ ಸುರಿದ ಹೆಚ್ಚಿನ ಮಳೆಗೆ ತಾಲೂಕಿನಲ್ಲಿ ರೈತರಿಗೆ ಸಂಬಂಧಿಸಿದ 9091 ಹೆಕ್ಟರ್ ಪ್ರದೇಶದಲ್ಲಿರುವ ಬೆಳೆ ಹಾನಿಯಾಗಿದೆ. ಈಗಾಗಲೇ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ರೈತರ ಜಮೀನುಗಳನ್ನು ಸರ್ವೆ ಮಾಡಲಾಗಿದ್ದು, ಹಾನಿಗೊಳಗಾದ ರೈತರಿಗೆ ಮುಂದಿನ ಕೆಲವೇ ದಿನಗಳಲ್ಲಿ ಸರಕಾರದ ನಿಯಮದಂತೆ ಪರಿಹಾರದ ಹಣವನ್ನು ಅವರ ಖಾತೆಗೆ ಜಮೆ ಮಾಡಲಾಗುವುದೆಂದರಲ್ಲದೇ ವಾಡಿಕೆಗಿಂತಾ ಶೇ.30 ರಷ್ಟು ಹೆಚ್ಚಿನ ಮಳೆಯು ತಾಲೂಕಿನಲ್ಲಿ ಸುರಿದ ವರದಿಯಾಗಿದೆ ಎಂದು ಸಭೆಗೆ ತಿಳಿಸಿದರು.

     ತಾ.ಪಂ.ಉಪಾಧ್ಯಕ್ಷೆ ಶಾಂತವ್ವ ದೇಸಾಯಿ ಮಾತನಾಡಿ ಮಾಸಣಗಿ ಗ್ರಾಮದಲ್ಲಿ ರೈತರಿಗೆ ವಾರದ ಸಂತೆ ಪ್ರಾರಂಭಿಸುವಂತೆ ಕಳೆದ ಸಭೆಯಲ್ಲಿ ಎಪಿಎಂಸಿ ಅಧಿಕಾರಿಗೆ ತಿಳಿಸಿದರೂ ಇಲ್ಲಿಯವರೆಗೂ ಅಧಿಕಾರಿಗಳು ಯಾವುದೇ ಉತ್ತರ ಕೊಡದೇ ನಿರ್ಲಕ್ಷವಹಿಸಿದ್ದರ ಬಗ್ಗೆ ಬೇಸವ ವ್ಯಕ್ತ ಪಡಿಸಿದರು. ಎಪಿಎಂಸಿ ಅಧಿಕಾರಿ ಇದಕ್ಕೆ ಉತ್ತರಿಸಿ ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗೆ ವಾರದ ಸಂತೆ ನಡೆಸಲು ಸ್ಥಳವನ್ನು ಗುರ್ತಿಸಿ ಕೊಡುವಂತೆ ಕೇಳಲಾಗಿದ್ದು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯು ವಾರದ ಸಂತೆ ಮಾಡಲು ಸ್ಥಳದ ಲಭ್ಯತೆ ಇಲ್ಲವೆಂದು ತಿಳಿಸಿದ್ದಾರೆಂದರು.

     ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲನಗೌಡ್ರ ಕರೆಗೌಡ್ರ ಮಾತನಾಡಿ ತಾಲೂಕಿನಲ್ಲಿ ಸುರಿದ ಮಳೆಗೆ ಅನೇಕ ರೈತರ ತೋಟಗಳಲ್ಲಿ ಬೆಳೆದ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವಂತೆ ಅಧಿಕಾರಿಗೆ ತಿಳಿಸಿದರು. ಇದಕ್ಕೆ ಸಂಭಂಧಿಸಿದಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿ ಜಯಲಕ್ಷಿ ಅವರು ಉತ್ತರಿಸಿ ಕಳೆದ ತಿಂಗಳು ತಾಲೂಕಿನಲ್ಲಿ ಸುರಿದ ಮಳೆಗೆ 955 ಹೆಕ್ಟರ್ ಪ್ರದೇಶದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಪ್ರತಿಯೊಬ್ಬರ ತೋಟಗದ್ದೆಗಳನ್ನು ಪರಿಶೀಲಿಸಲಾಗಿ ಸರಿಯಾದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಾನಿಯಾದ ರೈತರಿಗೆ ಪರಿಹಾರವನ್ನು ನೀಡಲಾಗುವುದೆಂದರು.

     ತಾಲೂಕಿನಾದ್ಯಂತ ಅನೇಕ ಕಡೆಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ಫಾಗಿಂಗ್ ವ್ಯವಸ್ಥೆಯನ್ನು ಮಾಡುವಂತೆ ತಾ.ಪಂ.ಅಭಿವೃದ್ಧಿ ಅಧಿಕಾರಿ ಅಬಿದ್ ಗದ್ಯಾಳ ಆರೋಗ್ಯಾಧಿಕಾರಿಗೆ ತಿಳಿಸಿದರು. ಆರೋಗ್ಯಾಧಿಕಾರಿ ಡಾ.ಬಿ.ಆರ್.ಲಮಾಣಿ ಮಾತನಾಡಿ ಈಗಾಗಲೇ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಒಂದು ಹಂತದ ಫಾಗಿಂಗ್ ಮಾಡಲಾಗಿದೆ. ಲಾರ್ವೇ ಸರ್ವೆ ಕಾರ್ಯವು ಮುಕ್ತಾಯವಾಗಿದೆ. ಮಳೆಯು ಸುರಿಯುತ್ತಿರುವುದರಿಂದಾಗಿ ಎರಡನೇ ಹಂತದ ಫಾಗಿಂಗ್ ಕಾರ್ಯಕ್ಕೆ ತೊಂದರೆಯಾಗಿದೆ.

     ಮಳೆಯು ಸ್ಥಬದ್ಧವಾದನಂತರ ಮತ್ತೆ ಎರಡನೇ ಹಂತದ ಫಾಗಿಂಗ್ ಕಾರ್ಯವನ್ನು ಮಾಡುವುದಾಗಿ ಸಭೆಗೆ ತಿಳಿಸಿದರಲ್ಲದೇ ತಾಲೂಕಿನಲ್ಲಿ ನಾಲ್ಕು ಜನರಿಗೆ ಕುಷ್ಟು ರೋಗದ ಲಕ್ಷಣಗಳು ಗೋಚರಿಸಿದ್ದು ಮುಂಜಾಗ್ರತವಾಗಿ ಅವರಿಗೆ ಚಿಕೀತ್ಸೆ ನೀಡಲಾಗಿದೆಯಲ್ಲದೇ 16 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಅವುಗಳಿಗೂ ಕೂಡಾ ಚಿಕೀತ್ಸೆಯನ್ನು ನೀಡುವ ಮೂಲಕ ತಹಬಂದಿಗೆ ತರಲಾಗಿದೆ ಎಂದರು.

    ಪಂಚಾಯತ್ ರಾಜ್ ಇಂಜನೀಯರಿಂಗ್ ಇಲಾಖೆಯ ಇಂಜನೀಯರ ನಟರಾಜ್ ಸಭೆಗೆ ತಮ್ಮ ಇಲಾಖೆಯ ಮಾಹಿತಿ ನೀಡಿ ಮಾತನಾಡಿ 2017-18ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ, ಎಸ್‍ಡಿಪಿ ಕಾಮಗಾರಿಗಳು, ಪ್ರೌಢ ಶಾಲಾ ಕಟ್ಟಡಗಳ ಕಾಮಗಾರಿಗಳ ಕೆಲಸಗಳು ನಡೆಯುತ್ತಲಿವೆ ಎಂದರು. ಲೋಕೋಪಯೋಗಿ ಇಲಾಖೆಯ ಇಂಜನೀಯರ ಆನಂದ ದೊಡ್ಡಮನಿ ಮಾತನಾಡಿ ತಾಲೂಕಿನಲ್ಲಿ ಅನೇಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯು ನಡೆದಿದೆ ಕೆಲವೊಂದು ಗ್ರಾಮಗಳಲ್ಲಿ ಶಾಲಾ ಕಟ್ಟಡದ ಕಾಮಗಾರಿಗಳ ಕೆಲಸವು ಪ್ರಗತಿಯಲ್ಲಿವೆ ಎಂದರು.

      ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಮುನಿ ಮಾತನಾಡಿ ಪ್ರಸಕ್ತ ವರ್ಷದಲ್ಲಿ ಮಕ್ಕಳಿಗೆ ವಿತರಿಸಲಿರುವ ಸೈಕಲ್‍ಗಳು ಬಂದಿದ್ದು ಅದರೊಂದಿಗೆ ತಾಲೂಕಿನ ಗಂಡು ಮಕ್ಕಳಿಗೆ ಶಾಲಾ ಸಮವಸ್ತ್ರಗಳ ಬಟ್ಟೆಯನ್ನು ಸರಕಾರ ಕೊಡಮಾಡಿದ್ದು ಹೆಣ್ಣು ಮಕ್ಕಳ 8 ರಿಂದ 10 ತರಗತಿಯ ಸಮವಸ್ರ್ತಗಳು ಮುಂದಿನ ದಿನಗಳಲ್ಲಿ ಬರಲಿವೆ ಎಂದು ಸಭೆಗೆ ತಿಳಿಸಿದರು. ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯನ್ನು ಸಭೆಗೆ ವಿವರಿಸಿದರು. ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link