ನವದೆಹಲಿ:
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿ 20 ಮಂದಿ ಮೃತಪಟ್ಟಿರುವ ಘಟನೆಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಪೊಲೀಸರು ಈ ಘಟನೆಯನ್ನು ಹತ್ತಿಕ್ಕಿ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ತಮ್ಮ ವೃತ್ತಿಪರತೆಯನ್ನು ತೋರಿಸಿಲ್ಲ ಎಂದು ಹೇಳಿದೆ.
ದೆಹಲಿ ಹಿಂಸಾಚಾರ ಕುರಿತ ಅರ್ಜಿ ವಿಚಾರಣೆಯನ್ನು ಇಂದು ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕೆ ಎಂ ಜೋಸೆಫ್, ಪೊಲೀಸರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕಿತ್ತು. ಆದರೆ ಇಲ್ಲಿ ಹಾಗಾಗಲಿಲ್ಲ. ಯಾರಾದರೂ ಪ್ರಚೋದನಾಕಾರಿ ಹೇಳಿಕೆ ನೀಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಕಾಯದೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದು. ನ್ಯಾಯಾಲಯ ದೆಹಲಿ ಪೊಲೀಸರ ವಿರುದ್ಧವಾಗಿ ಇಲ್ಲ, ಆದರೆ ಬಹುಪಾಲು ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಈ ಹೇಳಿಕೆ ನೀಡುತ್ತಿದೆ ಎಂದರು.
ಅಮೆರಿಕ, ಇಂಗ್ಲೆಂಡ್ ಗಳಲ್ಲಿನ ಪೊಲೀಸರ ಬಗ್ಗೆ ಉದಾಹರಣೆ ನೀಡಿದ ನ್ಯಾಯಾಧೀಶ ಜೋಸೆಫ್, ತಪ್ಪು ನಡೆಯುತ್ತಿದೆ, ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ ಎಂದು ಗೊತ್ತಾದಾಗ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ತಮ್ಮ ಕಾರ್ಯಕ್ಷಮತೆಯನ್ನು ತೋರಿಸಬೇಕು ಎಂದರು.
