ಸಚಿವರ ವಿರುದ್ದ ಹರಿಹಾಯ್ದ ಸುರೇಶಗೌಡ

0
86

ತುಮಕೂರು

      ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ನಡೆದ ಹೇಮಾವತಿ ಸಲಹಾ ಸಮಿತಿ ಸಭೆಯಲ್ಲಿ ತಾವು ತಿಳಿಸಿರುವಂತೆ 96 ಕೆರೆಗಳು ತುಂಬಿವೆ ಎಂದು ಅಂಕಿ ಸಂಖ್ಯೆ ನೀಡುವ ರೇವಣ್ಣ ಅವರೇ ನನ್ನ ಜೊತೆ ಬನ್ನಿ, ಪ್ರವಾಸ ಮಾಡೋಣ. ಎಷ್ಟು ಕೆರೆಗಳು ತುಂಬಿವೆ ತೋರಿಸಿ. ತುಮಕೂರು ಜಿಲ್ಲೆಯು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಣೆ ಆಗಿದೆ. ಕುಡಿಯುವ ನೀರಿಗೆ ಹಾಹಾಕಾರ ಇದೆ. ಒಂದೇ ಒಂದು ಕೆರೆ ತುಂಬಿಲ್ಲ.

       ಜನ ಜಾನುವಾರುಗಳು ಕುಡಿಯುವ ನೀರಿಲ್ಲದೆ ಪರಡಾಡುವಂತಹ ಸ್ಥಿತಿ ಬಂದು ಒದಗಿದೆ. ನೀವು ಇಲ್ಲಿ ಬಂದು 96 ಕೆರೆ ತುಂಬಿವೆ, ನಾಲೆ ಅಚ್ಚುಕಟ್ಟಿಗೆ ಹಣ ಬಿಡುಗಡೆ ಮಾಡುತ್ತೇನೆ ಎಂದು ಮೊಸಳೆ ಕಣ್ಣಿರು ಸುರಿಸುತ್ತೀರಾ? ನಿಮಗೆ ನಮ್ಮ ಜಿಲ್ಲೆ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಮೊದಲು ನಮ್ಮ ಜಿಲ್ಲೆಯ 24 ಟಿಎಂಸಿ ನೀರು ಹರಿಸಿ ಮಾತನಾಡಿ, ಎಂದು ರೇವಣ್ಣ ಅವರಿಗೆ ಸುರೇಶಗೌಡ ಸವಾಲ್ ಹಾಕಿದ್ದಾರೆ.

        ಶನಿವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿ.ಸುರೇಶಗೌಡರು, ಕೇವಲ ದಾಖಲೆಗಳಲ್ಲಿ 14 ಟಿಎಂಸಿ ನೀರು ಜಿಲ್ಲೆಗೆ ಹರಿದಿದೆ ಎಂದು ಹೇಳುವ ಅಧಿಕಾರಿಗಳು, ಎದೆ ಮುಟ್ಟಿ ಹೇಳಲಿ, ಒಂದೇ ಒಂದು ಕೆರೆ ತುಂಬಿರುವ ಇತಿಹಾಸ ಇಲ್ಲ. ಬನ್ನಿ ಓಪನ್‍ಚಾಲೆಂಜ್ ಮಾಡುತ್ತೇನೆ, ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ, ಕುಪ್ಪೂರು ಕೆರೆಗಳು ಇದುವರೆಗೂ ತುಂಬಿಲ್ಲ.

       ತುಮಕೂರು ಗ್ರಾಮಾಂತರ ಕ್ಷೇತ್ರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇರುವ ಗೂಳೂರು, ಅರಿಯೂರು, ನಾಗವಲ್ಲಿ, ಹೊನ್ನುಡಿಕೆ, ದೊಡ್ಡನಾರವಂಗಲ, ಅಸಲಿಪುರ, ಹೆಬ್ಬೂರು, ಕೆರೆಗಳಿಗೆ ಇದುವರೆಗೂ ಒಂದು ಹನಿ ನೀರು ಬಂದಿಲ್ಲ. ಗುಬ್ಬಿ ತಾಲ್ಲೂಕು ಮತ್ತು ತಿಪಟೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಕೆರೆ ಕೂಡ ತುಂಬಿಲ್ಲ. ಆದರೂ ಲೆಕ್ಕದಲ್ಲಿ ಮಾತ್ರ 14 ಟಿಎಂಸಿ ನೀರು ಎಲ್ಲಿ ಹರಿದಿದೆ ಎಂಬುದೇ ಅರ್ಥ ಆಗುತ್ತಿಲ್ಲ. ಕೇವಲ ಪುಸ್ತಕದಲ್ಲಿ ದಾಖಲೆ ತೋರಿಸಿ ದೇವೆಗೌಡರ ಕುಟುಂಬ ತಮ್ಮ ಸ್ವಹಿತಾಸಕ್ತಿಯಿಂದ ಹಾಸನ ಜಿಲ್ಲೆಗೆ ನೀರು ಹರಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕರು ಹಾಗು ರಾಜ್ಯ ಬಿಜೆಪಿ ಕಾರ್ಯದರ್ಶಿ ಬಿ.ಸುರೇಶಗೌಡ ಗಂಬೀರ ಆರೋಪ ಮಾಡಿದ್ದಾರೆ.

        ಜಿಲ್ಲೆಯ ಮಂತ್ರಿಗಳ ನಿರಾಸಕ್ತಿಯಿಂದಾಗಿ ಹಾಸನದವರು ಹೇಮಾವತಿ ವಿಚಾರದಲ್ಲಿ ಒಂದು ಹೆಜ್ಜೆ ಸದಾ ಮುಂದಿರುತ್ತಾರೆ. ಆದರೆ ನಮ್ಮ ಜಿಲ್ಲೆಯ ದೌರ್ಬಲ್ಯವೋ ಏನೋ ಒಬ್ಬೇ ಒಬ್ಬ ಮಂತ್ರಿ ಇದರ ಬಗ್ಗೆ ಚಕಾರ ಎತ್ತುವುದಿಲ್ಲ. ಹಾಸನ ಜಿಲ್ಲೆಯ ಪ್ರಭಾವಿ ಮುಖಂಡರ ಕೆಂಗಣ್ಣಿಗೆ ಗುರಿ ಆಗುತ್ತೇವೆ ಎಂಬ ಭಯದಿಂದ ಯಾರೂ ಮಾತನಾಡುವುದಿಲ್ಲ ಎಂದು ಸುರೇಶಗೌಡ ಲೇವಡಿ ಮಾಡಿದ್ದಾರೆ.

        ರೇವಣ್ಣ ಅವರೇ ತುಮಕೂರು ಜಿಲ್ಲೆಯಲ್ಲಿ ಸಭೆ ನಡೆಸಿರುವ ನೀವು ತುಮಕೂರು ಜಿಲ್ಲೆಗೆ ನೀರು ಕೊಡಲು ನಮ್ಮ ತಕರಾರು ಇಲ್ಲ ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಹಾಸನ ಜಿಲ್ಲೆಗೆ ನಿಗದಿ ಆಗಿರುವ ಹೇಮಾವತಿ ನೀರು ಏಷ್ಟು? ಹಾಸನ ಜಿಲ್ಲೆಗೆ ಈಗ ಹರಿದಿರುವ ನೀರಿನ ಪ್ರಮಾಣ ಎಷ್ಟು? ತುಮಕೂರು ಜಿಲ್ಲೆಗೆ ನಿಗದಿ ಆಗಿರುವುದು ಎಷ್ಟು? ಬಂದಿರುವ ನೀರು ಎಷ್ಟು? ಎಂಬುದನ್ನು ಹೈಕೋರ್ಟಿನ ನಿವೃತ್ತ ನ್ಯಾಯ ಮೂರ್ತಿಗಳಿಂದ ತನಿಖೆ ಮಾಡಿಸಬೇಕು. ಎಲ್ಲರ ಬಂಡವಾಳ ಬಯಲು ಆಗಲಿದೆ ಎಂದು ಬಿ.ಸುರೇಶಗೌಡ ಆಗ್ರಹಿಸಿದ್ದಾರೆ.
ನಿಮಗೆ ತುಮಕೂರು ಜಿಲ್ಲೆಯ ಬಗ್ಗೆ ನಿಜವಾದ ಕಾಳಜಿ ಕಳಕಳಿ ಇದ್ದರೆ ಮೊದಲು ನಮ್ಮ ತುಮಕೂರು ಜಿಲ್ಲೆಗೆ ಬರಬೇಕಾದ ಕಾವೇರಿ ನ್ಯಾಯಮಂಡಳಿಯಲ್ಲಿ ನೀಡಿರುವ ಹೈ ತೀರ್ಪಿನಂತೆ ನಮ್ಮ ಜಿಲ್ಲೆಯ ಪಾಲಿನ 24 ಟಿಎಂಸಿ ನೀರನ್ನು ಮೊದಲು ಹರಿಸಿ, ನಂತರ ನೀವು ಎಷ್ಟು ಬೇಕಾದರೂ ನಿಮ್ಮ ಜಿಲ್ಲೆಗೆ ಆದರೂ ತೆಗೆದುಕೊಂಡು ಹೋಗಿ ಇಲ್ಲ ರಾಮನಗರ ಜಿಲ್ಲೆಗೆ ಆದರೂ ಹರಿಸಿ, ನಮ್ಮ ತಕರಾರು ಇಲ್ಲ ಎಂದು ಬಿ. ಸುರೇಶಗೌಡ ಪ್ರತಿಕ್ರಿಯಿಸಿದ್ದಾರೆ.

      ನಾಲೆಯಲ್ಲಿ ಮರಗಿಡ ಬೆಳೆದು ಹೂಳು ತುಂಬಿದೆ. ಹಾಗಾಗಿ ಸಮರ್ಪಕವಾದ ನೀರು ಬಂದಿಲ್ಲ ಎಂದು ಸಬೂಬು ಹೇಳುವ ನಿಮಗೆ ತಾಂತ್ರಿಕವಾದ ಸಾಮಾನ್ಯ ಜ್ಞಾನ ಇಲ್ಲದಿರುವುದು ಇದರಿಂದ ಕಂಡು ಬರುತ್ತದೆ. ಹೂಳು ಮರ ಗಿಡಗಳಿಂದ ಎಷ್ಟು ಪ್ರಮಾಣದ ನೀರು ತಡೆಯಬಹುದು? ಶೇಕಡ 05 ಅಥವಾ ಶೇಕಡ 10 ರಷ್ಟು ನೀರು ತಡೆಯಬಹುದು. ಉಳಿದ ಶೇಕಡ 90 ರಷ್ಟು ನೀರುಎಲ್ಲಿ ಹರಿದಿದೆ ತಿಳಿಸಿ ಎಂದು ಸುರೇಶಗೌಡ ಪ್ರಶ್ನಿಸಿದ್ದಾರೆ.

      ನೀರಾವರಿ ಮಂತ್ರಿಗಳು ಇಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರೂ ಹಾಗೂ ಉಪಮುಖ್ಯಮಂತ್ರಿಗಳ ಗಮನಕ್ಕೂ ತರದೆ ಸೂಪರ್ ಸಿಎಂ ರೇವಣ್ಣ ಅವರು ಹೇಮಾವತಿ ಸಲಹಾ ಸಮಿತಿ ಸಭೆ ತುಮಕೂರಿನಲ್ಲಿ ನಡೆಸುತ್ತಾರೆ ಎಂದರೆ ಇದನ್ನು ಜಿಲ್ಲೆಯ ಜನ ಯೋಚನೆ ಮಾಡಬೇಕು ಎಂದು ಬಿ. ಸುರೇಶಗೌಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here