ನಿಗೂಢವಾದ ಹಾಲಿ ಸಂಸದರ ನಡೆ…!!!

ತುಮಕೂರು:

        ಕಳೆದ ಒಂದು ವರ್ಷದಿಂದಲೂ ತುಮಕೂರು ಕ್ಷೇತ್ರದ ಮೇಲೆ ಒಂದು ಕಣ್ಣು ಇಟ್ಟೇ ಇದ್ದ ಜೆಡಿಎಸ್ ಕೊನೆಗೂ ಈ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದೆ. ಜೆಡಿಎಸ್‍ನ ಈ ನಡೆಯನ್ನು ನಗಣ್ಯವಾಗಿಯೇ ಪರಿಗಣಿಸಿಕೊಂಡು ಬಂದ ಕಾಂಗ್ರೆಸ್‍ನ ಹಾಲಿ ಸಂಸದರ ಮುಂದಿನ ನಡೆ ಏನು ಎಂಬುದೇ ಈಗ ಮೂಡಿರುವ ಕುತೂಹಲ.

         ತುಮಕೂರು ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣು ಹಾಕಿದೆ ಎಂಬ ಮಾತುಗಳು ಇಂದು ನಿನ್ನೆಯದಲ್ಲ. ಆದರೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇದ್ದುದರಿಂದ ಹಾಗೂ ಹಾಲಿ ಸಂಸದರು ಇರುವ ಕ್ಷೇತ್ರಗಳನ್ನು ಬದಲಾವಣೆ ಮಾಡುವುದಿಲ್ಲ ಎಂಬ ಕೈ ನಾಯಕರ ಹೇಳಿಕೆಗಳು ಇಲ್ಲಿ ಕಾಂಗ್ರೆಸ್‍ಗೆ ಮೈತ್ರಿ ಒಲಿಯಬಹುದು ಎಂದೇ ನಿರೀಕ್ಷಿಸಲಾಗಿತ್ತು.

      ಈ ನಿರೀಕ್ಷೆಗಳನ್ನು ಹುಸಿ ಮಾಡಿ ಜೆಡಿಎಸ್ ತನ್ನ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬುಧವಾರ ಸಂಜೆ ಹೊರಬಿದ್ದ ಈ ತೀರ್ಮಾನದ ನಂತರ ಇಲ್ಲಿನ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಕೆಲ ಕಾಲ ತನ್ನ ಮೊಬೈಲ್ ಸಂಪರ್ಕವನ್ನೇ ಸ್ಥಗಿತಗೊಳಿಸಿದ್ದರು. ಆನಂತರವೂ ಕೆಲವರ ಸಂಪರ್ಕಕ್ಕೆ ಲಭಿಸಿಲ್ಲ. ಅವರೂ ಸಹ ಈ ಬೆಳವಣಿಗೆಯನ್ನು ನಿರೀಕ್ಷಿಸಿರಲಿಲ್ಲ.

       ತುಮಕೂರು ಕ್ಷೇತ್ರದಿಂದ ಈ ಬಾರಿಯೂ ನನಗೆ ಟಿಕೆಟ್ ಲಭಿಸಲಿದೆ ಎಂಬ ಭರವಸೆಯಲ್ಲಿಯೇ ಮುದ್ದಹನುಮೇಗೌಡರು ತಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರೆಸಿದ್ದರು. ಎಷ್ಟರ ಮಟ್ಟಿಗೆ ಕ್ರಿಯಾಶೀಲರಾಗಿದ್ದರೆಂದರೆ ಕಳೆದ ಒಂದು ತಿಂಗಳಿನಿಂದ ಇಡೀ ಕ್ಷೇತ್ರ ಸುತ್ತಿದ್ದಾರೆ. ಅದೆಷ್ಟು ಕಾರ್ಯಕ್ರಮಗಳಿಗೆ ಹಾಜರಾಗಿದ್ದಾರೋ ಲೆಕ್ಕವಿಲ್ಲ. ಸಣ್ಣ ಸಮಾರಂಭವನ್ನೂ ಬಿಡದೆ ಎಲ್ಲ ಕಡೆ ಪ್ರತ್ಯಕ್ಷರಾಗಿ ಬಂದರು. ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ಹೋಗಿ ಅಲ್ಲಿ ಕೆಲವು ಕಾಮಗಾರಿಗಳ ಉದ್ಘಾಟನಾ ಸಂದರ್ಭದಲ್ಲಿ ಸ್ಥಳೀಯ ರಾಜಕಾರಣದ ವಿರೋಧವನ್ನೂ ಕಟ್ಟಿಕೊಂಡರು.

       ತುಮಕೂರು ಕ್ಷೇತ್ರ ಜೆಡಿಎಸ್ ಪಾಲು ಎಂಬ ವರದಿ ಬಹಿರಂಗವಾಗಿದ್ದೇ ತಡ ಕಾಂಗ್ರೆಸ್ ವಲಯದಲ್ಲಿ ತಳಮಳ ಉಂಟಾಗಿರುವುದು ಸತ್ಯ. ಬಹಿರಂಗವಾಗಿ ವಿರೋಧಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಇಲ್ಲಿನ ಕಾಂಗ್ರೆಸ್ ಮಂದಿ ಇದ್ದಾರೆ. ಬಹು ವರ್ಣಿತ ರೀತಿಯಲ್ಲಿ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

        ಕ್ಷೇತ್ರ ಜೆಡಿಎಸ್ ಪಾಲಾದರೂ ಮುದ್ದಹನುಮೇಗೌಡರೇ ಅಭ್ಯರ್ಥಿ ಎನ್ನುವವರೂ ಇದ್ದಾರೆ. ಜೆಡಿಎಸ್‍ನಿಂದಲೇ ಸ್ಪರ್ಧಿಸಲಿದ್ದಾರೆ ಎನ್ನುವ ವಂದತಿಗಳಿಗೇನೂ ಕಮ್ಮಿಯಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕೊನೇ ಘಳಿಗೆಯಲ್ಲಿ ಟಿಕೆಟ್ ತಪ್ಪಿದಾಗ ಅವರನ್ನು ಕಾಂಗ್ರೆಸ್‍ಗೆ ಕರೆತಂದು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಂಡರು ಗೆಲ್ಲಿಸಿಕೊಂಡರು. ಪಕ್ಷದ ಮೇಲೆ ಅಷ್ಟು ನಂಬಿಕೆ ಅವರಿಗೆ ಇರುವಾಗ ಜೆಡಿಎಸ್‍ಗೆ ಹೋಗುತ್ತಾರೆಯೇ ಎಂದು ಮುದ್ದಹನುಮೇಗೌಡರ ಆತ್ಮೀಯ ವರ್ಗ ಪ್ರಶ್ನಿಸುತ್ತದೆ.

         ಇದುವರೆಗೆ ನಡೆದು ಹೋಗಿರುವ ಲೋಕಸಭಾ ಚುನಾವಣೆಗಳಲ್ಲಿ ಅವಲೋಕಿಸಿದರೆ ಜೆಡಿಎಸ್ ಸಾಧನೆ ಅಷ್ಟಕಷ್ಟೆ. 15 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್ ಪಕ್ಷವೇ ಗೆಲುವು ಸಾಧಿಸಿದೆ. 1996ರಲ್ಲಿ ಜೆಡಿಎಸ್‍ನಿಂದ ಸಿ.ಎನ್.ಭಾಸ್ಕರಪ್ಪ ಗೆಲುವು ಬಿಟ್ಟರೆ ಮತ್ತಾವ ಚುನಾವಣೆಯಲ್ಲಿಯೂ ಜೆಡಿಎಸ್ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೀಗಿರುವಾಗ ಕೈ ನಾಯಕರು ಜೆಡಿಎಸ್‍ಗೆ ಶರಣಾಗಿದ್ದು ಸರಿಯೇ ಎಂಬ ಪ್ರಶ್ನೆಗಳು ಕಾಂಗ್ರೆಸ್ ವಲಯದಲ್ಲಿ ಹರಿದಾಡುತ್ತಿವೆ.

          ತುಮಕೂರು ಕ್ಷೇತ್ರ ಕಾಂಗ್ರೆಸ್ ಕೈ ತಪ್ಪಿರುವುದು ಕೆಲವು ನಾಯಕರಲ್ಲಿ ತಳಮಳ ಮಾತ್ರವಲ್ಲ, ಅಸಮಧಾನವೂ ಉಂಟಾಗಿದೆ. ಒಂದು ರೀತಿಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಹಿನ್ನಡೆ ಎಂದೇ ಹೇಳಬಹುದು. ಕ್ಷೇತ್ರ ಕಳೆದುಕೊಂಡಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಮುಂದಿನ ಅಸಮಾಧಾನಗಳನ್ನು ಪಕ್ಷ ಹೇಗೆ ನಿಭಾಯಿಸುತ್ತದೆ ಎಂಬುದೀಗ ಗಂಭೀರ ಚರ್ಚಾ ವಿಷಯ. ಮಧುಗಿರಿ ಕ್ಷೇತ್ರದ ಮಾಜಿ ಶಾಸಕ ಕೆ.ಎನ್.ರಾಜಣ್ಣ ಈಗಾಗಲೇ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಡುವುದಾದರೆ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ನನಗೆ ಕಾಂಗ್ರೆಸ್ ಉಳಿವುಮುಖ್ಯ ಎಂದಿರುವುದನ್ನು ನೋಡಿದರೆ ಅಸಮಾಧಾನಗಳು ಮನೆ ಮಾಡಿರುವುದು ನಿಜ ಎಂಬುದನ್ನು ಸೂಚಿಸುತ್ತದೆ.

          ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಡೆದಿರಬಹುದು. ಆದರೆ ಅಭ್ಯರ್ಥಿ ಯಾರು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಈಗ ಹೆಚ್ಚುತ್ತಿದೆ. ಹಲವು ಹೆಸರುಗಳನ್ನು ಇತ್ತೀಚೆಗೆ ತೇಲಿಬಿಡಲಾಗಿತ್ತು. ಚಿ.ನಾ.ಹಳ್ಳಿಯ ಮಾಜಿ ಶಾಸಕ ಸಿ.ಬಿ. ಸುರೇಶ್‍ಬಾಬು ಅವರ ಹೆಸರೂ ಒಳಗೊಂಡಂತೆ ಒಂದಿಬ್ಬರ ಹೆಸರುಗಳನ್ನು ಕೇಳಿಬಂದಿದ್ದವು. ಆದರೆ ಜೆಡಿಎಸ್‍ನಲ್ಲಿ ಕಡೆ ಘಳಿಗೆಯಲ್ಲಿ ಏನು ಬೇಕಾದರೂ ಆಗಬಹುದು ಎಂಬ ನಿದರ್ಶನಗಳು ನಮ್ಮ ಮುಂದೆ ಇವೆ. ಎಲ್ಲಕ್ಕಿಂತ ಹೆಚ್ಚಾಗಿ ಸ್ವತಃ ದೇವೇಗೌಡರೇ ಈ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗುತ್ತಿದೆ.

           ದಶಕಗಳ ಕಾಲ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಈ ಬಾರಿ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಗೌಡರು ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಈಗ ಅವರ ಮುಂದೆ ಇರುವುದು ತುಮಕೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರಗಳು. ತನಗೆ ಯಾವುದು ಸೇಫ್ ಎಂಬ ಲೆಕ್ಕಾಚಾರದಲ್ಲಿ ದೇವೇಗೌಡರು ಮಗ್ನರಾಗಿದ್ದಾರೆ ಎಂಬ ವ್ಯಾಖ್ಯಾನಗಳು ಈಗ ರಾಜಕೀಯ ವಲಯದಲ್ಲಿ ಚರ್ಚಿತವಾಗುತ್ತಿವೆ. ಜೆಡಿಎಸ್‍ನ ಕೆಲವರು ಹೇಳುವ ಪ್ರಕಾರ ಬೆಂಗಳೂರು ಉತ್ತರಕ್ಕಿಂತ ಹೆಚ್ಚಾಗಿ ತುಮಕೂರನ್ನೇ ಹೆಚ್ಚು ಇಷ್ಠಪಡುತ್ತಿದ್ದಾರೆ ಎಂಬುದು.

          ಜೆಡಿಎಸ್‍ನಿಂದ ಇಲ್ಲಿ ಯಾರು ಸ್ಪರ್ಧಿಸುವರು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಕುತೂಹಲವಂತೂ ಇದ್ದೇ ಇರುತ್ತದೆ.ಜಿಲ್ಲೆಯ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿಯೂ ಕೆಲವೆಡೆ ಜೆಡಿಎಸ್ ಪ್ರಾಬಲ್ಯವಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳೇ ಹೆಚ್ಚು ಜಟಾಪಟಿಗೆ ಒಳಗಾಗಿವೆ.

          ಈ ಎಲ್ಲಾ ಲೆಕ್ಕಾಚಾರಗಳನ್ನು ಒಳಗೊಂಡು ಈ ಪ್ರಾಂತ್ಯದಲ್ಲಿ ಜೆಡಿಎಸ್ ಬಲಿಷ್ಠಗೊಳಿಸುವುದು ಗೌಡರ ಮಹದಾಸೆ. ಜೊತೆಗೆ ತನ್ನ ಪಕ್ಷದಿಂದಲೇ ಸಿಡಿದು ಹೋಗಿ ಕಾಂಗ್ರೆಸ್‍ನಲ್ಲಿರುವ ಮುದ್ದಹನುಮೇಗೌಡರಿಗೆ ಅಧಿಕಾರ ಇಲ್ಲದಂತೆ ಮಾಡುವ ಅಥವಾ ಪಕ್ಷಕ್ಕೆ ಬಂದರೆ ಅವರಿಗೆ ಟಿಕೆಟ್ ನೀಡುವ ರಾಜಕೀಯ ಲೆಕ್ಕಾಚಾರಗಳು ಇಲ್ಲವೆಂದಲ್ಲ.

         ಮೈತ್ರಿಯಲ್ಲಿ ಸ್ಥಾನಗಳ ಹಂಚಿಕೆ ಗೊಂದಲಕ್ಕೆ ತೆರೆ ಬಿದ್ದಿರಬಹುದು. ಆದರೆ ಅಭ್ಯರ್ಥಿಗಳ ಆಯ್ಕೆ ವಿಚಾರ ಇನ್ನೂ ಉಳಿದಿದೆ. ಈ ಪ್ರಕ್ರಿಯೆ ಇತ್ಯರ್ಥವಾದ ನಂತರವಷ್ಟೇ ಕ್ಷೇತ್ರದ ಚುನಾವಣಾ ಚಟುವಟಿಕೆಗಳು ತೀವ್ರಗೊಳ್ಳಲಿವೆ. ಸದ್ಯಕ್ಕಂತೂ ಎಲ್ಲರ ಬಾಯಲ್ಲೂ ಒಂದೇ ಮಾತು. ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ?

 

Recent Articles

spot_img

Related Stories

Share via
Copy link
Powered by Social Snap