ಶೌಚಾಲಯ ಬಳಕೆಯ ಜಾಗೃತಿಗೆ ಶಾಲಾ ಶಿಕ್ಷಕರ ಪಾತ್ರ ಪ್ರಮುಖ : ಎಸ್.ಕೆ.ಕರಿಯಣ್ಣನವರ

ಹಾವೇರಿ

     ದೇಶದ ಸ್ವಾತಂತ್ರ್ಯಕ್ಕೆ ನಮ್ಮ ಹಿರಿಯರು ಶ್ರಮಿಸಿದಂತೆ, ದೇಶದ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸುವುದು ಅತ್ಯಗತ್ಯವಾಗಿದೆ. ಗ್ರಾಮಗಳ ಸ್ವಚ್ಛತೆಗೆ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಅವರ ಹೇಳಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸ್ವಚ್ಛ ಮೇವ ಜಯತೆ ಆಂದೋಲನ ಅಂಗವಾಗಿ ಗ್ರಾಮ ಪಂಚಾಯತಿಗಳಲ್ಲಿ ಮತ್ತು ಶಾಲೆಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ನಿರ್ವಹಣೆ ಕುರಿತು ಗ್ರಾಮೀಣ ಸಮುದಾಯಕ್ಕೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಗ್ರಾಮೀಣ ಪ್ರದೇಶದ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಒಂದು ದಿನದ ಘನ ತ್ಯಾಜ್ಯ ನಿರ್ವಹಣೆ ಮತ್ತು ಓಡಿಎಫ್ ಸುಸ್ಥಿರತೆ ಕುರಿತು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

     ಮಹಾತ್ಮಗಾಂಧೀಜಿ ಅವರು ರಸ್ತೆಗಳ ಕಸಗೂಡಿಸಿದರು ಹಾಗೂ ಶೌಚಾಲಯ ಶುಚಿಗೊಳಿಸುವ ಮೂಲಕ ಸ್ವಚ್ಛ ಭಾರತದ ಕನಸು ಕಂಡಿದ್ದರು. ಗಾಂಧೀಜಿ ಅವರ ಮಾದರಿಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮುಂದುವರೆಯಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯ ಇಂದಿನ ತುರ್ತು ಅಗತ್ಯವಾಗಿದೆ. ಶಿಕ್ಷಕರಿಂದ ನಾಯಕರನ್ನು ನಿರ್ಮಿಸಲು ಸಾಧ್ಯ, ಸ್ವಚ್ಛತೆ ಕುರಿತು ಶಿಕ್ಷಕರು ಇಂದು ಮಕ್ಕಳಲ್ಲಿ ಬಿತ್ತಿದ ಬೀಜ ಮುಂದೆ ಹೆಮ್ಮರವಾಗಿ ಬೆಳೆಯುತ್ತದೆ. ಆರೋಗ್ಯವಂತ ಸಮಾಜದಿಂದ ಸದೃಢ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ. ವಾರಕ್ಕೆ ಒಂದು ದಿನವಾದರೂ ವಿದ್ಯಾರ್ಥಿಗಳ ತಂಡದೊಂದಿಗೆ ಗ್ರಾಮದೊಳಗೆ ಸಂಚಾರಮಾಡಿ ಗ್ರಾಮಸ್ಥರಿಗೆ ಸ್ವಚ್ಛತೆಯ ಜಾಗೃತಿ, ಮೀತ ನೀರು ಬಳಕೆ, ಶೌಚಾಲಯ ಬಳಕೆ ಕುರಿತಂತೆ ಜಾಗೃತಿ ಮೂಡಿಸಲು ಕರೆ ನೀಡಿದರು.

       ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲೀಲಾವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಪ್ಲಾಸ್ಟಿಕ್ ಬಳಕೆ ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಹಳ್ಳಿಗಳಲ್ಲೂ ಪ್ಲಾಸ್ಟಿಕ್ ಬಳಕೆ ಅಧಿಕಾಗಿದೆ. ಘನ ತ್ಯಾಜ್ಯ ವಿಲೇವಾರಿ ಸಮಸ್ಯೆ ಎದುರಾಗಿದೆ. ನಗರದಂತೆ ಹಳ್ಳಿಗಳಲ್ಲೂ ಒಣ ಹಾಗೂ ಹಸಿ ಕಸ ವಿಂಗಡಣೆ, ಸ್ವಚ್ಛತೆ ಹಾಗೂ ಶೌಚಾಲಯ ಬಳಕೆ ಪ್ರತಿ ಕುಟುಂಬ ಅವಿಭಾಜ್ಯ ಅಂಗ ಎಂಬುದುರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಶಾಲಾ ಮಕ್ಕಳ ಮೂಲಕ ಸಂದೇಶ ತಲುಪಿಸಲು ಶಿಕ್ಷಕರಿಗೆ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

      ಈಗಾಗಲೇ ಜಿಲ್ಲೆಯ 35 ಗ್ರಾಮ ಪಂಚಾಯತಿಗಳಲ್ಲಿ ಘನ ತ್ಯಾಜ್ಯವನ್ನು ಗ್ರಾ.ಪಂಚಾಯತಿ ವತಿಯಿಂದ ಉಚಿತವಾಗಿ ಸಂಗ್ರಹಿಸಲಾಗುತ್ತಿದೆ. ಹಂತ ಹಂತವಾಗಿ ಜಿಲ್ಲೆಯ ಎಲ್ಲ ಪಂಚಾಯತಿಗಳಲ್ಲೂ ಘನ ತಾಜ್ಯ ವಿಲೇವಾರಿ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುವುದು ಎಂದು ಹೇಳಿದರು.

       ಇದೇ ಸಂದರ್ಭದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಸ್ವಚ್ಛತಾ ಪ್ರತಿಜ್ಞಾವಿದಿ ಬೋಧಿಸಿದರು.ಕಾರ್ಯಕ್ರಮದಲ್ಲಿ ಜಿ.ಪಂ.ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link