ಪದವಿ ಹೊಂದಿರುವ ಸಿಬ್ಬಂದಿಗಳ ನೋಂದಣಿಗೆ ಕ್ರಮ ಕೈಗೊಳ್ಳಲು ಎಡಿಸಿ ಸೂಚನೆ

ತುಮಕೂರು

    ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ಪರಿಷ್ಕರಣಾ ಕಾರ್ಯವು ಪ್ರಗತಿಯಲ್ಲಿದ್ದು, ಪದವಿ ಹೊಂದಿರುವ ತಮ್ಮ ಕಛೇರಿಯ ಅಧಿಕಾರಿ/ ಸಿಬ್ಬಂದಿಗಳನ್ನು ಮತ ಪಟ್ಟಿಗೆ ನೋಂದಾಯಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೂಚನೆ ನೀಡಿದರು.

     ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2020 ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತದಾರರ ಪಟ್ಟಿ ತಯಾರಿಕೆಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದ ಅವರು, ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತಪಟ್ಟಿಗೆ ನೋಂದಣಿಯಾದವರ ಸಂಖ್ಯೆಯ ಪ್ರಮಾಣ ಕಡಿಮೆಯಿದ್ದು, ದಿನಾಂಕ:31-10-2016ಕ್ಕೆ ಮೊದಲು ಪದವಿ ಪೂರ್ಣಗೊಳಿಸಿದ ಅರ್ಹ ಪದವೀಧರರನ್ನು ತಪ್ಪದೇ ಮತಪಟ್ಟಿಗೆ ನೋಂದಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ನಿರ್ದೇಶನ ನೀಡಿದರು.

      ಅರ್ಹ ಪದವೀಧರ ಮತದಾರರು ನಿಗಧಿತ ನಮೂನೆ 18ನ್ನು ಭರ್ತಿ ಮಾಡಿ ಪದವಿ ತೇರ್ಗಡೆ ಪ್ರಮಾಣಪತ್ರ/ ಕಾನ್ವಕೇಷನ್ ಸರ್ಟಿಫಿಕೇಟ್ ಅಥವಾ ಅನುಚ್ಛೇಧ-3 ಹಾಗೂ ಭಾವಚಿತ್ರವನ್ನು ಸಲ್ಲಿಸುವ ಮೂಲಕ ಮತಪಟ್ಟಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಎಲ್ಲಾ ರಾಜಕೀಯ ಪಕ್ಷದವರು, ಇಲಾಖಾ ಮುಖ್ಯಸ್ಥರು, ಖಾಸಗಿ ಉದ್ದಿಮೆಗಳ ಮಾಲೀಕರು, ಸರ್ಕಾರಿ/ ಅರೆ ಸರ್ಕಾರಿ ಕಚೇರಿ ಅಧಿಕಾರಿಗಳು, ಖಾಸಗಿ ಸಂಸ್ಥೆಗಳ/ಇತರೆ ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರು ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಪದವೀಧರರನ್ನು ತಪ್ಪದೇ ಮತಪಟ್ಟಿಗೆ ನೋಂದಾಯಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತಪಟ್ಟಿ ತಯಾರಿಕೆ :-

      ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ:1-11-2019ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತಪಟ್ಟಿಯನ್ನು ತಯಾರಿಸಲಾಗುವುದು. ಈಗಾಗಲೇ 2019ರ ಡಿಸೆಂಬರ್ 7ರಂದು ಕರಡು ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆ/ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿ/ ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿದೆ ಎಂದರು.

      ಕರಡು ಮತ ಪಟ್ಟಿಯನುಸಾರ ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ 2191, ಮಧುಗಿರಿ-2137, ಶಿರಾ-3078, ಚಿಕ್ಕನಾಯಕನಹಳ್ಳಿ-1300, ತಿಪಟೂರು-1697, ತುರುವೇಕೆರೆ-1296, ಕುಣಿಗಲ್-1105, ಗುಬ್ಬಿ-1411, ತುಮಕೂರು ನಗರ-4981, ತುಮಕೂರು ಗ್ರಾಮಾಂತರ-1626 ಹಾಗೂ ಕೊರಟಗೆರೆ-1250 ಸೇರಿದಂತೆ ಒಟ್ಟು 22072 ಪದವೀಧರ ಮತದಾರರು ಮತಪಟ್ಟಿಗೆ ನೋಂದಾಯಿಸಿಕೊಂಡಿದ್ದಾರೆ. ಕರಡು ಮತಪಟ್ಟಿಗೆ ಸಂಬಂಧಿಸಿದಂತೆ 2019ರ ಡಿಸೆಂಬರ್ 7 ರಿಂದ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ-18ರಲ್ಲಿ 6242 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಕರಡು ಮತಪಟ್ಟಿಯಿಂದ ಕೈಬಿಡಲು ನಮೂನೆ-7ರಲ್ಲಿ 115 ಅರ್ಜಿಗಳು ಹಾಗೂ ತಿದ್ದುಪಡಿಗಾಗಿ ನಮೂನೆ-8ರಲ್ಲಿ 36 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು.

     ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ ಸುಮಾರು 120601 ಪದವೀಧರರು ಇರುವುದಾಗಿ ಅಂದಾಜಿಸಲಾಗಿದ್ದು, ಕರಡು ಮತಪಟ್ಟಿಯನ್ನು ಪರಿಶೀಲಿಸಿದಾಗ ಕೇವಲ 22072(ಶೇ.18.30) ಪದವೀಧರರು ಮಾತ್ರ ಮತ ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ. ಕರಡು ಪಟ್ಟಿಯ 22072 ಮತ್ತು 2019ರ ಡಿಸೆಂಬರ್ 7 ರಿಂದ 23ರವರೆಗೆ ನೋಂದಾಯಿಸಿಕೊಂಡ 6242 ಸೇರಿದಂತೆ ಒಟ್ಟು 28314 ಮತದಾರರು ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನೋಂದಣಿಯಾದಂತಾಗಿದೆ. ಕಳೆದ 2014ನೇ ಸಾಲಿನಲ್ಲಿ ನಡೆದ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ 28633 ಪದವೀಧರ ಮತದಾರರು ನೋಂದಣಿ ಮಾಡಿಕೊಂಡಿದ್ದು, 2014ರ ನೋಂದಣಿಗೆ ಹೋಲಿಸಿದರೆ (28633-28314=319) ಈ ಬಾರಿ 319 ಮತದಾರರ ನೋಂದಣಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷದವರು, ಇಲಾಖಾ ಮುಖ್ಯಸ್ಥರು, ಖಾಸಗಿ ಉದ್ದಿಮೆಗಳ ಮಾಲೀಕರು, ಇತರೆ ಸಾರ್ವಜನಿಕ ಉದ್ದಿಮೆಗಳ ಮುಖ್ಯಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಪದವೀಧರ ಮತದಾರರನ್ನು ಮತಪಟ್ಟಿ ನೋಂದಣಿಗೆ ಸಹಕರಿಸಬೇಕೆಂದು ಅವರು ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020:-

      ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ:1-1-2020ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2020 ಕಾರ್ಯವು ಪ್ರಗತಿಯಲ್ಲಿದ್ದು, ಈಗಾಗಲೇ 2019ರ ಡಿಸೆಂಬರ್ 16ರಂದು ಕರಡು ಮತದಾರರ ಪಟ್ಟಿಯನ್ನು ಎಲ್ಲಾ ಮತಗಟ್ಟೆ/ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿ/ ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿದೆ.

     ಈ ಕರಡು ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 1104451 ಪುರುಷ ಮತ್ತು 1093094 ಮಹಿಳೆಯರು ಸೇರಿದಂತೆ ಒಟ್ಟು 2197545 ಮತದಾರರು ನೋಂದಣಿಯಾಗಿರುತ್ತಾರೆ. ಕರಡು ಮತ ಪಟ್ಟಿಗೆ ಸಂಬಂಧಿಸಿದಂತೆ ಜನವರಿ 15ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.

ಜ.6ರಿಂದ ಮಿಂಚಿನ ನೋಂದಣಿ :-

      ಜಿಲ್ಲೆಯಲ್ಲಿ 18 ರಿಂದ 19 ವರ್ಷ ವಯಸ್ಸಿನ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವ ಸಲುವಾಗಿ ಜನವರಿ 6 ರಿಂದ 8ರವರೆಗೆ 3 ದಿನಗಳ ಕಾಲ ಎಲ್ಲಾ ಮತಗಟ್ಟೆ/ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿ/ ಶಿಕ್ಷಣ ಸಂಸ್ಥೆ/ ಪ್ರಮುಖ ಸ್ಥಳಗಳಲ್ಲಿ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಕೂಡಲೇ ಮತಗಟ್ಟೆ ಮಟ್ಟದ ಏಜೆಂಟರುಗಳನ್ನು ಎಲ್ಲಾ ಮತಗಟ್ಟೆಗಳಿಗೆ ನೇಮಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.

      ಮಿಂಚಿನ ನೋಂದಣಿ ಕಾರ್ಯಕ್ರಮದಡಿ ಸಂಬಂಧಿಸಿದ ಮತಗಟ್ಟೆಗಳಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳು ನಿಗಧಿತ ದಿನಾಂಕಗಳಂದು ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆಯವರೆಗೆ ಹಾಜರಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಿದ್ದಾರೆ. ಸ್ವೀಕೃತವಾಗುವ ಹಕ್ಕು ಮತ್ತು ಆಕ್ಷೇಪಣೆಗಳನ್ನು ವಿಲೇಪಡಿಸಿ ಫೆಬ್ರುವರಿ 7 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು.

    “ಮಿಂಚಿನ ನೋಂದಣಿ ಅವಧಿಯಲ್ಲಿ 18 ರಿಂದ 19 ವರ್ಷ ವಯಸ್ಸಿನವರು ನಮೂನೆ 6 ಹಾಗೂ ಅರ್ಹ ಪದವೀಧರರು ನಮೂನೆ-18ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವ ಮೂಲಕ ಮತಪಟ್ಟಿಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

      ಸಭೆಯಲ್ಲಿ ತಮ್ಮ ಅಧೀನ ಸಿಬ್ಬಂದಿಗಳನ್ನು ಮತ ಪಟ್ಟಿ ನೋಂದಣಿಗಾಗಿ ಹಾಜರಿದ್ದ ಎಲ್ಲಾ ಅಧಿಕಾರಿಗಳಿಗೆ ನಮೂನೆ-18ನ್ನು ವಿತರಿಸಲಾಯಿತು. ಭಾರತ್ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಭಾರತ್ ಕಮ್ಯೂನಿಸ್ಟ್ ಪಕ್ಷ(ಮಾಕ್ರ್ಸ್‍ವಾದಿ)ದ ಜಿಲ್ಲಾ ಕಾರ್ಯದರ್ಶಿ ಉಮೇಶ್, ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಚುನಾವಣಾ ತಹಶೀಲ್ದಾರ್ ನಾಗಭೂಷಣ್, ಲೀಡ್‍ಬ್ಯಾಂಕ್ ಮ್ಯಾನೇಜರ್ ಜ್ಯೋತಿಗಣೇಶ್, ಡಿಡಿಪಿಐ ಎಂ.ಆರ್. ಕಾಮಾಕ್ಷಿ, ಜಿಲ್ಲಾ ನೋಂದಣಾಧಿಕಾರಿ ಎಂ. ಶ್ರೀದೇವಿ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap