ಆಮ್ಲಜನಕದ ಕೊರತೆ ಕುರಿತಂತೆ ಗಮನ ವಹಿಸಿ : ಎಚ್ ಕೆ ಪಾಟೀಲ್

ಬೆಂಗಳೂರು

     ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ಈಗಾಗಲೇ 10-12 ಮಂದಿ ಸಾವನ್ನಪ್ಪಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣ ರಾಜ್ಯದಲ್ಲಿ ಸಮರ್ಪಕ ಪ್ರಮಾಣದಲ್ಲಿ ಆಮ್ಲಜನಕ ಸಿಲಿಂಡರ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಎಚ್.ಕೆ.ಪಾಟೀಲ್ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ.

     ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಆಕ್ಸಿಜನ್ ಕುರಿತಂತೆ ಗಂಭೀರವಾದ, ದೃಢವಾದ ತಕ್ಷಣದ ಹೆಜ್ಜೆಗಳನ್ನಿಡದೇ ಹೋದರೆ ಜನ ಆಸ್ಪತ್ರೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸಾವಿಗೀಡಾಗಬೇಕಾದ ಪ್ರಸಂಗ ಬರಬಹುದು. ಜಾಗೃತರಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

     ಕೊರೋನಾ ಮಹಾಮಾರಿ ದಿನೇ ದಿನೇ ಹೆಚ್ಚು ವ್ಯಾಪಕವಾಗುತ್ತಿದೆ. ತನ್ನ ಲಕ್ಷಣ ಪರಿಣಾಮಗಳನ್ನು ಬದಲಾಯಿಸುತ್ತಿದ್ದು, ಒಂದು ಸರಿಯಾದ ಅಂದಾಜಿನಂತೆ ರಾಜ್ಯದಲ್ಲಿ ಸಾವಿನ ಪ್ರಮಾಣ ಜೂನ್/ಜುಲೈ ಹಾಗೂ ಆಗಸ್ಟ್ 15 ವರೆಗಿನ ದಿನಗಳನ್ನು ಗಮನಿಸಿದಾಗ ಜೂನ್‍ಗಿಂತ 2-3 ಪಟ್ಟು ಜಾಸ್ತಿ ಆಗಿದೆ. ಸರಕಾರಿ ಅಂಕಿ-ಅಂಶಗಳ ಪ್ರಕಾರ ಸಾವಿನ ಪ್ರಮಾಣ ಶೇ.1.5ರಷ್ಟು ಇದ್ದದ್ದು ಶೇ. 3ಕ್ಕೆ ಏರಿಕೆಯಾಗಿರುವುದು ಭಯಾನಕ ಅಂಶ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

     ಕಳೆದ ಕೆಲ ದಿನಗಳಿಂದ ಈ ರೋಗದಿಂದ ಬಳಲುವವರಿಗೆ ಪ್ರಾಣವಾಯುವಿನ (ಆಮ್ಲಜನಕ) ಅವಶ್ಯಕತೆ ಭಾರಿ ಪ್ರಮಾಣದಲ್ಲಿ ಜಾಸ್ತಿಯಾಗುತ್ತಿದೆ. ಸರಕಾರಿ ದವಾಖಾನೆಗಳಲ್ಲಿ ಲಿಕ್ವಿಡ್ ಆಕ್ಸಿಜನ್ ವ್ಯವಸ್ಥೆ ಮಾಡಿಕೊಂಡಿಲ್ಲ. ಈಗ ತರಾತುರಿ ನಡೆದಿದೆ. ಆಕ್ಸಿಜನ್ ಸಿಲಿಂಡರ್‍ಗಳ ಪೂರೈಕೆ ಆಗುತ್ತಿಲ್ಲ. ಲಿಕ್ವಿಡ್ ಆಕ್ಸಿಜನ್ ಸಮರ್ಪಕವಾಗಿ ಪೂರೈಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

    ಈ ಸಮಸ್ಯೆಗೆ ಕಾರಣಗಳನ್ನು ತಿಳಿಯಬೇಕು, ಸಮಸ್ಯೆ ಬಗೆಹರಿಯಬೇಕು. ತಮಿಳುನಾಡಿನಿಂದ ಬರುತ್ತಿದ್ದ ಲಿಕ್ವಿಡ್ ಆಕ್ಸಿಜನ್ ಹಾಗೂ ಗ್ಯಾಸ್ ಸಿಲಿಂಡರ್‍ಗಳು ಅವರ ರಾಜ್ಯದಲ್ಲಿ ನೀಡಿ ಹೆಚ್ಚಾದರೆ ಮಾತ್ರ ಕರ್ನಾಟಕಕ್ಕೆ ಎಂಬ ನಿಲುವು ತಮಿಳುನಾಡಿನ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಇದರಿಂದ ಭಾರೀ ಪ್ರಮಾಣದ ಸಮಸ್ಯೆ ಸೃಷ್ಟಿಯಾಗಿದೆ. ಮಹಾರಾಷ್ಟ್ರದಿಂದ ಸದ್ಯ ಈಗ ಸಮಸ್ಯೆ ಇಲ್ಲ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಕುರಿತು ಮುಂದಾಲೋಚನೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.

    ತಕ್ಷಣ ಜನಪರ ಕೆಲಸ ಮಾಡುವ ಪ್ರಾಮಾಣಿದ ಅಧಿಕಾರಿ ನೇತೃತ್ವದಲ್ಲಿ ಒಂದು ಟಾಸ್ಕ್ ಫೋರ್ಸ್ ಮಾಡಿ ಸಿಲಿಂಡರ್, ಲಿಕ್ವಿಡ್ ಆಕ್ಸಿಜನ್ ಅಗತ್ಯ ಮೂಲಸೌಕರ್ಯಗಳ ನಿಗಾ, ನಿರ್ಧಾರ ಜವಾಬ್ದಾರಿ ನೀಡಿ ಕೆಲಸ ಪ್ರಾರಂಭಿಸಬೇಕು. ಮೆಡಿಕಲ್ ಆಮ್ಲಜನಕದ ಕೊರತೆ ಪರಿಸ್ಥಿತಿ ಈಗಿನಂತೆ ಮುಂದುವರಿದರೆ ಗಂಡಾಂತರ ತಪ್ಪಿದ್ದಲ್ಲ.

      ಕೈಗಾರಿಕಾ ಆಮ್ಲಜನಕವನ್ನು ಕೊರೋನಾ ಪೀಡಿತರಿಗೆ ಬಳಸುವ ಅನಿವಾರ್ಯವಾಗುವಂತೆ ಗೋಚರವಾಗುತ್ತಿದೆ. ಅದನ್ನು ಬಳಕೆ ಮಾಡಲು ಕಾನೂನಿನ ತೊಡಕು ಇರಲು ಸಾಧ್ಯವಿದೆ. ಕೈಗಾರಿಕಾ ಆಮ್ಲಜನಕವನ್ನೂ ಸಹ ವೈದ್ಯಕೀಯ ಆಮ್ಲಜನಕದಷ್ಟೆ ಶುದ್ಧವಾಗಿಸಬಹುದು. ಇಲ್ಲಿ ನೈಜ ಸಮಸ್ಯೆ ಎಂದರೆ, ಸಿಲಿಂಡರ್‍ಗಳ ಕೊರತೆ. ಕೈಗಾರಿಕಾ ಆಮ್ಲಜನಕ ಸಿಲಿಂಡರ್ ಬಳಕೆಗೆ ಅವಕಾಶವನ್ನು ಸರಕಾರ ಮಾಡಿಕೊಡಬೇಕು. ಆ ವ್ಯವಸ್ಥೆ ಮಾರ್ಪಡಿಸಿದರೆ ಸಮಸ್ಯೆ ಬಗೆಹರಿಸಬಹುದು ಎಂದು ಎಚ್.ಕೆ.ಪಾಟೀಲ್ ಸಲಹೆ ನೀಡಿದ್ದಾರೆ.

    ಮತ್ತೊಂದು ಸಲಹೆ, ಕೆಲ ಕಾರ್ಖಾನೆಗಳು ತಮ್ಮ ಕಾರ್ಖಾನೆಯ ಬಳಕೆಗಾಗಿ ಮಾತ್ರ ಆಮ್ಲಜನಕವನ್ನು ಮೀಸಲಿಟ್ಟುಕೊಂಡಿವೆ. ಅದನ್ನು ಕೇವಲ ಕಾರ್ಖಾನೆಯ ಬಳಕೆಗೆ ಮಾತ್ರ ಉಪಯೋಗಿಸಲಾಗುತ್ತಿವೆ. ತಕ್ಷಣ ಕೊರೋನಾ ಪೀಡಿತರಿಗೆ ಆ ಉತ್ಪಾದನೆ ಸಂಪೂರ್ಣವಾಗಿ ನೀಡಲು ಆದೇಶಿಸಬೇಕು. ತೋರಣಗಲ್‍ನಲ್ಲಿರುವ ಜಿಂದಾಲ್ ಕಂಪನಿಯ ದೊಡ್ಡ ಘಟಕ ಮತ್ತು ಮರಿಯಮ್ಮನಹಳ್ಳಿಯ ಜಿಂದಾಲ್ ಕಂಪನಿಯ ಆ್ಯಕ್ಸಿಜನ್ ಘಟಕಗಳೂ ರಾಜ್ಯದಲ್ಲಿ ತನ್ನ ಪೂರ್ಣ ಸಾಮರ್ಥ್ಯವನ್ನು ಈ ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ದೊರಕಿಸುವಂತೆ ಮಾಡಬೇಕು. ಇಂಥ ಸ್ಥಿತಿಯಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು? ವೈಜ್ಞಾನಿಕ ಕ್ರಮ ಏನು? ಕಾನೂನಾತ್ಮಕ ಕ್ರಮ ಏನು? ಮೂಲಸೌಕರ್ಯದಲ್ಲಿ ಏನು ಬದಲಾವಣೆ ಅಗತ್ಯವಿದೆ ಮುಂತಾಗಿ ಹೆಚ್ಚಿನ ವ್ಯವಸ್ಥೆಯನ್ನು ತಕ್ಷಣ ತೀವ್ರವಾಗಿ ಮಾಡಬೇಕು ಎಂದು ತಿಳಿಸಿದ್ದಾರೆ.

    ಆ್ಯಕ್ಸಿಜನ್ ಕುರಿತಂತೆ ಗಂಭೀರವಾದ, ದೃಢವಾದ ತಕ್ಷಣದ ಹೆಜ್ಜೆಗಳನ್ನಿಡದೇ ಹೋದರೆ ಜನ ಆಸ್ಪತ್ರೆಗಳಲ್ಲಿ ಭಾರೀ ಸಂಖ್ಯೆಯಲ್ಲಿ ಸಾವಿಗೀಡಾಗಬೇಕಾದ ಪ್ರಸಂಗ ಬಂದೀತು. ಈಗಾಗಲೇ 10-12 ಜನ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಜಾಗೃತರಾಗಿ ತಕ್ಷಣ ಕ್ರಮ ಕೈಗೊಳ್ಳಲು ಈ ಮೂಲಕ ಪ್ರಾರ್ಥಿಸುತ್ತೇನೆ ಎಂದು ಪತ್ರದಲ್ಲಿ ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap