ತುಮಕೂರು
ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ, ರಾಜ್ಯದಲ್ಲೂ ಸೋಂಕಿತರ ಸಂಖ್ಯೆ ನೂರರ ಸಮೀಪವಿದೆ. ಜಿಲ್ಲೆಯಲ್ಲೂ ಏರುಮುಖದಲ್ಲಿದೆ, ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಮಾ.30ರ ಅಂಕಿ ಅಂಶದ ಪ್ರಕಾರ ಜಿಲ್ಲೆಯ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ.
480 ಜನರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. 337 ಮಂದಿ ಹೋಂ ಕ್ವಾರಂಟೈನಲ್ಲಿದ್ದಾರೆ. 65 ಜನ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಂಕಿತ 93 ಜನರ ರಕ್ತ, ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 63 ಜನರಿಗೆ ನೆಗೆಟೀವ್ ಹಾಗೂ ಇಬ್ಬರಿಗೆ ಪಾಸಿಟೀವ್ ಬಂದಿದೆ. ಇನ್ನೂ 25 ಜನರ ಪರಿಕ್ಷಾ ವರದಿ ಬರುವುದು ಬಾಕಿ ಇದೆ.
ಕೊರೊನಾಗೆ ಔಷಧಿ ಇಲ್ಲ. ಆದರೆ, ಸೋಂಕು ತಗುಲದಂತೆ ತಡೆಯಲು ಎಚ್ಚರವಹಿಸುವುದೇ ಅದರಿಂದ ಪಾರಾಗಲು ಉಳಿದಿರುವ ದಾರಿ. ಇದಕ್ಕಾಗಿ ಸರ್ಕಾರಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ಎಲ್ಲರೂ ಮನೆಯಲ್ಲೇ ಇರಬೇಕು ಎನ್ನುವ ಕಾರಣಕ್ಕೆ ಇಡೀ ದೇಶವನ್ನು 21 ದಿನ ಲಾಕ್‍ಡೌನ್ ಮಾಡಲಾಗಿದೆ. ಆದರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ, ಜನ ಈ ಬಗ್ಗೆ ಅಗತ್ಯ ಜಾಗೃತಿವಹಿಸುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಗಲಿರುಳು ಕೊರೊನಾ ತಡೆಗೆ ಯುದ್ಧೋಪಾದಿಯಲ್ಲಿ ಸೇವೆಯಲ್ಲಿ ತೊಡಗಿದ್ದಾರೆ. ನಿಷೇಧಾಜ್ಞೆ ಉಲ್ಲಂಘನೆ ತಡೆಯಲು ಪೊಲೀಸರು ಬೀದಿಗಿಳಿದು ಜನರನ್ನು ನಿಯಂತ್ರಿಸಲು ಹರಸಾಹಸ ಮಾಡುತ್ತಿದ್ದಾರೆ. ಆದರೂ ಜನ ರಸ್ತೆಗೆ ಬಾರದಂತೆ ಪೂರ್ಣ ಪ್ರಮಾಣದಲ್ಲಿ ತಡೆಯಲು ಸಾಧ್ಯವಾಗುತ್ತಿಲ್ಲ. ದಿನ ಬಳಕೆ ಪದಾರ್ಥಗಳ ಖರೀದಿಗೆ ಜನ ಮನೆಯಿಂದ ಹೊರಗೆ ಬರಲೇಬೇಕಾಗಿದೆ. ಎಲ್ಲವನ್ನೂ ಮನೆಗೇ ತಲುಪಿಸುವ ವ್ಯವಸ್ಥೆ ಸಾಧ್ಯವಾಗಿಲ್ಲ. ಹೀಗಾಗಿ, ಸಾರ್ವಜನಿಕವಾಗಿ ಜನರ ನಿಯಂತ್ರಣ ಕಷ್ಟವಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡದೆ, ಜನ ಗುಂಪು ಸೇರುವುದು ಮುಂದುವರೆದರೆ ಕೊರೊನಾವನ್ನು ಹತೋಟಿಗೆ ತರಲು ಸಾಧ್ಯವಾಗುವುದಿಲ್ಲ ಹಾಗೂ ಈವರೆಗಿನ ಎಲ್ಲಾ ಪ್ರಯತ್ನವೂ ವ್ಯರ್ಥವಾದಂತೆಯೇ ಆಗುತ್ತದೆ. ಸರ್ಕಾರದ ಮನವಿ ಸಾರ್ವಜನಿಕರು ಸಹಕರಿಸಬೇಕಾಗಿದೆ.
ಆದರೆ, ಮನೆಯಲ್ಲೇ ಉಳಿದರೆ ಜೀವನ ನಿರ್ವಹಣೆ ಹೇಗೆ ಎಂಬುದು ಎಲ್ಲರಲ್ಲಿನ ದೊಡ್ಡ ಆತಂಕ. ದಿನಗೂಲಿ ನೌಕರರು, ಆಟೋಚಾಲಕರು, ಬೀದಿ ಬದಿ ವ್ಯಾಪಾರಿಗಳು, ಕೂಲಿಕಾರ್ಮಿಕರಿಗೆ ಮನೆಯಲ್ಲಿ ಕುಳಿತು ಉಣ್ಣುವಷ್ಟು ಆರ್ಥಿಕಶಕ್ತಿ ಇಲ್ಲ. ಇಂತಹ ವರ್ಗ ಸಹಜವಾಗಿ ಲಾಕ್‍ಡೌನ್‍ನಿಂದ ಕಂಗಾಲಾಗಿದೆ. ಇಂತಹವರ ಬಗ್ಗೆ ಸರ್ಕಾರ ಹೆಚ್ಚು ಗಮನ ಹರಿಸಿ ಮನೆ ಬಾಗಿಲಿಗೆ ಅಗತ್ಯ ಸಾಮಗ್ರಿ ಪೂರೈಸುವ ವ್ಯವಸ್ಥೆ ಮಾಡಬೇಕು.
ಹಾಗೂ ಸಂಕಷ್ಟದ ಪರಿಸ್ಥಿತಿ ಸಹಿಸಿಕೊಂಡು, ಜೀವ ಉಳಿಸಿಕೊಳ್ಳಲು ಜನರೂ ಲಾಕ್‍ಡೌನ್‍ಗೆ ಸಹಕರಿಸಲೇಬೇಕಾಗಿದೆ.
ಕೊರೋನಾ ಬಗ್ಗೆ ಹೆದರುವ ಅಗತ್ಯವಿಲ್ಲ. ಆದರೆ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಕೊರೊನಾ ಸೋಂಕು ತಗುಲದಂತೆ ನೋಡಿಕೊಳ್ಳಬಹುದು. ಕೊರೊನಾ ವೈರಸ್ ಚಲಿಸುವುದಿಲ್ಲ, ಗಾಳಿಯಂದ ಹರಡುವುದಿಲ್ಲ. ಆದ್ರೆ ಸೋಂಕು ಪೀಡಿತರ ಸಂಪರ್ಕದಿಂದ ಅಂಟುತ್ತದೆ.
ಹೀಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳವುದೇ ಇದರ ತಡೆಯ ಸುಲಭ ಮಾರ್ಗ. ಜೊತೆಗೆ, ವೈಯಕ್ತಿಕ ಸ್ವಚ್ಚತೆ ಕಾಪಾಡಿಕೊಳ್ಳುವುದು, ವಿಶೇಷವಾಗಿ ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳುವುದು. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವಾ ಕೈ ಅಡ್ಡ ಇಟ್ಟುಕೊಳ್ಳಬೇಕು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು. ನಿಯಮಿತವಾಗಿ ನೀರು ಕುಡಿದು ಗಂಟಲು ಒಣಗದಂತೆ ನೋಡಿಕೊಳ್ಳುವುದು, ಗುಂಪು, ಜನಸಂದಣಿಯಿಂದ ದೂರವಿರುವುದು ಮತ್ತು ದೂರ ಪ್ರಯಾಣ ನಿರ್ಬಂಧಿಸುವುದು. ಮೂಗು, ಬಾಯಿ, ಕಣ್ಣಿನ ರಕ್ಷಣೆಯ ಮಾಸ್ಕ್ ಧರಿಸಬೇಕು. ಇಂತಹ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಕೊರೊನಾ ತಗುಲದಂತೆ ತಡೆಯಬಹುದು. ರೋಗ ಲಕ್ಷಣ (ಜ್ವರ, ಉಸಿರಾಟ ತೊಂದರೆ, ನೆಗಡಿ, ಕೆಮ್ಮು) ಕಂಡುಬಂದರೆ ಮೂಗು ಮತ್ತು ಬಾಯನ್ನು ಕರವಸ್ತ್ರ ಅಥವಾ ಮಾಸ್ಕ್‍ನಿಂದ ಮುಚ್ಚಿಕೊಂಡು ತಕ್ಷಣ ವೈದ್ಯರನ್ನು ಸಂಪರ್ಕ ಮಾಡಬೇಕು.
ಜಾಗತಿಕವಾಗಿ ಆತಂಕ ಸೃಷ್ಟಿಸಿರುವ ಸಾಂಕ್ರಾಮಿಕ ರೋಗವಾದ ಕೊರೊನಾ ಸುಮಾರು 150ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡು ಕಾಡುತ್ತಿದೆ. ಸೋಂಕಿತರು, ಸಾವಿಗೀಡಾಗುವವರ ಸಂಖ್ಯೆ ಏರುತ್ತಲೇ ಇದೆ. ಇದರ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಪ್ರತಿಯೊಬ್ಬರೂ ಸಹಕರಿಸಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ