ಫಲಾನುಭವಿಗಳ ಆಯ್ಕೆಗೆ ಜನಪ್ರತಿನಿಧಿ ಗಣನೆ ಇರಲಿ

ಮಧುಗಿರಿ

     ತಾಲ್ಲೂಕಿನ ಇಲಾಖೆಗಳ ವತಿಯಿಂದ ಫಲಾನುಭವಿಗಳಿಗೆ ಸವಲತ್ತುಗಳ ವಿತರಣೆ ಮತ್ತು ಫಲಾನುಭವಿಗಳ ಪಟ್ಟಿ ಮಾಡುವಾಗ ಜಿ.ಪಂ ಹಾಗೂ ತಾ.ಪಂ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯಕ್ ಅಧಿಕಾರಿಗಳಿಗೆ ಸೂಚಿಸಿದರು.

    ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಸಕರು ನೀಡಿದ ಪಟ್ಟಿಯನ್ನು ಮಾತ್ರ ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ. ಸರ್ಕಾರ ನೀಡುವ ಸವಲತ್ತನ್ನು ಅರ್ಹರಿಗೆ ತಲುಪಿಸಬೇಕಾದರೆ ತಾಲ್ಲೂಕಿನ ಎಲ್ಲಾ ಜಿ.ಪಂ ಹಾಗೂ ತಾ.ಪಂ ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳಬೇಕು. ಶಾಸಕರೇನು ತಮ್ಮ ಜೇಬಿನಿಂದ ಹಣವನ್ನು ನೀಡುವುದಿಲ್ಲ ಎಂದು ಅರಣ್ಯ ಇಲಾಖಾ ಅಧಿಕಾರಿಗಳ ಮೇಲೆ ತಾ.ಪಂ ಅಧ್ಯಕ್ಷರು ಗರಂ ಆದಾಗ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಇಲಾಖಾಧಿಕಾರಿ ವಾಸುದೇವ ಮೂರ್ತಿ ತಿಳಿಸಿದರು.

   ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಟ್ಯಾಂಕರ್‍ಗಳ ಮೂಲಕ ನೀರು ಒದಗಿಸಲು ಕ್ರಮ ಕೈಗೊಳ್ಳ ಬೇಕು. ಅಧಿಕಾರಿಗಳು ಜನರಿಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಕಾರ್ಯ ಪ್ರವೃತ್ತಾರಾಗಬೇಕು ಎಂದರು.57 ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರನ್ನು ಒದಗಿಸಲಾಗುತ್ತಿದೆ. ತಾಲ್ಲೂಕಿನ 54 ಕೊಳವೆ ಬಾವಿಗಳ ಅನುದಾನದ ಹಣ ಇಲ್ಲಿಯವರೆಗೂ ಬಿಡುಗಡೆಯಾಗಿಲ್ಲ. ಹೊಸ ಕೊಳವೆ ಬಾವಿ ಕೊರೆಯಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಗ್ರಾ.ಪಂಗಳಿಗೆ ಒಪ್ಪಿಸಲಾಗಿದೆ. ತಾಲ್ಲೂಕಿನಲ್ಲಿ 5 ವಾಲ್ಮೀಕಿ ಭವನ ಹಾಗೂ 4 ಅಂಬೇಡ್ಕರ್ ಭವನಗಳಿಗೆ ಜಾಗವಿಲ್ಲದೆ ಕಾಮಗಾರಿ ಪ್ರಾರಂಭವಾಗಿಲ್ಲ ಎಂದು ಜಿ.ಪಂ ಎಇಇ ಸುರೇಶ್ ರೆಡ್ಡಿ ಮಾಹಿತಿ ನೀಡಿದರು.

     ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ಶೇಂಗಾ 1089.6 ಕ್ವಿಂಟಾಲ್, ರಾಗಿ 27 ಕ್ವಿಂಟಾಲ್, ಮುಸುಕಿನ ಜೋಳ 35 ಕ್ವಿಂಟಾಲ್ ವಿತರಿಸಲಾಗಿದೆ. ರೈತರಿಗೆ ಅವಶ್ಯವಿರುವಂತಹ ಬದು ನಿರ್ಮಾಣ ಹಾಗೂ ಕೃಷಿ ಹೊಂಡಗಳ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ ತಿಳಿಸಿದ್ದಾರೆ.

      ಅಂತರ ಜಿಲ್ಲೆಯಿಂದ ಬಂದಿರುವವರಿಗೆ ಕ್ವಾರಂಟೈನ್ ಮಾಡಲು ಸೂಚಿಸಿಲ್ಲ. ಆದರೆ ಕೆಲ ಹೊರ ರಾಜ್ಯದಿಂದ ಬಂದಿರುವ ಜನರಿಗೆ 7 ದಿನಗಳ ಕ್ವಾರಂಟೈನ್ ಮಾಡಲಾಗಿದೆ. ಇಲ್ಲಿಯವರೆಗೂ 33 ಜನರನ್ನು ಕ್ವಾರಂಟೈನ್ ಮಾಡಲಾಗಿದೆ, ಅದರಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಿದೆ. ವಿದೇಶದಿಂದ 4 ಜನರು ತಾಲ್ಲೂಕಿಗೆ ಬಂದಿದ್ದು, ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ್ ಬಾಬು ಮಾಹಿತಿ ನೀಡಿದರು.

    ಇತ್ತೀಚೆಗೆ ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾಧಿಕಾರಿಗಳು ಒತ್ತು ನೀಡಬೇಕು ಎಂದು ಅಧ್ಯಕ್ಷರು ಹೇಳಿದಾಗ, ಈಗಾಗಲೇ ಇದಕ್ಕೆ ಸೂಕ್ತ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದಕ್ಕೆ ಉಳಿದ ಇಲಾಖೆಗಳ ಸಹಕಾರವೂ ಸಹ ಅತ್ಯಗತ್ಯವಿದೆ ಎಂದು ಸಿಡಿಪಿಓ ಅನಿತಾ ತಿಳಿಸಿದರು.

    ಸಂಜೆ ವೇಳೆ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಆಂಧ್ರ ಗಡಿ ಭಾಗದ ಹಳ್ಳಿಗಳಲ್ಲಿರುವ ಮದ್ಯ ಪ್ರಿಯರು ಗಡಿದಾಟಿ ಬಂದು ಮದ್ಯವನ್ನು ಕೊಳ್ಳುತ್ತಿದ್ದಾರೆ. ಇದಕ್ಕೆ ಅಬಕಾರಿ ಇಲಾಖೆಯವರು ಕಡಿವಾಣ ಹಾಕಬೇಕು. ಸಂಜೆ ಮೇಲೆ ಗಸ್ತು ಹಾಕಬೇಕು ಎಂದಾಗ, ಸೂಕ್ತ ಮಾಹಿತಿ ಮೇರೆಗೆ ದಾಳಿ ನಡೆಸುತ್ತಿದ್ದು, ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ಪ್ರಕರಣ ದಾಖಲಿಸಿ, ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಬಕಾರಿ ನಿರೀಕ್ಷಕಿ ಶ್ರೀಲತಾ ತಿಳಿಸಿದರು.ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ.ರಾಜು, ಇಓ ದೊಡ್ಡಸಿದ್ದಯ್ಯ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link