ನೆರೆಗೆ ಕುಸಿದ ಎಲ್ಲ ಮನೆಗಳ ನಿರ್ಮಾಣ ಕಾರ್ಯ ವಾರದಲ್ಲಿ ಆರಂಭಿಸಿ : ಮನೋಜ್‍ಕುಮಾರ್ ಮೀನಾ

ಹಾವೇರಿ
   ನೆರೆ ಹಾವಳಿಗೆ ತುತ್ತಾಗಿ ಪೂರ್ಣವಾಗಿ ಮನೆಕಳೆದುಕೊಂಡಿರುವ ಸಂತ್ರಸ್ತರ ಎಲ್ಲ ಮನೆಗಳು ನಿರ್ಮಾಣ ಕಾರ್ಯ ಒಂದು ವಾರದೊಳಗೆ ಆರಂಭಿಸಲು ಜಿಲ್ಲೆಯ ತಹಶೀಲ್ದಾರಗಳಿಗೆ ಕರ್ನಾಟಕ ಸರ್ಕಾರದ ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್‍ಕುಮಾರ್ ಮೀನಾ ಅವರು ಖಡಕ್ ಸೂಚನೆ ನೀಡಿದರು.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿ ಕುರಿತು ಪರಿಶೀಲನೆ ನಡೆಸಿದ ಅವರು ಕನಿಷ್ಠ ಆಗಸ್ಟ್ ಮಾಹೆಯಲ್ಲಿ ಹಾನಿಯಾದ ಮನೆಗಳ ಪುನರ್ ನಿರ್ಮಾಣ ಕಾರ್ಯವಾದರೂ ಒಂದು ವಾರದೊಳಗೆ ಆರಂಭವಾಗಲೇಬೆಕು ಎಂದು ಸೂಚಿಸಿದರು.
    ಸಂತ್ರಸ್ತರಿಗೆ ಈಗಾಗಲೇ ಮೊದಲ ಕಂತಾಗಿ ಒಂದು ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಮನೆಗಳ ನಿರ್ಮಾಣ ಕಾರ್ಯ ಆರಂಭಿಸಿದರೆ ಎರನಡೇ ಹಂತದ ಜಿ.ಪಿ.ಎಸ್.ಮಾಡಿ ನಿಗಮದ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದರೆ ಎರಡನೇ ಕಂತಿನ ಹಣ ಪಾವತಿಸಲಾಗುವುದು. ತಕ್ಷಣವೇ ಈ ಕಾರ್ಯವನ್ನು ಆರಂಭಿಸಬೇಕೆಂದು ಸೂಚನೆ ನೀಡಿದರು.
    ಮಳೆಯಿಂದ ಹಾನಿಯಾಗಿರುವ ಎ ಮತ್ತು ಬಿ ವರ್ಗದ ಮನೆಗಳ ನಿರ್ಮಾಣಕ್ಕೆ ಸರ್ಕಾರ ಮೊದಲ ಕಂತಿನ ಹಣ ಬಿಡುಗಡೆಮಾಡಿದರು ಬಹಳಷ್ಟು ಫಲಾನುಭವಿಗಳು ಮನೆ ನಿರ್ಮಾಣ ಕಾರ್ಯವನ್ನು ಆರಂಭಿಸಿರುವುದಿಲ್ಲ. ಮುಂಗಡ ಹಣ ಪಡೆದರು ಮನೆ ನಿರ್ಮಾಣಕ್ಕೆ ಮುಂದಾಗದಿರುವುದಕ್ಕೆ ಕಾರಣವೇನು ಎಂದು ತಹಶೀಲ್ದಾರಗಳನ್ನು ಪ್ರಶ್ನಿಸಿದ ಉಸ್ತುವಾರಿ ಕಾರ್ಯದರ್ಶಿಗಳು ಪೌರಾಯುಕ್ತರು ಮತ್ತು ತಹಶೀಲ್ದಾರಗಳು ಈ ಕುರಿತಂತೆ ಫಲಾನುಭವಿಗಳಿಗೆ ಮನವರಿಕೆಮಾಡಿಕೊಡಿ ಎಂದು ತಿಳಿಸಿದರು.
    ಕುಸಿದ ಮನೆಗಳ ಜಾಗದಲ್ಲಿ ಮನೆ ನಿರ್ಮಾಣ ಬದಲು ಅವರದೇ ಸ್ವಂತ ನಿವೇಶನವಿರುವ ಬೇರೆಡೆ ಮನೆ ನಿರ್ಮಾಣ ಮಾಡಲು ಫಲಾನುಭವಿಗಳು ಇಚ್ಚಿಸಿದಲ್ಲಿ ನಿಯಮಾನುಸಾರ ಅವರಿಗೆ ಅವಕಾಶ ಕಲ್ಪಿಸಿ. ಆದರೆ ಬೇರೆಕಡೆ ಅವರಿಗೆ   ಸ್ವಂತ ನಿವೇಶನ ಇಲ್ಲದಿದ್ದರೆ ಕುಸಿದ ಜಾಗೆಯಲ್ಲೇ ಮನೆ ನಿರ್ಮಾಣ ಕಾರ್ಯ ಆರಂಭಿಸಲು ತಿಳಿಸಿ. ಗ್ರಾಮ ಸ್ಥಳಾಂತರ ಬೇಡಿಕೆ ಇದ್ದಲ್ಲಿ ಸರ್ಕಾರಿ ಜಾಗೆ ಇದ್ದರೆ ಗುರುತಿಸಿ ಸ್ಥಳಾಂತರಿಸಿ ಇಲ್ಲವಾದರೆ ಪ್ರಕ್ರಿಯೆ ವಿಳಂಬವಾಗುತ್ತದೆ. ಬಿಡುಗಡೆಯಾದ ಅನುದಾನ ಸಕಾಲದಲ್ಲಿ ಬಳಸಲು ಸಾಧ್ಯವಾಗುವುದಿಲ್ಲ.
   
    ಆ ಕಾರಣಕ್ಕಾಗಿ ಈಗ ಮಂಜೂರಾದ ಹಣದಲ್ಲಿ ಅದೇ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳೊಂದಿಗೆ ಚರ್ಚಿ ಕ್ರಮಕೈಗೊಳ್ಳಿ. ಯಾವುದೇ ಕಾರಣಕ್ಕೂ ಮನೆ ನಿರ್ಮಾಣ ಕಾರ್ಯ ವಿಳಂಬವಾಗಬಾರದು. ಒಂದೊಮ್ಮೆ ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣ ಹಾಗೂ ಪರಿಹಾರ ವಿತರಣೆಯಲ್ಲಿ ವಿಳಂಬವಾದರೆ ಮುಖ್ಯಮಂತ್ರಿಗಳಿಗೆ  ಸ್ವತಃ ತಹಶೀಲ್ದಾರಗಳೆ ಉತ್ತರಿಸಬೇಕಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ  ಎಂದು ಎಚ್ಚರಿಸಿದರು.
     ನೆರೆಯಿಂದ ಹಾನಿಯಾದ ಮನೆಗಳನ್ನು ಎ,ಬಿ ಹಾಗೂ ಸಿ ಎಂದು ವರ್ಗಾಯಿಸಲಾಗಿದೆ. ಹೀಗಿದ್ದರೂ ಕೆಲವೆಡೆ ಎರಡುಮೂರು ಬಾರಿ ಸರ್ವೇ ನಡೆಸಲಾಗಿದೆ. ಈ ಸಂದರ್ಭದಲ್ಲಿ ಸಿ ವರ್ಗದಿಂದ ಬಿ ವರ್ಗಕ್ಕೆ ಬದಲಾವಣೆಗಳಾಗಿವೆ. ಈ ಬದಲಾವಣೆಗೆ ಕಾರಣ ಕೇಳಿ ಸರ್ವೇ ಮಾಡಿದ ಅಧಿಕಾರಿಗಳಿಗೆ ನೋಟೀಸ್ ಜಾರಿಮಾಡಿ ವಿವರ ಪಡೆಯಿರಿ. ಯಾವುದೇ ಕಾರಣಕ್ಕೂ ತಪ್ಪು ಎಂಟ್ರಿಗಳು ಒತ್ತಡಕ್ಕೆ ಒಳಗಾಗಿ ಅನರ್ಹರು ಸೌಲಭ್ಯ ಪಡೆಯಬಾರದು.
 
      ಅನರ್ಹರನ್ನು ಕೈಬಿಡಿ ಅರ್ಹರಿಗೆ ಸೌಲಭ್ಯ ದೊರಕಿಸಿಕೊಡಿ. ವಸತಿ ನಿಗಮದ ವೆಬ್‍ಸೈಟ್‍ನಲ್ಲಿ ತಪ್ಪಾಗಿ ಸೇರ್ಪಡೆ, ಗ್ರಾಮಗಳ ಬದಲಾವಣೆಯಿಂದ ತಾಂತ್ರಿಕ ತೊಂದರೆಗಳಾಗಿದ್ದರೆ ಶೀಘ್ರವೇ ತಪ್ಪುಗಳನ್ನು ಸರಿಪಿಡಿಸಿ ಖಜಾನೆಯ ಕೆ-2 ಸಮಸ್ಯೆ ಬ್ಯಾಂಕ್ ಪಾಸ್‍ಬುಕ್ ಪರಿಶೀಲನೆ, ಜಿಪಿಎಸ್ ಸೇರಿದಂತೆ ಎಲ್ಲ ವಿಚಾರಗಳನ್ನು ತ್ವರಿತವಾಗಿ ಇತ್ಯರ್ಥವಾಗಬೇಕು. ಈ ವಿಚಾರವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು, ಸಂತ್ರಸ್ತರಿಗೆ ಮನೆ ಪರಿಹಾರ ಪಾವತಿ ವಿಚಾರ ರೆಡ್ ಅಲರ್ಟ ಎಂದು ಭಾವಿಸಿ ನಾಳೆ ಸಂಜೆಯೊಳಗಾಗಿ ತಾಂತ್ರಿಕ ಕಾರಣಗಳಿಗಾಗಿ ಬಾಕಿ ಉಳಿದಿರುವ ಫಲಾನುಭವಿಗಳಿಗೆ  ಹಣ ಜಮೆಯಾಗಬೇಕು ಎಂದು  ತಾಕೀತು ಮಾಡಿದರು. 
       ಆಗಸ್ಟ್ ಮಾಹೆಯಲ್ಲಿ ಬಿದ್ದ ಮಳೆಗೆ ಎ ವರ್ಗದಡಿ 305 ಮನೆಗಳು ಸಂಪೂರ್ಣ ಹಾಳಾಗಿದ್ದು, ಈ ಪೈಕಿ 304 ಮನೆಗಳಿಗೆ 3.04 ಕೋಟಿ ಪರಿಹಾರ ಪಾವತಿಸಿದೆ.  ಬಿ ವರ್ಗದಡಿ 3,435 ಮನೆಗಳು ತೀವ್ರ ಹಾನಿಯಾಗಿದ್ದು ಈ ಎಲ್ಲ ಮನೆಗಳಿಗೂ ಪರಿಹಾರವಾಗಿ 34.35 ಕೋಟಿ ರೂ. ಪಾವತಿಸಲಾಗಿದೆ. ಸಿ ವರ್ಗದ ಅಲ್ಪಸ್ವಲ್ಪ ಹಾನಿಯಾದ 10,389 ಮನೆಗಳಿಗಳಿಗೆ ಪರಿಹಾರವಾಗಿ 51.95 ಕೋಟಿ ರೂ.ಗಳನ್ನು ಪಾವತಿಸಲಾಗಿದೆ. 
       ಅಕ್ಟೋಬರ್-2019ರ ಮಾಹೆಯ ಅತಿವೃಷ್ಟಿಗೆ ಎ ವರ್ಗದ 58, ಬಿ ವರ್ಗದ 2354 ಹಾಗೂ ಸಿ ವರ್ಗದ 6358 ಮನೆಗಳು ಸೇರಿದಂತೆ 8,770 ಮನೆಗಳು ಹಾನಿಯಾಗಿವೆ.  ಆಗಸ್ಟ ಮತ್ತು ಅಕ್ಟೋಬರ್ ಮಾಹೆಯಲ್ಲಿ ಎ ಮತ್ತು ಬಿ ವರ್ಗದ 5136 ಮನೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮೋದನೆ ನೀಡಲಾಗಿದೆ.  ಮನೆ ನಿರ್ಮಾಣಕ್ಕೆ ಸಂತ್ರಸ್ತರಿಗೆ ಜಾಗೃತಿ ಮೂಡಿಸಲಾಗಿದೆ. ಮುಖ್ಯಮಂತ್ರಿಗಳ ಮನವಿ ಪತ್ರ ವಿತರಿಸಲಾಗಿದೆ. ಈ ಪೈಕಿ 420 ಫಲಾನುಭವಿಗಳು ಮನೆಗಳ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ ಎಂದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ವಿವರಿಸಿದರು.
ಬೆಳೆಹಾನಿ:
 
      ಮಳೆಯಿಂದ ಹಾನಿಯಾಗಿರುವ ಅಂಗನವಾಡಿ ಹಾಗೂ ಶಾಲಾ ಕಟ್ಟಡಗಳ ಕುಸಿತದಿಂದ ಪಾಠ ಪ್ರವಚನಕ್ಕೆ ತೊದಂರೆಯಾಗಿದೆ ಎಂಬ ಮಾಹಿತಿ ಪಡೆದ ಅವರು, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು. ರಸ್ತೆ ಸೇತುವೆ ಹಾಗೂ ಮೂಲ ಸೌಕರ್ಯಗಳ ದುರಸ್ತಿ ಕಾಮಗಾರಗಳ ವಿವರ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು ಕೆರೆ ದುರಸ್ತಿ ಸಂದರ್ಭದಲ್ಲಿ ಮನರೇಗಾ ಯೋಜನೆಯಡಿ ನೆರವು ಪಡೆಯುವಂತೆ ಅಭಿಯಂತರರಿಗೆ ಸೂಚನೆ ನೀಡಿದರು.
      ಬೆಳೆಹಾನಿ ಹಾಗೂ ಬೆಳೆ ಪರಿಹಾರ ಕುರಿತಂತೆ ಮಾಹಿತಿ ಪಡೆದ ಅವರು ಕೃಷಿ, ತೋಟಗಾರಿಕೆ  ಹಾಗೂ ರೇಷ್ಮೆ ಸೇರಿದಂತೆ 182960 ಹೆಕ್ಟೇರ್ ಪ್ರದೇಶದ ಬೆಳೆ ಆಗಸ್ಟ್  ಮತ್ತು ಅಕ್ಟೋಬರ್ ತಿಂಗಳ ಮಳೆಗೆ ಹಾನಿಯಾಗಿದ್ದು, 1,57,465 ರೈತರು ಬಾಧಿತರಾಗಿದ್ದಾರೆ. 909.33 ಕೋಟಿ ರೂ. ಆರ್ಥಿಕ ನಷ್ಟವಾಗಿದೆ.  ಮಾರ್ಗಸೂಚಿಯಂತೆ 154.21  ಕೋಟಿ ರೂ. ಬೇಡಿಕೆ ಸಲ್ಲಿಸಲಾಗಿದೆ. ಈವರೆಗೆ 33,644 ರೈತರಿಗೆ 56.06 ಕೋಟಿ ಪರಿಹಾರ ಪಾವತಿಸಲಾಗಿದೆ. 1,08,435 ರೈತರಿಗೆ ಪರಿಹಾರ ಪಾವತಿಸಬೇಕಾಗಿದೆ. 85.09 ಕೋಟಿ ರೂ. ರೈತರಿಗೆ ಹಣ ಪಾವತಿಸಬೇಕಾಗಿದೆ ಎಂದು ಕೃಷಿ ಜಂಟಿ ನಿರ್ದೇಶಕ ಮಂಜುನಾಥ್ ಅವರು ವಿವರಿಸಿದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಸವಣೂರ ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕ್ಕಮ್ಮನವರ, ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು, ಜಿಲ್ಲೆಯ ತಹಶೀಲ್ದಾರ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮುಖ್ಯಾಧಿಕಾರಿಗಳು ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link