ತುರುವೇಕೆರೆ:
ತಾಲ್ಲೂಕು ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಹಾಗು ವಿವಿದ ಕೆಲಸಗಳಿಗಾಗಿ ತಾಲ್ಲೂಕು ಮೂಲೆ ಮೂಲೆಯಿಂದ ಬರುವ ಜನಸಾಮನ್ಯರಿಗೆ ಮೂಲಭೂತ ಸೌಲಭ್ಯಗಳ ಬಳಕೆ ಕೇವಲ ಮರೀಚಿಕೆಯಾಗಿದೆ ಎಂದರೂ ತಪ್ಪಾಗಲಾರದು.
ತಾಲ್ಲೂಕು ಕಛೇರಿಯಲ್ಲಿ ಕಂದಾಯ, ಭೂಮಾಪನ, ಅಹಾರ, ಉಪಖಜಾನೆ ಸೇರಿದಂತೆ ಅನೇಕ ಇಲಾಖೆಗಳಿದ್ದು 100 ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರೈತರು, ವಿಧ್ಯಾರ್ಥಿಗಳು, ಕೂಲಿಕಾರರು ಸೇರಿದಂತೆ ನೂರಾರು ಜನಸಾಮಾನ್ಯರು ಪ್ರತಿನಿತ್ಯ ತಮ್ಮ ತಮ್ಮ ಕೆಲಸ ಕಾರ್ಯಗಳಿಗಾಗಿ ಕಛೇರಿಗೆ ಭೇಟಿ ನೀಡುತ್ತಾರೆ. ಆದಾಯ ಪತ್ರ, ಜನಸ್ನೇಹಿ, ಪಾಣಿ, ಪಟ್ಟೆ, ರೇಷನ್ ಕಾರ್ಡ್, ಜಮೀನು ಅಳತೆ, ತಿದ್ದುಪಡಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ಪಡೆಯಲು ಪ್ರತಿದಿನ ನೂರರು ಜನ ಕಛೇರಿಗೆ ಎಡತಾಕುತ್ತಾರೆ.
ದಿನಂಪ್ರತಿ ಹನುಮಂತನ ಬಾಲದಂತಿರುವ ಸರದಿಯಲ್ಲಿ ದಿನಗಟ್ಟಲೆ ನಿಂತು ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಳ್ಳಬೇಕಾಗಿದೆ. ತಮ್ಮ ಕೆಲಸ ಬೇಗನೆ ಆದರೆ ಸಾಕೆಂಬ ಭರದಲ್ಲಿ ಬಿಸಿಲು ಮಳೆ ಎಂಬುದನ್ನು ಲೆಕ್ಕಿಸದೆ ಸರದಿಯಲ್ಲಿ ನಿಂತಿರುತ್ತಾರೆ. ಇವರಿಗೆ ಸೂಕ್ತ ನೆರಳಿನ ವ್ಯವಸ್ತೆಯಿಲ್ಲ. ಬಿಸಿಲಲ್ಲಿ ನಿಂತವರಿಗೆ ಬಾಯಾರಿಕೆಯಾದರೆ ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಶೌಚಾಲಯದ ವ್ಯವಸ್ಥೆಯಾಗಲಿ ಸಾರ್ವಜನಿಕರಿಗೆ ದೊರಕುತ್ತಿಲ್ಲ. ತಾಲ್ಲೂಕು ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೇ ಇಲ್ಲವೆಂದ ಮೇಲೆ ಇನ್ನು ಸಾರ್ವಜನಿಕರಿಗೆ ಮರೀಚಿಕೆಯೇ ಸರಿ.
ದೂರದ ಗ್ರಾಮಗಳಿಂದ ಬೆಳ್ಳಂ ಬೆಳಿಗ್ಗೆ ಸರದಿಯಲ್ಲಿ ನಿಲ್ಲಲು ಬಂದವರ ಪಾಡಂತೂ ಹೇಳತೀರದು. ನೀರು ಕುಡಿಯಲು, ಇಲ್ಲವೆ ಶೌಚಾಲಯಕ್ಕೆ ಹೋಗಬೇಕೆಂದರೆ ತಾಲ್ಲೂಕು ಕಛೇರಿ ಬಿಟ್ಟು ಸುಮಾರು ದೂರ ಅಚೆ ಹೋಗಬೇಕು. ಒಂದು ವೇಳೆ ಆಚೆ ಹೋಗಿ ಬರುವುದರೊಳಗೆ ಹನುಮಂತನ ಬಾಲದಂತಿರುವ ಸಾಲಿನ ಕೊನೆಯಲ್ಲಿ ಹೋಗಿ ಮತ್ತೆ ನಿಲ್ಲಬೇಕಾದ ಪರಿಸ್ಥಿತಿ. ಬಡವನ ಕೋಪ ದವಡೆಗೆ ಮೂಲ ಎಂಬಂತೆ ಹೇಗೋ ಏನೋ ಸಂಜೆ ಒಳಗೆ ತನ್ನ ಕೆಲಸವಾದರೆ ಸಾಕೆಂದು ಎಷ್ಟೊತ್ತಿಗೆ ತನ್ನ ಸರದಿ ಬರುವುದೆಂಬ ನಿರೀಕ್ಷೆಯಲ್ಲಿರುವ ಇವರಿಗೆ ನೀರು, ಹಸಿವು, ಶೌಚದ ನೆನಪು ಒಂದೂ ಬಾರದು. ಒಂದು ವೇಳೆ ವಯಸ್ಸಾದವರು ಸರದಿಯಲ್ಲಿ ನಿಂತಂತ ಸಂಧರ್ಭದಲ್ಲೇನಾದರೂ ಬಾಯಾರಿಕೆಯಾಗಿ ತಲೆ ಸುತ್ತಿ ಬಿದ್ದರೆಂದರೆ ಆ ದೇವರೇ ಗತಿ. ಅವರಿಗೆ ನೀರು ಕುಡಿಸಬೇಕೆಂದರೆ ಹೊರಗಿನ ಹೋಟೆಲ್‍ಗಳಿಗೆ ದೌಡಾಯಿಸಬೇಕಿದೆ.
ತಮ್ಮ ಕೆಲಸವಾದರೆ ಸಾಕೆಂಬ ನಿರೀಕ್ಷೆಯಲ್ಲಿ ಸರದಿಯಲ್ಲಿ ನಿಂತಿರುವವರು, ಅಷ್ಟಕ್ಕೂ ಹೊರಹೋಗಿ ನೀರು ತಂದು ಕುಡಿಸುವವರು ಯಾರು? ರಾತ್ರಿ ವೇಳೆ ಕಛೇರಿಯಲ್ಲಿ ಗಸ್ತು ಕಾಯುವವರಿಗೆ ಒಂದು ವೇಳೆ ಮದ್ಯರಾತ್ರಿಯಲ್ಲಿ ಮಲಭಾದೆ ಕಾಣಿಸಿಕೊಂಡಿತೆಂದರೆ ಅವರ ಪಾಡು ದೇವರೇ ಬಲ್ಲ.
ಇದ್ದರೂ ಉಪಯೋಗಕ್ಕೆ ಬಾರದ ಶೌಚಾಲಯಗಳು: ತಾಲ್ಲೂಕು ಕಚೇರಿಯಲ್ಲಿ ನಾಲ್ಕು ಶೌಚಾಲಯಗಳಿದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿವೆ. ಅವುಗಳ ಉಪಯೋಗ ಪಡೆದು ಹಲವು ವರ್ಷಗಳೆ ಕಳೆದಿರಬುದು. ದಂಡಾಧಿಕಾರಿಗಳ ಕೊಠಡಿಯೊಂದನ್ನು ಬಿಟ್ಟು ಉಳಿದ ಶೌಚಾಲಯಗಳು ಉಪಯೋಗಿಸಲಾರದಂತಹ ಸ್ಥಿತಿ ತಲುಪಿವೆ. ಉಪಖಜಾನೆ ಬಲಬಾಗದಲ್ಲಿರುವ ಶೌಚಾಲಯವಂತೂ ಹೇಳಲು ಪದಗಳೆ ಸಾಲದು.
ಕೊಠಡಿ ಒಳಗೆ ಕಣ್ಣಾಡಿಸಿದರೆ ಕಾಲಿಡಲೂ ಸಾದ್ಯವಾಗದ ಗಲೀಜು ತುಂಬಿದ್ದು ದುರ್ನಾತ ಬೀರುತ್ತಿದೆ. ಕೊಠಡಿ ತುಂಬ ಜೇಡನ ಬಲೆ, ಒಡೆದು ಚೆಲ್ಲಪಿಲ್ಲಿಯಾಗಿ ಬಿದ್ದಿರುವ ನೀರಿನ ಪಿಂಗಾಣಿ, ಮದ್ಯದ ಬೀರು ಬಾಟಲುಗಳು ಹಾಗು ಪ್ಲಾಸ್ಟಿಕ್ ಬಾಟಲುಗಳು ದರ್ಶನ ಕೊಡುತ್ತವೆ. ಕಛೇರಿಯಲ್ಲಿ ಕೆಲಸ ನಿರ್ವಹಿಸುವ ಪುರುಷ ಹಾಗೂ ಮಹಿಳಾ ಸಿಬ್ಬಂದಿಗಳಿಗೂ ಸಹಾ ಶೌಚಾಲಯದ ವ್ಯವಸ್ಥೆಯಾಗಲೀ, ನೀರಿನ ವ್ಯವಸ್ಥೆಯಾಗಲೀ ಇಲ್ಲದೆ ಕಛೇರಿ ಹೊರಗೆ ಹೋಗಬೇಕಾದ ಪರಿಸ್ಥಿತಿ. ಹಳೆ ಬೀರು ಟೇಬಲ್ ಮುರಿದ ಕುರ್ಚಿಗಳನ್ನು ಬೇರೆಡೆ ಸಾಗಿಸದೆ ವರಾಂಡದಲ್ಲಿ ಜೋಡಿಸಿರುವುದರಿಂದ ಜನಸಾಮನ್ಯರು ಸರಾಗವಾಗಿ ಓಡಾಡಲು ತೊಂದರೆಯಾಗಿದೆ. ವರ್ಷದಿಂದೀಚೆಗೆ ನಾಲ್ಕೈದು ಮಂದಿ ದಂಡಾಧಿಕಾರಿಗಳು ತಾಲ್ಲೂಕಿಗೆ ಬಂದು ಹೋದರೂ ಸಹಾ ಯಾವ ಅಧಿಕಾರಿಯೂ ಇತ್ತ ಗಮನ ಹರಿಸದಿರುವುದು ಜನಸಾಮಾನ್ಯರ ದುರ್ದೈವವೇ ಸರಿ.
ಪಾದಚಾರಿಗಳು ಕಛೇರಿ ಒಳಹೋಗಲು ದ್ವಿಚಕ್ರ ವಾಹನಗಳಿಂದ ತಡೆ: ತಾಲ್ಲೂಕು ಕಛೇರಿ ಮುಂಬಾಗ ಸಾರ್ವಜನಿಕ ವಾಹನ ನಿಲ್ದಾಣವಾಗಿದ್ದು ಸಾರ್ವಜನಿಕರು ಒಳ ಹೋಗಲು ಹಾಗು ಹೊರಬರಲು ಪ್ರಾಯಾಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಗೇಟಿನ ಮುಖ್ಯ ದ್ವಾರದಲ್ಲಿಯೇ ಎಲ್ಲೆಂದರಲ್ಲಿ ದ್ವಿಚಕ್ರ ವಾಹನಗಳನ್ನು ಬೇಕಾಬಿಟ್ಟಿ ನಿಲ್ಲಿಸಿರುತ್ತಾರೆ. ಅದನ್ನು ಪಕ್ಕಕ್ಕೆ ಸರಿಸಲೂ ಸಹಾ ಸಾದ್ಯವಾಗದಂತೆ ಒಂದಕ್ಕೊಂದು ಅಂಟಿಕೊಂಡಂತೆ ನಿಲ್ಲಿಸಿರುತ್ತಾರೆ. ಕೆಲ ಬೈಕ್ ಸವಾರರು ತಮ್ಮ ಕೆಲಸಗಳಿಗಾಗಿ ಕಛೇರಿ ರಸ್ತೆ ಮುಂಬಾಗವೇ ನಿಲ್ಲಿಸಿ ಒಳಹೋದರೆಂದರೆ ಗಂಟೆಗಳಾದರು ಇತ್ತ ಸುಳಿಯುವುದಿಲ್ಲ.
ಬೈಕ್ಗಳಲ್ಲದೇ ಕಾರುಗಳೂ ಸಹ ಕೆಲ ಸಂಧರ್ಭದಲ್ಲಿ ಇಲ್ಲಿ ನಿಲ್ಲುವುದರಿಂದ ಕಛೇರಿಯ ಅಧಿಕಾರಿಗಳ ವಾಹನಗಳು ಒಳಬರಲು ಹೊರಹೋಗಲು ಚಾಲಕರಾದಿಯಾಗಿ ಕಛೇರಿ ಸಿಬ್ಬಂದಿಗಳು ಹರಸಾಹಸ ಪಡಬೇಕಾಗಿದೆ. ಕೆಲವು ಬೈಕ್‍ಗಳು ರಸ್ತೆಗೆ ತಾಗಿ ನಿಲ್ಲಿಸುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರ ಸಾದ್ಯವಿಲ್ಲ. ಇಲ್ಲಿ ವಾಹನಗಳ ಓಡಿಸುವವರಿಗೆ ರೂಲ್ಸ್‍ಗಳ ಅಗತ್ಯವಿಲ್ಲ, ಮಕ್ಕಳಾದಿಯಾಗಿ ಚಾಲನಾ ಪರವಾನಗಿ ಇಲ್ಲದಿದ್ದವರೂ ಎಲ್ಲೆಂದರಲ್ಲಿ ಹಿಗ್ಗಾ ಮುಗ್ಗಾ ಓಡಿಸುವುದರಿಂದ ಪಾದಚಾರಿಗಳು ತಮ್ಮ ಜೀವ ಕೈಯ್ಯಲ್ಲಿಡಿದು ಆತಂಕದಿಂದ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿ ವಾಹನಗಳ ನಿಲ್ದಾಣ ಇಲ್ಲದಿರುವುದೂ ಸಹಾ ಒಂದು ಕಾರಣವಾಗಿರಬಹುದು. ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ತಾ.ಕಛೇರಿ ಹಿಂಬಾಗದಲ್ಲಿ ವಿಶಾಲವಾದ ಆವರಣವಿದ್ದು ಇಲ್ಲಿ ದ್ವಿಚಕ್ರ ವಾಹನ ನಿಲ್ದಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಬಹುದು ಎಂಬುದು ದ್ವಿಚಕ್ರ ವಾಹನ ಚಾಲಕರ ಅಭಿಲಾಷೆಯಾಗಿದೆ. ಆರಕ್ಷಕ ಇಲಾಖೆಯವರೂ ಸಹಾ ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.
ಸಕಾಲದಲ್ಲಿ ರೈತರ ಕೆಲಸ ಮಾಡದ ಅಧಿಕಾರಿಗಳ ನಿರ್ಲಕ್ಷ್ಯ: ದೂರದೂರುಗಳಿಂದ ಬರುವ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ನಿಗಾ ವಹಿಸುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದು ಸಕಾಲದಲ್ಲಿ ಜನರಿಗೆ ಕೆಲಸ ಮಾಡಿಕೊಡದೆ ಆಗ ಈಗ ಎಂದು ಇಲ್ಲದ ಸಬೂಬು ಹೇಳಿ ದಿನಾ ಅಲೆದಾಡಿಸುತ್ತಾರೆ. ಇದರ ಬಗ್ಗೆ ಸಂಬಂದಿಸಿದವರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬರುತ್ತಿದೆ.
ಸ್ವಚ್ಚತೆ ಕಾಣದ ಕಛೇರಿ: ಎಲ್ಲಾ ಕಡೆ ಸ್ವಚ್ಚ ಬಾರತ್ ಆಂದೋಲನ ನಡೆಯುತ್ತಿದ್ದು ಅದರಂತೆ ಈ ಕಟ್ಟಡಕ್ಕೂ ಕಾಯಕಲ್ಪ ಬೇಕಾಗಿದೆ. ಎಸ್.ಎಮ್.ಕೃಷ್ಣ 2002 ರಲ್ಲಿ ಮುಖ್ಯಮಂತ್ರಿಯಾಗಿದ್ದು, ಎಂ.ಡಿ.ಲಕ್ಷ್ಮೀನಾರಾಯಣ್ ಶಾಸಕರಾಗಿದ್ದ ಅವಧಿಯಲ್ಲಿ ತಾಲ್ಲೂಕು ಕಛೇರಿಯ ನೂತನ ಕಟ್ಟಡ ಉಧ್ಘಾಟನೆಯಾಗಿದ್ದು, ತದನಂತರ ಇಲ್ಲಿವರೆಗೆ ಈ ಕಟ್ಟಡ ಸುಣ್ಣಬಣ್ಣ ಕಂಡಿಲ್ಲ. ಕಛೇರಿಯ ಕಿಟಕಿ ಗಾಜುಗಳು ಒಡೆದಿವೆ. ಕಬ್ಬಿಣದ ಗೇಟುಗಳು ಕಿತ್ತು ಬೀಳುವ ಸ್ಥಿತಿಯಲ್ಲಿವೆ. ಮೊದಲನೇ ಕಟ್ಟಡದ ಪೋರ್ಟಿಕೋದ ಸಜ್ಜೆ ಶಿಥಿಲವಾಗಿದ್ದು ಯಾವ ಕ್ಷಣದಲ್ಲಾದರೂ ಕಳಚಿ ಬೀಳಬಹುದು.
ಕಛೇರಿ ಬಲಪಾಶ್ರ್ವದಲ್ಲಿ ಗಿಡ ಬಳ್ಳಿಗಳು ಆಳೆತ್ತರಕ್ಕೆ ಬೆಳೆದಿದ್ದು ಕಛೇರಿಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ. ಕಿಟಕಿ ಸಜ್ಜೆಯ ಮೇಲೆಲ್ಲಾ ಗಿಡಗಂಟೆಗಳು ಬೆಳೆದಿದ್ದು ಮುಂದಿನ ದಿನಗಳಲ್ಲಿ ಅವುಗಳಿಂದ ಕಟ್ಟಡಕ್ಕೆ ಹಾನಿಯಾಗುವ ಸಾದ್ಯತೆ ಹೆಚ್ಚಿದ್ದು ತಳ್ಳಿಹಾಕುವಂತಿಲ್ಲ. ಕೆಲ ಮರಗಳು ಒಣಗಿ ಕಛೇರಿ ಕಟ್ಟಡದ ಮೇಲೆ ವಾಲಿರುವುದರಿಂದ ಯಾವ ಸಂಧರ್ಭದಲ್ಲಾದರೂ ಉರುಳಬಹುದಾಗಿವೆ.
ಇಷ್ಟೆಲ್ಲಾ ಸಮಸ್ಯೆಗಳನ್ನು ತನ್ನ ಮಡಿಲಿನಲ್ಲಿ ತುಂಬಿಕೊಂಡಿರುವ ತುರುವೇಕೆರೆ ತಾಲ್ಲೂಕು ಕಛೇರಿಗೆ ಕಾಯಕಲ್ಪ ಬೇಕಾಗಿದ್ದು ಸಂಬಂದ ಪಟ್ಟವರು ಇತ್ತ ಗಮನ ಹರಿಸಿ ಜನಸಾಮಾನ್ಯರ ಧ್ವನಿಗೆ ಸ್ಪಂದಿಸಿ ಸೂಕ್ತ ಸೌಲಭ್ಯ ಒದಗಿಸಿಕೊಡುವ ಮೂಲಕ ತಾಲ್ಲೂಕು ಜನತೆಯ ಆತಂಕ ದೂರಮಾಡಿಯಾರೆ? ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ