ಬೆಂಗಳೂರು
ಟಾರ್ಪಾಲ್ ಕಾರ್ಖಾನೆ ಮಾಲೀಕನ ಮೇಲೆ ಸುಪಾರಿ ಪಡೆದು ಮಾರಣಾಂತಿಕ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಪ್ರಭು ಅಲಿಯಾಸ್ ತಮಿಳ್ ಪ್ರಭುಗೆ ಭಾನುವಾರ ಮುಂಜಾನೆ ಗುಂಡು ಹೊಡೆದು ಪೀಣ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಂದಿನಿ ಲೇಔಟ್ನ ಕೂಲಿ ನಗರದ ರೌಡಿ ತಮಿಳ್ ಪ್ರಭು (34) ಬಲಗಾಲಿಗೆ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಂಧಿಸಲು ಹೋದಾಗ ರೌಡಿ ಪ್ರಭು, ಪೀಣ್ಯ ಪೊಲೀಸ್ ಸಿಬ್ಬಂದಿಗಳಾದ ರಂಗನಾಥ್ ಹಾಗೂ ರಾಮಮೂರ್ತಿ ಮೇಲೆ ಹಲ್ಲೆ ನಡೆಸಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೀಣ್ಯದ ಕೈಗಾರಿಕಾ ಪ್ರದೇಶದಲ್ಲಿ ಟಾರ್ಪಾಲ್ ಕಾರ್ಖಾನೆ ನಡೆಸುತ್ತಿದ್ದ ಸೋಮನಾಥ್ (44) ಅವರ ಮೇಲೆ ಕಳೆದ ನ. 6 ರಂದು ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೀಣ್ಯ ಪೊಲೀಸರು, ತನಿಖೆ ಕೈಗೊಂಡಾಗ ರೌಡಿ ತಮಿಳ್ ಪ್ರಭು, ಸುಪಾರಿ ಪಡೆದು ಈ ಕೃತ್ಯ ನಡೆಸಿರುವುದು ಕಂಡುಬಂತು.
ವಿಚಾರಣೆಯಲ್ಲಿ ಸೋಮನಾಥ್ ಅವರ ತಂಗಿಯ ಮಗ ನಾಗೇಶ್ (22) ಮಾವನ ಕಾರ್ಖಾನೆಯನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸಂಚು ರೂಪಿಸಿ ಅವರ ಮೇಲೆ ಹಲ್ಲೆ ನಡೆಸಿ ಭಯಭೀತಿ ಉಂಟು ಮಾಡಲು ಜ್ಞಾನಭಾರತಿಯ ಕೃಷ್ಣೊಜಿರಾವ್ (36) ಎಂಬಾತನಿಗೆ 10 ಲಕ್ಷ ರೂ. ಸುಪಾರಿ ಕೊಟ್ಟಿದ್ದರು.
ಅಂಗವಿಕಲನಾಗಿದ್ದ ಕೃಷ್ಮೊಜಿರಾವ್ 10 ಲಕ್ಷದಲ್ಲಿ ಸ್ವಲ್ಪ ಭಾಗವನ್ನು ತಾನಿಟ್ಟುಕೊಂಡು ಉಳಿದ ಹಣವನ್ನು ತಮಿಳ್ಪ್ರಭುಗೆ ನೀಡಿ ಹಲ್ಲೆ ನಡೆಸಲು ಸೂಚಿಸಿದ್ದ. ಅದೃಷ್ಟವಶಾತ್ ತಮಿಳ್ಪ್ರಭು ಹಲ್ಲೆ ನಡೆಸುವ ವೇಳೆ ಸೋಮನಾಥ್ ಕೈ ಅಡ್ಡ ಇಟ್ಟಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ.
ಗಾಯಗೊಂಡಿದ್ದ ಸೋಮನಾಥ್, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಲ್ಲೆ ಸಂಬಂಧ ಮಾಹಿತಿ ನೀಡಿದ್ದು, ಕಾರ್ಯಾಚರಣೆ ಕೈಗೊಂಡ ಪೀಣ್ಯ ಪೊಲೀಸ್ ಇನ್ಸ್ಪೆಕ್ಟರ್ ಮುದ್ದುರಾಜ್, ಸೋಮನಾಥ್ ಅವರ ತಂಗಿಯ ಮಗ ಶಿವಪುರದ ನಾಗೇಶ್ ಹಾಗೂ ಕೃಷ್ಣೊಜಿರಾಪ್ನ್ನು ಬಂಧಿಸಿದರು.
ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ತಮಿಳ್ಪ್ರಭು ಬೆನ್ನು ಬಿದ್ದಿದ್ದ ಪೊಲೀಸರು ಆತ ಇಂದು ಮುಂಜಾನೆ 6.20ರ ವೇಳೆ ಪೀಣ್ಯದ ತಿಪ್ಪೇನಹಳ್ಳಿ ಬಳಿ ಅಡಗಿರುವ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲು ಹೋದಾಗ ಆತ ಸಿಬ್ಬಂದಿಗಳಾದ ರಂಗನಾಥ್ ಹಾಗೂ ರಾಮಮೂರ್ತಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಇನ್ಸ್ಪೆಕ್ಟರ್ ಮುದ್ದುರಾಜ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಮತ್ತೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ಮತ್ತೊಂದು ಗುಂಡು ಹಾರಿಸಿದ್ದಾರೆ. ಅದು ಬಲಗಾಲಿಗೆ ತಗುಲಿ ಸ್ಥಳದಲ್ಲಿ ಕುಸಿದು ಬಿದ್ದಿದ್ದಾನೆ, ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.ರೌಡಿ ತಮಿಳ್ ಪ್ರಭು ಮನೆಗಳವು, ಕೊಲೆಯತ್ನ, ಬೆದರಿಕೆ, ಸುಲಿಗೆ ಇನ್ನಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








