ಕುಡಿಯುವ ನೀರಿನಗಾಗಿ ಮಾತ್ರ ತುಂಗಾಭದ್ರಾ ನೀರು : ಡಿಸಿ ನಕುಲ್

ಬಳ್ಳಾರಿ

   ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ತುಂಗಾಭದ್ರಾ ಜಲಾಶಯದಿಂದ ಎಲ್‍ಎಲ್‍ಸಿ ಕಾಲುವೆಗೆ ಆ.1ರಿಂದ 10 ದಿನಗಳ ಕಾಲ ನೀರು ಬಿಡಲಾಗುತ್ತಿದ್ದು, ರೈತರು ದಯವಿಟ್ಟು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಮನವಿ ಮಾಡಿದ್ದಾರೆ .ತುಂಗಾಭದ್ರಾ ಜಲಾಶಯದಿಂದ ಎಲ್‍ಎಲ್‍ಸಿ ಕ್ಯಾನೆಲ್‍ಗೆ ನೀರು ಬಿಡುಗಡೆ ಮಾಡುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ತುಂಗಾಭದ್ರಾ ಜಲಾಶಯದಲ್ಲಿ ಪ್ರತಿ ವರ್ಷದ ಜುಲೈ ತಿಂಗಳಲ್ಲಿ 45 ಟಿಎಂಸಿ ನೀರು ಸಂಗ್ರಹ ಇರಬೇಕಿತ್ತು. ಆದರೇ ಈಗ ಲಭ್ಯವಿದ್ದುದು 19 ಟಿಎಂಸಿ ನೀರು ಮಾತ್ರ. ಅದು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಸಲು ಸಾಧ್ಯವಿದ್ದು, ಇದನ್ನು ನಮ್ಮ ರೈತಸಮುದಾಯ ಅರ್ಥಮಾಡಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.

    ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಂಗಾಭದ್ರಾ ಜಲಾಶಯದಿಂದ ಎಲ್‍ಎಲ್‍ಸಿ ಕಾಲುವೆಗೆ ಆ.1ರಿಂದ 10 ದಿನಗಳ ಕಾಲ ನೀರು ಹರಿಸಲು ತೀರ್ಮಾನಿಸಲಾಗಿದ್ದು, ನೀರು ಬಿಟ್ಟ ಸಂದರ್ಭದಲ್ಲಿ ಯಾವುದೇ ರೀತಿಯಿಂದ ನೀರನ್ನು ವ್ಯರ್ಥವಾಗಿ ಪೋಲಾಗದ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು.

       ಪಂಪಿಂಗ್ ಕೆಪ್ಯಾಸಿಟಿ ಸೇರಿದಂತೆ ಇನ್ನೀತರ ವ್ಯವಸ್ಥೆಗಳನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಎಂಜನಿಯರ್‍ಗಳು, ತಹಸೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು ಮಾಡಿಕೊಳ್ಳಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

       ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿಯೇ ನಮ್ಮ ತುಂಗಾಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿನ ರೀತಿಯಲ್ಲಿ ಬಂದು ತುಂಬುವುದು ಸರ್ವೆಸಾಮಾನ್ಯ. ಜುಲೈ ತಿಂಗಳ ಮುಗಿದಿದೆ; ಈಗ ನಮ್ಮ ನಿರೀಕ್ಷೆ ಏನಿದ್ದರೂ ಆಗಸ್ಟ್ ತಿಂಗಳಿಗೆ ಮಾತ್ರವಿದೆ. ನೀರು ಬಂದು ಜಲಾಶಯ ತುಂಬಿದರೇ ಕುಡಿಯುವ ನೀರು ಮತ್ತು ಬೆಳೆಗಳಿಗೆ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಅವರು ವಿವರಿಸಿದರು.

ಸಭೆ ಕರೆದು ರೈತ ಮುಖಂಡರಿಗೆ ಸ್ಪಷ್ಟಪಡಿಸಿ:

      ಈಗ ಬಿಡುಗಡೆ ಮಾಡಲಾಗುತ್ತಿರುವ ನೀರು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಎಂಬುದನ್ನು ತಹಸೀಲ್ದಾರರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಎಂಜನಿಯರ್‍ಗಳು, ಪೊಲೀಸ್ ಅಧಿಕಾರಿಗಳು,ತಾಪಂ ಇಒಗಳು, ಮುಖ್ಯಾಧಿಕಾರಿಗಳು ತಾಲೂಕುಮಟ್ಟದಲ್ಲಿ ರೈತ ಮುಖಂಡರು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಭೆ ಕರೆದು ಸ್ಪಷ್ಟಪಡಿಸಬೇಕು ಎಂದು ಡಿಸಿ ನಕುಲ್ ಅವರು ಸೂಚಿಸಿದರು.

      ಸದ್ಯ ತುಂಗಾಭದ್ರಾ ಜಲಾಶಯದಲ್ಲಿರುವ ನೀರಿನ ಸ್ಥಿತಿ, ಕುಡಿಯುವ ನೀರಿನ ಅಗತ್ಯತೆ ಕುರಿತು ರೈತರಿಗೆ ತಿಳಿಸುವುದರ ಜತೆಗೆ ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸುವಂತೆ ಸಲಹೆ ನೀಡಬೇಕು ಎಂದು ಅವರು ಹೇಳಿದರು.ಉಪವಿಭಾಗಾಧಿಕಾರಿಗಳು ಸಹ ಸಭೆ ನಡೆಸಿ ತಿಳಿಸುವ ಕೆಲಸ ಮಾಡಬೇಕು. ಈ ಎಲ್ಲ ಸಭೆಗಳು ನೀರು ಹರಿಸಲಾಗುವ ಆ.1ರೊಳಗೆ ನಡೆಯಬೇಕು ಎಂದು ಅವರು ಸೂಚಿಸಿದರು.

ಅಹಿತಕರ ಘಟನೆಗಳಾಗದಂತೆ ಸೂಕ್ತ ಬಂದೋಬಸ್ತ್:

        ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಜಲಾಶಯದಿಂದ ನೀರನ್ನು ಹರಿಸಲಾಗುತ್ತಿದ್ದು, ಇದನ್ನು ರೈತರು ಅರ್ಥಮಾಡಿಕೊಂಡು ನಮ್ಮೊಂದಿಗೆ ಸಹಕರಿಸಬೇಕು. ನೀರು ಹರಿಸಿದ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉದ್ಭವಿಸದಂತೆ ಮತ್ತು ಅಹಿತಕರ ಘಟನೆಗಳು ಸಂಭವಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ತಿಳಿಸಿದರು.

       ನೀರು ಬಿಟ್ಟ ಸಂದರ್ಭದಲ್ಲಿ ಕಾಲುವೆ ಬಳಿ ಕಳೆದ ವರ್ಷ ಎಲ್ಲೆಲ್ಲಿ ಸಮಸ್ಯೆಯಾಗಿದೆ ಮತ್ತು ಈ ವರ್ಷ ಎಲ್ಲೆಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬುದರ ವಿವರವನ್ನು ಒದಗಿಸಿ; ಅಲ್ಲೆಲ್ಲಾ ನಮ್ಮ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ಆ.1ರಿಂದ 14ರವರೆಗೆ ನಿಯೋಜಿಸಲಾಗುವುದು ಮತ್ತು ಸೂಕ್ಷ್ಮವಾಗಿ ಮಾನಿಟರ್ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಏನಾದರೂ ಸಮಸ್ಯೆಗಳಾದರೇ ತಕ್ಷಣ ಸಂಪರ್ಕಿಸಿ ಎಂದು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಡಿಸಿ ನಕುಲ್ ಹಾಗೂ ಎಸ್ಪಿ ಬಾಬಾ ಅವರು ತಿಳಿಸಿದರು.

       ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್ ಅವರು ನೀರು ಬಿಡುವ ಸಂದರ್ಭದಲ್ಲಿ ನೀರನ್ನು ಸಮರ್ಪಕವಾಗಿ ಸಂಗ್ರಹ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನಮ್ಮ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗುವುದು. ಈ ಕುರಿತು ವಿಡಿಯೋ ಕಾನ್ಪರೆನ್ಸ್ ನಡೆಸಿ ನಿರ್ದೇಶನ ನೀಡಲಾಗುವುದು ಎಂದರು.

      ತೆಕ್ಕಲಕೋಟೆ ಪಟ್ಟಣಕ್ಕೆ ಮಾತ್ರ ಭಾಗೇವಾಡಿ ಡಿಸ್ಟ್ರೂಬ್ಯೂಟರ್‍ನಿಂದ ನೀರು ಹರಿಸಲಾಗುತ್ತದೆ. ಉಳಿದ ನಗರಗಳಿಗೆ ಮುಖ್ಯ ಕಾಲುವೆಯಿಂದ ನೀರು ಹರಿಸಲಾಗುತ್ತದೆ ಎಂದು ಎಂಜನಿಯರ್‍ಗಳು ಸಭೆಗೆ ವಿವರಿಸಿದರು.ನೀರು ಬಿಡುವ ಸಂದರ್ಭದಲ್ಲಿ ಸಿರಗುಪ್ಪ ತಾಲೂಕಿನ ಅಚ್ಚೊಳ್ಳಿ ಡಿಸ್ಟ್ರೂಬ್ಯೂಟರ್ ಬಳಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದ್ದು, ಸೂಕ್ತ ಬಂದೋಬಸ್ತ್ ಮಾಡುವಂತೆ ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಅವರು ವಿನಂತಿಸಿದರು.

      ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್, ಸಹಾಯಕ ಆಯುಕ್ತರಾದ ಪಿ.ಎನ್.ಲೋಕೇಶ್, ತಹಸೀಲ್ದಾರರು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಎಂಜನಿಯರ್‍ಗಳು ಸೇರಿದಂತೆ ಅನೇಕರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap