ಬಿಇಓ ಕಛೇರಿ ಮುಂದೆ ಪ್ರಾಥಮಿಕ ಶಿಕ್ಷಕರ ಧರಣಿ

ಚಿಕ್ಕನಾಯಕನಹಳ್ಳಿ

     ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಪಡೆದಿರುವ ಪ್ರಾಥಮಿಕ ಶಾಲಾ ಸಹಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (6-8) ವೃಂದಕ್ಕೆ ಪದನಾಮೀಕರಿಸುವಂತೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಬಿಇಓ ಕಾತ್ಯಾಯಿನಿ ಹೆಚ್.ರವರಿಗೆ ಮನವಿ ಸಲ್ಲಿಸಿತು.

    1ರಿಂದ 7ನೇ ತರಗತಿಗೆ ನೇಮಕವಾದ ಶಿಕ್ಷಕರು 2005 ರಿಂದ 8ನೇ ತರಗತಿ ಪ್ರಾರಂಭಿಸಿದಾಗಿನಿಂದಲೂ 6 ರಿಂದ 8ನೇ ತರಗತಿಗಳಿಗೆ ಸೇವೆಯಲ್ಲಿರುವ ಪದವೀಧರ ಶಿಕ್ಷಕರು ಬೋಧಿಸುತ್ತಾ ಬಂದಿದ್ದಾರೆ.

     ರಾಜ್ಯದಲ್ಲಿ 82 ಸಾವಿರಕ್ಕಿಂತ ಅಧಿಕ ಪದವಿ ಬಿ.ಎ, ಬಿ.ಎಸ್‍ಸಿ, ಎಂ.ಎ, ಎಂ.ಎಸ್ಸಿ, ಬಿ.ಇಡಿ ಪಡೆದ ಅನುಭವಿ ಶಿಕ್ಷಕರು 6 ರಿಂದ 8ನೇ ತರಗತಿಗಳನ್ನು ಕಳೆದ 14 ವರ್ಷಗಳಿಂದ ಬೋಧಿಸುತ್ತಿದ್ದರೂ ಕೂಡ ಅವರನ್ನು ಮುಂಬಡ್ತಿಗೆ ಪರಿಗಣಿಸದೇ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು (6-8) ಹುದ್ದೆಗಳನ್ನು 2 ಬಾರಿ ನೇರ ನೇಮಕ ಮಾಡಿ, ಈಗ ಮತ್ತೆ 3ನೇ ಬಾರಿ ನೇಮಕ ನಡೆಯುತ್ತಿದೆ. ಈ ಬಗ್ಗೆ ಇಲಾಖೆ ಮುಖ್ಯಸ್ಥರು ಮತ್ತು ಸಚಿವರನ್ನು ಕಂಡು ಮನವರಿಕೆ ಮಾಡಿದೆ. ಅಲ್ಲದೆ 2018ರ ಫೆಬ್ರುವರಿ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ 25ಸಾವಿರ ಶಿಕ್ಷಕರು ಉಪವಾಸ ಸತ್ಯಾಗ್ರಹ ಮಾಡಿ ಸರ್ಕಾರಕ್ಕೆ ಬೇಡಿಕೆ ಬಗ್ಗೆ ವಿನಂತಿಸಿ ನ್ಯಾಯಕ್ಕಾಗಿ ಒತ್ತಾಯಿಸಿದ್ದೇವೆ. ಆದರೆ ಈವರೆವಿಗೂ ಶಿಕ್ಷಕರಿಗೆ ನ್ಯಾಯ ದೊರಕಿರುವುದಿಲ್ಲ. ಆದ್ದರಿಂದ ಈ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.

     ಅರ್ಹ ಸೇವೆಯಲ್ಲಿರುವ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಪದವೀಧರ ಶಿಕ್ಷಕರು (6-8) ಎಂದು ಪರಿಗಣಿಸಿ. ಇಲ್ಲವಾದಲ್ಲಿ ನಾವು ನಮ್ಮ ಹೊಸ ವೃಂದ ನಿಯಮಗಳಂತೆ 1ರಿಂದ 5ನೇ ತರಗತಿಗಳನ್ನು ಮಾತ್ರ 01ನೆ ಜುಲೈ 2019 ರಿಂದ ಬೋಧಿಸುತ್ತೇವೆ. 6ರಿಂದ 8ನೇ ತರಗತಿಗಳ ಬೋಧನೆಯನ್ನು ಬಹಿಷ್ಕರಿಸುತ್ತೇವೆ. ನಮಗೆ ನ್ಯಾಯ ದೊರೆಯುವಂತೆ ನಮ್ಮ ಬೇಡಿಕೆಯನ್ನು ಈಡೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಈ ಮೂಲಕ ಒತ್ತಾಯಿಸಿದ್ದೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

      ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಪದವೀಧರರ ಸಂಘದ ಗೌರವಾಧ್ಯಕ್ಷ ಎನ್.ಅಣ್ಣಪ್ಪರಾವ್, ಅಧ್ಯಕ್ಷ ಎಸ್.ಎನ್.ಶಶಿಧರ, ಉಪಾಧ್ಯಕ್ಷ ಡಿ.ನಾಗರಾಜು, ಶಾಂತಮ್ಮ, ಪ್ರಧಾನ ಕಾರ್ಯದರ್ಶಿ ಎನ್.ನರಸಿಂಹಮೂರ್ತಿ, ಕೋದಂಡರಾಮಯ್ಯ, ಶಶಿಕಲಾ, ಮಹಮದ್‍ಫೈರೋಜ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link