ಕೊಟ್ಟೂರು
ವೀರಶೈವ ಪಂಚಪೀಠಗಳಲ್ಲಿ ಉಜ್ಜಿನಿ ಪೀಠವು ಒಂದು. ಈ ಪೀಠದ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವವು ಮೇ. 9 ಗುರುವಾರದಂದು ನಾಡಿನ ಅಸಂಖ್ಯಾತ ಭಕ್ತರ ಮತ್ತು ವಿವಿಧ ಜಾತಿ ಪಂಥಗಳ ಭಕ್ತಸ್ತೋಮದಲ್ಲಿ, ಶಿವಾಚಾರ್ಯರ ನೇತೃತ್ವದಲ್ಲಿ ಶ್ರೀ ಜಗದ್ಗುರು ಹಾಗೂ ಚರಮೂರ್ತಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗುವುದು.
ರಥೋತ್ಸವ ಜರುಗುವ ಪೂರ್ವದಲ್ಲಿ ಅಂದರೆ ಅಕ್ಷಯ ತದಿಗೆ ಅಮಾವಸೆಯ ದಿನದಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಮತ್ತು ಗೌರಮ್ಮದೇವಿಗೆ ಕಂಕಣಧಾರಣೆ ನಡೆಯುವುದು.
ಕಂಕಣಧಾರಣೆ ಮಾಡಿದ ದಿನದಿಂದ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ನಾಗೋತ್ಸವ, ಗಜವಾಹನೋತ್ಸವ, ಮಯೂರ ವಾಹನೋತ್ಸವ, ಸಿಂಹವಾಹನೋತ್ಸವ, ವೃಷಭ ವಾಹನೋತ್ಸವ ಹಾಗೂ ಪೂಜಾ ಕೈಂಕರ್ಯಗಳು ಜರುಗಿದವು.
ಶ್ರೀ ಸ್ವಾಮಿಯ ರಥೋತ್ಸವ ದಿನದಂದು ಸ್ವಾಮಿ ಉತ್ಸವ ಮೂರ್ತಿಯನ್ನು ಗರ್ಭಗುಡಿಯಲ್ಲಿ ವಿವಿಧ ಪೂಜೆ ಸಲ್ಲಿಸಿದ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಭಕ್ತರು, ಅರ್ಚಕರು ಛತ್ರಿ, ಚಾಮರಗಳೊಂದಿಗೆ ಶ್ರೀ ಸ್ವಾಮಿಯ ನಾಮಾಂಕಿತದ ಜಯಕಾರಗಳೊಂದಿಗೆ ಮಠದ ಹೆಬ್ಬಾಗಿಲಿನ ಮೂಲಕ ಪ್ರಮುಖ ಬೀದಿಯಲ್ಲಿ ಸಮಾಳ, ನಂದಿ ಕೋಲು ಕುಣಿತವೂ ಸೇರಿ ವಿವಿಧ ಮೇಳಗಳೊಂದಿಗೆ ಸಂಭ್ರಮದಲ್ಲಿ ಮೆರವಣಿಗೆಯು ಸಾಗಿತ್ತದೆ.
ಶ್ರೀ ಸ್ವಾಮಿಯ ಉತ್ಸವವು ಬಣ್ಣ ಬಣ್ಣದ ವಸ್ತ್ರ ಪಟಾಕ್ಷಿ ಹೂವಿನ ಹಾರಗಳೂ, ಬಾಳೆಕಂಬ, ಮುಂತಾದವುಗಳಿಂದ ವರ್ಣರಂಜಿತವಾಗಿ ಅಲಂಕೃತಗೊಂಡ ರಥದ ಬಳಿ ಬಂದು ರಥ ಸುತ್ತಲು ಐದು ಸುತ್ತು ಪ್ರದಕ್ಷಿಣಿ ಹಾಕಿ, ಉತ್ಸವ ಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿ ಸುತ್ತಾರೆ . ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಅಸಂಖ್ಯಾತ ಭಕ್ತ ಸಾಗರದಲ್ಲಿ ರಥೋತ್ಸವವು ರಾಜಗಾಂಭೀರ್ಯದಿಂದ ಸಾಗುತ್ತದೆ.
ರಥೋತ್ಸವದ ನಂತರ ಸಂಜೆ ಶ್ರೀ ಜಗದ್ಗುರು ದಿವ್ಯ ಸಾನಿಧ್ಯದಲ್ಲಿ ದಾರುಕಚಾರ್ಯ ಜಯಂತಿ, ಯುಗಮಾನೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯುವುದು.
ಮೇ. 10 ಶುಕ್ರವಾರ ಸಂಜೆ 6 ಗಂಟೆಗೆ ಇತಿಹಾಸ ಪ್ರಸಿದ್ಧ ಶ್ರೀ ಸ್ವಾಮಿಯ ದೇವಾಲಯದ ಶಿಖರಕ್ಕೆ ತೈಲಾಭಿಷೇಕವನ್ನು ನೆರವೇರಿಸಲಾಗುತ್ತದೆ. ಈ ತೈಲಾಭಿಷೇಕದ ಇನ್ನೊಂದು ವಿಶೇಷತೆ ಏನೆಂದರೆ ಮೊದಲು ಜರಮಲೆಯ ಪಾಳೆಗಾರರ ರಾಜವಂಶಸ್ಥರು ಕಳುಹಿಸಿದ ತೈಲವನ್ನು ಶ್ರೀ ಗಳಿಂದ ಆಶೀರ್ವದಿಸಿ ಶಿಖರಕ್ಕೆ ತೈಲಾಭಿಷೇಕ ಮಾಡಿದ ನಂತರ ನಾಡಿನ ಮೂಲೆ ಮೂಲೆಗಳಿಂದ ಬಂದಂತ ಭಕ್ತರು ಶ್ರೀ ಸ್ವಾಮಿಯ ಶಿಖರಕ್ಕೆ ತೈಲಾಭಿಷೇಕವನ್ನು ಮಾಡುತ್ತಾರೆ. ಈ ಸಂಪ್ರದಾಯ ಶತಮಾನಗಳಿಂದಲೂ ತಪ್ಪದೆ ನಡೆಯುತ್ತ ಬಂದಿದೆ.
ಈ ತೈಲಾಭಿಷೇಕವನ್ನು ನೋಡಲು ನಾಡಿನ ಮೂಲೆ ಮೂಲೆಗಳಿಂದ ಸಹಸ್ರಾರು ಭಕ್ತರು ಆಗಮಿಸುವರು.
ಮೇ 11 ಶನಿವಾರ, ಜಂಗಮ ಹುಡುಗರಿಗೆ (ವಟುಗಳಿಗೆ) ವೀರಶೈವ ಧರ್ಮ, ಸಂಸ್ಕತಿ ಪ್ರಚಾರ ಮಾಡುವ ವೀರ ಮಾಹೇಶ್ವರರಿಗೆ ಶಿವಾಚಾರ್ಯರ ನೇತೃತ್ವದಲ್ಲಿ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ, ಧರ್ಮೋಪದೇಶ ನೆರವೇರಿಸಿದ ನಂತರ ಜಗದ್ಗುರುಗಳು, ವೀರಶೈವ ಧರ್ಮ ಪ್ರಚಾರ, ಸಂಸ್ಕತಿ, ಹಿಂದೂ ಧರ್ಮದ ಪರಂಪರೆಯನ್ನು ಪಾಲಿಸಿ ಭಕ್ತರಿಗೆ ಮಾನವ ಧರ್ಮ ಸಂದೇಶವನ್ನು ಆಶೀರ್ವಾದಿಸುವರು.
ಮೇ. 13 ನೇ ಸೋಮವಾರ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಆರ್ಘವಣೆ ನೀಡುವ ಮೂಲಕ ಕಂಕಣ ವಿಸರ್ಜನೆ , ದೇವಾಲಯ ಶುದ್ಧೀಕರಣ ಮಾಡುತ್ತಾರೆ. ಸೋಮವಾರ ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಮಹಾರಥೋತ್ಸವದ ನಿಮಿತ್ತವಾಗಿ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗುತ್ತದೆ.
ರೈತರು ಶ್ರೀ ಮರುಳಸಿದ್ದೇಶ್ವರ ಸ್ವಾಮಿ ಕೃಪೆ ಇದ್ದರೆ ಮಳೆ ಬೆಳೇ ಸಮೃದ್ಧವಾಗಿ ಬರುತ್ತದೆ ಎಂಬ ನಂಬಿಕೆ ಬಹಳ ಹಿಂದಿನಿಂದಲೂ ಇದೆ. ಇವರ ನಂಬಿಕೆಯ ಪ್ರತಿ ರೂಪದಂತೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವ ದಿನವಾಗಲೀ, ತೈಲಾಭಿಷೇಕ ದಿನ ಅಥವಾ ಗುಡಿ ಶುದ್ಧೀಕರಣ ದಿನದಂದು ಮಳೆ ಬಂದ ಉದಾಹರಣೆಗಳು ಇದೆ.
ರಾಷ್ಟ್ರ ಕಲ್ಯಾಣವಾಗಿ ಮಾನವರ ಕಷ್ಟಗಳು ಕಳಚಿ ಸಕಲ ಜೀವ ರಾಶಿಗಳು ಸುಖಿಯಾಗಿ ಬದುಕಿ ಬಾಳಲಿ ಎಂಬ ಸದುದ್ದೇಶದಿಂದ ಉಜ್ಜಯಿನಿ ಸದ್ಧರ್ಮ ಪೀಠದ ಪರಮ ಪೂಜ್ಯರುಗಳಾದ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ತಮ್ಮ ಪೀಠದಲ್ಲಿ ಜನಪರ ಲೋಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಅವುಗಳನ್ನು ಸಾಕಾರಗೊಳಿಸಿ ತಮ್ಮ ಪೀಠ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
