ಹರಿಯದ ಚರಂಡಿ ನೀರು: ಬಗೆಹರಿಯದ ಗೋಳು..!

ಹುಳಿಯಾರು:

     ಹುಳಿಯಾರಿನಲ್ಲಿ ಕಳೆದೊಂದು ವರ್ಷದಿಂದಲೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾಗಿದ್ದು ಇದೀಗ ಪಟ್ಟಣ ವ್ಯಾಪ್ತಿಯಲ್ಲಿ ಕಾಮಗಾರಿ ಹಾಗೂ ಇದರೊಟ್ಟಿಗೆ ಚರಂಡಿ ಕಾಮಗಾರಿ ಸಹ ಎರಡೂ ಬದಿಯಲ್ಲಿ ನಡೆಯುತ್ತಿದ್ದು ಚರಂಡಿಯ ಮೂಲಕ ತ್ಯಾಜ್ಯದ ನೀರು ಹರಿದು ಹೋಗುವುದೆಲ್ಲಿ ಎಂಬುದು ಯಕ್ಷ ಪ್ರಶ್ನೆಯಾಗಿದೆ.

     ರಾಷ್ಟ್ರೀಯ ಹೆದ್ದಾರಿ 234 ರ ಕಾಮಗಾರಿ ಪಟ್ಟಣದಲ್ಲಿ ಬಹುತೇಕ ಪೂರ್ಣಗೊಂಡಿದ್ದು ಹೆದ್ದಾರಿಯ ಬದಿ ನಿರ್ಮಿಸಲಾಗಿರುವ ಚರಂಡಿ ಸಾಕಷ್ಟು ಕಡೆ ಅಪೂರ್ಣವಾಗಿದ್ದು ಬಿರುಸಿನ ಮಳೆ ಬಂದಲ್ಲಿ ನೀರು ಹರಿದು ಹೋಗದೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಪ್ಲಾನ್ ಪ್ರಕಾರ ಚರಂಡಿ ಕಾಮಗಾರಿ ನಡೆದಿದ್ದರೂ ಸಹ ಒಂದೆಡೆ ತಗ್ಗು ಮತ್ತೊಂದೆಡೆ ಎತ್ತರವಾಗಿ ಚರಂಡಿ ನಿರ್ಮಾಣವಾಗಿದ್ದು ಚರಂಡಿಯಲ್ಲಿ ನೀರಿ ಸರಾಗವಾಗಿ ಹರಿಯುವುದು ಅನುಮಾನವಾದರೆ ಹರಿದು ಹೋಗುವ ನೀರು ಎಲ್ಲಿಗೆ ಸೇರಲಿದೆ ಎಂಬುದು ತಿಳಿಯದಾಗಿದೆ.

      ರಾಮಗೋಪಾಲ್ ಸರ್ಕಲ್ ಬಳಿ ಹಳೆಯ ಎಸ್ಬಿಎಂ ಬ್ಯಾಂಕ್ ಬಳಿ ಚರಂಡಿ ಕಾಮಗಾರಿ ಅಪೂರ್ಣವಾಗಿದ್ದು ಬಾಲಾಜಿ ಟಾಕೀಸ್ ಕಡೆಯಿಂದಲೂ ಹಾಗೂ ಎಪಿಎಂಸಿ ಕಡೆಯಿಂದಲೂ ಇಲ್ಲಿಗೆ ನೀರು ಹರಿದು ಬರುವಂತೆ ಮಾಡಿರುವುದರಿಂದ ದೊಡ್ಡ ಹೊಂಡವೇ ನಿರ್ಮಾಣವಾಗಿದೆ. ಕಳೆದ ಹದಿನೈದಿಪ್ಪತ್ತು ದಿನಗಳಿಂದ ಬರುತ್ತಿರುವ ಮಳೆಗೆ ಸಂಪೂರ್ಣವಾಗಿ ನೀರು ನಿಂತಿದ್ದು ಕಳೆದ ತಿಂಗಳ ಹಿಂದಷ್ಟೆ ವ್ಯಕ್ತಿಯೊಬ್ಬ ಇದರಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಕೂಡ ಜರುಗಿದೆ. ಹೀಗಿದ್ದಾಗಿಯೂ ಹೊಂಡದಲ್ಲಿರುವ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಹೆದ್ದಾರಿ ಗುತ್ತಿಗೆದಾರರು ನಿರ್ಲಕ್ಷ್ಯ  ವಹಿಸಿದ್ದಾರೆ.

    ಎಪಿಎಂಸಿ ಭಾಗದಿಂದ ಪಟ್ಟಣದ ಹೊರ ಭಾಗಕ್ಕೆ ಹರಿದು ಹೋಗಬೇಕಿದ್ದ ಚರಂಡಿ ನೀರು ಮುಂದಕ್ಕೆ ಸಾಗುವ ಬದಲಿಗೆ ರಾಮಗೋಪಾಲ್ ಸರ್ಕಲ್ ಕಡೆ ಹರಿದು ಹೋಗುವಂತೆ ಚರಂಡಿ ನಿರ್ಮಿಸಿದ್ದು ಇದರಿಂದ ಕೊಳಚೆ ನೀರು ಪಟ್ಟಣದ ಒಳಭಾಗದಲ್ಲಿ ಶೇಖರಣೆಯಾಗುವುದಿದ್ದು ಸಾಕಷ್ಟು ಸಮಸ್ಯೆಗೆ ಕಾರಣವಾಗಲಿದೆ ಎಂಬುದು ಇಲ್ಲಿನ ಜನರ ಅಂಬೋಣವಾಗಿದೆ.

     ಇಲ್ಲಿ ಸಂಗ್ರಹವಾಗಲಿರುವ ನೀರನ್ನು ಅಡ್ಡವಾಗಿ ಪೈಪುಗಳನ್ನು ಹಾಕುವ ಮೂಲಕ ಪಕ್ಕದಲ್ಲಿರುವ ಖಾಸಗಿ ಜಮೀನನಲ್ಲಿ ಬಿಡಲು ಕಾಮಗಾರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿರುವ ಸದರಿ ನಿವೇಶನದ ಮಾಲಿಕ ಸಿದ್ಧಲಿಂಗಸ್ವಾಮಿ ಈ ಬಗ್ಗೆ ಹೆದ್ದಾರಿ ಎಂಜಿನಿಯರ್ ಅವರನ್ನು ನಿರಂತರವಾಗಿ ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ಕೇಳುತ್ತಿದ್ದರು ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ಇದರಿಂದ ಬೇಸತ್ತಿರುವ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದು ಚರಂಡಿ ನೀರು ಆ ಜಮೀನು ಕಡೆಗೆ ಬಿಡದಂತೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಪಟ್ಟಣದ ನೀರನೆಲ್ಲಾ ಖಾಸಗಿ ಜಮೀನಿಗೆ ಬಿಡುವ ಉದ್ದೇಶ ಹೊಂದಿದ್ದ ಗುತ್ತಿಗೆದಾರರು ಮುಂದೇನು ಮಾಡಬೇಕೆಂದು ತಿಳಿಯದೆ ಕೆಲಸ ಸ್ಥಗಿತಗೊಳಿಸಿದ್ದಾರೆ.

     ತ್ಯಾಜ್ಯ ನೀರನ್ನು ಪಟ್ಟಣದ ಹೊರಕ್ಕೆ ಹರಿಯಲು ಬಿಡದೆ ಕಾಟಾಚಾರಕ್ಕೆಂಬAತೆ ಅಡ್ಡಲಾಗಿ ಪೈಪ್ ಮೂಲಕ ತಮ್ಮ ಭೂ ಪರಿವರ್ತನೆ ಮಾಡಲಾಗಿರುವ ವಾಣಿಜ್ಯ ನಿವೇಶನದಲ್ಲಿ ಹರಿಯಲು ಬಿಡಲು ಮುಂದಾಗಿರುವ ಗತ್ತಿಗೆದಾರರ ಕ್ರಮ ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಅವರು ಚರಂಡಿಯ ನೀರನ್ನು ತಮ್ಮ ನಿವೇಶನದಲ್ಲಿ ಹರಿದುಹೋಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap