ಸತ್ಯನಾರಾಯಣ್ ನಿಧನದ ನಂತರವೂ ಕಾರ್ಯಕರ್ತರಲ್ಲಿ ಕಿಚ್ಚು ಕಡಿಮೆಯಾಗಿಲ್ಲ

ಶಿರಾ:

    ಶಾಸಕ ಬಿ.ಸತ್ಯನಾರಾಯಣ್ ಅವರ ನಿಧನದ ನಂತರ ಶಿರಾ ಕ್ಷೇತ್ರದಲ್ಲಿನ ಜೆ.ಡಿ.ಎಸ್. ಕಾರ್ಯಕರ್ತರಲ್ಲಿ ಶಕ್ತಿ ಕಡಿಮೆ ಆಗಬುದೆಂಬ ಭಯ ನನ್ನಲ್ಲಿ ಕಾಡಿತ್ತು ಆದರೆ ಕಳೆದ ಎರಡು ದುನಗಳ ಕಾರ್ಯಕರ್ತರ ಹೋರಾಟದ ಕಿಚ್ಚನ್ನು ಕಂಡರೆ ಮುಂದೆಂದಿಗೂ ಈ ಕ್ಷೇತ್ರದಲ್ಲಿ ಜೆ.ಡಿ.ಎಸ್. ಶಕ್ತಿ ಕಿಂಚಿತ್ತೂ ಕುಂದುವುದಿಲ್ಲವೆಂಬ ನಂಬಿಕೆ ನನಗಿದೆ ಎಂದು ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡ ಹೇಳಿದರು.

   ನಗರದ ಜೆ.ಡಿ.ಎಸ್. ಕಛೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿರಾ ಕ್ಷೇತ್ರದ ಕ್ರಿಯಾಶೀಲ ಜೆ.ಡಿ.ಎಸ್. ಕಾರ್ಯಕರ್ತರ ಭದ್ರಕೋಟೆಯಾಗಿದೆ. ಅಧಿಕಾರದ ಸವಿಯನ್ನುಂಡು ಯಾರೋ ಬೆರಳೆಣಿಕೆಯ ಮುಖಂಡರಷ್ಟೇ ಪಕ್ಷ ಬಿಟ್ಟಿದ್ದಾರೆಯೇ ಹೊರತು ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದವರು, ಪಕ್ಷ ಬಲವರ್ಧನೆಗೆ ಕಾರಣರಾದವರ್ಯಾರೂ ಕೂಡಾ ಪಕ್ಷವನ್ನು ತೊರೆದಿಲ್ಲ ಎಂದರು.

   ಕಳೆದ ಮೂರು ದಿನಗಳಿಂದಲೂ ನಾನು ಶಿರಾ ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿದ್ದೇನೆ. ಕೆಮಾರಸ್ವಾಮಿಗೆ ಆರೋಗ್ಯ ಸರಿ ಇಲ್ಲವಾದ್ದರಿಂದ ವಾಸ್ತವ್ಯವಿರದೆ ಪ್ರತಿ ದಿನವೂ ಶಿರಾ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ. ಆಯುಧ ಪೂಜೆ ಹಾಗೂ ವಿಜಯದಶಮಿ ಪ್ರಯುಕ್ತ ಅ:25 ಮತ್ತು 26 ರಂದು ಕ್ಷೇತ್ರದಲ್ಲಿ ಪ್ರಚಾರ ಮಾಡುವುದಿಲ್ಲ. ಕೋವಿಡ್ ಹಿನ್ನೆಲೆ ಇದ್ದರೂ ಜನ ಸಾಮಾನ್ಯರ ಹಬ್ಬ ಹರಿದಿನದಂದೂ ಕೂಡಾ ಮತದಾರರ ಮನೆಗಳಿಗೆ ಹೋಗುವುದು ಬೇಡಾ ಎಂಬ ಚಿಂತನೆ ನಮ್ಮದು ಎಂದರು.

   ಬೆಮೆಲ್ ಕಾತರಾಜು ಹಾಗೂ ಗುಬ್ಬಿ ಶ್ರೀನಿವಾಸ್ ಯಾವ ಪಕ್ಷಕ್ಕೂ ಹೋಗಿಲ್ಲ, ಹೋಗುವುದೂ ಇಲ್ಲ. ಈ ಇಬ್ಬರೂ ನಮ್ಮ ಪಕ್ಷದೊಂದಿಗೆ ಸಕ್ರಿಯವಾಗಿರುತ್ತಾರೆ. ಮಂಗಳವಾರದಿಂದ ಇವರಿಬ್ಬರೂ ಸೇರಿದಂತೆ ಜಿಲ್ಲೆಯ ಪಕ್ಷದ ಎಲ್ಲಾ ಮಾಜಿ ಹಾಗೂ ಹಾಲಿ ಶಾಸಕರುಗಳು ಶಿರಾ ಉಪ ಚುನಾವಣೆಯಲ್ಲಿ ಪ್ರತಿ ಗ್ರಾಮಗಳಲ್ಲಿಯೂ ಓಡಾಡುತ್ತಾರೆ. ಅನೇಕ ವಿವಿಧ ಸಮುದಾಯದ ಬಂಧುಗಳನ್ನು ಇವರೆಲ್ಲರೂ ಖುದ್ದಾಗಿ ಭೇಟಿ ಮಾಡುತ್ತಾರೆ ಎಂದು ಹೆಚ್.ಡಿ.ದೇವೇಗೌಡ ತಿಳಿಸಿದರು.

   ಪಕ್ಷದ ಅಭ್ಯರ್ಥಿಯಾದ ಸತ್ಯನಾರಾಯಣ್ ಪತ್ನಿ ಅಮ್ಮಾಜಮ್ಮ ಮನೆ ಮನೆಗಳಿಗೆ ತೆರಳಿ ಮತ ಯಾಚನೆ ಮಾಡುವುದು ಕಷ್ಟವಾಗುತ್ತದೆ. ಅವರ ಅನಾರೋಗ್ಯದ ದೃಷ್ಠಿಯಿಂದ ಅವರೊಟ್ಟಿಗೆ ನಾವೆಲ್ಲರೂ ಮತ ಯಾಚನೆಯನ್ನು ನಿರಂತರವಾಗಿ ಮಾಡುತ್ತೇವೆ. ನಮ್ಮದೇ ಪಕ್ಷದ ಈ ಭಾಗದ ಕೆಲ ನಮ್ಮ ಮುಖಂಡರು ಎಷ್ಟಾದರೂ ಸರಿ ಹಣ ಖರ್ಚು ಮಾಡುತ್ತೇವೆ ನಮಗೆ ಟಿಕೇಟ್ ನೀಡಿ ಎಂದು ಕೇಳಿದ್ದರು.ಸತ್ಯನಾರಾಯಣ್ ಅಂತ್ಯ ಸಂಸ್ಕಾರದ ದಿನದಂದೇ ನಾವು ಅವರ ಪತ್ನಿಗೆ ಟಿಕೇಟ್ ನೀಡಲು ತೀರ್ಮಾನಿಸಿದ್ದೆವು. ಮೃತರ ಮನೆಗೆ ಟಿಕೇಟ್ ತಪ್ಪಿಸಿ ಪಕ್ಷನಿಷ್ಠೆಗೆ ದ್ರೋಹವೆಸಗಿಕೊಳ್ಳುವುದು ನಮಗಿಷ್ಟವಿರಲಿಲ್ಲ ಎಂದರು.

    ಎರಡು ಬಾರಿ ರಾಜ್ಯದ ಅನ್ಯ ಪಕ್ಷಗಳೊಂದಿಗೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡಿದ್ದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗಲು ಕಾರಣವಾಗಲಿಲ್ಲವೇ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ದೇವೇಗೌಡರು. ಪಕ್ಷದಲ್ಲಿ ಅಧಿಕಾರದ ಸವಿಯನ್ನುಂಡು ನಮ್ಮಲ್ಲಿಯೇ ಇದ್ದು, ಬೆಳೆದು ಕೈಕೊಟ್ಟವರು ಹೋದಾಗಲೇ ಹೆದರಲಿಲ್ಲ. ಇನ್ನು ಸಮ್ಮಿಶ್ರ ಸರ್ಕಾರದಡಿಯಲ್ಲಿ ಆಡಳಿತ ನಡೆಸಿದಾಗ ನಮ್ಮ ಪಕ್ಷಕ್ಕೆ ಡ್ಯಾಮೇಜ್ ಆಗುವ ಸ್ಥಿತಿ ಬಂದಿಲ್ಲ.ಕೂಡಿಕೆ ಸರ್ಕಾರವಿದ್ದಾಗಲೂ ಕುಮಾರಸ್ವಾಮಿ ರಾಜ್ಯದ ಜನೆತೆಗೆ ಶಾಶ್ಚತವಾದ ಹಲವು ಯೋಜನೆಗಳನ್ನು ನೀಡಿದ್ದಾರೆ ಎಂದರು.

    ರಾಜ್ಯದಲ್ಲಿ ನಾಲ್ಕು ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆಯೂ ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು ಈ ಎಲ್ಲಾ ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ಗೆಲುವು ಖಚಿತ. ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಚೌಡರೆಡ್ಡಿ ಅವರಿಗೆ ಈ ಭಾಗದ ಪದವೀಧರರು ಮತ ಚಲಾಯಿಸಿ ಅವರ ಗೆಲುವಿಗೂ ಕಾರಣರಾಗುವಂತೆ ದೇವೇಗೌಡರು ಮನವಿ ಮಾಡಿದರು.ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾಜಿ ಸುರೇಶ್‍ಬಾಬು, ಬೆಮೆಲ್ ಕಾಂತರಾಜು, ಗುಬ್ಬಿ ಶ್ರೀನಿವಾಸ್, ತಿಮ್ಮರಾಯಪ್ಪ, ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಆಂಜಿನಪ್ಪ, ಜಯಪ್ರಕಾಶ್, ಆರ್.ರಾಮು, ಆರ್.ರಾಘವೇಂದ್ರ, ಹೊನ್ನೇನಹಳ್ಳಿ ನಾಗರಾಜು, ಚೇತನ್‍ಕುಮಾರ್ ಲಿಂಗದಹಳ್ಳಿ, ವೀರೇಂದ್ರ, ಕೋಟೆ ಮಹದೇವ ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap