ಕೂಡ್ಲಿಗಿ:
ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿ ನೀರು ಶುದ್ಧೀಕರಿಸುವ ಘಟಕ ಸ್ಥಾಪನೆ ಮಾಡಿ ಎರಡು ವರ್ಷ ಕಳೆದರೂ ಜನರಿಗೆ ಶುದ್ಧ ನೀರು ಸಿಗದೆ ಇನ್ನೂ ಪ್ಲೋರೈಡ್ ನೀರನ್ನೆ ಕುಡಿಯುವ ಸ್ಥಿತಿ ಇದೆ.ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯಿಂದ ಈ ಘಟಕ ಅಳವಡಿಸಿ ಎರಡು ವರ್ಷ ಕಳೆದಿದೆ. ಘಟಕದಲ್ಲಿ ನೀರು ಸಂಗ್ರಹ ಸಿಂಟ್ಯೆಕ್ಸ್ ಟ್ಯಾಂಕ್ ಹಾಕಿ, ಶುದ್ಧೀಕರಿಸುವ ಯಂತ್ರಗಳನ್ನು ಜೋಡಿಸಲಾಗಿದೆ.
ಸದ್ಯ ನೀರಿನ ಸಂಪರ್ಕ ಕೊಟ್ಟು ಚಾಲನೆ ನೀಡಿದರೆ ಜನರಿಗೆ ಶುದ್ಧ ನೀರು ದೊರೆಯುತ್ತದೆ. ಆದರೆ ಅಧಿಕಾರಿಗಳು ಹಾಗೂ ಜನ ಪ್ರನಿಧಿಗಳ ನಿರ್ಲಕ್ಷ್ಯದಿಂದ ಘಟಕದಲ್ಲಿ ನೀರು ಶುದ್ಧೀಕರಿಸುವ ಕಾರ್ಯ ಆರಂಭವಾಗಿಲ್ಲ. ಇದರಿಂದ ಜನರು ಖಾಸಗಿ ಶುದ್ಧ ನೀರಿನ ಘಟಕಗಳಿಂದ 10 ರೂಪಾಯಿ ನೀಡಿ ಒಂದು ಕ್ಯಾನ್ ನೀರು ತರಬೇಕಾಗಿದೆ. ಇಲ್ಲವಾದಲ್ಲಿ ಮೂರ್ನಾಲ್ಕು ಕಿ.ಮೀ. ದೂರ ಹೋಗಿ ಬೇರೆ ಗ್ರಾಮಗಳಿಂದ ಶುದ್ಧ ನೀರನ್ನು ತರಬೇಕಾದ ಸ್ಥಿತಿ ಇದೆ. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ನೀರು ಒದಗಿಸಬೇಕೆಂಬ ಸರ್ಕಾರದ ಯೋಜನೆಗೆ ಸಂಬಂಧಿಸಿದ ಇಲಾಖೆಯ ನಿರ್ಲಕ್ಷ್ಯದಿಂದ ನೀರಿನ ಘಟಕ ಆರಂಭದಲ್ಲಿ ವಿಳಂಭವಾಗುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಅನೇಕ ವರ್ಷಗಳಿಂದ ಕೊಳವೆ ಬಾವಿಯಲ್ಲಿನ ಪ್ಲೋರೈಡ್ ನೀರನ್ನು ಕುಡಿಯುತ್ತಿದ್ದ ನಮ್ಮ ಗ್ರಾಮಕ್ಕೆ ಶುದ್ಧ ನೀರು ಸಿಗುತ್ತದೆ ಎಂದು ಸಂತಸ ಪಟ್ಟಿದ್ದೇವು. ಆದರೆ ಘಟಕ ಸ್ಥಾಪನೆ ಮಾಡಿ ಎರಡು ವರ್ಷ ಕಳೆದರೂ ಇಂದಿಗೂ ಪ್ರಾರಂಭ ವಾಗಿಲ್ಲ. ಇದರಿಂದ ನಿರಾಸೆಯಾಗಿದೆ ಎಂದು ಹೇಳುವ ಗ್ರಾಮದ ಸಾಧಿಕ್, ಓಬಣ್ಣ, ಶೀಘ್ರವಾಗಿ ಘಟಕವನ್ನು ಆರಂಭ ಮಾಡದೇ ಹೋದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಎಂಜನಿಯರ್ ಸಚಿನ್, ವಿದ್ಯುತ್ ಸಂಪರ್ಕ ಸಮಸ್ಯೆಯಿಂದ ಘಟಕ ಆರಂಭ ಮಾಡುವಲ್ಲಿ ವಿಳಂಭವಾಗಿತ್ತು. ಆದರೆ ಈಗ ಸಮಸ್ಯೆ ಬಗೆಹರಿದಿದ್ದು, ಇನ್ನೆರಡು ವಾರದಲ್ಲಿ ಘಟಕ ಆರಂಭ ಮಾಡಲಾಗುವುದು ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ