ಹಾವೇರಿ
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಹನುಮಂತಪ್ಪ ಬಸವಂತಪ್ಪ ಎಳೂರ ಎಂಬಾತನಿಗೆ ಸಜೆ ಹಾಗೂ ದಂಡ ವಿಧಿಸಿ ಒಂದನೇ ಅಧಿಕ ಜಿಲ್ಲಾ ಹಾಗೂ ಸತ್ರ (ಪೊಕ್ಸೋ) ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಶನಿವಾರ ತೀರ್ಪು ನೀಡಿದ್ದಾರೆ.
ಆರೋಪಿ ಹನುಮಂತಪ್ಪ ಬಸವಂತಪ್ಪ ಎಳೂರ ಈತನು ಜಿಲ್ಲೆಯ ಹಿರೇಕೆರೂರು ತಾಲೂಕಿನ ಮುದ್ದಿಕೊಪ್ಪ ಗ್ರಾಮದ ಅಪ್ರಾಪ್ತ(16) ಬಾಲಕಿಯ ಮೇಲೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ದಿನಾಂಕ 02-09-2017 ರಂದು ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಆತನ ಮೇಲೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹಿರೇಕೆರೂರು ವೃತ್ತ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸಂಗನಾಥ ಜಿ.ಆರ್. ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪಿತನ ಮೇಲೆ ಆರೋಪಗಳು ರುಜುವಾತದ ಕಾರಣ ಆರೋಪಿ ಹನುಮಂತಪ್ಪ ಬಸವಂತಪ್ಪ ಎಳೂರ ಈತನಿಗೆ ದಿನಾಂಕ 07-12-2019 ರಂದು ಭಾ.ದಂ.ಸಂ. ಕಲಂ 448,451 ಐಪಿಸಿ ನೇದ್ದರಡಿ ಆರೋಪಿಗೆ ಎರಡು ವರ್ಷಗಳ ಸಜೆ ಮತ್ತು 5000 ರೂ. ದಂಡ ರೂ.ದಂಡ ವಿಧಿಸಿದ್ದು, ದಂಡದ ಮೊತ್ತ ಪಾವತಿಸದೇ ಇದ್ದಲಿ ಪುನಃ ದಂಡ ಹಾಗೂ ಸಜೆ ವಿಸ್ತರಿಸಬಹುದಾದ ತೀರ್ಪು ನೀಡಲಾಗಿದೆ.
ಕಲಂ ಪೋಕ್ಸೋ ಕಾಯ್ದೆಯಡಿ ಆರೋಪಿಗೆ ಮೂರು ವರ್ಷ ಸಜೆ ಮತ್ತು 10 ಸಾವಿರ ರೂ. ದಂಡ ವಿಧಿಸಿದ್ದು, ದಂಡದ ಮೊತ್ತ ಪಾವತಿಸದೇ ಇದ್ದಲಿ ಪುನಃ ದಂಡ ಹಾಗೂ ಸಜೆ ವಿಸ್ತರಿಸಬಹುದಾದ ತೀರ್ಪು ನೀಡಲಾಗಿದೆ. ದಂಡದ ಮೊತ್ತದಲ್ಲಿ ಸಂತ್ರಸ್ಥೆಗೆ ಪರಿಹಾರವಾಗಿ ರೂ.10,000ಗಳನ್ನು ನೀಡಲು ತೀರ್ಪಿನಲ್ಲಿ ಆದೇಶಿಸಲಾಗಿದೆ.
ಸರ್ಕಾರದ ಪರವಾಗಿ(ಪೊಕ್ಸೋ) ವಿಶೇಷ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ವಿನಾಯಕ ಎಸ್.ಪಾಟೀಲ ಅವರು ವಾದ ಮಂಡಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ