ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ

ಬ್ಯಾಡಗಿ:

      ಸಂವಿಧಾನದ ಆಶಯದಂತೆ ಸರ್ಕಾರಗಳು ಶೋಷಿತರ ಧ್ವನಿಯಾಗಿ ಕೆಲಸ ಮಾಡಬೇಕಾಗಿತ್ತು, ಆದರೆ ಹಾಗಾಗುತ್ತಿಲ್ಲ ಕೇವಲ ಮೀಸಲಾತಿ ಪ್ರಕಟಿಸಿ ವಾಲ್ಮೀಕಿ ಸಮಾಜವನ್ನು ತೃಪ್ತಿಪಡಿಸಲಾಗುತ್ತಿದೆ, ನಿರ್ಲಕ್ಷಿತ ಸಮಾಜವೊಂದು ಮುಖ್ಯವಾಹಿನಿಗೆ ಬರಲು ಏನೆಲ್ಲಾ ಶಕ್ತಿಯನ್ನು ಹಾಕುತ್ತಿವೆ ಎಂಬುದನ್ನು ಸಮಾಜದಲ್ಲಿನ ಬಡ ಕೂಲಿಕಾರ್ಮಿಕರನ್ನು ನೋಡಿದರೇ ಅರ್ಥವಾಗುತ್ತಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಖೇದ ವ್ಯಕ್ತಪಡಿಸಿದರು.

          ಪಟ್ಟಣದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತಾಲ್ಲೂಕ ಪಂಚಾಯತ್, ತಾಲೂಕಾಡಳಿತ ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ನಾಯಕ ಸಮಾಜದ ತಾಲೂಕ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದ ಪರಿಜ್ಞಾನವಿಲ್ಲದೇ ಅಭಿವೃದ್ಧಿ ಅಸಾಧ್ಯ ಹೀಗಾಗಿ ಸಮಾಜದ ಜನರು ಕಡ್ಡಾಯವಾಗಿ ಶಿಕ್ಷಣವಂತರಾಗಬೇಕು, ಸರ್ಕಾರಗಳು ಸೂಕ್ತ ಸ್ಪಂದನೆ ಇಲ್ಲದೇ ವಾಲ್ಮೀಕಿ ಸಮಾಜ ಎಷ್ಟರಮಟ್ಟಿಗೆ ಅಭಿವೃದ್ಧಿಯಾಗಿದೆ ಎಂಬುದರ ಅರಿವು ಬರುತ್ತಿಲ್ಲ, ಶಕ್ತಿ ಮೀರಿ ಮಾಡುತ್ತಿರುವ ಪ್ರಯತ್ನ ಎಲ್ಲೋ ಒಂದು ಕಡೆ ವ್ಯರ್ಥವಾಗುತ್ತಿದೆ ಎಂಬ ಭಾವನೆ ಸಮಾಜದ ಬಡ ಜನರಲ್ಲಿ ಮೂಡುತ್ತಿದೆ, ಸರ್ಕಾರಗಳು ಎಚ್ಚೆತ್ತುಕೊಳ್ಳುವ ಮೂಲಕ ವಿವಿಧ ಸೌಲಭ್ಯಗಳನ್ನು ಪ್ರಕಟಿಸಿ ಸಮಾಜದ ಯುವಕರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವಾಗಬೇಕಾಗಿದೆ ಎಂದರು.

      ಅನುಕೂಲತೆ ಪಡೆದುಕೊಳ್ಳಿ: ಮಾಜಿ ಶಾಸಕ ಸುರೇಶಗೌಡ ಪಾಟೀಲ ಮಾತನಾಡಿ, ವಾಲ್ಮೀಕಿ ಸಮಾಜದ ಶ್ರಮಿಕ ವರ್ಗದಿಂದ ಇಂದು ಬ್ಯಾಡಗಿಯಲ್ಲಿ ವಿಶ್ವ ಮಾರುಕಟ್ಟೆಯೊಂದು ಬೆಳಕಿಗೆ ಬರಲು ಕಾರಣವಾಗಿದೆ, ಅದಾಗ್ಯೂ ಸರ್ಕಾರ ನೀಡಿದಂತಹ ಮೀಸಲಾತಿ ಸೌಲಭ್ಯಗಳನ್ನು ಉಪಯೋಗ ಮಾಡಿಕೊಳ್ಳುತ್ತಿಲ್ಲ, ಇದರಲ್ಲಿ ನಿರಾಸಕ್ತಿ ತೋರುತ್ತಾ ಹಿಂದೇಟು ಹಾಕುತ್ತಿರುವ ಸಮಾಜದ ಜನರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಗದಂತಹ ಸ್ಥಿತಿಯಿದೆ, ಎಲ್ಲರೂ ಮುಕ್ತವಾಗಿ ಚರ್ಚಿಸುವ ಮೂಲಕ ವಾಲ್ಮೀಕಿ ಸಮಾಜದ ಜನರು ಹೆಚ್ಚಿನ ಅನುಕೂಲತೆಗಳನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

       ದಲಿತರು ಸ್ವಾಭಿಮಾನದಿಂದ ಬದುಕಬೇಕು: ಮಾಜಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸರ್ಕಾರ ಶೇ.22 ರಷ್ಟು ಅನುದಾನವನ್ನು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಿದೆ, ಇದರಿಂದ ಶೋಷಿತ ವರ್ಗದ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪುವುದಕ್ಕೆ ಪ್ರಯತ್ನಗಳು ನಡೆದಿವೆ, ರಾಜ್ಯದಲ್ಲಿ ಎಲ್ಲ ದಲಿತ ಸಮುದಾಯಗಳಿಗೆ ಸ್ವಾಭಿಮಾನದಿಂದ ಬದುಕುವಂತಹ ವಾತಾವರಣವನ್ನು ನಿರ್ಮಾಣ ಮಾಡಲು ಸರ್ಕಾರ ಕಾರ್ಯೋನ್ಮುಖವಾಗಬೇಕು, ವಾಲ್ಮೀಕಿ ಮಹಿರ್ಷಿ ಮೂರ್ತಿಯನ್ನು ವಿಧಾನಸೌಧದೆದುರು ನಿರ್ಮಾಣ ಮಾಡುವ ಮೂಲಕ ರಾಜ್ಯದಲ್ಲಿರುವ 45 ಲಕ್ಷಕ್ಕೂ ಹೆಚ್ಚು ವಾಲ್ಮೀಕಿ ಸಮುದಾಯದ ಜನರಿಗೆ ಗೌರವವನ್ನು ಸಲ್ಲಿಸಿದ ಕೀರ್ತಿ ಕಳೆದ ಸರ್ಕಾರಕ್ಕೆ ಸಲ್ಲುತ್ತದೆ ಎಂದರು..

          ಸರ್ಕಾರದ ಸಹಭಾಗಿತ್ವದಲ್ಲಿ ವಾಲ್ಮೀಕಿ ಪರಿಚಯ: ಉಪನ್ಯಾಸ ನೀಡಿದ ಡಾ.ರಮೇಶ ತೆವರಿ ಮಾತನಾಡಿ, ವಾಲ್ಮೀಕಿ ರಾಮಾಯಣ ಕಲ್ಪನಾ ಗ್ರಂಥವಲ್ಲ ಸುಮಾರು 24 ಸಾವಿರ ಶ್ಲೋಕಗಳನ್ನು ಹೊಂದಿರುವ ವಿಶ್ವದ ಶ್ರೇಷ್ಠ ಗ್ರಂಥಗಳಲ್ಲಿ ಒಂದಾಗಿದೆ, ಇದರ ತಿರುಳನ್ನು ವಿಶ್ವಕ್ಕೆ ಪರಿಚಯಿಸಬೇಕಾಗಿದ್ದು ವಾಲ್ಮೀಕಿ ಸಮುದಾಯದ ಸಹಭಾಗಿತ್ವದಲ್ಲಿ ಇದಕ್ಕಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ, ಅಷ್ಟಕ್ಕೂ ಬಹುತೇಕ ಇನ್ನಿತರ ಸಮುದಾಯಗಳು ಶರಣರ, ದಾರ್ಶನಿಕರ ಹೆಸರಿನ ಮೇಲೆ ಸಂಘಟಿತರಾಗುತ್ತಿದ್ದು ಅಂತೆಯೇ ಮಹರ್ಷಿ ವಾಲ್ಮೀಕಿ ಹೆಸರಿನಲ್ಲಿ ನಾವೆಲ್ಲರೂ ಸಂಘಟಿತರಾಗಬೇಕು ಎಂದರು.

       ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ, ಗಣ್ಯರಿಗೆ ಮತ್ತು ವಿಶೇಷ ಅತಿಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಇದಕ್ಕೂ ಮುನ್ನ ಗ್ರಾಮದಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರವನ್ನು ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದೆಲ್ಲಡೆ ಮೆರವಣಿಗೆ ನಡೆಸಲಾಯಿತು.

       ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನಶ್ರೀಗಳು ದಿವ್ಯ ಸಾನಿಧ್ಯ ವಹಿಸಿದ್ದರು, ವೇದಿಕೆಯಲ್ಲಿ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಸದಸ್ಯ ಶಾಂತಪ್ಪ ದೊಡ್ಡನಿ, ಮಾಜಿ ಅಧ್ಯಕ್ಷ ನೀಲಕಂಠಪ್ಪ ಫಾಸಿ, ಪುರಸಭೆ ಅಧ್ಯಕ್ಷ ಬಸವರಾಜ ಛತ್ರದ, ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ ಪಾಟೀಲ, ಸದಸ್ಯರಾದ ರಾಮಣ್ಣ ಕೋಡಿಹಳ್ಳಿ, ಪ್ರಶಾಂತ ಯಾದ್ವಾಡ, ನಜೀರ ಅಹ್ಮದ್ ಶೇಖ್, ಶಾಂತಮ್ಮ ಕುರಕುಂದಿ, ದುರ್ಗೇಶ ಗೋಣೆಮ್ಮನವರ, ರಾಜೇಸಾಬ್ ಕಳ್ಳಿಮನಿ, ಮುನಾಫ್ ಎರೇಶೀಮಿ, ಮಂಜುನಾಥ ಬೋವಿ, ಎಪಿಎಂಸಿ ಆಧ್ಯಕ್ಷ ಕೆ.ಎಸ್.ನಾಯ್ಕರ್, ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಮಾಜಿ ಉಪಾಧ್ಯಕ್ಷ ಹನುಮಂತಪ್ಪ ನಾಯ್ಕರ್, ನಿವೃತ್ತ ಪ್ರಾಚಾರ್ಯ ಸಿ.ಸಿ.ಗಂಗಣ್ಣನವರ, ಮಲ್ಲಿಕಾರ್ಜುನ ಕರಲಿಂಗಣ್ಣವನರ, ತಹಶೀಲ್ದಾರ ಗುರುಬಸವರಾಜ, ಮುಖ್ಯಾಧಿಕಾರಿ ವಿ.ಎಂ.ಪೂಜಾರ, ಹೊನ್ನೂರಪ್ಪ ಕಾಡಸಾಲಿ, ಮಲ್ಲೇಶಪ್ಪ ಒಳಗುಂದಿ, ದುಗ್ಗಪ್ಪ ಬಂಡ್ರಾಳ, ಹನುಮಂತಪ್ಪ ಭೈರಾಪುರ, ಶಿವರಾಮ ಹೊನ್ನಾಳಿ, ಫಕ್ಕೀರಪ್ಪ ಮ್ಯಾಗೇರಿ, ಚಂದ್ರು ಒಳಗುಂದಿ, ಹನುಮಂತಪ್ಪ ಮ್ಯಾಗೇರಿ, ಪರುಶರಾಮ ಗೆಜ್ಜಳ್ಳಿ, ಮಂಜುನಾಥ ಕೋಡಿಹಳ್ಳಿ, ಈರಪ್ಪ ಬಳ್ಳಾರಿ, ಶಂಕರ ಒಳಗುಂದಿ, ನಿರ್ಮಿತಿ ಕೇಂದ್ರದ ಶಾಂತಕುಮಾರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ನಿವೃತ್ತ ಪ್ರಾಚಾರ್ಯ ಎಸ್.ಎನ್.ಯಮನಕ್ಕನವರ ಸ್ವಾಗತಿಸಿದರು, ಶಿಕ್ಷಕ ಎಂ.ಎಫ್.ಕರಿಯಣ್ಣನವರ (ಮಾಸಣಗಿ) ನಿರೂಪಿಸಿದರು, ಸಮಾಜ ಕಲ್ಯಾಣಾಧಿಕಾರಿ ಹನುಮಂತಪ್ಪ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link