ಬೆಂಗಳೂರು
ರಾಜ್ಯ ವಿಧಾನನಮಂಡಲದ ಜಂಟಿ ಅಧಿವೇಶನವನ್ನು ಫೆಬ್ರವರಿ 17 ರಿಂದ ಆರಂಭಿಸಲು ಇಂದು ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.ಸಂಪುಟ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಈ ವಿಷಯ ತಿಳಿಸಿದರು.
ಈ ಮುಂಚೆ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಜನವರಿ 20 ರಂದು ಆರಂಭಿಸಿ 30 ರ ತನಕ ನಡೆಸಲು ತೀರ್ಮಾನಿಸಲಾಗಿತ್ತು.ಆದರೆ ಮುಖ್ಯಮಂತ್ರಿಗಳ ವಿದೇಶ ಪ್ರವಾಸದ ಹಿನ್ನೆಲೆಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಫೆಬ್ರವರಿ 17 ರಿಂದ 21 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಫೆಬ್ರವರಿ ಹದಿನೇಳರಂದು ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾತನಾಡಲಿದ್ದಾರೆ ಎಂದು ವಿವರ ನೀಡಿದರು.
ಮಾ.5 ರಂದು ಬಜೆಟ್
ಇದೇ ರೀತಿ ರಾಜ್ಯ ವಿಧಾನಮಂಡಲದ ಬಜೆಟ್ ಅಧಿವೇಶನ ಮಾರ್ಚ್ 2 ರಂದು ಆರಂಭವಾಗಲಿದೆ ಎಂದು ಪ್ರಕಟಿಸಿದ ಜೆ.ಸಿ.ಮಾಧುಸ್ವಾಮಿ;2020-21 ರ ಸಾಲಿನ ಬಜೆಟ್ ಮಾರ್ಚ್ 5 ರಂದು ಮಂಡನೆಯಾಗಲಿದೆ ಎಂದರು.ಈ ಬಾರಿಯ ಬಜೆಟ್ ಅಧಿವೇಶನ ವಿಸ್ತ್ರತವಾಗಿ ನಡೆಯಲಿದೆ ಎಂದ ಅವರು,ಬಜೆಟ್‍ಗೆ ಸಂಬಂಧಿಸಿದಂತೆ ಎಲ್ಲ ವಿಷಯಗಳ ಕುರಿತು ಕೂಲಂಕುಷ ಚರ್ಚೆ ನಡೆಯಲಿದೆ ಎಂದು ವಿವರ ನೀಡಿದರು.
ರಾಜ್ಯದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳೆಯರು ಕೆಲಸ ಮಾಡಲು ಇದುವರೆಗೆ ಅವಕಾಶ ನೀಡಿರಲಿಲ್ಲ.ಆದರೆ ಇದರಿಂದ ಅವರಿಗೆ ಉದ್ಯೋಗಾವಕಾಶ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿರುವುದರಿಂದ ಕಾಯ್ದೆಗೆ ತಿದ್ದುಪಡಿ ಮಾಡಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇತ್ತು.ಈಗ ಅದಕ್ಕೆ ಅವಕಾಶ ನೀಡಿರುವುದರಿಂದ ಅವರಿಗೆ ಸುರಕ್ಷತೆ ನೀಡುವುದು ಹೇಗೆ?ಎಂಬುದೂ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದ ಯಾದಗಿರಿ ಸೇರಿದಂತೆ ನಾಲ್ಕು ಕಡೆ ರಕ್ತ ನಿಧಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದರು.ಇದೇ ರೀತಿ ಗುಡ್ಡಗಾಡು,ಆದಿವಾಸಿ ಜನರು ಹೆಚ್ಚಿರುವ ಜಿಲ್ಲೆಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ 20 ಸಂಚಾರಿ ಆರೋಗ್ಯ ಘಟಕಗಳನ್ನು ಸ್ಥಾಪಿಸಲು ಇಂದಿನ ಸಭೆ ತೀರ್ಮಾನಿಸಿದೆ ಎಂದು ಅವರು ಹೇಳಿದರು.
ಕೈಗಾರಿಕಾ ವಿವಾದ ಕಾಯ್ದೆಗೆ ತಿದ್ದುಪಡಿ ತಂದು ಪ್ರತಿ ಆರು ತಿಂಗಳಿಗೊಮ್ಮೆ ಲೈಸೆನ್ಸ್ ನವೀಕರಣ ಮಾಡಿಕೊಳ್ಳಬೇಕು ಎಂಬ ಅಂಶವನ್ನು ಮೂರು ವರ್ಷಗಳಿಗೆ ಎಂದು ಬದಲಿಸಲು ನಿರ್ಧರಿಸಲಾಗಿದೆ.ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ವಿವರ ನೀಡಲು ಸಿದ್ದತೆ ನಡೆದಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
