ವಿಜಯವಿಠಲ ದೇಗುಲ ಬಳಿ ಪತ್ತೆಯಾದ ವೃಂದಾವನ ರಾಯರ ಮಠದ ಪೂರ್ವಿಕ ಗುರುಗಳಾದ ಶ್ರೀಸುರೇಂದ್ರ ತೀರ್ಥರದ್ದೇ

ಹೊಸಪೇಟೆ:

      ವಿಶ್ವವಿಖ್ಯಾತ ಹಂಪಿಯ ವಿಜಯವಿಠಲ ದೇವಸ್ಥಾನ ಸಮೀಪದಲ್ಲಿನ ಮಂತ್ರಾಲಯ ರಾಯರ ಮಠದ ಪೂರ್ವಿಕ ಗುರಗಳಾದ ಶ್ರೀಸುರೇಂದ್ರ ತೀರ್ಥರ ವೃಂದಾವನ ಪತ್ತೆಯಾದ ಹಿನ್ನೆಲೆಯಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಭಾನುವಾರ ಹಂಪಿಗೆ ಭೇಟಿ ನೀಡಿ ಪರಿಶೀಲಿಸಿದರು.

       ಹಂಪಿಯ ವಿಜಯವಿಠಲ ದೇವಸ್ಥಾನದ ಸಮೀಪದಲ್ಲಿನ ಐತಿಹಾಸಿಕ ಶ್ರೀಸುರೇಂದ್ರ ತೀರ್ಥರ ಮಠದ ಸ್ಥಳಕ್ಕೆ ಶ್ರೀಗಳು ಆಗಮಿಸಿ ಪತ್ತೆಯಾದ ವೃಂದಾವನವನ್ನು ಪರಿಶೀಲಿಸಿದರು. ನಂತರ ವೃಂದಾವನ ಸುತ್ತಮುತ್ತಲಿನ ಪ್ರದೇಶದ ಮಂಟಪಗಳನ್ನು ವೀಕ್ಷಿಸಿದರು.

       ವೃಂದಾವನ ಪರಿಶೀಲಿಸಿದ ಬಳಿಕ ಶ್ರೀಸುರೇಂದ್ರ ತೀರ್ಥರಿಗೆ ವಿಜಯನಗರ ಸಾಮ್ರಾಜ್ಯದ ಅರಸ ರಾಮರಾಯ ನೀಡಿದ ತಾಮ್ರ ಶಾಸನ, ಹಲವು ದಾಖಲೆಗಳನ್ನು ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಯರ ಪೂರ್ವಿಗುರುಗಳಾದ ಶ್ರೀಸುರೇಂದ್ರ ತೀರ್ಥರ ವೃಂದಾವನ ಹಲವು ದಶಕಗಳಿಂದ ಪತ್ತೆಯಾಗಿದ್ದಿಲ್ಲ.

        ಆದರೆ ಭಾರತೀಯ ಪುರಾತತ್ವ ಹಾಗೂ ರಾಜ್ಯ ಪುರಾತತ್ವ ಕೈಗೊಂಡ ಉತ್ಖನನ ಸಂದರ್ಭದಲ್ಲಿ ಹಲವು ಕುರುಹುಗಳು ಪತ್ತೆಯಾಗಿದ್ದು ಅದರಲ್ಲಿ ವೃಂದಾವನವು ಇರುವುದು ಸಂತಸವನ್ನುಂಟುಮಾಡಿದೆ ಎಂದರು.

           ಶ್ರೀಸುರೇಂದ್ರ ತೀರ್ಥರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ಶ್ರೀವ್ಯಾಸರಾಜರ ಸಮಕಾಲೀನದಲ್ಲಿದ್ದವರು .ಶ್ರೀಸುರೇಂದ್ರ ತೀರ್ಥರಿಗೆ ವಿಜಯನಗರದ ಅರಸ ರಾಮರಾಯ ನೀಡಿದ ಹಲವು ಭೂಮಿಗಳು ಇಂದಿಗೂ ಶ್ರೀಮಠದ ಅಧೀನದಲ್ಲಿವೆ. ಜೊತೆಗೆ ಶ್ರೀಸುರೇಂದ್ರ ತೀರ್ಥರ ಮಠ, ವೃಂದಾವನದ ಬಗ್ಗೆ ಡಾ.ಇಂದಿರಾರವರು ಸಂಶೋಧನೆ ನಡೆಸಿದ ಮಹಾಪ್ರಬಂಧದಲ್ಲಿಯೂ ಹಲವು ದಾಖಲೆಗಳ ಬಗ್ಗೆ ಉಲ್ಲೇಖವಿದೆ. ಒಟ್ಟಿನಲ್ಲಿ ಹೇಳುವುದಾದರೆ ಶ್ರೀಸುರೇಂದ್ರ ತೀರ್ಥರ ಮಠದ ಆವರಣದಲ್ಲಿ ಪತ್ತೆಯಾಗಿರುವ ವೃಂದಾವನ ಶ್ರೀಸುರೇಂದ್ರ ತೀರ್ಥರದ್ದೇ ಎಂದು ಸ್ಪಷ್ಟಪಡಿಸಿದರು.

        ಪತ್ತೆಯಾಗಿರುವ ವೃಂದಾವನವೂ ಶ್ರೀಸುರೇಂದ್ರ ತೀರ್ಥರದ್ದೇ ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ. ಇದರ ಸಮೀಪದಲ್ಲಿ ಇವರ ಆಶ್ರಮ ಗುರುಗಳಾದ ಶ್ರೀರಘುನಂದನ ತೀರ್ಥರ ಮೂಲ ವೃಂದಾವನವಿದೆ. ಜೊತೆಗೆ ಇದೇ ಸ್ಥಳದಲ್ಲಿಯೇ ಶ್ರೀವ್ಯಾಸರಾಜರ ಶಿಷ್ಯರಾಗಿದ್ದ ಶ್ರೀವಿಷ್ಣುತೀರ್ಥರನ್ನು ಶ್ರೀಸುರೇಂದ್ರ ತೀರ್ಥರಿಗೆ ದತ್ತು ನೀಡಿ ಆಶ್ರಮವಿತ್ತ ಕುರುಹುಗಳಿವೆ ಎಂದು ವಿವರಿಸಿದರು.

       ಶ್ರೀಸುರೇಂದ್ರ ತೀರ್ಥರ ಮಠದ ಆವರಣದಲ್ಲಿ ಪತ್ತೆಯಾಗಿರುವ ವೃಂದಾವನಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಹಂಪಿಯು ಬಹಳಷ್ಟು ಪವಿತ್ರವಾದ ಸ್ಥಳವಾಗಿದೆ. ಇಲ್ಲಿ ಪುರಾತತ್ವ ಇಲಾಖೆಯ ನೀತಿ ನಿಯಮಗಳನ್ನು ಮೀರಿ ಯಾವುದೇ ರೀತಿ ಕಾರ್ಯಕ್ಕೆ ಶ್ರೀಮಠ ಮುಂದಾಗುವುದಿಲ್ಲ. ಇಲ್ಲಿನ ನೀತಿ, ನಿಯಮಗಳಂತೆ ನಡೆದುಕೊಂಡು ನಮ್ಮಲ್ಲಿನ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಿ ಇಲ್ಲಿ ವೃಂದಾವನ ಪುನರ್ ಪ್ರತಿಷ್ಠಾಪನೆ ಸೇರಿದಂತೆ ಪೂಜಾಕೈಂಕಾರ್ಯಗಳನ್ನು ನಡೆಸಲಾಗುವುದು.

           ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿರವರಿಗೂ ಪತ ಬರೆದು ದಾಖಲೆಗಳನ್ನು ಕಳುಹಿಸುತ್ತೇವೆ ಎಂದರು.ಶ್ರೀಮಠದ ಮಹಾಮುಖ್ಯೋಪಾಧ್ಯಾಯ ರಾಜಾ ಎಸ್. ಗಿರಿ ಆಚಾರ್ಯ, ಮಂತ್ರಾಲಯ ಸಂಸ್ಕತ ವಿದ್ಯಾಪೀಠದ ಡಾ.ಎನ್. ವಾದಿರಾಜಾಚಾರ್ಯ, ಶ್ರೀಮಠದ ಶಿಷ್ಯರಾದ ಗುರುರಾಜ್ ದಿಗ್ಗಾವಿ, ಅನಂತ ಪುರಾಣಿಕ್, ನಾಗರಾಜ್, ಮಂಜುನಾಥ್, ಡಣಾಪುರ ವಿಜಯಕುಮಾರ್, ಡಾ.ವಿದ್ಯಾಧರ್ ಕಿನ್ನಾಳ್, ವಿಷ್ಣುತೀರ್ಥ ಕಲ್ಲೂರಕರ್ ಮುಂತಾದವರು ಇದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link