ಜಗತ್ತಿಗೆ ಗಾಂಧಿಯವರ ತತ್ವದ ಅವಶ್ಯಕತೆ ತುಂಬಾ ಇದೆ..!

ಬೆಂಗಳೂರು

   ಜಗತ್ತಿನ ರಾಜಕೀಯ, ಸಾಮಾಜಿಕ ದೃಷ್ಟಿಕೋನದ ವಿಚಾರಗಳನ್ನು ಗಮನಿಸಿದಾಗ, ಇಡೀ ಜಗತ್ತಿಗೆ ಗಾಂಧಿಯವರ ಚಿಂತನೆ, ತತ್ವಗಳು ಅಗತ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

    ನಗರದಲ್ಲಿಂದು ಶೇಷಾದ್ರಿ ಪುರಂ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮ ದಿನದ ಅಂಗವಾಗಿ ’ಮತ್ತೆ ಮತ್ತೆ ಗಾಂಧಿ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಬುದ್ದ ಹಾಗೂ ಗಾಂಧಿ ಕುರಿತು ಬಂದಿರುವಷ್ಟು ಕೃತಿಗಳು ಇನ್ಯವಾ ಜಗತ್ತಿನ ವ್ಯಕ್ತಿಗಳ ಕುರಿತು ಬಂದಿಲ್ಲ ಎನ್ನುವುದು ಗಮನಾರ್ಹ ಎಂದು ಹೇಳಿದರು.

    ಸ್ವಾತಂತ್ರ್ಯ ಗಳಿಸಿ ಕೊಡುವುದರ ಜೊತೆಗೆ ದೇಶ ತಾಂಡವಾಡುತ್ತಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮಹಾತ್ಮ ಗಾಂಧೀಜಿ ನಡೆಸಿದ ಹೋರಾಟವನ್ನು ಅವರು ಸ್ಮರಿಸಿದರು.ಅಪಮಾನಗಳನ್ನು ಅನುಭವಿಸುತ್ತಿದ್ದ ರಾಷ್ಟ್ರಗಳು, ಹಿಂಸೆ ಅನುಭವಿಸುತ್ತಿರುವ ರಾಷ್ಟ್ರಗಳು ಗಾಂಧಿ ತತ್ವಗಳನ್ನು ಪಾಲಿಸುತ್ತಿದೆ. ಇದಕ್ಕೆ ಆಫ್ರಿಕಾ ಗಾಂಧಿ ಎಂದೇ ಖ್ಯಾತಿಯಾಗಿರುವ ನೆಲ್ಸನ್ ಮಂಡೇಲಾ ಸೇರಿದಂತೆ ಇನ್ನಿತರ ಹಲವಾರು ವ್ಯಕ್ತಿಗಳು ಉದಾಹರಣೆಗಳಾಗಿದ್ದಾರೆ ಎಂದರು.

     ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಮಾತನಾಡಿ, ಮಹಾತ್ಮಾ ಗಾಂಧೀಜಿ ಯವರ ವಿಚಾರಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಅವಶ್ಯಕವಾಗಿವೆ. ಗಾಂಧೀಜಿಯವರು ಸತ್ಯ, ಅಹಿಂಸೆಯ ಮಾರ್ಗವನ್ನೇ ಸ್ವಾತಂತ್ರ್ಯ ಚಳುವಳಿಗೆ ಅನುಸರಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಅತ್ಯಂತ ಸರಳತೆಯ ಜೀವನ ನಡೆಸಿದರು.

   ಪರಕೀಯರ ಮುಷ್ಟಿಯಲ್ಲಿದ್ದ ದೇಶಕ್ಕೆ ಸ್ವಾತಂತ್ರ್ಯ ಗಳಿಸುವುದು ಸುಲಭದ ಮಾತಾಗಿರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ಸತ್ಯಾಗ್ರಹದ ಮೂಲಕ, ಅಹಿಂಸೆಯ ಮಾರ್ಗದಲ್ಲಿ ಹೋರಾಟ ನಡೆಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಗಾಂಧೀಜಿಯವರು ಎಂದು ಬಣ್ಣಿಸಿದರು.ಇದೇ ಸಂದರ್ಭದಲ್ಲಿ ಕವಿಗಳಾದ ಡಾ.ಟಿ.ಯಲ್ಲಪ್ಪ, ಡಾ.ರವಿಕುಮರ್ ನೀಹಾ ಸೇರಿದಂತೆ ಪ್ರಮುಖರು ಗಾಂಧಿ ವಿಚಾರಗಳನ್ನು ಪ್ರಸ್ತುತಪಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link