ಸ್ಮಾರ್ಟ್ ಸಿಟಿ ಹಣ ಕೋಟಿ, ಕೋಟಿ ಲೂಟಿ

ದಾವಣಗೆರೆ:

    ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದಲ್ಲಿ ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ಕೈಗೊಳ್ಳುವ ಮೂಲಕ ಕೋಟ್ಯಂತರ ರೂ. ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್ ದೇವರಮನೆ ಆರೋಪಿಸಿದ್ದಾರೆ.

     ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀಯ ಸಂಘ ಸಂಸ್ಥೆಗಳ ಜೊತೆಯಲ್ಲಿ ಚರ್ಚಿಸದೇ, ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳು ತಮ್ಮ ಮನಸ್ಸಿಗೆ ಬದ್ದಂತೆ ಕಾಮಗಾರಿ ಕೈಗೊಂಡು, ಅವೈಜ್ಞಾನಿಕವಾಗಿ ಕಳಪೆ ಕಾಮಗಾರಿ ಮಾಡುವುದಲ್ಲದೇ, ಜನರಿಗೆ ಅವಶ್ಯಕತೆಯೇ ಇಲ್ಲದ ಹಲವು ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಸುಂದರ ದಾವಣಗೆರೆ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಕೋಟ್ಯಂತರ ರೂ.ಗಳನ್ನು ಲೂಟಿ ಹೊಡೆಯುತ್ತಿದ್ದಾರೆಂದು ದೂರಿದರು.

      ಸ್ಥಳೀಯ ಅರ್ಹ ಗುತ್ತಿಗೆದಾರರಿಗೂ ಕಾಮಗಾರಿಗಳ ಗುತ್ತಿಗೆ ನೀಡದ ಅಧಿಕಾರಿಗಳು, ದಾವಣಗೆರೆಯ ಬಗ್ಗೆ ಪರಿವೇ ಇಲ್ಲದ ಬಹುರಾಷ್ಟ್ರೀಯ ಕಂಪನಿಗಳಿಗೆ ಗುತ್ತಿಗೆ ನೀಡುತ್ತಿದ್ದಾರೆ. ಹೀಗಾಗಿ ಜನರಿಗೆ ಅವಶ್ಯಕವಾಗಿ ಬೇಕಾಗಿರುವ ಕಾಮಗಾರಿಗಳು ನಡೆಯುತ್ತಿಲ್ಲ ಎಂದು ಆಪಾದಿಸಿದ ಅವರು, ಕಾಮಗಾರಿ ಆರಂಭಿಸಿದ ಆರು ತಿಂಗಳಲ್ಲಿಯೇ ಕಾಮಗಾರಿ ಪೂರ್ಣಗೊಳಿಸಬೇಕೆಂಬ ನಿಯಮವಿದೆ.

      ಆದರೆ, ಮಂಡಿಪೇಟೆ, ಚೌಕಿಪೇಟೆ ಸೇರಿದಂತೆ ಇತರೆ ಭಾಗಗಳಲ್ಲಿ ಕಾಮಗಾರಿ ಆರಂಭವಾಗಿ ಸುಮಾರು ಎರಡೂ ವರ್ಷ ಕಳೆದರೂ ಸಹ ಇನ್ನೂ ಅವು ಮುಕ್ತಾಯದ ಹಂತ ತಲುಪಿಲ್ಲ. ಹೀಗಾಗಿ ಆ ಭಾಗದಲ್ಲಿ ವ್ಯಾಪಾರ-ವಹಿವಾಟು ನಡೆಯದೇ, ಸಣ್ಣ-ಪುಟ್ಟ ವ್ಯಾಪಾರಿಗಳ ಪರಿಸ್ಥಿತಿ ಅತ್ಯಂತ ದುಸ್ತರಗೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಅರಣ್ಯ ಇಲಾಖೆಯು ಬೇಕಾದಷ್ಟು ಗಿಡಗಳನ್ನು ಪೂರೈಸಲು ಸಿದ್ಧರಿದ್ದರೂ ಸಹ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಗಿಡ ನೆಡಲು 3 ಕೋಟಿ ರೂ. ಮೊತ್ತದ ಟೆಂಡರ್ ನೀಡಿದೆ. ಇದರ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ವಿದೇಶದಿಂದ ಆರೇಳು ಅಡಿ ಎತ್ತರದ ಗಿಡ ತಂದು ನೆಡಲಿದ್ದಾ ರಂತೆ , ದಾವಣಗೆರೆಯ ಹಳೇ ಭಾಗದಲ್ಲಿ ಕಿಷ್ಕಿಂದೆಯಂತಹ ರಸ್ತೆಗಳಿವೆ. ಅಲ್ಲದೇ, ಎಲ್ಲೂ ಸಹ ಪಾದಚಾರಿ ರಸ್ತೆ ಇಲ್ಲ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಇವರು ನೆಡುವ ಗಿಡಗಳ ಪ್ರಯೋಜನ ಮುಂದೆ ಸಾರ್ವಜನಿಕರಿಗೆ ಆಗಲಿದೆಯೇ ಎಂಬ ಮಾಹಿತಿಯೂ ಇವರಿಗೆ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಕುಂದುವಾಡ ಕೆರೆಯ ಬಳಿಯಲ್ಲಿ ಸೈಕ್ಲಿಂಗ್ ಪಾತ್ ನಿರ್ಮಿಸಲು 3.75 ಕೋಟಿ ರೂ. ಮೊತ್ತದ ಟೆಂಡರ್ ನೀಡಲಾಗಿದೆ. ಆದರೆ, ಇದೇ ಅನುದಾನದಲ್ಲಿ ಕೆರೆಯ ಸುತ್ತಲೂ ಇರುವ ರಸ್ತೆಯನ್ನು ಅಭಿವೃದ್ಧಿ ಪಡಿಸಿ, ವಾಯು ವಿಹಾರಿಗಳಿಗೂ, ಸೈಕಲ್ ಸವಾರರಿಗೂ ಅನುಕೂಲ ಮಾಡಿಕೊಡಬಹುದಿತ್ತು. ಆದರೆ, ಸ್ಪಷ್ಟ ಗುರಿಯೇ ಇಲ್ಲದ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಕಾಮಗಾರಿಗಳನ್ನು ನಡೆಸುವ ಮೂಲಕ ಸ್ಮಾರ್ಟ್ ಸಿಟಿ ಅನುದಾನವನ್ನು ಲೂಟಿ ಹೊಡೆಯುತ್ತಿದ್ದಾರೆಂದು ಆರೋಪಿಸಿದರು.

         ನಗರದಲ್ಲಿ ಒಟ್ಟು 125 ಉದ್ಯಾನಗಳಿವೆ. ಆದರೆ, ಅವುಗಳನ್ನು ಅಭಿವೃದ್ಧಿ ಪಡಿಸಿ ಹಸಿರೀಕರಣಕ್ಕೆ ಒತ್ತು ನೀಡಬೇಕಾದ ಅಧಿಕಾರಿಗಳು, ಅವುಗಳನ್ನು ಕಾಯಲು ಕಾವಲುಗಾರರು ಇಲ್ಲದಿದ್ದರೂ, ಪಾರ್ಕ್‍ಗಳಲ್ಲಿ ಇ-ಟಾಯಲೆಟ್, ಜಿಮ್ ನಿರ್ಮಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಆದರೆ, ಆ ಪಾರ್ಕ್‍ಗಳ ಅಭಿವೃದ್ಧಿಗೆ ಯಾವುದೇ ಯೋಜನೆ ರೂಪಿಸಿಲ್ಲ ಎಂದು ದೂರಿದರು.

       ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸುತ್ತಿರುವ ಒಳ ಚರಂಡಿ ವ್ಯವಸ್ಥೆಯೂ ಅವೈಜ್ಞಾನಿಕವಾಗಿ ಕೂಡಿದೆ. ಇಂಗು ಗುಂಡಿಗಳು ಸಹ ಸರಿ ಇಲ್ಲ. ರಸ್ತೆಗಳೂ ಸಹ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿವೆ. ಆದರೆ, ಮಾತು, ಮಾತಿಗೂ ಸ್ಮಾರ್ಟ್ ಸಿಟಿ ದಾವಣಗೆರೆಗೆ ಬರಲು ನಾನು ಕಾರಣ ಏನುತ್ತಿರುವ ಸಂಸದ ಜಿ.ಎಂ.ಸಿದ್ದೇಶ್ವರ ಈ ಯೋಜನೆಗಳನ್ನು ಪರಿಶೀಲಿಸದೇ ಏನು ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.

         ಇನ್ನೂ ಮುಂದಾದರೂ ಎಚ್ಚೆತ್ತು ಸ್ಮಾರ್ಟ್‍ಸಿಟಿ ಅಧಿಕಾರಿಗಳು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಚರ್ಚೆ ನಡೆಸಿ, ನಗರಕ್ಕೆ ಅವಶ್ಯಕವಾಗಿ ಬೇಕಾಗಿರುವ ಯೋಜನೆಗಳನ್ನು ರೂಪಿಸಿ, ಗುಣಮಟ್ಟದ ಕಾಮಗಾರಿಗಳಾಗುವಂತೆ ಗಮನ ಹರಿಸಬೇಕು. ಇಲ್ಲದಿದ್ದರೆ, ಮುಂದೆ ಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಕೆ.ಟಿ.ಗೋಪಾಲಗೌಡ, ಜನಸಾಮಾನ್ಯರ ಸೇವಾ ಸಂಸ್ಥೆಯ ಪ್ರಸನ್ನ ಬೆಳೆಕೇರೆ, ಕರ್ನಾಟಕ ಮಕ್ಕಳ ಅಕಾಡೆಮಿಯ ಹನುಮಂತಪ್ಪ ಆರ್.ಬಿ, ರಾಘವೇಂದ್ರ ಬಿ.ಎಸ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap