ಹೊಸಪೇಟೆ:
ರಾಜ್ಯದಲ್ಲಿನ ಶಿಕ್ಷಣದ ವ್ಯವಸ್ಥೆ ಬದಲಾಗಬೇಕು ಎಂದು ಹಿರಿಯ ಗಮಕ ಕಲಾವಿದ ರಂಗೋಪಂತ ನಾಗರಾಜರಾಯರು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಶನಿವಾರ ಮಾತನಾಡಿದರು.
ರಾಜ್ಯದಲ್ಲಿ ಕನ್ನಡ ಭಾಷೆ ಮೊದಲ ಆದ್ಯತೆಯಾಗಬೇಕು. ನಂತರ ಅನ್ಯ ಭಾಷೆಗಳಿಗೆ ಪ್ರಾಶ್ಯಸ್ತ ನೀಡಬೇಕು. ಇತರೆ ಭಾಷೆಗಳು ಕನ್ನಡಿಗರಿಗೆ ಐಚ್ಛಿಕವಾಗಬೇಕು. ಹಾಗಂತ ಬೇರೆ ಭಾಷೆಗಳನ್ನು ದ್ವೇಷಿಸುವುದು ಬೇಡ ಎಂದು ಹೇಳಿದರು.ಕನ್ನಡದ ಬೆಳವಣಿಗೆ ಇಷ್ಟಕ್ಕೆ ಸಾಲದು. ಅದಕ್ಕಿಂತ ಮೊದಲು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಅಗತ್ಯವಿದೆ. ಶುದ್ಧ ಕನ್ನಡ ಇಲ್ಲದಂತಾಗಿದೆ. ಪ್ರಸ್ತುತ ವ್ಯಾಕ್ಯಾರಣದ ಬಗ್ಗೆ ಅರಿವಿಲ್ಲದಂತಾಗಿದೆ. ದೀರ್ಘ ಹೃಸ್ವಗಳೆಂದರೆ ತಿಳಿದಿಲ್ಲ. ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಭಾಷೆ ಶುದ್ಧಿಗಾಗಿ ಒತ್ತು ನೀಡಬೇಕು ಎಂದರು.
ತಾಯಿಯ ಎದೆಹಾಲಿನಷ್ಟೇ ಮಾತೃಭಾಷೆಯ ಶಕ್ತಿಯೂ ಹೆಚ್ಚು ಪುಷ್ಟಿದಾಯಕವಾದದ್ದು. ಈ ಅರಿವು ನಮ್ಮ ಯುವಪೀಳಿಗೆಗೆ ಆಗಬೇಕು. ಕುವೆಂಪು ರಾಷ್ಟ್ರಕವಿ ಆದದ್ದು ತಾಯಿಭಾಷೆ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದರಿಂದ. ತಾಯಿನಾಡಿನ ಭಕ್ತಿಯಲ್ಲಿ ಬೆರೆತ ಪರಿಣಾಮ ಜ್ಞಾನಪೀಠ ಪ್ರಶಸ್ತಿ ಹೊಡಕಿಕೊಂಡು ಬಂತು ಎಂದು ಹೇಳಿದರು.
ಸ್ವಚ್ಛ ಕನ್ನಡದ ಉಚ್ಚಾರದ ಕಡೆಗೆ ಹೆಚ್ಚು ಲಕ್ಷ್ಯ ವಹಿಸಿ ಪಠ್ಯಪುಸ್ತಕಗಳ ಜತೆಗೆ ಉತ್ತಮ ಸಾಹಿತಿಗಳ ಸಾಹಿತ್ಯ ಕೃತ್ಯಗಳನ್ನು ಓದುವ ಅಭಿರುಚಿ ಬೆಳೆಸಬೇಕು. ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕನ್ನಡವನ್ನು ತಪ್ಪು ತಪ್ಪಾಗಿ ಬಿತ್ತರಿಸಲಾಗುತ್ತಿದೆ. ಅದರ ನೇರ ಪರಿಣಾಮ ಹೊಸ ತಲೆಮಾರಿನ ಮೇಲೆ ಬೀಳುತ್ತಿದೆ. ಅಂತಹ ಕೆಲಸವಾಗದಂತೆ ನೋಡಿಕೊಳ್ಳಬೇಕು. ಅದೇ ಕನ್ನಡ ಭಾಷೆಗೆ ಸಲ್ಲಿಸುವ ಬಹುದೊಡ್ಡ ಗೌರವ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸಾಹಿತ್ಯದಲ್ಲಿ ಜನರ ಬದುಕು, ಸಂತಸ ಸಂಭ್ರಮಗಳಿಂದ ಕೂಡಿದೆ. ಈ ಹಿಂದೆ ಗ್ರಾಮೀಣ ಜನರು ಕುಟ್ಟುವಾಗ, ಬೀಸುವಾಗ, ಉಳುಮೆ ಮಾಡುವಾಗ ಜನಪದ ಹಾಡುಗಳನ್ನು ನೋಡಬಹುದು. ಬಾಯಿಂದ ಬಾಯಿಗೆ ಬಂದ ಜನಪದ ಸಾಹಿತ್ಯ ನಮ್ಮ ನಡುವೆಯಿಂದ ದೂರವಾಗುತ್ತಿದೆ. ನಮ್ಮ ಜಾನಪದ ಕಲೆಗಳು, ಸಂಪ್ರದಾಯ, ಆಚರಣೆಗಳನ್ನು ಮರೆಯುತ್ತಿರುವುದು ದುರದೃಷ್ಟಕರ ಎಂದರು.
ಹಿರಿಯ ಸಾಹಿತಿ ಮೃತ್ಯುಂಜಯ ರುಮಾಲೆ ಮಾತನಾಡಿ, 1920ರಲ್ಲಿ ಇಂದಿನ ಬಳ್ಳಾರಿ ಜಿಲ್ಲೆ ಆಂಧ್ರದ ಎರಡು ಜಿಲ್ಲೆಗಳನ್ನು ಒಳಗೊಂಡಂತೆ ವಿಶಾಲವಾದ ಜಿಲ್ಲೆಯಾಗಿತ್ತು. ಅಂದು ಆಡಳಿತ ತಮಿಳಿನಲ್ಲಿ, ಕಚೇರಿ ಕೆಲಸಗಳು ತೆಲುಗು ಭಾಷೆಯಲ್ಲಿ ನಡೆಯುತ್ತಿದ್ದವು. ಇಂತಹ ಸಂದರ್ಭದಲ್ಲಿ ಹೊಸಪೇಟೆ ಚಿತ್ತವಾಡ್ಗಿಯ ಹನುಮಂತಗೌಡ ಎಂಬುವರು ಮೊದಲ ಬಾರಿಗೆ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದರು ಎಂದು ನೆನಪಿಸಿದರು.
ಲೇಖಕ ದಯಾನಂದ ಕಿನ್ನಾಳ್ ಅವರ ಬಾಳಬುತ್ತಿ ಕೃತಿ ಬಿಡುಗಡೆಗೊಳಿಸಲಾಯಿತು. ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ, ತಾಲೂಕಾಧ್ಯಕ್ಷ ಡಾ.ಎತ್ನಳ್ಳಿ ಮಲ್ಲಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಜೋಗದ ನೀಲಮ್ಮ, ಮುಖಂಡರಾದ ಧಮೇರ್ಂದ್ರ ಸಿಂಗ್, ಕೆ.ಎಂ. ಹಾಲಪ್ಪ, ಗೊಗ್ಗ ಚನ್ನಬಸವರಾಜ, ಜಂಬಾನಹಳ್ಳಿ ಪರಶುರಾಮಪ್ಪ, ಅಮಾಜಿ ಹೇಮಣ್ಣ, ಕೆ. ಬಸವರಾಜ, ಮಧುರಚೆನ್ನಶಾಸ್ತ್ರಿ, ಪತ್ರಕರ್ತ ಹುಡೇಂ ಕೃಷ್ಣಮೂರ್ತಿ, ಎಚ್.ಎಂ. ಜಂಬುನಾಥ ಇದ್ದರು. ಅಂಜಲಿ ಭರತನಾಟ್ಯ ಕಲಾವಿದರ ತಂಡ ಸಮೂಹ ನೃತ್ಯ ಪ್ರಸ್ತುತಪಡಿಸಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







