ಸೀಲ್‍ಡೌನ್ ಪ್ರದೇಶಕ್ಕೆ ಸರ್ಕಾರ ನೆರವು ನೀಡಿಲ್ಲ: ಮೇಯರ್ ಆರೋಪ

ತುಮಕೂರು

     ತುಮಕೂರು ನಗರ ಪಾಲಿಕೆ ಈ ವರ್ಷ ಆಸ್ತಿ ತೆರಿಗೆಯನ್ನು ಶೇಕಡ 15ರಷ್ಟು ಹೆಚ್ಚು ಮಾಡಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರ ಮೇಲೆ ಹೊರೆ ಹೊರಿಸಿದೆ ಎನ್ನುವ ಬೇಸರದ ನಡುವೆ, ಸರ್ಕಾರ ಮುಂದಿನ ಎರಡು ತಿಂಗಳವರೆಗೆ ಆಸ್ತಿ ತೆರಿಗೆಯಲ್ಲಿ ಶೇಕಡ 5ರಷ್ಟು ರಿಯಾಯಿತಿ ಪ್ರಕಟಿಸಿದೆ.

      ನಗರ ಪಾಲಿಕೆ ಮೇಯರ್ ಫರೀದಾ ಬೇಗಂ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿ, ಕೊರೊನಾ ಸೋಂಕು, ಲಾಕ್‍ಡೌನ್ ಸಂದರ್ಭದಲ್ಲಿ ವ್ಯವಹಾರ ವಹಿವಾಟು ಇಲ್ಲದೆ ಆದಾಯವಿಲ್ಲದೆ ನಾಗರೀಕರು ಕಷ್ಟದಲ್ಲಿದ್ದು, ಅವರಿಗೆ ಸಹಾಯವಾಗುವ ರೀತಿ ನೆರವಾಗುವಂತೆ ತಾವು ಸರ್ಕಾರವನ್ನು ಕೋರಿದ್ದು, ಇದಕ್ಕೆ ಸ್ಪಂದಿಸಿ, ತೆರಿಗೆಗೆ ಶೇಕಡ 5ರಷ್ಟು ರಿಯಾಯಿತಿ ನೀಡಿ, ಪಾವತಿಸಲು ಎರಡು ತಿಂಗಳ ಅವಧಿ ವಿಸ್ತರಣೆ ಮಾಡಿ, ಜುಲೈ 31ರವರೆಗೆ ಅವಕಾಶ ನೀಡಿದೆ ಎಂದರು.

      ತೆರಿಗೆ ಹೆಚ್ಚಳ ನಗರ ಪಾಲಿಕೆಯ ತೀರ್ಮಾನವಾಗಿದ್ದರೂ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಬೇಕಾಗಿದೆ. ನಿಯಮದ ಪ್ರಕಾರ ಸ್ಥಳೀಯ ಸಂಸ್ಥೆಗಳು ಪ್ರತಿ ಮೂರು ವರ್ಷಕ್ಕೊಮ್ಮೆ ತೆರಿಗೆಯನ್ನು ಶೇಕಡ 5ರಷ್ಟು ಹೆಚ್ಚು ಮಾಡಬೇಕು. ಈ ಕ್ರಮವಾಗಿ ಈಗ ಪಾಲಿಕೆಯಲ್ಲಿ ಶೇಕಡ 15ರಷ್ಟು ತೆರಿಗೆ ಹೆಚ್ಚಳ ಮಾಡಬೇಕಾಗಿ ಬಂದಿದೆ, ನಾಗರೀಕರು ಸಹಕರಿಸಬೇಕು ಹಾಗೂ ಸರ್ಕಾರ ನೀಡಿರುವ ತೆರಿಗೆ ರಿಯಾಯಿತಿ ಬಳಸಿಕೊಂಡು ವಿಸ್ತರಿತ ಅವಧಿಯೊಳಗೆ ಪಾವತಿಸುವಂತೆ ಮನವಿ ಮಾಡಿದರು.

    ಲಾಕ್‍ಡೌನ್ ಕಾರಣದಿಂದ ತೆರಿಗೆ ವಿಚಾರವಾಗಿ ಚರ್ಚೆ ನಡೆಸಲು ತಮ್ಮ ಅವಧಿಯಲ್ಲಿ ಸಾಮಾನ್ಯ ಸಭೆ ನಡೆಸಲು ಅವಕಾಶವೇ ದೊರೆಯಲಿಲ್ಲ. ಈ ಮಧ್ಯೆ, ಇತ್ತೀಚಿನ ಆಯವ್ಯಯ ಸಭೆಯಲ್ಲಿ ಹಲವು ಸದಸ್ಯರು ತೆರಿಗೆ ಹೆಚ್ಚಳಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕೊರೊನಾ ಸೋಂಕಿನ ಕಷ್ಟ ಕಾಲದಲ್ಲಿ ನಾಗರಿಕರಿಗೆ ತೆರಿಗೆ ಹೊರೆ ತಪ್ಪಿಸಲು ಈ ವರ್ಷ ಹಿಂದಿನ ತೆರಿಗೆ ದರವನ್ನೇ ಮುಂದುವರೆಸುವಂತೆ ಕೋರಿದರು. ಸಭೆಯಲ್ಲಿ ಹಾಜರಿದ್ದ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು ಕೋರಿಕೆ ಸಲ್ಲಿಸಲು ಸಲಹೆ ಮಾಡಿದ್ದರು. ಈ ಎಲ್ಲದರ ಪ್ರಯತ್ನದಿಂದ ಸರ್ಕಾರ ತೆರಿಗೆಯಲ್ಲಿ ರಿಯಾಯಿತಿ ನೀಡಿ, ಪಾವತಿಸಲು ಎರಡು ತಿಂಗಳ ಅವಧಿ ವಿಸ್ತರಿದೆ ಎಂದು ಫರೀದಾ ಬೇಗಂ ಹೇಳಿದರು.

      ಕೊರೊನ ಸೋಂಕು ಪ್ರಕರಣ ಕಾಣಿಸಿಕೊಂಡ ನಗರದ ಕೆಲವು ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ಪಾಲಿಕೆಯ ಆರೋಗ್ಯ ಹಾಗೂ ಕಂದಾಯ ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ನಗರ ಪಾಲಿಕೆಯ ನಿಯಮಿತ ಕೆಲಸ ಕಾರ್ಯಗಳಿಗೆ ಅನಾನುಕೂಲವಾಗಿದೆ. ಆದರೂ ಕೊರೊನಾ ಸಂಬಂಧಿಸಿದ ಸೇವಾ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಬೇಕಾಗಿದೆ ಎಂದರು.

      ಸೀಲ್‍ಡೌನ್ ಪ್ರದೇಶಗಳಲ್ಲಿ ಅಲ್ಲಿನ ನಿವಾಸಿಗಳು ಅಲ್ಲಿಂದ ಹೊರ ಹೋಗುವಂತಿಲ್ಲ, ಹೊರಗಿನವರು ಆ ಪ್ರದೇಶಕ್ಕೆ ಹೋಗದಂತೆ ನಿರ್ಬಂಧಿಸಲಾಗಿದೆ. ಆದರೆ, ಅಲ್ಲಿನ ನಿವಾಸಿಗಳ ನಿತ್ಯದ ಅಗತ್ಯ ಪದಾರ್ಥಗಳನ್ನು ಸರ್ಕಾರ ಮನೆ ಬಾಗಿಲಿಗೆ ಒದಗಿಸಬೇಕಾಗಿತ್ತು. ಆ ಕೆಲಸ ಆಗಿಲ್ಲ. ಸೀಲ್‍ಡೌನ್ ಪ್ರದೇಶಗಳ ಬಿಪಿಎಲ್ ಕಾರ್ಡುದಾರರಿಗೆ ಪಡಿತರ ಧಾನ್ಯ ವಿತರಿಸಿದ್ದು ಬಿಟ್ಟರೆ, ಸರ್ಕಾರದಿಂದ ಐದು ಪೈಸೆಯನ್ನೂ ಕೊಟ್ಟಿಲ್ಲ. ಕೆಲಸವಿಲ್ಲದೆ, ಆದಾಯವಿಲ್ಲದೆ ಜನ ಹೇಗೆ ತಮ್ಮ ಕುಟುಂಬ ನಿರ್ವಹಣೆ ಮಾಡಿಕೊಳ್ಳಬೇಕು. ಈ ಬಗ್ಗೆ ತಾವು ಜಿಲ್ಲಾದಿಕಾರಿಗಳನ್ನು ಕೇಳಿದ್ದಕ್ಕೆ ಅವರು, ಈ ಬಗ್ಗೆ ಸರ್ಕಾರದಿಂದ ತಮಗೆ ಯಾವುದೇ ನಿರ್ದೇನ ಬಂದಿಲ್ಲ ಎಂದರು. ಹೀಗಾದರೆ ಜನ ಅಲ್ಲಿ ಹೇಗೆ ಬದುಕಬೇಕು? ನಗರ ಪಾಲಿಕೆ ಸದಸ್ಯರು ಹಾಗೂ ಕೆಲವು ದಾನಿಗಳು ಆಹಾರ, ಆಹಾರ ಧಾನ್ಯ ವಿತರಿಸಿ ನೆರವಾಗಿದ್ದಾರೆ, ಇಲ್ಲದಿದ್ದರೆ, ಪರಿಸ್ಥಿತಿ ಇನ್ನಷ್ಟು ಭೀಕರವಾಗುತ್ತಿತ್ತು ಎಂದು ಫರೀದಾ ಬೇಗಂ ಹೇಳಿದರು.

ಆಯುಕ್ತರು ಕಚೇರಿಯಲ್ಲಿ ಸಿಗುತ್ತಿಲ್ಲ

      ಕೊರೊನಾ ಸೋಂಕಿನ ಕಾಲದಲ್ಲಿ ಆಡಳಿತಾತ್ಮಕವಾಗಿ ಕೆಲವು ತುರ್ತು ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿರುತ್ತದೆ. ಆದರೆ, ಪಾಲಿಕೆ ಆಯುಕ್ತರಾದ ಭೂಬಾಲನ್ ಅವರು ಪಾಲಿಕೆ ಕಚೇರಿಗೆ ನಿಯಮಿತವಾಗಿ ಬರುತ್ತಿಲ್ಲ. ಸ್ಮಾರ್ಟ್ ಸಿಟಿ ಲಿಮಿಟೆಡ್ ಕಚೇರಿಯಲ್ಲಿರುತ್ತಾರೆ. ಇದರಿಂದ ಆಡಳಿತಕ್ಕೂ ಸಮಸ್ಯೆಯಾಗಿದೆ. ಜೊತೆಗೆ ಅವರನ್ನು ಭೇಟಿ ಮಾಡಲು ಬರುವ ಸಾರ್ವಜನಿಕರಿಗೂ ತೊಂದರೆಯಾಗಿದೆ. ಕೆಲ ಬಾರಿ ಅಧಿಕಾರಿಗಳು ಸ್ಪಂದಿಸುವುದಿಲ್ಲ, ಕೊರೊನಾ ನಿಯಂತ್ರಣ ಕಾರ್ಯದಲ್ಲಿದ್ದೇವೆ ಎನ್ನುತ್ತಾರೆ. ಈ ಬಗ್ಗೆ ಆಯುಕ್ತರಿಗೆ ಫೋನ್ ಮಾಡಿದರೆ ಅವರು ರಿಸೀವ್ ಮಾಡುವುದಿಲ್ಲ. ಮೊನ್ನೆ ಅವರ ಎರಡೂ ಮೊಬೈಲ್‍ಗೆ ಕರೆ ಮಾಡಿದೆ ಸ್ವೀಕರಿಸಲಿಲ್ಲ, ನಂತರ ಜಿಲ್ಲಾಧಿಕಾರಿಗಳಿಗೆ ಫೋನ್ ಮಾಡಿದೆ, ಅವರು ಒಂದೇ ರಿಂಗ್‍ಗೆ ರಿಸೀವ್ ಮಾಡಿದರು ಎಂದರು.

      ಮೇಯರ್ ಹಾಗೂ ಆಯುಕ್ತರು ಆಡಳಿತ ವ್ಯವಸ್ಥೆಯ ಎರಡು ಸ್ತಂಬಗಳು. ಇಬ್ಬರೂ ಸಮಾನವಾಗಿ ಸ್ಪಂದಿಸಿಕೊಂಡು ಹೋದರೆ ಆಡಳಿತ ಸುಗಮವಾಗಿ ನಡೆಯುತ್ತದೆ. ಕೈ ಕೆಳಗಿನ ಅಧಿಕಾರಿಗಳು ನಿಯಂತ್ರಣಕ್ಕೆ ಬಂದು ಕೆಲಸ ಮಾಡುತ್ತಾರೆ. ಈ ತಿಂಗಳ 31ರಂದು ಪ್ರಧಾನಿ ಮೋದಿಯವರು ಲಾಕ್‍ಡೌನ್ ಬಗ್ಗೆ ಯಾವ ಮಾರ್ಗಸೂಚಿ ಪ್ರಕಟಿಸುತ್ತಾರೋ ನೋಡಿಕೊಂಡು, ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ತಾವು ನಿರ್ಧಾಕ್ಷಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಮೇಯರ್ ಫರೀದಾ ಬೇಗಂ ಎಚ್ಚರಿಕೆ ನೀಡಿದರು.

     ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಎಂ.ಮಹೇಶ್, ಸದಸ್ಯರಾದ ಮಲ್ಲಿಕಾರ್ಜುನ್, ಜೆ.ಕುಮಾರ್, ಅಕ್ಷ್ಮೀನರಸಿಂಹರಾಜು, ಇನಾಯತ್ ಉಲ್ಲಾಖಾನ್, ವಿಷ್ಣುವರ್ಧನ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap