ತುಮಕೂರು : ಮುಂದಾಲೋಚನೆ ಇಲ್ಲದ ರಿಂಗ್‍ರಸ್ತೆ ಕಾಮಗಾರಿ

ತುಮಕೂರು

ವಿಶೇಷ ವರದಿ :ರಾಕೇಶ್.ವಿ.

      ಸ್ಮಾರ್ಟ್ ಸಿಟಿ ಕಂಪನಿ ವತಿಯಿಂದ ನಗರದಲ್ಲಿ 10.54 ಕಿಮೀ ಉದ್ದದಲ್ಲಿ ಫೆರಿಫೆರಲ್ ರಿಂಗ್ ರಸ್ತೆಯನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕೆ ಬರೊಬ್ಬರಿ 84 ಕೋಟಿ ರೂಗಳನ್ನು ಖರ್ಚು ಮಾಡಲಾಗುತ್ತಿದೆ. ಆದರೆ ಇದರಿಂದ ಮುಂದೆ ಬರುವ ಸಮಸ್ಯೆಗಳ ಬಗ್ಗೆ ಆಲೋಚನೆಯೇ ಮಾಡಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ.

      ಈ ಹಿಂದೆ ರಿಂಗ್‍ರಸ್ತೆಯೂ ತುಂಬಾನೆ ಹದಗೆಟ್ಟಿತ್ತು. ಸರಿಯಾದ ರಸ್ತೆ ಇರಲಿಲ್ಲ. ಇದ್ದ ರಸ್ತೆಯು ಸಂಪೂರ್ಣ ಹಾಳಾಗಿತ್ತು. ಗುಂಡೆ ಗುದರಗಳಿಂದ ತುಂಬಿತ್ತು. ಮಳೆ ಬಂದರೆ ರಸ್ತೆ ಎಲ್ಲಿದೆ ಹಳ್ಳಿ ಎಲ್ಲಿದೆ ಎಂಬುದು ತಿಳಿಯದಾಗಿತ್ತು. ರಸ್ತೆಯ ಪಕ್ಕದ ಅಲ್ಲಲ್ಲಿ ಬೆಳಕಿನ ಸೌಲಭ್ಯ ಇಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿತ್ತು. ಈ ರಸ್ತೆಯನ್ನು ಸ್ಮಾರ್ಟ್ ಸಿಟಿಯವರು ಚತುಷ್ಟಥರಸ್ತೆಯನ್ನಾಗಿ ಅಭಿವೃದ್ಧಿ ಮಾಡುತ್ತಿರುವುದು ಒಳ್ಳೆಯ ವಿಚಾರವೇ ಆದರೂ ಇದರಿಂದ ಆಗುವ ಉಪಯೋಗ, ಅನುಪಯೋಗಗಳನ್ನು ಚರ್ಚಿಸಿದರೆ ತುಂಬಾನೆ ಸಮಸ್ಯೆಗಳು ಎದುರಾಗಲಿವೆ.

     ರಿಂಗ್‍ರಸ್ತೆ ಎಂದರೆ ನಗರದ ಮುಖ್ಯರಸ್ತೆಗೆ ಪರ್ಯಾಯವಾಗಿ ಬೃಹತ್‍ವಾಹನಗಳು ನಗರದೊಳಗೆ ಬಾರದಂತೆ ವರ್ತುಲ ರಸ್ತೆಯಲ್ಲಿ ಹಾದುಹೋಗಲಿ ಎಂಬ ಕಾರಣಕ್ಕೆ ನಿರ್ಮಾಣ ಮಾಡಿದಂತಹ ರಸ್ತೆ. ಈ ರಸ್ತೆಯು ಮುಂದೊಂದು ದಿನ ನಗರಕ್ಕೆ ಸೇರಿಕೊಂಡರೂ ಆಶ್ಚರ್ಯವೇನಿಲ್ಲ. ಈ ರಸ್ತೆಯಲ್ಲಿ ದಿನೆ ದಿನೆ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ಇದರ ನಡುವೆ ಅಕ್ಕಪಕ್ಕದ ಬಡಾವಣೆಗಳು, ಸೇರಿದಂತೆ ವಿವಿಧ ವಾರ್ಡುಗಳಿಗೆ ಪ್ರವೇಶಿಸಲು ಈ ರಸ್ತೆಯ ಮೂಲಕವೇ ಹಾದು ಹೋಗಬೇಕಿದೆ.

ಹೆಚ್ಚುತ್ತಿರುವ ಟ್ರಾಫಿಕ್

     ಇಂದು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಲಾರಿಗಳು ಸೇರಿದಂತೆ ಇನ್ನಿತರೆ ಬೃಹತ್ ವಾಹನಗಳು ನಗರದಲ್ಲಿ ಪ್ರವೇಶಿಸಬಾರದು ಎಂಬ ಕಾರಣಕ್ಕೆ ರಿಂಗ್‍ರಸ್ತೆಯನ್ನು ಮಾಡಲಾಯಿತು. ಈ ಹಿಂದೆ ವಾಹನಗಳ ಸಂಖ್ಯೆ ಕಡಿಮೆಯಿತ್ತು. ಇದೀಗ ವಾಹನಗಳ ಓಡಾಟ ಹೆಚ್ಚಾಗಿದೆ. ಇದರಿಂದ ಟ್ರಾಫಿಕ್ ಕೂಡ ಹೆಚ್ಚಾಗುತ್ತಿದೆ.

ಅಪಘಾತಗಳಿಗೆ ದಾರಿ

    ಈಗ ಅಭಿವೃದ್ಧಿ ಪಡಿಸುತ್ತಿರುವ ರಿಂಗ್ ರಸ್ತೆಯು ಮೃತ್ಯುಕೂಪವಾಗಿ ಬೆಳೆಯುತ್ತಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ರಿಂಗ್‍ರಸ್ತೆಯಲ್ಲಿ ಬರುವ ವಾಹನಗಳು ಕನಿಷ್ಠ 80ರ ವೇಗದಲ್ಲಿ ಚಲಿಸುತ್ತವೆ. ಅದರಲ್ಲೂ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ನಂತರ ಅದರ ವೇಗಕ್ಕೆ ಕಡಿವಾಣ ಹಾಕಲು ಆಗುವುದೇ ಇಲ್ಲ. ಹೀಗಿದ್ದಾಗ ವಿವಿಧ ವಾರ್ಡ್‍ಗಳಿಗೆ ಹೋಗುವ ವಾಹನ ಸವಾರರ ಪಾಡೇನು..?

ಅಂಡರ್‍ಪಾಸ್‍ನ ಅವಶ್ಯಕತೆ

    ತುಮಕೂರು ನಗರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ಒಂದು ಬೆಂಗಳೂರು ಹೊನ್ನಾವರ ರಾ.ಹೆ.206 ಹಾದು ಹೋದರೆ ಇನ್ನೊಂದು ಕಡೆಯಲ್ಲಿ ಪೂಣೆ ಬೆಂಗಳೂರು ರಾ.ಹೆ.04 ಹಾದು ಹೋಗಿವೆ. ಈ ರಸ್ತೆಯಿರುವ ಕಡೆಯಲ್ಲಿ ಊರು ಅಥವಾ ಹಳ್ಳಿ ಬಂದರೆ ಅಲ್ಲಿಗೆ ಪ್ರವೇಶ ಮಾಡಲು ಅಥವಾ ಊರಿನೊಳಗೆ ಹೋಗಲು ಅಂಡರ್ ಪಾಸ್ ಮಾಡಲಾಗಿದೆ.
ಉದಾಹರಣೆ ರಾ.ಹೆ.4ರಲ್ಲಿ ಕೋರಾ ಬಳಿ ಒಂದು ಅಂಡರ್‍ಪಾಸ್, ಶ್ರೀದೇವಿ ಕಾಲೇಜು ಬಳಿ ಒಂದು, ಎಪಿಎಂಸಿ ಬಳಿ. ಸತ್ಯಮಂಗಲದ ಬಳಿ, ಹನುಮಂತಪುರ, ಅಕ್ಕತಂಗಿ ಉದ್ಯಾನವನ, ಬಟವಾಡಿ ಅದೇ ರೀತಿ ಕ್ಯಾತ್ಸಂದ್ರ ಹೀಗೆ ರಸ್ತೆಯುದ್ದಕ್ಕೂ ನಗರಕ್ಕೆ ಪ್ರವೇಶಿಸುವ ಕಡೆಗಳಲ್ಲಿ ಒಂದು ಅಂಡರ್‍ಪಾಸ್ ನಿರ್ಮಾಣ ಮಾಡಿದ್ದಾರೆ. ಅದೇ ರೀತಿ ಇಲ್ಲಿಯೂ ಅಂಡರ್‍ಪಾಸ್ ನಿರ್ಮಿಸಿದ್ದರೆ ಅನುಕೂಲವಾಗುತ್ತಿತ್ತು.

ಎಲ್ಲಿಲ್ಲಿ ಅಂಡರ್‍ಪಾಸ್ ಅವಶ್ಯಕತೆ ಇದೆ ..?

     ಕ್ಯಾತ್ಸಂದ್ರ ಕಡೆಯಿಂದ ಕೆಸರುಮಡು ಹಳ್ಳಿಗೆ ಹೋಗುವ ಕಡೆ ಒಂದು ಅಂಡರ್‍ಪಾಸ್, ಅದಾದ ನಂತರ ನಗರದ ಉಪ್ಪಾರಹಳ್ಳಿ ಕಡೆಯಿಂದ ಗೆದ್ದಲಹಳ್ಳಿಗೆ ಹೋಗುವ ಕಡೆ ಒಂದು, ನಂತರದಲ್ಲಿ ಸದಾಶಿವನಗರದಿಂದ ಮೆಳೆಕೋಟೆ, ವೀರಸಾಗರ ಕಡೆ ಹೋಗುವಾಗ ದಾನಃಪ್ಯಾಲೆಸ್ ಬಳಿ ಬರುವ ವೃತ್ತದ ಬಳಿ ಒಂದು ಅಂಡರ್‍ಪಾಸ್ ಮಾಡಿದ್ದರೆ ಈ ಭಾಗದಲ್ಲಿ ಓಡಾಡುವವರಿಗೆ ಅನುಕೂಲವಾಗಲಿದೆ.

ರಿಂಗ್‍ರಸ್ತೆ ಅಭಿವೃದ್ಧಿಗೆ 88.87 ಕೋಟಿ

     ರಿಂಗ್ ರಸ್ತೆ ಅಭಿವೃದ್ಧಿಗೆ 2 ಹಂತದಲ್ಲಿ ಕಾಮಗಾರಿ ಮಾಡಲಾಗುತ್ತಿದ್ದು, ಮೊದಲನೇ ಹಂತದ ಕಾಮಗಾರಿಗೆ 52.47 ಕೋಟಿ ರೂ. ಹಾಗೂ 2ನೆ ಹಂತದ ಕಾಮಗಾರಿಗೆ 36.40 ಕೋಟಿ ರೂಗಳಿಗೆ ವೆಚ್ಚ ಮಾಡಿ ಟೆಂಡರ್ ನೀಡಲಾಗಿದೆ. ಮೊದಲನೇ ಹಂತದ ಕಾಮಗಾರಿ ಡಿಸೆಂಬರ್ ತಿಂಗಳಾಂತ್ಯಕ್ಕೆ ಮುಗಿಯಬೇಕಿದ್ದರೂ ಇನ್ನೂ ಕೆಲಸ ಮಾಡಲಾಗುತ್ತಿದೆ. ಅದೇ ರೀತಿ ಎರಡನೇ ಹಂತದ ಕಾಮಗಾರಿ ಪೂರ್ಣ ಮಾಡಲು ಮೇ ತಿಂಗಳ ವರೆಗೆ ಗಡುವು ನೀಡಲಾಗಿದೆ.

ಅಂಡರ್‍ಪಾಸ್‍ನ ಮುಂದಾಲೋಚನೆ ಇರಲಿಲ್ಲವೇ?

     ಹಾಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಮಾಡಿದಂತೆ ಈಗ ಅಭಿವೃದ್ಧಿ ಮಾಡಲಾಗುತ್ತಿರುವ ರಿಂಗ್‍ರಸ್ತೆಯ ಕಾಮಗಾರಿಯ ಯೋಜನೆ ಮಾಡುವಾಗ ಮುಂದಾಲೋಚನೆ ಇರಲಿಲ್ಲವೆ..? ಮುಂದೊಂದು ದಿನ ವಾಹನ ದಟ್ಟಣೆ ಹೆಚ್ಚಾದಗ ಕೈಗೊಳ್ಳಬೇಕಾದ ಕ್ರಮವನ್ನು ಆಲೋಚಿಸಿ ಈಗಲೇ ಅದನ್ನು ಮಾಡಿದ್ದರೆ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಿತ್ತಲ್ಲವೇ..? ಈಗ ಮಾಡಲಾಗುತ್ತಿರುವ ಕಾಮಗಾರಿಗೆ ಹೆಚ್ಚುವರಿ 10 ರಿಂದ 15 ಕೋಟಿ ರೂಗಳನ್ನು ವೆಚ್ಚ ಮಾಡಿದ್ದರೆ ಅಂಡರ್‍ಪಾಸ್ ಕೂಡ ಸಿದ್ಧ ಆಗುತ್ತಿತ್ತು. ಮುಂದಿನ ದಿನಗಳಲ್ಲಿ ಅಂಡರ್‍ಪಾಸ್ ಮಾಡುವ ಅವಶ್ಯಕತೆ ಬಂದಾಗ ಮತ್ತೆ ಹಾಲಿ ರಸ್ತೆಯಲ್ಲಿ ಹಳ್ಳ ತೆಗೆದು ಮಾಡಬೇಕಾಗುತ್ತದೆ.

ವೃಥಾ ಹಣವನ್ನು ರಿಂಗ್‍ರಸ್ತೆಗೆ ಹಾಕಬಹುದಿತ್ತು.

     ಈಗಾಗಲೇ ಸ್ಮಾರ್ಟ್ ಸಿಟಿಯಿಂದ ಕೆಲವೊಂದು ಕಾಮಗಾರಿಗಳಿಗೆ ಹೆಚ್ಚಿನ ಹಣ ವ್ಯಯ ಮಾಡಲಾಗುತ್ತಿದ್ದು ಅದನ್ನು ವ್ಯರ್ಥ ಮಾಡುವ ಬದಲಾಗಿ ರಿಂಗ್‍ರಸ್ತೆಯಲ್ಲಿ ಅಂಡರ್‍ಪಾಸ್ ನಿರ್ಮಾಣಕ್ಕೆ ಹಾಕಿದರೆ ಸರಿಹೋಗುತ್ತಿತ್ತು. ಉದಾಹರಣೆಗೆ ವಿವಿ ಮುಂದೆ ಇರುವ ಬಸ್ ಶೆಲ್ಟರ್‍ಅನ್ನು ಅಭಿವದ್ಧಿ ಪಡಿಸಿದ್ದರೆ ಆಗುತ್ತಿತ್ತು. ಅದರ ಬದಲಿಗೆ ಮಾದರಿ ಬಸ್ ಶೆಲ್ಟರ್ ನಿರ್ಮಾಣ ಮಾಡುವ ಅವಶ್ಯಕತೆಯಾದರೂ ಏನಿತ್ತು. ಅದರ ಬದಲಿಗೆ ಮಾದರಿ ಬಸ್ ಶೆಲ್ಟರ್ ಅನ್ನು ಬಸ್‍ಶೆಲ್ಟರ್ ಇಲ್ಲದ ಕಡೆ ಮಾಡಿದ್ದರೆ ಅದು ಸಾರ್ಥಕವಾಗುತ್ತಿತ್ತು.

ಸಿಗ್ನಲ್ ಅಳವಡಿಕೆ ಮಾಡಬೇಕಾಗಬಹುದು.

      ಈಗ ಹಾಲಿ ರಿಂಗ್‍ರಸ್ತೆಯಲ್ಲಿ ಎಲ್ಲಿಯೂ ಸಿಗ್ನಲ್ ದೀಪಗಳು ಇಲ್ಲ. ರಿಂಗ್ ರಸ್ತೆಯಲ್ಲಿ ಅದರ ಅವಶ್ಯಕತೆಯೂ ಬರುವುದಿಲ್ಲ. ಆದರೆ ಈಗಿನ ಸಂಚಾರ ದಟ್ಟಣೆ ನೋಡಿದರೆ ಮುಂದೊಂದು ದಿನ ಈ ರಸ್ತೆಯಲ್ಲಿ ಹಲವು ಭಾಗಗಳಲ್ಲಿ ಸಿಗ್ನಲ್ ದೀಪಗಳನ್ನು ಅಳವಡಿಕೆ ಮಾಡುವುದು ಖಡ್ಡಾಯವಾಗಬಹುದು. ರಿಂಗ್‍ರಸ್ತೆಯಲ್ಲಿ ಸಿಗ್ನಲ್ ಜೊತೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕೂಡ ನೇಮಕ ಮಾಡಬೇಕಾಗಬಹುದು..!

ಶೆಟ್ಟಿಹಳ್ಳಿ ರಸ್ತೆಯಲ್ಲಿ ದಟ್ಟಣೆ ನಿವಾರಣೆ ಹೇಗೆ..?

    ರಿಂಗ್‍ರಸ್ತೆ ಅಭಿವೃದ್ಧಿಯಲ್ಲಿ ಜಂಕ್ಷನ್ ಬಳಿ ವೃತ್ತ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ಯಾವ ರೀತಿ ವಾಹನಗಳ ಸಂಚಾರಕ್ಕೆ ಅನುವು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಪ್ರಮುಖವಾಗಿ ಬಡ್ಡಿಹಳ್ಳಿ, ಶೆಟ್ಟಿಹಳ್ಳಿ ಕಡೆಗಳಲ್ಲಿ ಜಂಕ್ಷನ್ ಮಾಡಲು ಆಗುವುದಿಲ್ಲ. ಆದರೆ ಇಲ್ಲಿ ವಾಹನ ಸಂಚಾರ ಹೆಚ್ಚಾಗಿರುತ್ತದೆ. ಈ ದಟ್ಟಣೆ ನಿವಾರಣೆ ಮಾಡುವುದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap