ಶಿರಾ
ಮೈಸೂರಿನ ಚರಿತ್ರೆಯನ್ನೂ ಒಳಗೊಂಡು ಭಾರತದ ಚರಿತ್ರೆಯನ್ನು ಪುನರ್ ರಚಿಸುವುದು ಇಂದು ಚರಿತ್ರೆಕಾರರು, ಸಂಶೋಧಕರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ವಿಶೇಷವಾಗಿ ಬ್ರಿಟಿಷ್ ವಸಾಹತು ಮತ್ತು ಮೈಸೂರು ಒಡೆಯರ ಕಾಲವನ್ನು ಸಂಪ್ರದಾಯ ಮತ್ತು ಋಣಮೋಹಿ ಚರಿತ್ರೆಕಾರರು ವೈಭವೀಕರಣದ ಚೌಕಟ್ಟಿನಲ್ಲಿ ಇರಿಸಿದ್ದಾರೆ.
1830-31ರಲ್ಲಿ ಜರುಗಿದ ರೈತ ಬಂಡಾಯ ಅವಾಂತರಕಾರಿಗಳ ಕೃತ್ಯ ಹಾಗೂ ಅನುಚಿತ ವರ್ತನೆಯಾಗಿತ್ತು. ಇದನ್ನು ಬ್ರಿಟಿಷರ ಮತ್ತು ಒಡೆಯರ ಸರ್ಕಾರ ದಮನಮಾಡಿ ಕಾನೂನು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿದವು ಎಂದು ಚಿತ್ರಿಸಲಾಗಿದೆ. ಈ ಮೂಲಕ ಚರಿತ್ರೆಯ ವಸ್ತುನಿಷ್ಠತೆಗೆ ಅಪಚಾರ ಮಾಡಲಾಗಿದೆ ಎಂದು ಇತಿಹಾಸತಜ್ಞ ಪ್ರೊ.ಎಸ್. ಚಂದ್ರಶೇಖರ್ ಆಭಿಪ್ರಾಯಿಸಿದರು.
ಅವರು ಸಿರಾದ ರಂಗನಾಥ ಕಾಲೇಜಿನಲ್ಲಿ ಇತಿಹಾಸ ಅಧ್ಯಾಪಕ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಅವರು ಬರೆದ “ಮೈಸೂರು ಸಂಸ್ಥಾನದ ಭೂಕಂದಾಯ ನೀತಿ ಮತ್ತು ಸಿರಾ ತಾಲ್ಲೂಕಿನ ಕೃಷಿ ಬಿಕ್ಕಟ್ಟು 1799-1947” ಹಾಗೂ ಇದರ ಇಂಗ್ಲೀಷ್ ರೂಪಾಂತರ ಸ್ಟ್ಯಾಟಿಕ್ ಲ್ಯಾಂಡ್ ರೆವಿನ್ಯೂ ಸಿಸ್ಟಮ್ ಅಂಡ್ ಎಟರ್ನಲ್ ಅಗ್ರೇರಿಯನ್ ಕ್ರೈಸಿಸ್-ಎ ಪ್ರಿಸ್‍ಮ್ಯಾಟಿಕ್ ಸ್ಟಡಿ ಆಫ್ ಸಿರಾ ತಾಲ್ಲೂಕ್ ಇನ್ ದಿ ರೀಜೆಂಟ್ ರಾಯಲ್ ಸ್ಟೇಟ್ ಆಫ್ ಮೈಸೂರ್ 1799-1947’ ಎಂಬ ಎರಡು ಕೃತಿಗಳನ್ನು ಬಿಡುಗಡೆ ಮಾಡಿ ಮಾತಾನಾಡಿದರು.
ದಂಗೆ ವಿಚಾರಣ ಸಮಿತಿಯ ಮುಂದೆ ಸಾಕ್ಷ್ಯ ನೀಡಿದ ಹುಲಿಕುಂಟೆ ಸಿದ್ದೇಗೌಡನ ಹೇಳಿಕೆಯನ್ನು ಉಲ್ಲೇಖಿಸಿ ಟಿಪ್ಪುವಿನ ಕಾಲದಲ್ಲಿ ನಮ್ಮ ಕುಟುಂಬ, ಕೃಷಿಯೊಂದಿಗೆ ನೆಮ್ಮದಿಯಿಂದ ಇದ್ದೆವು. ಆದರೆ ಅವನನ್ನು ಕೊಂದು ಅಧಿಕಾರ ಕಬಳಿಸಿದ ಬ್ರಿಟಿಷರು ಮೈಸೂರು ಒಡೆಯರನನ್ನು ಅಧಿಕಾರದ ಗದ್ದುಗೆಗೆ ತಂದರು. ಅವರ ಕಾಲದಲ್ಲಿ ನಾವು ಕೃಷಿ ಮತ್ತು ದನಕರುಗಳು ನಾಶವಾಗಿ ಅದೋಗತಿಗೆ ಇಳಿದೆವು ಎಂದು ದೂರಿದ್ದ ಅಂಶವನ್ನು ಪ್ರಸ್ತಾಪಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಚರಿತ್ರೆ ಪ್ರಾಧ್ಯಾಪಕ ಡಾ. ಅಶ್ವತ್ಥನಾರಾಯಣ ಕೃತಿಗಳನ್ನು ಕುರಿತು ಮಾತನಾಡಿದರು. ಲೇಖಕರು ದಿವಾನ್ ಪೂರ್ಣಯ್ಯನವರಿಗೆ ಹೊದೆಸಿದ್ದ ರತ್ನಗಂಬಳಿಯನ್ನು ಎಳೆದುಹಾಕಿದ್ದಾರೆ. ಪೂರ್ಣಯ್ಯ ಬ್ರಿಟಿಷರಿಗೆ ಕಪ್ಪವನ್ನು ನೀಡುವಲ್ಲಿ ಪ್ರಾಮಾಣಿಕರಾಗಿದ್ದರೆ ಹೊರತು ರೈತರ
ಕಷ್ಟಕಾರ್ಪಣ್ಯಗಳಿಗೆ ಮಿಡಿಯಲಿಲ್ಲಿ. ಗ್ರಾಮೀಣ ಪ್ರದೇಶದಲ್ಲಿ ರೈತ ಮತ್ತು ಸರ್ಕಾರದ ಮಧ್ಯೆ ಒಂದು ಜಾತಿಗೆ ಸೇರಿದ ಅಧಿಕಾರಿಗಳನ್ನೂ, ಲೇವಾದೇವಿಗಾರರನ್ನು ತಂದು ಮಧ್ಯವರ್ತಿಗಳನ್ನಾಗಿ ನಿಲ್ಲಿಸಿದರು. ಬ್ರಿಟಿಷರು ಅಸಹಾಯಕ ರಾeತ್ವವನ್ನು ಮೈಸೂರಿನಲ್ಲಿ ರೂಪಿಸಿದ್ದು ಮಾತ್ರವಲ್ಲ ಲೇವಾದೇವಿಗಾರರಿಗೆ ಗ್ರಾಮೀಣ ಪ್ರದೇಶವನ್ನು ಅಡವು ಇಟ್ಟಿತು. ಒಟ್ಟಾರೆ ಇರುವ ಆಕರಗಳ ನಡುವೆ ಜನಸಾಮಾನ್ಯರನ್ನು ಹುಡುಕುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆಂದು ಅಭಿಪ್ರಾಯಿಸಿದರು.
ಚಿಂತಕ ಕೆ. ದೊರೈರಾಜ್ ಮಾತನಾಡಿ ಸ್ವಾತಂತ್ರ್ಯಪೂರ್ವದಲ್ಲಿ ಶ್ರೇಣೀಕೃತ ಶೋಷಣೆಯ ಮಾದರಿಯೊಂದನ್ನು ವ್ಯವಸ್ಥಿತವಾಗಿ ತರುವಲ್ಲಿ ವಸಾಹತುಶಾಹಿ ಮತ್ತು ರಾಜಶಾಹಿಗಳು ಪರಸ್ಪರ ಕೈಜೋಡಿಸಿದವು. ಪ್ರಜಾಪ್ರಭುತ್ವದ ಸಂದರ್ಭದಲ್ಲಿ ರಾಜಪ್ರಭುತ್ವದ ವೈಭವೀಕರಣ ಸಲ್ಲದು. ಇದು ಮಾಧ್ಯಮಗಳು ಮತ್ತು ಕೆಲ ಚರಿತ್ರೆಕಾರರ ಸಾಂಸ್ಕøತಿಕ ರಾಜಕಾರಣ ಎಂದು ಮೂದಲಿಸಿದರು. ರಾಜಪ್ರಭುತ್ವದ ಶೋಷಣೆಯು ಪ್ರಜಾಪ್ರಭುತ್ವದ ಕಾಲಕ್ಕೂ ವರ್ಗಾವಣೆಯಾಗಿರುವುದು ದುರಂತವೇ ಸರಿ ಎಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಖ್ಯಾತ ನ್ಯಾಯವಾದಿ ಮತ್ತು ವಿಚಾರವಾದಿ ಪ್ರೊ.ರವಿವರ್ಮಕುಮಾರ್ ಮಾತನಾಡಿ ಡಾ.ತಿಮ್ಮನಹಳ್ಳಿ ವೇಣುಗೋಪಾಲ್‍ರ ಈ ಕೃತಿಯನ್ನು ರೈತ ಸಂಘದ ಕಾರ್ಯಕರ್ತರು ಕಡ್ಡಾಯವಾಗಿ ಓದಲೇ ಬೇಕಾಗಿದೆ. ವಸಾಹತುಶಾಹಿ ಕಾಲದಲ್ಲಿ ಸಿರಾ ತಾಲ್ಲೂಕಿನ ರೈತರು ಅನುಭವಿಸಿದ ಯಾತನೆ, ಸಂಕಟ, ಶೋಷಣೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದು ಒಂದು ಅರ್ಥದಲ್ಲಿ ರೈತರು ಇದನ್ನು ಒಂದು ಬೈಬಲ್ ಎಂದು ಪರಿಗಣಿಸಿ ಅದರ ಸಾರ ಅರಿತು ವರ್ತಮಾನದ ತಮ್ಮ ಹೋರಾಟಗಳಿಗೆ ಕೈದೀವಿಗೆಯಂತೆ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಲೇಖಕರಾದ ಡಾ. ತಿಮ್ಮನಹಳ್ಳಿ ವೇಣುಗೋಪಾಲ್, ವಿಶ್ರಾಂತ ಪ್ರಾಂಶುಪಾಲರ ಜಿ.ಎಂ. ಶ್ರೀನಿವಾಸಯ್ಯ, ತುಮಕೂರು ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಎಸ್. ಧನಂಜಯಾರಾಧ್ಯ ಇದ್ದರು. ಎಸ್.ಎನ್. ಕೃಷ್ಣಯ್ಯ, ಕೆಂಕೆರೆ ಹನುಮಂತೇಗೌಡ, ಡಾ.ಶಂಕರ್, ಡಾ. ರಾಮಕೃಷ್ಣ, ಕೆ. ಹನುಮಂತರಾಯಪ್ಪ, ನರೇಶ್‍ಬಾಬು ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ನರಸಿಂಹಮೂರ್ತಿ ಪ್ರಾರ್ಥಿಸಿದರೆ, ಪ್ರೊ. ಮಹಾಲಿಂಗಯ್ಯ ಸ್ವಾಗತಿಸಿದರು, ನರೇಶ್‍ಬಾಬು ವಂದನಾರ್ಪಣೆ ಸಲ್ಲಿಸಿದರು. ಪ್ರೊ. ಹೇಮಲತ ಸ್ವಾಗತಿಸಿದರು.