ತುಮಕೂರು

ವಿಶೇಷ ವರದಿ:ರಾಕೇಶ್.ವಿ.
ರಾಜೀವ್ಗಾಂಧಿ ಆವಾಸ್ ಯೋಜನೆ ಅಡಿಯಲ್ಲಿ 2014ರಲ್ಲಿ ತುಮಕೂರು ನಗರದ ಆಯ್ದ 5 ಕೊಳಚೆ ಪ್ರದೇಶಗಳಲ್ಲಿ 816 ಮನೆಗಳನ್ನು ನಿರ್ಮಾಣ ಮತ್ತು ಮೂಲಭೂತ ಸೌಲಭ್ಯ ಒದಗಿಸುವ ಕಾಮಗಾರಿ ನಡೆಸಿದ್ದು, ಅದರಲ್ಲಿ ಶೆಟ್ಟಿಹಳ್ಳಿಯ ಎ.ಕೆ.ಕಾಲನಿಯಲ್ಲಿ ಯಾವೊಂದು ಮನೆಯೂ ಸಂಪೂರ್ಣವಾಗಿ ಮುಕ್ತಾಯವಾಗದೆ ಸ್ಥಳೀಯರು ನಿವೇಶನಗಳಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಒಟ್ಟು 5 ಕೊಳಚೆ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಸುಮಾರು 816 ಮನೆಗಳನ್ನು ನಿರ್ಮಾಣ ಮಾಡುವ ಕಾಮಗಾರಿಯನ್ನು 2 ವರ್ಷ ಅವಧಿಗೆ ಗುತ್ತಿಗೆ ಪಡೆಯಲಾಗಿತ್ತು. ಈ ಐದು ಪ್ರದೇಶಗಳಲ್ಲಿ ಒಂದಾದ 35ನೇ ವಾರ್ಡ್ ಶೆಟ್ಟಿಹಳ್ಳಿಯಲ್ಲಿ 82 ಮನೆಗಳ ನಿರ್ಮಾಣ ಮಾಡಬೇಕಿತ್ತು. ಕೆಲ ಮನೆಗಳನ್ನು ಅರ್ಧಕ್ಕೆ ನಿರ್ಮಾಣ ಮಾಡಿ ಬಿಟ್ಟರೆ, ಇನ್ನೂ ಕೆಲ ಮನೆಗಳನ್ನು ಅಲ್ಪಸ್ವಲ್ಪ ಮಾಡಿ ಬಿಟ್ಟು ಹೋಗಿದ್ದಾರೆ.
ಶೆಟ್ಟಿಹಳ್ಳಿಯ ಎಕೆ ಕಾಲನಿಯಲ್ಲಿ ಕೆಲ ಜನ ಮನೆಗಳು ಇಲ್ಲದೆ ಖಾಲಿ ಜಾಗದಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಜೀವನ ಮಾಡುವ ಪರಿಸ್ಥಿತಿ ಬಂದಿದೆ. ಇಲ್ಲಿಗೆ ಗುತ್ತಿಗೆದಾರರು ಬರುವುದಿಲ್ಲ. ಮನೆಗಳ ನಿರ್ಮಾಣ ಕಾರ್ಯ ನೋಡಿಕೊಳ್ಳುತ್ತಿದ್ದ ವ್ಯಕ್ತಿ ತನಗೇನು ಸಂಬಂಧವೇ ಇಲ್ಲವೆಂಬಂತೆ ತಲೆಮರೆಸಿಕೊಂಡಿದ್ದಾನೆ. ಈ ಮುಂಚೆ ಇದ್ದಂತಹ ಪಾಲಿಕೆ ಸದಸ್ಯರ ಕಾಲಾವಧಿಯಲ್ಲಿ ಈ ಕಾಮಗಾರಿ ಚಾಲನೆಗೊಂಡಿದ್ದರಿಂದ ಈಗಿನ ಹಾಲಿ ಸದಸ್ಯರು ತಮಗೆ ಇದರ ಬಗ್ಗೆ ಮಾಹಿತಿ ಇಲ್ಲ ಎಂಬಂತೆ ವರ್ತನೆ ಮಾಡುತ್ತಿದ್ದಾರೆ ಎಂಬುದು ಸ್ಥಳೀಯ ಆರೋಪಗಳಾಗಿವೆ.
ಒಂದು ಯೂನಿಟ್ಗೆ 3.30ಲಕ್ಷ ವೆಚ್ಚ
ರಾಜೀವ್ ಗಾಂಧಿ ಆವಾಸ್ ಯೋಜನೆ ಯಡಿಯಲ್ಲಿ ನಿರ್ಮಿಸಲಾಗುವ ಒಂದು ಮನೆಗೆ ಸರ್ಕಾರದಿಂದ 3.30ಲಕ್ಷ ಅಂದಾಜು ನೀಡಲಾಗಿದೆ. ಒಂದು ಯೂನಿಟ್ ( ಒಂದು ಮನೆ ) ನಿರ್ಮಾಣ ಮಾಡಲು ಸ್ಥಳೀಯ ನಿವಾಸಿಗಳದ್ದೇ ಜಾಗ ಇರಬೇಕು. ಅಲ್ಲಿಯೇ ಅವರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಅದಕ್ಕೂ ಹೆಚ್ಚು ಖರ್ಚು ಮಾಡಿ ಮನೆ ಕಟ್ಟಿಸಿಕೊಳ್ಳಬೇಕಾದರೆ ಅದಕ್ಕೆ ಮನೆಯ ಮಾಲೀಕರೆ ಹಣ ನೀಡಿ ಕಟ್ಟಿಸಿಕೊಳ್ಳಬೇಕು.
ಅರ್ಧಂಬರ್ಧ ನಿರ್ಮಾಣ
ಈ ಮುಂಚೆಯೇ ಕಾಮಗಾರಿಯ ಕಾಲವಧಿ ವೇಳೆಯಲ್ಲಿ ನಿರ್ಮಾಣ ಮಾಡಲಾದ ಕೆಲ ಮನೆಗಳು ಅರ್ಧಂಬರ್ಧ ನಿರ್ಮಾಣ ಮಾಡಿ ಬಿಟ್ಟುಹೋಗಿದ್ದಾರೆ. ಈ ಸಂಬಂಧ ಅವುಗಳನ್ನು ಪೂರ್ಣಗೊಳಿಸಲು ಅನೇಕ ಬಾರಿ ಕೇಳಿಕೊಂಡರೂ ಗುತ್ತಿಗೆದಾರರು ಮನೆ ನಿರ್ಮಾಣ ಕೆಲಸ ಪೂರ್ಣಗೊಳಿಸಿಲ್ಲ. ಇದರಿಂದ ಬೇಸತ್ತ ಜನರು ತಾವೇ ಹೆಚ್ಚಿನ ಹಣ ಹಾಕಿಕೊಂಡು ಮನೆಗಳ ನಿರ್ಮಾಣವನ್ನು ಮಾಡಿಕೊಂಡಿದ್ದಾರೆ.
ಹಣ ಇಲ್ಲದವರ ಜೀವನ ಅಸ್ತವ್ಯಸ್ಥ
ಹಣ ಇದ್ದವರು ಹೇಗೋ ತಮ್ಮ ಮನೆಗಳನ್ನು ನಿರ್ಮಾಣ ಮಾಡಿಕೊಂಡರು. ಆದರೆ ಹಣ ಇಲ್ಲದ ಬಡ ಜನರು ತಮ್ಮ ಮನೆಗಳನ್ನು ಪೂರ್ಣಗೊಳಿಸಿಕೊಳ್ಳಲಾಗಿದೆ, ಕೆಲವರು ಬಾಡಿಗೆ ಮನೆಗಳಿಗೆ ಸೇರಿಕೊಂಡರೆ ಇನ್ನೂ ಕೆಲವರು ಅಲ್ಲಲ್ಲಿ ಗುಡಿಸಲು ಹಾಕಿಕೊಂಡು ಜೀವನ ಮಾಡುತ್ತಿದ್ದಾರೆ. ಜೋರು ಗಾಳಿ ಮಳೆ ಬಂದರೆ ಅವರ ಜೀವನ ನೋಡತೀರದಾಗಿದೆ.
ನಿರ್ಮಾಣ ಮಾಡಿದ ಮನೆಗಳೂ ಕಳಪೆ
ಮನೆಗಳ ನಿರ್ಮಾಣ ಮಾಡಲು ನೀಡಿದಂತಹ ಕಾಲವಧಿ ಮುಗಿದಿದೆ. ಈಗಾಗಲೇ ಗುತ್ತಿಗೆದಾರರು ಅರ್ಧಬಂರ್ಧ ನಿರ್ಮಾಣ ಮಾಡಿ ಹೋಗಿದ್ದಾರೆ. ಅದಕ್ಕೆ ಹಾಕಲಾದ ಸಿಮೆಂಟ್ ಹಾಗೂ ಮರಳು ಕಳಪೆಯಿಂದ ಕೂಡಿದ್ದು, ನಿರ್ಮಾಣ ಕಾರ್ಯ ಪೂರ್ಣವಾಗುವುದಕ್ಕೂ ಮೊದಲೇ ಬಿರುಕುಬಿಟ್ಟಿವೆ. ಕೆಲಕಡೆ ಕೈಯಿಂದಲೇ ಕೀಳಬಹುದು ಅಷ್ಟರ ಮಟ್ಟಿಗೆ ಕಾಮಗಾರಿ ಕಳಪೆಯಾಗಿದೆ. ಅಲ್ಲದೆ ಮನೆಗಳ ಮೇಲ್ಚಾವಣಿ ಮೇಲೆ ನೀರು ನಿಂತುಕೊಂಡು ಕೆಳಭಾಗಕ್ಕೆ ಸೋರುವ ಸ್ಥಿತಿ ಕಾಣಬಹುದು.
ಮೂರೂವರೆ ಚದರ ಅಡಿಯಲ್ಲಿ ಮನೆಗಳ ನಿರ್ಮಾಣ
ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾದ ಮನೆಗಳಿಗೆ ನಿರ್ದಿಷ್ಠ ಜಾಗ ಮೂರೂವರೆ ಚದರ ಅಡಿಗಳಷ್ಟಿರಬೇಕು. ಅಷ್ಟು ಜಾಗ ಇದ್ದರೆ ಮಾತ್ರ ಗುತ್ತಿಗೆದಾರರು ಮನೆ ನಿರ್ಮಾಣ ಮಾಡಿಕೊಡುತ್ತಾರೆ ಎಂಬ ಆದೇಶವಿದೆ. ಅದರಂತೆ ಮನೆಗಳು ನಿರ್ಮಾಣ ಮಾಡಿರುವುದೂ ಸಂಪೂರ್ಣವಾಗಿಲ್ಲ. ಅದಕ್ಕೂ ಮೀರಿ ಹೆಚ್ಚಿನದಾಗಿ ಅಭಿವೃದ್ಧಿ ಮಾಡಿಸಿಕೊಳ್ಳಬೇಕಾದಲ್ಲಿ ಹಣ ನೀಡಿ ಅದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಂದುಕೊಟ್ಟರೆ ಮಾಡಿಕೊಡಲಾಗುತ್ತದೆ ಎಂದು ಹೇಳಲಾಗಿತ್ತು ಎಂಬುದಾಗಿ ಫಲಾನುಭವಿಗಳು ಹೇಳುತ್ತಾರೆ.
ಟೆಂಡರ್ ಪಡೆದದ್ದು
ತುಮಕೂರು ನಗರದ ಶೆಟ್ಟಿಹಳ್ಳಿಯ ಏ.ಕೆ.ಕಾಲನಿ ಕೊಳಚೆ ಪ್ರದೇಶದಲ್ಲಿ 82 ಮನೆಗಳ ನಿರ್ಮಾಣ ಮತ್ತು ಮೂಲಭೂತ ಸೌಲಭ್ಯ ಒದಗಿಸು ಕಾಮಗಾರಿ ( ಪ್ಯಾಕೇಜ್-1 ಬಿ )ಯಂತೆ ಒಂದು ಯೂನಿಟ್ಗೆ 3.30 ಲಕ್ಷ ನಿಗದಿ ಮಾಡಿ ಒಟ್ಟು ಅಂದಾಜು ಮೊತ್ತ ರೂ.405.85 ಲಕ್ಷ ಅಂದಾಹಿಸಲಾಗಿತ್ತು. ಈ ಟೆಂಡರ್ಅನ್ನು ಮೆ/ಡಿ.ಇ.ಸಿ. ಇನ್ಫ್ರಾಸ್ಟಕ್ಚರ್ಸ್ ಅಂಡ್ ಪ್ರಾಜೆಕ್ಟ್ ಇಂಡಿಯಾ ಪ್ರೈ.ಲಿಮಿಟೆಡ್ ಇವರು ಪಡೆದಿದ್ದು, ಈ ಕಾಮಗಾರಿ ಪ್ರಾರಂಭದ ದಿನಾಂಕ 19.12.2014ರಿಂದ 18.12.2016 ರವರೆಗೆ ಇದ್ದರೂ ಈ ವರೆಗೂ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಇಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿದರೆ ಇಂತಹ ಬೇಕಾಬಿಟ್ಟಿ ಕೆಲಸಗಳಿಗೆ ಕಡಿವಾಣ ಹಾಕಬಹುದು.
ಶೆಟ್ಟಿಹಳ್ಳಿಯ ಏ.ಕೆ.ಕಾಲನಿಯಲ್ಲಿ ರಾಜೀವ್ಗಾಂಧಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾದ ಮನೆಗಳು ಶೇ.80ರಷ್ಟು ಮಾಡಿದ್ದು, ಉಳಿದ 20ರಷ್ಟು ಮನೆಗಳನ್ನು ಹಾಗೇ ಉಳಿಸಲಾಗಿದೆ. ನಿರ್ಮಾಣ ಮಾಡಲಾದ ಯಾವ ಮನೆಗಳಿಗೂ ಕಿಟಕಿಗಳಾಗಲಿ, ಬಾಗಿಲುಗಳಾಗಲಿ ಅಳವಡಿಸಿಲ್ಲ. ನಿರ್ಮಾಣ ಮಾಡಲಾದ ಮನೆಗಳ್ಯಾವುವು ಸಂಪೂರ್ಣ ಮಾಡಿಲ್ಲ. ಬದಲಿಗೆ ಆಯಾ ಮನೆಗಳಿಗೆ ಸಂಬಂಧಪಟ್ಟವರೇ ಆ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಕೇಳಲು ಕರೆ ಮಾಡಿದರೆ ಸಂಪರ್ಕಕ್ಕೆ ಸಿಗುವುದೇ ಇಲ್ಲ.
ಹನುಮಂತರಾಜು, ಶೆಟ್ಟಿಹಳ್ಳಿ ನಿವಾಸಿ
ನಗರದ ಐದು ಕಡೆಗಳಲ್ಲಿ ಸ್ಲಂ ಪ್ರದೇಶಗಳನ್ನು ಗುರುತಿಸಿ ಮನೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರಲ್ಲಿ ಸರ್ಕಾರದ ಅನುದಾನದ ಜೊತೆಗೆ ಫಲಾನುಭವಿಗಳು ಎಸ್ಸಿ ಎಸ್ಟಿಗೆ 38 ಸಾವಿರ, ಇತರೆ ಹಿಂದುಳಿದ ವರ್ಗದವರಿಗೆ 48 ಸಾವಿರ ರೂಗಳನ್ನು ಪಾಲಿಕೆಗೆ ಕಟ್ಟಿದರೆ ತಮ್ಮ ಜಾಗದಲ್ಲಿ ಇಲಾಖೆಯಿಂದ ಮನೆಯನ್ನು ನಿರ್ಮಾಣ ಮಾಡಬೇಕಿತ್ತು. ಇದಕ್ಕೆ ಜನರು ಮುಂದೆ ಬಾರದೆ ಇದ್ದುದಕ್ಕೆ ಈ ಯೋಜನೆ ಪೂರ್ಣಗೊಳಿಸುವುದು ತಡವಾಗಿದೆ. ಇನ್ನೂ ಎರಡು ತಿಂಗಳ ಒಳಗೆ ಎಲ್ಲಾ ಮನೆಗಳನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಿಕೊಡಲಾಗುವುದು.
ಹನುಮಂತರೆಡ್ಡಿ, ಎಇಇ, ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿ
ದೈನಂದಿನ ರಾಜಕೀಯ ಬೆಳವಣಿಗೆಗಳಿಂದ, ಸರ್ಕಾರದ ಅದಲು ಬದಲಾಗಿದ್ದರಿಂದ ಬರಬೇಕಾದ ಯೋಜನಾ ವೆಚ್ಚದ ಬಿಲ್ಗಳು ಪೆಂಡಿಂಗ್ ಆಗಿದೆ. ಇದರಿಂದ ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಬಿಲ್ನ ಮೊತ್ತ ಬಂದರೆ ತಕ್ಷಣವೇ ಮನೆಗಳ ನಿರ್ಮಾಣ ಕಾರ್ಯ ಪೂರ್ಣಮಾಡಲಾಗುವುದು.
ಜ್ಞಾನಮೂರ್ತಿ, ಗುತ್ತಿಗೆದಾರರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
