ಹೊಳಲ್ಕೆರೆ:
12ನೇ ಶತಮಾನದಲ್ಲಿ ಪ್ರತಿಯೊಬ್ಬರು ಕಾಯಕ ಮಾಡುತ್ತಿದ್ದರು. ದುಡಿದು ರಾಜನ ಬೊಕ್ಕಸ ತುಂಬುತ್ತಿದ್ದರು. ಉತ್ಪಾದನೆ ಕಲ್ಯಾಣ ರಾಜ್ಯದ ಜೀವಾಳವಾಗಿತ್ತು. ಬಸವಣ್ಣನವರು ಬೇಡುವವರಿಲ್ಲದೆ ಬಡವಾದೆ ಎನ್ನುತ್ತಾರೆ. ಆದರೆ ಇಂದು ಸರ್ಕಾರಕ್ಕೆ ಬೇಡುತ್ತಿದ್ದೇವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಶ್ರೀಮುರುಘಾಮಠದ ವತಿಯಿಂದ ಹೊಳಲ್ಕೆರೆ ತಾಲ್ಲೂಕು ಟಿ.ಎಮ್ಮಿಗನೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಶ್ರಾವಣಮಾಸದ ವಿಶೇಷ ಕಾರ್ಯಕ್ರಮ ಕಲ್ಯಾಣ ದರ್ಶನ 2ನೇ ದಿನದ ಸಮಾರಂಭದಲ್ಲಿ ಶ್ರೀಗಳು ಮಾತನಾಡಿದರು
ಬಸವಣ್ಣನವರು ಅಲ್ಲಮನ ಅಧ್ಯಕ್ಷತೆಯಲ್ಲಿ 770 ಅಮರಗಣಂಗಳನ್ನು ಸೇರಿಸಿದ್ದರು. ಅವರು ಒಂದೊಂದು ಜಾತಿಯನ್ನು ಪ್ರತಿನಿಧಿಸಿದ್ದರು. ಬಸವಣ್ಣನವರಿಗೆ ಔದಾರ್ಯವಿತ್ತು. ಬುದ್ಧ, ಏಸುಕ್ರಿಸ್ತ, ಪೈಗಂಬರ್ ಮೊದಲಾದವರ ಕಾಲದಲ್ಲಿ ಕೆಲವರು ಮಾತ್ರ ಕಂಗೊಳಿಸಿದರೆ ಬಸವಣ್ಣನವರ ಕಾಲದಲ್ಲಿ 770 ಅಮರ ಗಣಂಗಳು ಕಂಗೊಳಿಸಿದರು. ಇವರೆಲ್ಲ ಕಲ್ಯಾಣಕ್ಕೆ ಬಂದು ಸ್ವಾಭಿಮಾನದ ಮೂಲಕ ಬದುಕನ್ನು ಕಟ್ಟಿಕೊಂಡರು.
ಕಾಯಕ ಮಾಡುವವರು ಇದ್ದರು, ನೀಡುವವರು ಇದ್ದರು. ಆದರೆ ಅಲ್ಲಿ ಬೇಡುವವರು ಇರಲಿಲ್ಲ ಎಂದರು ಹೊಸದುರ್ಗ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಧ್ಯಾಪಕ ಡಾ. ಬಿ. ಮುರಳೀಧರ್ ಸ್ವಾಭಿಮಾನಯುಕ್ತ ಜೀವನ ಕುರಿತು ವಿಷಯಾವಲೋಕನ ಮಾಡುತ್ತ, ನಾವು ಇಂದು ಯಾರನ್ನು ಅವಲಂಬಿಸುವುದು? ಮೋಡ ಬಿತ್ತನೆ ನಡೆಯಬೇಕಿದೆ.
ಹಿಂದೆ ನಾವು ಸಾವಯವ ಕೃಷಿ ಮಾಡುತ್ತಿದ್ದೆವು ಅಂತಹ ಸ್ಥಿತಿ ಈಗ ಇಲ್ಲ. ಕೆಲವು ಕಂಪನಿಗಳು ನಮಗೆ ಬೀಜ, ಗೊಬ್ಬರ ಕೊಡುತ್ತಿವೆ. ರೈತ ಇಂದು ಇತರರನ್ನು ನಂಬಿ ಜೀವನ ನಡೆಸುವ ಪರಿಸ್ಥಿತಿಗೆ ಬಂದಿದ್ದಾನೆ. ವಿದೇಶಿ ಕಂಪನಿಗಳ ಬಲೆಯಲ್ಲಿ ನಮ್ಮನ್ನು ಸಿಕ್ಕಿ ಹಾಕಿಸಿಕೊಳ್ಳುತ್ತಿದ್ದೇವೆ. ಪ್ರಾರ್ಥಿಸುವ ಕೈಗಳಿಗಿಂತ ದುಡಿಯುವ ಕೈಗಳು ಮೇಲು. ಕಾಯಕದಲ್ಲಿ ನಿರತರಾಗಬೇಕು. ಬಸವಾದಿ ಪ್ರಮಥರಿಗೆ ಕಾಯಕವೇ ಬದುಕಾಗಿತ್ತು ಎಂದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಶ್ರೀಮತಿ ಶಾರದಮ್ಮ, ಅಡಿವೆಪ್ಪ, ಕರಿಯಪ್ಪ, ಕೆ.ಸಿ.ರಮೇಶ್, ಪಟ್ಟಣ ಪಂಚಾಯಿತಿ ಸದಸ್ಯ ಮುರುಗೇಶ್, ಎಲ್.ಬಿ. ರಾಜಶೇಖರ್, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ ಮುಂತಾದವರಿದ್ದರು. ಇದೇ ಸಂದರ್ಭಲ್ಲಿ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.ಪ್ರಾರಂಭದಲ್ಲಿ ಮಂಜುನಾಥಸ್ವಾಮಿ ಸ್ವಾಗತಿಸಿದರು. ತಿಪ್ಪೇರುದ್ರಪ್ಪ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
