ಒಳಚರಂಡಿ ಪೈಪ್ ರಿಪೇರಿ ಮಾಡುವ ಸೋಗಿನಲ್ಲಿ ಬಂದು ಕಳ್ಳತನ …!!!

ಬೆಂಗಳೂರು

     ,ಹಿರಿಯ ವಕೀಲರೊಬ್ಬರ ಮನೆಗೆ ಒಳಚರಂಡಿ ಪೈಪ್ ರಿಪೇರಿ ಮಾಡುವ ಸೋಗಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು 55 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಾಡುಹಗಲೇ ನಡೆದಿದೆ.

      ಜೆಪಿ ನಗರದ ಮೂರನೇ ಹಂತದ ಮೊದಲ ಕ್ರಾಸ್‍ನಲ್ಲಿ ವಾಸಿಸುತ್ತಿದ್ದ ಹಿರಿಯ ವಕೀಲ ಸುಬ್ಬಣ್ಣ ಅವರ ಮನೆಗೆ ಬುಧವಾರ ಮಧ್ಯಾಹ್ನ 12ರ ವೇಳೆ ಬಂದಿರುವ ಇಬ್ಬರು ದುಷ್ಕರ್ಮಿಗಳು, ಕಾಲಿಂಗ್ ಬೆಲ್ ಮಾಡಿದ್ದು, ಬಾಗಿಲ ಬಳಿ ಬಂದ ಸುಬ್ಬಣ್ಣ ಅವರಿಗೆ ನಾವು ಜಲಮಂಡಳಿಯ ನೌಕರರೆಂದು ಪರಿಚಯ ಮಾಡಿಕೊಂಡಿದ್ದಾರೆ.

     ಒಳಚರಂಡಿ ಪೈಪ್‍ಗಳ ಸೋರಿಕೆಯನ್ನು ತಪಾಸಣೆ ನಡೆಸುತ್ತಿದ್ದು, ನಿಮ್ಮ ಮನೆಯ ಪೈಪ್‍ನಲ್ಲೇನಾದರೂ ಸೋರಿಕೆ ಇದೆಯಾ ಎಂದು ನೋಡುತ್ತೇವೆ ಎಂದು ಕೇಳಿದ್ದಾರೆ. ಅವರ ಮಾತನ್ನು ನಂಬಿದ ಸುಬ್ಬಣ್ಣ ಅವರು, ಪೈಪ್ ಬಳಿ ಕರೆದೊಯ್ದು ತೋರಿಸುವಷ್ಟರಲ್ಲಿ ಓರ್ವ ಒಳಗೆ ನುಗ್ಗಿ ಬೀರುವಿನ ಬೀಗ ತೆಗೆದು ಚಿನ್ನದ ಚೈನು, ನಾಲ್ಕು ಚಿನ್ನದ ಬಳೆ ಸೇರಿ, 55 ಗ್ರಾಂ ತೂಕದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.

       ದುಷ್ಕರ್ಮಿಗಳು ಸುಮಾರು 35 ವರ್ಷ ವಯಸ್ಸಿನವರಾಗಿದ್ದು, ಕನ್ನಡ ಮಾತನಾಡುತ್ತಿದ್ದರು ಎಂದು ಸುಬ್ಬಣ್ಣ ಅವರು ದೂರು ನೀಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿರುವ ಜೆಪಿ ನಗರ ಪೊಲೀಸರು, ದುಷ್ಕರ್ಮಿಗಳಿಗಾಗಿ ತೀವ್ರಶೋಧ ನಡೆಸಿದ್ದಾರೆ ಎಂದು ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ಎಚ್ಚರಿಕೆಗೆ ಮನವಿ

       ಜಲಮಂಡಳಿ, ಬೆಸ್ಕಾಂ ಸೋಗಿನಲ್ಲಿ ಬರುವ ದುಷ್ಕರ್ಮಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅವರ ಗುರುತಿನ ಪತ್ರ, ಸಮವಸ್ತ್ರ ಗಮನಿಸಬೇಕು. ಅಗತ್ಯವಿದ್ದರೆ ಮಾತ್ರ ಅವರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಡಿಸಿಪಿ ಅಣ್ಣಾಮಲೈ ಅವರು ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap