ಕಳೆದ ಚುನಾವಣೆಗಿಂತ ಶೇ.4ರಷ್ಟು ಮತದಾನ ಹೆಚ್ಚಳದ ಗುರಿ-ಕೆ.ಲೀಲಾವತಿ

ಹಾವೇರಿ

      ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮದವರಿಗಾಗಿ ಸೋಮವಾರ ನಗರದ ವಾರ್ತಾ ಭವನದಲ್ಲಿ ಸಖಿ ಮತಗಟ್ಟೆಯ ಮಾದರಿ ಹಾಗೂ ವಿದ್ಯುನ್ಮಾನ ಮತದಾನ ಯಂತ್ರ ಮತ್ತು ವಿವಿಪ್ಯಾಟ್ ಯಂತ್ರಗಳ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು.

      ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕೆ.ಲೀಲಾವತಿ ಪ್ರಾತ್ಯಕ್ಷಿತೆಯಲ್ಲಿ ಪಾಲ್ಗೊಂಡು ಮಾಹಿತಿಯನ್ನು ನೀಡಿದರು.ಈ ಸಂದರ್ಭದಲ್ಲಿ ಸ್ವೀಪ್ ಚಟುವಟಿಕೆಗಳ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಲೀಲಾವತಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಎರಡನೆಯ ಹಂತದ ಮತದಾರರ ಜಾಗೃತಿ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ದುರ್ಬಲ ಮತಗಟ್ಟೆ, ವಿಶೇಷ ಚೇತನರ ಮತಗಟ್ಟೆ ಹಾಗೂ ಕಳೆದ ಬಾರಿ ಕಡಿಮೆ ಮತದಾನವಾದ ಮತಗಟ್ಟೆಗಳಲ್ಲಿ ಪುನರಾವರ್ತಿತವಾಗಿ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗಿದೆ ಎಂದು ತಿಳಿಸಿದರು.

      ಶೇ.100 ರಷ್ಟು ಮತದಾನವಾಗಬೇಕು ಎಂಬ ಆಶಯ ಜಿಲ್ಲಾ ಸ್ವೀಪ್ ಸಮಿತಿಯದ್ದಾಗಿದೆ. ಈ ನಿಟ್ಟಿನಲ್ಲಿ ಮತದಾನ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಚುನಾವಣೆಗಿಂತ ಈ ಚುನಾವಣೆಯಲ್ಲಿ ಶೇ.4 ರಷ್ಟು ಮತದಾನ ಹೆಚ್ಚಳಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

      ಜಿಲ್ಲೆಯಲ್ಲಿ 14 ಸಖಿ ಮತಗಟ್ಟೆ, ಎರಡು ವಿಶೇಷ ಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮಹಿಳಾ ಮತದಾರರು ಹೆಚ್ಚಿರುವ ಹಾಗೂ ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳನ್ನು ಕಳೆದಬಾರಿ ಪಿಂಕ್ ಮತಗಟ್ಟೆ ಎಂದು ಕರೆಯಲಾಗುತ್ತಿತ್ತು. ಈ ಬಾರಿ ಈ ಮತಗಟ್ಟೆಗಳನ್ನು ಸಖಿ ಮತಗಟ್ಟೆಗಳೆಂದು ಕರೆಯಲಾಗುತ್ತಿದೆ ಎಂದು ತಿಳಿಸಿದರು.

       ಜಿಲ್ಲೆಯಲ್ಲಿ 17,239 ವಿಶೇಷ ಚೇತನ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಈ ಎಲ್ಲ ಮತದಾರರಿಗೆ ವಾಹನ ಸೌಕರ್ಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಮತದಾನಕ್ಕೆ ಸ್ಪೂರ್ತಿ ತುಂಬಲಾಗುವುದು ಎಂದು ಹೇಳಿದರು.

        ವಿದ್ಯುನ್ಮಾನ ಮತದಾನ ಯಂತ್ರ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆಯನ್ನು ಸೆಕ್ಟರ್ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲ ಮತಗಟ್ಟೆಗಳಲ್ಲಿ ದ್ವಿತೀಯ ಹಂತದ ಪ್ರಾತ್ಯಕ್ಷಿಕೆ ಪ್ರಗತಿಯಲ್ಲಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಾಗೂ ಎಲ್ಲ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳು ಮತದಾನ ಮಾಡುವಂತೆ ಪಾಲಕರಿಗೆ 10,400ಕ್ಕೂ ಹೆಚ್ಚು ಪತ್ರಗಳನ್ನು ಬರೆದಿದ್ದಾರೆ. ಇದಲ್ಲದೆ ತಮ್ಮ ಪಾಲಕರಲ್ಲದ ಇತರ ಪಾಲಕರಿಗೂ ಮತದಾನ ಮಾಡುವಂತೆ ವಿದ್ಯಾರ್ಥಿಗಳು ಪತ್ರ ಬರೆಯುವ ಚಟುವಟಿಕೆಯನ್ನು ನಡೆಸಿದ್ದಾರೆ ಎಂದು ತಿಳಿಸಿದರು.

        ಜಿಲ್ಲಾ ಕಾರಾಗೃಹ, ಎನ್.ಎಸ್.ಎಸ್. ಕ್ಯಾಂಪ್, ಜಾತ್ರೆಗಳು, ಸಂತೆ, ರೈಲ್ವೆ ಹಾಗೂ ಬಸ್ ನಿಲ್ದಾಣ ಸೇರಿದಂತೆ ಜನಸಾಂದ್ರತೆ ಸೇರುವ ಎಲ್ಲೆಡೆ ವಿಶೇಷ ಕಾರ್ಯಕ್ರಮಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಚುನಾವಣಾ ಜಾಗೃತಿ ವೇದಿಕೆ ಮತಗಟ್ಟೆ ಜಾಗೃತಿ ಗುಂಪುಗಳು, ಕ್ಯಾಂಪಸ್ ರಾಯಭಾರಿಗಳು, ಸಾಕ್ಷರತಾ ಸಂಘಗಳು, ಚುನಾವಣಾ ಜಾಗೃತ ಸಮಿತಿಗಳು ನಿಂತರವಾಗಿ ಮತದಾನ ಜಾಗೃತಿಯಲ್ಲಿ ಕಾರ್ಯಕ್ರಮ ನಡೆಸುತ್ತಿವೆ ಎಂದು ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link