ಬಾಲ ಕಾರ್ಮಿಕ ಪದ್ಧತಿ ತಡೆಯಲು ಏಕ ಶಿಶುಪದ್ಧತಿ ಸೂಕ್ತ:ನ್ಯಾ. ಶ್ರೀಮತಿ ಎಚ್.ಎಸ್.ರೇಣುಕಾದೇವಿ

ಹಾವೇರಿ

      ಏಕ ಶಿಶು ಕುಟುಂಬ ಪದ್ಧತಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ ಮತ್ತು ಬಾಲಕಾರ್ಮಿಕ ಪದ್ಧತಿ ತಡೆಯಲು ಸೂಕ್ತವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಶ್ರೀಮತಿ ಎಚ್.ಎಸ್.ರೇಣುಕಾದೇವಿ ಅವರು ಹೇಳಿದರು

        ಬುಧವಾರ ನಗರದ ಡಿ.ದೆವರಾಜ ಅರಸು ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾಡಳಿತ ಜಿಲ್ಲಾ ಕಾರ್ಮಿಕ ಇಲಾಖೆ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪೊಲೀಸ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದ ಉದ್ಘಾಟನಾ ಮಾತುಗಳನ್ನಾಡಿದ ಅವರು ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿದಲು ಇಂದಿನ ದಿನಮಾನಗಳಲ್ಲಿ ಮಕ್ಕಳು ಕಡಿಮೆ ಇರಬೇಕು. ಒಂದೇ ಮಗು ಉತ್ತಮ ಎಂದು ಹೇಳಿದರು.

        ಎಲ್ಲ ಮಕ್ಕಳಿಗೆ ತಾಯಿಯೇ ಮೊದಲ ಗುರು, ತಾಯಿಂದ ಪಾಠಕಲಿತ ಮಕ್ಕಳು ಘನತೆಯಿಂದ ಬದುಕುತ್ತಾರೆ. ಇಂದಿನ ಮಕ್ಕಳು ನಾಳೆಯ ಪ್ರಜೆಗಳು ಅಲ್ಲ. ಇಂದಿನ ಮಕ್ಕಳು ಇಂದಿನ ಪ್ರಜೆಗಳೇ. ಈ ನಿಟ್ಟಿನ್ಲಲಿ ಮಕ್ಕಳನ್ನು ಬೆಳೆಸಬೇಕು. ಜಗತ್ತಿನ ಆಗುಹೋಗುಗಳನ್ನು ತಿಳಿಸಬೇಕು, ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದು ಹೇಳಿದರು.

        ಎರಡರಿಂದ ಮೂರು ಮಕ್ಕಳಿರುವ ಕುಟುಂಬದಲ್ಲಿ ಕುಟುಂಬ ನಿರ್ವಹಣೆಗೆ ಪಾಲಕರ ಮೇಲೆ ಅಧಿಕ ಜವಾಬ್ದಾರಿ ಬೀಳುತ್ತದೆ. ಕುಟುಂಬದ ನಿರ್ವಹಣೆಗಾಗಿ ಮಕ್ಕಳು ದುಡಿಯುವ ಸ್ಥಿತಿ ನಿರ್ಮಾಣವಾಗುತ್ತದೆ. ಅನಿವಾರ್ಯವಾಗಿ ಹಿರಿಯ ಮಕ್ಕಳನ್ನು 14 ವರ್ಷ ತುಂಬುವದರೊಳಗೆ ಕಿರಿಯ ಮಕ್ಕಳನ್ನು ಸಾಕಲು ದುಡಿಯಲು ಕಳುಹಿಸುತ್ತಾರೆ. ಇದರಿಂದ ಹಿರಿಯ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಇದರ ಕುರಿತು ತಂದೆತಾಯಿಗಳಿಗೆ ಅರಿವು ಅಗತ್ಯವಾಗಿದೆ ಎಂದು ಹೇಳಿದರು.

        ಹದಿನಾಲ್ಕುವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವುದು ಅಪರಾಧವಾಗಿದೆ. ಬಾಲ ಕಾರ್ಮಿಕ ಪದ್ಧತಿ ಕಾನೂನಿನ ವಿರೋಧವಾಗಿದೆ. ಕೌಟುಂಬಿಕ ಸಮಸ್ಯೆ, ಸಾಮಾಜಿಕ ಸಮಸ್ಯೆ ಹಾಗೂ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಏಕ ಮಗು ಕುಟುಂಬ ಪದ್ಧತಿ ಪರಿಹಾರ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂಸಾಬ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನದ ಅನುಚ್ಛೆದ 4ರಲ್ಲಿ ಹೇಳಿರುವಂತೆ 14 ವರ್ಷದೊಳಿಗಿನ ಮಕ್ಕಳನ್ನು ಯಾವುದೆ ಕೆಲಸಗಳಿಗೆ ಬಳಸಿಕೋಳ್ಳುವುದು ಅಪರಾಧವಾಗಿದೆ. ಬಾಲಕಾರ್ಮಿಕ ಅಪರಾಧ ಸಾಬಿತಾದರೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಹತ್ತುಸಾವಿರ ರೂ.ದಂಡ ವಿಧಿಸಲಾಗುವುದು ಎಂದು ಹೇಳಿದರು.

        ಜಗತ್ತಿನಲ್ಲ್ಲಿ 235 ಮಿಲಿಯನ್ ಬಾಲಕಾರ್ಮಿಕರಿದ್ದಾರೆ, ಭಾರತದಲ್ಲಿ 15 ಮಿಲಿಯನ್ ಬಾಲ ಕಾರ್ಮಿಕರು ಇದ್ದಾರೆ. ಬಾಲ ಕಾರ್ಮಿಕ ಪದ್ಧತಿಯು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಹೇಳಿದರು.

        ಹದಿನಾಲ್ಕು ವರ್ಷದೊಳಗಿನ ಮಕ್ಕಳು ಕಾರ್ಖಾನೆ, ಹೋಟೆಲ್, ಅಂಗಡಿ, ಗ್ಯಾರೇಜ್, ಇಟ್ಟಂಗಿ ಭಟ್ಟಿ ಸೇರಿದಂತೆ ವಿವಿಧೆಡೆ ದುಡಿಯುವುದನ್ನು ಕಂಡರೆ ಸಾರ್ವಜನಿಕರು ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು, ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಅಥವಾ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಮನವಿ ಮಾಡಿಕೊಂಡರು.

        ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ.ವಿ.ವಿ. ಸಪ್ಪಣ್ಣನವರ ಬಾಲಕಾರ್ಮಿಕ ಪದ್ಧತಿ ನೀಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧಿಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಮತಿ ಕೆ.ಶ್ರೀವಿದ್ಯಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ ಪಾವಲಿ, ಉಪವಿಭಾಧಿಕಾರಿ ಎನ್.ತಿಪ್ಪೆಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡೆಗೇರಿ, ಮುತ್ತುರಾಜ ಮಾದರ, ಡಿ.ಜೆ .ನಂದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

         ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆವರಣದಿಂದ ಡಿ.ದೇವರಾಜ ಅರಸು ಭವನದವರೆಗೂ ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ನಡೆಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link