ಬ್ಯಾಡಗಿ:
ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ, ಆಣೆಕಟ್ಟುಗಳಿಂದ ನದಿಪಾತ್ರದ ಪಕ್ಕದಲ್ಲಿಯೇ ಪೈಪಲೈನ್ ನಿರ್ಮಿಸಿ ತನ್ಮೂಲಕ ನೇರವಾಗಿ ನೀರು ಪೂರೈಕೆಯಾದಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ, ಆದರೆ ಸರ್ಕಾರಕ್ಕೆ ನಮ್ಮಂತಹವರ ಕೂಗು ಕೇಳಿಸುತ್ತಿಲ್ಲ ಕೇವಲ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸೀಮಿತವಾಗುವಂತಹ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ ಎಂದು ಸೋಮವಾರ ಜರುಗಿದ ತಾಲ್ಲೂಕ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಗಂಭೀರ ಆರೋಪ ಮಾಡಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಜನವರಿ ಬರುವುದರೊಳಗಾಗಿ ತುಂಗಭಧ್ರಾ ನದಿಯೂ ಸಹ ಬತ್ತಿ ಹೋಗುತ್ತಿದೆ, ಇದಾದ ಬಳಿಕ ಡ್ಯಾಮ್‍ನಿಂದ 2 ಅಥವಾ 3 ಟಿಎಂಸಿ ನೀರು ಬಿಡುಗಡೆಯಾದರೂ ಸಹ ನಮ್ಮ ಗ್ರಾಮೀಣ ಪ್ರದೇಶವನ್ನು ತಲುಪುವಷ್ಟರಲ್ಲಿ ರೈತರು ತಮ್ಮ ಜಮೀನುಗಳಿಗೆ ನೀರು ಬಳಸುತ್ತಾರೆ, ಹೀಗಾಗಿ ನದಿಪಾತ್ರದಲ್ಲಿರುವ ಜಾಕ್‍ವೆಲ್ ಮುಟ್ಟುವಷ್ಟರಲ್ಲಿ ನೀರಿನ ಪ್ರಮಾಣ ಕುಂಠಿತಗೊಳ್ಳಲಿದೆ ಇದನ್ನು ಅರ್ಥೈಸಿಕೊಳ್ಳದ ಸರ್ಕಾರ ಕೇವಲ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುತ್ತಿದ್ದು ಇದರಿಂದ ಯಾರಿಗೂ ಪ್ರಯೋಜನವಾಗುತ್ತಿಲ್ಲ ಎಂದರು.
ಸದನದಲ್ಲಿ ಪ್ರಶ್ನಿಸುವೆ: ತುಂಗಭಧ್ರಾ ನದಿಯಿಂದ ಕೇವಲ 3 ಲೋಕಸಭಾ ಕ್ಷೇತ್ರದ ಅಂದಾಜು 70 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ, ಕೋಟಿಗಟ್ಟಲೇ ಹಣವ್ಯಯಿಸಿ ಅಲ್ಲಲ್ಲಿ ಜಾಕ್‍ವೆಲ್‍ಗಳನ್ನು ನಿರ್ಮಿಸಲಾಗಿದೆ, ಗಾಜನೂರು ಡ್ಯಾಮ್‍ನಿಂದ ಬ್ಯಾಡಗಿ ಮತಕ್ಷೇತ್ರ ಕೇವಲ 245 ಕಿ.ಮೀ.ಅಂತರದಲ್ಲಿದ್ದು ಅಲ್ಲಿಂದಲೇ ಪೈಪೈಲೈನ್‍ಗಳ ಅಳವಡಿಸುವ ಮೂಲಕ ಕುಡಿಯುವ ನೀರು ಪೂರ್ಯೆಕೆಗೆ ಕ್ರಮಕೈಗೊಂಡಿಲ್ಲ ಹೆಚ್ಚು ಸೂಕ್ತ ಈ ಕುರಿತು ಸದನದಲ್ಲಿ ಪ್ರಶ್ನಿಸುವುದಾಗಿ ತಿಳಿಸಿದರು.
ಟಾಸ್ಕ್‍ಫೋರ್ಸ್‍ಗೆ ಹಣಕೊಟ್ಟರೆ ಸಾಕೇ..? ನೀರು ತರುವುದೆಲ್ಲಿಂದ:ಕೇವಲ ಟಾಸ್ಕಫೋರ್ಸ ಸಮಿತಿಗೆ ಹಣ ಒದಗಿಸಿದರೇ ಸಾಲದು, ನೀರು ಎಲ್ಲಿಂದ ತರುವುದು ಎಂಬ ಮಾಹಿತಿ ಸಮಿತಿಯಿಂದ ಸಿಗುತ್ತಿಲ್ಲ, ಸಾವಿರ ಅಡಿ ಕೊರೆಸಿದರೂ ಭೂಮಿಯಲ್ಲಿ ನೀರು ಸಿಗುತ್ತಿಲ್ಲ ಇಂತಹ ಸನ್ನಿವೇಶದಲ್ಲಿ ನಾವಿದ್ದೇವೆ, ಇದನ್ನು ನಿಭಾಯಿಸಲು ಸರ್ಕಾರದ ಬಳಿ ಯಾವುದೇ ಪರಿಹಾರ ಮಾರ್ಗೋಪಾಯಗಳಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಈ ಎಲ್ಲ ಸಮಸ್ಯೆಗಳನ್ನು ಒಳಗೊಂಡಂತಹ ಸಮಗ್ರ ವರದಿಯನ್ನು ಠರಾವು ಮಾಡುವ ಮೂಲಕ ಸರ್ಕಾರಕ್ಕೆ ಕಳುಹಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಂಗ್ರೆಸ್ ಬಿಜೆಪಿ ಜಟಾಪಟಿ: ಶಿಕ್ಷಣ ಇಲಾಖೆ ಮೇಲಿನ ಚರ್ಚೆಯು ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ, ಹಿಂದಿನ ಅವಧಿಯಲ್ಲಿ ಯಾವುದೇ ಶಾಲೆಗಳ ದುರಸ್ತಿಗೆ ಅಥವಾ ನೂತನ ಕೊಠಡಿ ನಿರ್ಮಾಣಕ್ಕೆ ಸೂಕ್ತ ಅನುದಾನ ಒದಗಿಸಿಲ್ಲ, ಇದರಿಂದ ತಾಲೂಕಿನ ಬಹುತೇಕ ಶಾಲಾ ಕಟ್ಟಡಗಳು ಇದ್ದೂ ಇಲ್ಲದಂತಾಗಿವೆ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ನಾದುರಸ್ತಾದ 274 ಶಾಲೆಗಳ ಸಮಗ್ರ ವರದಿ ಸರ್ಕಾರಕ್ಕೆ ಕಳುಹಿಸಿಕೊಟ್ಟು ನಿರ್ಗಮಿತ ಶಿಕ್ಷಣ ಸಚಿವ ಮಹೇಶ ಅವರಿಂದ 7.14 ಕೋಟಿ ರೂ.ದುರಸ್ತಿಗಾಗಿ ಮಂಜೂರು ಮಾಡಿಸಿದ್ದಾಗಿ ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾಮ ನಿರ್ದೇಶಿತ ಸದಸ್ಯ ಕಾಂಗ್ರೆಸ್‍ನ ಮಂಜನಗೌಡ ಪಾಟೀಲ, ಹಿಂದಿನ ಅವಧಿಯಲ್ಲಿ 18 ಕೋಟಿ ರೂ.ವೆಚ್ಚದ ಕೊಠಡಿಗಳು ಕ್ಷೇತ್ರಕ್ಕೆ ಮಂಜೂರು ಮಾಡಿಸಲಾಗಿದೆ, ಅವುಗಳನ್ನೇ ಇದೀಗ ತಾವು ಉದ್ಘಾಟಿಸುತ್ತಿರುವುದಾಗಿ ಶಾಸಕರನ್ನು ಕುರಿತು ಹೇಳಿದರು. ಈ ಮಾತಿಗೆ ಆಕ್ಷೇಪಿಸಿದ ಶಾಸಕ ವಿರೂಪಾಕ್ಷಪ್ಪ ನೀವು ಕೊಟ್ಟ ಪ್ರಸ್ತಾವನೆಯಲ್ಲಿ ಕೇವಲ 4 ಕೊಠಡಿಗಳು ಮಾತ್ರ ಮಂಜೂರಾಗಿದ್ದು ಕಾಮಗಾರಿ ಪ್ರಾಂಭವಾಗಿವೆ, ಆದರೆ ನಮ್ಮ ಪ್ರಯತ್ನದಿಂದ ಇದೀಗ 64 ಹೊಸ ಕೊಠಡಿಗಳು ಮಂಜೂರಾಗಿದ್ದಾಗಿ ತಿಳಿಸಿದರು.
ಹನಿ ನೀರಾವರಿ ಯೋಜನೆಗೆ ದಲ್ಲಾಲಿಗಳು: ತೋಟಗಾರಿಕೆ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಶಮನಾಭಾಯಿ, ಇಲಾಖೆಯಲ್ಲಿ ಫಲಾನುಭವಿಗಳಾಗಲು ಮೊದಲು ಮದ್ಯವರ್ತಿಗಳನ್ನು (ದಲಾಲಿ) ಭೇಟಿಯಾಗಬೇಕು ಅಂದಾಗ ಮಾತ್ರ ಇಲಾಖೆಯಲ್ಲಿನ ಕೆಲಸ ಸುಲಭವಾಗಲಿದೆ, ಇಲ್ಲದೇ ಹೋದರೆ ಡ್ರಿಪ್ ಇರಿಗೇಶನ್ ರೈತನ ಹೊಲಕ್ಕೆ ತಲುಪಲು ಸಾಧ್ಯವಾಗುವುದಿಲ್ಲ ಎಂದು ಆರೋಪಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ನಿರ್ದೇಶಕಿ ಹಿಂದಿನ ಸಭೆಯಲ್ಲೂ ಸದರಿ ವಿಷಯ ಚರ್ಚೆಯಾದಾಗ ಅಂತಹದ್ದೊಂದು ಪ್ರಕರಣವನ್ನು ನಮಗೆ ಕೊಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವೆ, ಇಂದಿನ ಸಭೆಯಲ್ಲೂ ಅದೇ ಮಾತಿಗೆ ಭದ್ಧವಾಗಿದ್ದೇನೆ ಎಂದರು.
ತಕರಾರು ಮಾಡಿದರೇ ಮಾಹಿತಿ ಕೊಡಿ: ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನಾ ಇಲಾಖೆ (ಪಿಎಂಜಿಎಸ್‍ವೈ) ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿರೂಪಾಕ್ಷಪ್ಪ, ರಸ್ತೆ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ್ದೇನೋ ನಿಜ, ಆದರೆ ತಕರಾರು ಸಲ್ಲಿಸಿದ ಕೆಲವೆಡೆಗಳಲ್ಲಿ ನಮ್ಮ ಗಮನಕ್ಕೂ ಸಹ ತಾರದೇ ಕಾಮಗಾರಿ ಅಪೂರ್ಣಗೊಳಿಸಿದ್ದೀರಿ, ಇನ್ನು ಮುಂದೆ ಇಂತಹ ಕೆಲಸಕ್ಕೆ ಮುಂದಾಗದಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ವೇದಿಕೆಯಲ್ಲಿ ಟಿಈಓ ಅಬಿದ್ ಗದ್ಯಾಳ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಜಿ.ಪಂ.ಸದಸ್ಯರಾದ ಸುಮಂಗಲಾ ಪಟ್ಟಣಶೆಟ್ಟಿ, ಮುನಾಫ್ ಎಲಿಗಾರ ಉಪಸ್ಥಿತರಿದ್ದರು. ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ಕೇಶವ ಕಿತ್ತೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.