ಅಕಾಲಿಕ ಮಳೆ ಕೃಷಿಗೆ ಪೂರಕವಲ್ಲ

ಚಿಕ್ಕನಾಯಕನಹಳ್ಳಿ

           ಇದು ಬೆಳೆಗಾಲ ಅಲ್ಲ, ಬರೀ ಮಳೆಗಾಲ, ಅಕಾಲಿಕ ಮಳೆ ಬೀಳುತ್ತಿರುವುದರಿಂದ ಸರಾಸರಿ ಮಳೆ ದಾಖಲಾಗುತ್ತಿದೆ ಆದರೆ ಅದು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿಲ್ಲ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

       ತಾಲ್ಲೂಕಿನ ತಿಮ್ಮನಹಳ್ಳಿಯಲ್ಲಿ ಕೃಷಿ ಇಲಾಖೆಯ ಕೃಷಿ ಸಿಂಚನ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಿಸಿ ಮಾತನಾಡಿದ ಅವರು, ರೈತರು ಕೃಷಿ ಹೊಂಡ ನಿರ್ಮಾಣ ಮಾಡಿಕೊಳ್ಳಲು ಇಲಾಖೆಯಲ್ಲಿ ವಿಫುಲ ಅವಕಾಶ ಇದ್ದು, ಕೃಷಿ ಹೊಂಡ ಮಾಡಿಕೊಳ್ಳುವ ಮೂಲಕ ಮಳೆ ನೀರು ಜಮೀನಿನ ಹೊರಗೆ ಹರಿದು ಹೋಗದಂತೆ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದರು.

      ರೈತರು ಕೃಷಿ ಚಟುವಟಿಕೆಯ ಜೊತೆಗೆ ಹೈನುಗಾರಿಕೆಯಂತಹ ಉಪಕಸುಬುಗಳನ್ನು ಅಳವಡಿಸಿಕೊಳ್ಳಿ, ರೈತರು ದುಡಿಮೆಯ ಮಾರ್ಗವನ್ನು ಕಂಡುಕೊಳ್ಳಬೇಕು, ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಕೃತಕ ಪಶು ಆಹಾರದ ಮೊರೆ ಹೋಗದೆ ಹಸಿರು ಮೇವು ಬೆಳದುಕೊಳ್ಳುವ ಮೂಲಕ ಹೈನುಗಾರಿಕೆಯನ್ನು ಲಾಭದಾಯಕ ಕೃಷಿ ಕಸುಬನ್ನಾಗಿ ಮಾಡಿಕೊಳ್ಳಬಹುದು ಎಂದ ಅವರು, ರೈತರು ಸರ್ಕಾರಿ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಅಭಿವೃದ್ದಿ ಹೊಂದಬೇಕು, ರೈತರ ಅಭ್ಯುದಯ ಮಾತ್ರ ನಿಜವಾದ ಅಭಿವೃದ್ದಿ, ಕೇವಲ ರಸ್ತೆ, ಚರಂಡಿ, ಕಾರ್ಖಾನೆಗಳ ನಿರ್ಮಾಣ ಸಂಪೂರ್ಣ ಅಭಿವೃದ್ದಿ ಅಲ್ಲ ಎಂದರು.

     ಏಕಬೆಳೆ ಎಂದೂ ಲಾಭದಾಯಕವಲ್ಲ, ರೈತರು ಮಿಶ್ರ ಬೆಳೆ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು, ತೋಟಗಾರಿಕಾ ಬೆಳೆಗಳ ಜೊತೆಗೆ ಅರಣ್ಯ ಬೆಳೆಗಳನ್ನು ಬೆಳೆಯಬೇಕು, ಕೃಷಿಯ ಮೂರನೇ ಒಂದು ವರಮಾನ ಹೂಡಿಕೆ ಇಲ್ಲದೆ ಬರಬೇಕು ಎಂದರೆ ಹಣ್ಣಿನ, ಅರಣ್ಯ ಸಸಿಗಳನ್ನು ನೆಡಬೇಕು ಎಂದರು.

       ಕುರಿ ಸಾಕಣಿಕೆ ಅತ್ಯಂತ ಬೇಗ ವರಮಾನವನ್ನು ಕೊಡುವ ಕ್ಷೇತ್ರ, ಒಂದು ವರ್ಷದಲ್ಲಿ ಹೂಡಿಕೆಯಾದ ಹಣ ದ್ವೀಗುಣಗೊಳ್ಳುವ ಏಕೈಕ ಕಸುಬು ಕುರಿ ಸಾಕಾಣಿಕೆ, ನೀರು ಅಮೂಲ್ಯ ಸಂಪತ್ತು, ವ್ಯಯ ಮಾಡಬೇಡಿ, ಹನಿನೀರನ್ನು ಉಳಿಸಿ ಕೃಷಿಯಲ್ಲಿ ಬಳಸಿಕೊಳ್ಳುವುದು ಇಂದಿನ ತುರ್ತು ಎಂದ ಅವರು ಕೇಂದ್ರ ಸರ್ಕಾರದ ಜಲನಯನ ಅಭಿವೃದ್ದಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

       ಕಾರ್ಯಕ್ರಮದಲ್ಲಿ ತಿಮ್ಮನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಕೃಷಿ ಉಪ ನಿರ್ದೇಶಕ ಡಿ.ಉಮೇಶ್, ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಮ್ಮ, ತಾ.ಪಂ ಸದಸ್ಯೆ ಇಂದಿರಾಕುಮಾರಿ, ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ, ಉಮಾಶಂಕರ್, ಗ್ರಾ.ಪಂ ಉಪಾಧ್ಯಕ್ಷೆ ಕಾಂತಮ್ಮ, ಪ್ರಾಥಮಿಕ ಕೃಷಿ ಬ್ಯಾಂಕಿನ ಅಧ್ಯಕ್ಷ ಅಶ್ವತ್‍ನಾರಾಯಣ್, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link