ವೇತನ ತಾರತಮ್ಯ ನಿವಾರಣೆ ಬಗ್ಗೆ ಸರ್ಕಾರದ ನಿರ್ಲಕ್ಷ : 22ರಿಂದ ಮುಷ್ಕರ

0
10

ಚಳ್ಳಕೆರೆ

     ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ಸರಿ ಪಡಿಸುವಂತೆ ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ, ಸರ್ಕಾರವನ್ನು ಒತ್ತಾಯಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ನಿರ್ಲಕ್ಷ್ಯೆತನವನ್ನು ಪ್ರತಿಭಟಿಸಿ ಅ.22ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಲಕ್ಷ್ಮಣ್ ತಿಳಿಸಿದ್ಧಾರೆ.

      ಅವರು, ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವೇತನ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ 2011ರಲ್ಲಿ ಜಿ.ಕುಮಾರ್‍ನಾಯ್ಕರವರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿಯನ್ನು ಭಾಗಶಃ ಒಪ್ಪಿದ ಸರ್ಕಾರ ವೇತನ ತಾರತಮ್ಯವನ್ನು ಸರಿಪಡಿಸುವ ಆಶ್ವಾಸನೆ ನೀಡಿತ್ತು.

       ಕಳೆದ 2016ರ ಮತ್ತು 2017ರಲ್ಲಿ ರಾಜ್ಯ ವ್ಯಾಪಿ ಪ್ರತಿಭಟನೆ ನಡೆಸಿದಾಗ 6ನೇ ವೇತನ ಆಯೋಗದಲ್ಲಿ ವೇತನ ತಾರತಮ್ಯವನ್ನು ಸರಿ ಪಡಿಸುವ ನಿರ್ಧಾರ ಸರ್ಕಾರ ಪ್ರಕಟಿಸಿತ್ತು. 2016-17ರಲ್ಲಿ ಪರೀಕ್ಷಾ ಸಮಯದಲ್ಲಿ ಮುಷ್ಕರಕ್ಕೆ ಕರೆ ನೀಡಿದ್ದರೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡದೆ ಕಪ್ಪುಪಟ್ಟಿ ಕಟ್ಟಿಕೊಂಡು ಕಾರ್ಯನಿರ್ವಹಿಸಿದ್ದೇವೆ. ಆದರೆ, ಸರ್ಕಾರ ಪುನಃ ವೇತನ ತಾರತಮ್ಯ ಸರಿಪಡಿಸುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

      ಆರನೇ ವೇತನ ಆಯೋಗದಲ್ಲೂ ಸಹ ಈ ಸಮಸ್ಯೆಗೆ ಪರಿಹಾರವನ್ನು ನೀಡಿಲ್ಲ. ಅದ್ದರಿಂದ ಅ.14ರೊಳಗೆ ಸರ್ಕಾರ ವೇತನ ತಾರತಮ್ಯ ಸರಿಪಡಿಸದೇ ಇದ್ದಲ್ಲಿ ಅ.22ರಿಂದ ರಾಜ್ಯ ಮಟ್ಟದ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ಕೆ.ಎನ್.ವಸಂತಕುಮಾರ್, ಕಾರ್ಯದರ್ಶಿ ಮೂಡಲಗಿರಿಯಪ್ಪ, ಸಲಹಾ ಸಮಿತಿ ಸದಸ್ಯ ಟಿ.ಜಯಂತ್, ಮಹಿಳಾ ಪ್ರತಿನಿಧಿ ಡಾ.ಚಾರುಲತಾ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here