ಮಧುಗಿರಿ
ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ಸಹ ಇನ್ನೂ ದೇವರ ಹೆಸರಿನಲ್ಲಿ ಹರಿಜನರಿಗೆ ಕ್ಷೌರ ಮಾಡಲು ಅಂಗಡಿ ಮಾಲೀಕ ನಿರಾಕರಿಸಿ ಗ್ರಾಮದಲ್ಲಿ ಅಸ್ಪೃಶ್ಯತೆ ಹಾಗೂ ಮೌಢ್ಯಾಚರಣೆಯು ಇನ್ನೂ ಇಲ್ಲಿ ಜೀವಂತವಾಗಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ಗಂಜಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುದ್ದೇನಹಳ್ಳಿ ಗ್ರಾಮದಲ್ಲಿನ ದೇವಾಲಯದ ಸಮೀಪ ಕ್ಷೌರದಂಗಡಿಯನ್ನು ತೆರೆಯಲಾಗಿದೆ. ಈ ಅಂಗಡಿಯಲ್ಲಿ ಕೇವಲ ಮೇಲ್ವರ್ಗದ ಜನರಿಗೆ ಮಾತ್ರ ಕ್ಷೌರ ಮಾಡುತ್ತಿದ್ದು, ಹರಿಜನರಿಗೆ ಕ್ಷೌರ ಮಾಡಲು ನಿರಾಕರಿಸಲಾಗಿದೆ. ಹಾಗಾಗಿ ಗ್ರಾಮದಲ್ಲಿನ ಹರಿಜನರು ಕ್ಷೌರಕ್ಕಾಗಿ ಮಧುಗಿರಿ ಹಾಗೂ ಗೊಂದಿಹಳ್ಳಿಗೆ ಹೋಗಬೇಕಾದ ಅನಿರ್ವಾಯತೆ ಎದುರಾಗಿದೆ.
ಅಂಗಡಿ ಮಾಲೀಕ ಪರ ಊರಿನವನಾಗಿದ್ದು, ಮುದ್ದೇನಹಳ್ಳಿಯಲ್ಲಿ ಅಂಗಡಿ ತೆರೆಯುವುದಕ್ಕೂ ಮುನ್ನ ಊರಿನ ಕೆಲವರು ರಾಯಮ್ಮ ದೇವಾಲಯ ಹತ್ತಿರವಿರುವುದರಿಂದ ಇಲ್ಲಿ ಹರಿಜನರು ಬರುವುದು ಬೇಡ. ಹರಿಜನರಿಗೆ ಕ್ಷೌರ ಮಾಡಬಾರದು ಎಂದು ಅಂಗಡಿ ಮಾಲೀಕ ತಿಮ್ಮರಾಜುವಿಗೆ ಮೌಖಿಕವಾಗಿ ಸೂಚಿಸಿದ್ದರು ಎಂಬುದು ಅಂಗಡಿ ಮಾಲೀಕ ತಿಮ್ಮರಾಜುವಿನ ಅಳಲಾಗಿದೆ.
ಗ್ರಾಮಸ್ಥ ಅಂಜನ ಮೂರ್ತಿ ಮಾತನಾಡಿ, ಕಳೆದ 10 ವರ್ಷಗಳಿಂದಲೂ ಗ್ರಾಮದಲ್ಲಿ ಹರಿಜನರಿಗೆ ಕ್ಷೌರ ನಿರಾಕರಿಸಲಾಗಿದೆ. ಆದರೆ ಈಗ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಕ್ಷೌರದಂಗಡಿಯನ್ನು ತೆರಯಲಾಗಿದ್ದರೂ ಸಹ ನಮಗೆ ಕ್ಷೌರ ಮಾಡುತ್ತಿಲ್ಲ. ಕೇವಲ ಮೇಲ್ವರ್ಗದ ವರಿಗೆ ಮಾತ್ರ ಕ್ಷೌರ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗ್ರಾಮಸ್ಥ ಮೂರ್ತಿ ಮಾತನಾಡಿ, ಕ್ಷೌರದಂಗಡಿ ಮಾಲೀಕ ನೀವು ಹರಿಜನರು ನಿಮಗೆ ನಾನು ಕ್ಷೌರ ಮಾಡುವುದಿಲ್ಲ. ನೀವು ದೂರ ನಿಲ್ಲಿ ಎಂದು ಹೇಳುತ್ತಾರೆ. ನಾವು ಹಣ ನೀಡುತ್ತೇವೆ ಎಂದರೂ ಸಹ ನಮಗೆ ಕ್ಷೌರ ಮಾಡಲು ನಿರಾಕರಿಸಲಾಗುತ್ತಿದೆ. ಸಂಬಂಧ ಪಟ್ಟವರು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳ ಬೇಕು, ನಮಗೆ ನ್ಯಾಯ ದೊರಕಿಸಬಬೇಕು ಎಂದು ಕೋರಿದ್ದಾರೆ.
ದಲಿತ ಪರ ಒಕ್ಕೂಟದ ಅಧ್ಯಕ್ಷ ಸಂಜೀವಮೂರ್ತಿ ಮಾತನಾಡಿ, ಹಲವಾರು ವರ್ಷಗಳಿಂದ ಯರಗುಂಟೆ ಗ್ರಾಮದ ತಿಮ್ಮರಾಜು ಎನ್ನುವವರು ಕ್ಷೌರದ ಅಂಗಡಿಯನ್ನು ತೆರೆದಿದ್ದು, ಹರಿಜನರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದಾನೆ. ನಾವುಗಳು ಹೋಗಿ ಕೇಳಿದರೆ ನಾನೇನಿದ್ದರೂ ಮೇಲ್ವರ್ಗದವರಿಗೆ ಮಾತ್ರ ಹೇರ್ P್ಪಟಿಂಗ್, ಶೇವಿಂಗ್ ಮಾಡುತ್ತೇನೆ ಎಂದು ಹೇಳುತ್ತಿದ್ದಾನೆ. ಹರಿಜನರು ಕ್ಷೌರಕ್ಕಾಗಿ ಒಂದು ದಿನದ ಕೂಲಿಯನ್ನು ಬಿಟ್ಟು ಬೇರೆ ಊರುಗಳಿಗೆ ಹೋಗಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ಸಮಸ್ಯೆಯನ್ನು ಬಗೆಹರಿಸಿ, ನ್ಯಾಯ ದೊರಕಿಸಿಕೊಡಲಿ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳಿಂದ ಉಗ್ರ ಹೋರಾಟ ನಡೆಸುವುದು ನಮಗೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.