ದಾವಣಗೆರೆ
ಜಿಲ್ಲೆಯಲ್ಲಾಗಿರುವ ಯೂರಿಯಾ ಅಭಾವವನ್ನು ನೀಗಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಕೃಷಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಲ್ಲಿನ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಂದನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಗಳೂರು ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದೆ. ಜಿ.ಪಂ ಸದಸ್ಯರು ದಾವಣಗೆರೆಯ ಕೆಲವೇ ಡೀಲರ್‍ಗಳಿಗೆ ಯೂರಿಯಾ ಸರಬರಾಜು ಆಗುತ್ತಿದ್ದು, ಅವರು ಅಭಾವ ಸೃಷ್ಟಿಸಿದ್ದಾರೆ. ಜೊತೆಗೆ ಯೂರಿಯಾ ಜೊತೆ ಇನ್ನಿತರೆ ರಾಸಾಯನಿಕ ಗೊಬ್ಬರ ಕೊಳ್ಳುವಂತೆ ರೈತರನ್ನು ಒತ್ತಾಯಿಸಲಾಗುತ್ತಿದೆ ಎಂದು ದೂರಿದ್ದಾರೆ. ಜಂಟಿ ಕೃಷಿ ನಿರ್ದೇಶಕರು ಈ ಬಗ್ಗೆ ಡೀಲರ್‍ಗಳ ದಾಸ್ತಾನು ಮಳಿಗೆಗಳಿಗೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಂಡು ಯೂರಿಯಾ ಅಭಾವವನ್ನು ಸೂಕ್ತವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.
ತಾಲ್ಲೂಕುಗಳಲ್ಲಿಯೂ ಹಲವಾರು ರೈತರಿಂದ ಕೃಷಿ ಸಮ್ಮಾನ್ ಯೋಜನೆ ಮತ್ತು ಯೂರಿಯಾ ಗೊಬ್ಬರ ದೊರಕುತ್ತಿಲ್ಲವೆಂಬ ದೂರುಗಳಿದ್ದು ಕೃಷಿ ಜಂಟಿ ನಿರ್ದೇಶಕರು ತಾವೇ ಸ್ವತಃ ಕ್ಷೇತ್ರಗಳಿಗೆ ತೆರಳಿ ರೈತರಿಂದ ಯಾವುದೇ ದೂರುಗಳು ಬರದಂತೆ ಕ್ರಮ ವಹಿಸಬೇಕೆಂದು ತಾಕೀತು ಮಾಡಿದರು.
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ಜಿಲ್ಲೆಯಲ್ಲಿ 2020-21 ನೇ ಸಾಲಿನ ಜೂನ್ 30 ರವರೆಗೆ ಸರಾಸರಿ ವಾಡಿಕೆ ಮಳೆ 184 ಮಿ.ಮೀ ಗೆ 189 ಮಿ.ಮೀ ವಾಡಿಕೆ ಮಳೆಯಾಗಿದ್ದು, ಶೇ.3 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 243698 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಂಡಿದ್ದು ಇದುವರೆಗೆ 103342 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ. ಮೆಕ್ಕೆಜೋಳ ಬೆಳೆದು ಕೊರೊನಾ ಹಿನ್ನೆಲೆ ಸಂಕಷ್ಟಗೀಡಾಗಿದ್ದ ಸುಮಾರು 56618 ರೈತರಿಗೆ ತಲಾ ರೂ.5 ಸಾವಿರವನ್ನು ಪರಿಹಾರ ನೀಡಲಾಗಿದೆ ಎಂದರು.
ಸಚಿವ ಭೈರತಿ ಬಸವರಾಜ್ ಮಾತನಾಡಿ, ಬಾಕಿ ಇರುವ ಕುಡಿಯುವ ನೀರು ಕಾಮಗಾರಿಗಳನ್ನು ಆದಷ್ಟು ವೇಗದಲ್ಲಿ ಪೂರ್ಣಗೊಳಿಸಬೇಕೆಂದರು. ಶಾಸಕರಾದ ಎಸ್.ವಿ.ರಾಮಚಂದ್ರರವರು ಸುಮಾರು 10 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ 27 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ಜಾರಿ ಮಾಡಬೇಕೆಂದರು.
ಕಾರ್ಯಪಾಲಕ ಅಭಿಯಂತರ ನಾಗಪ್ಪ ಹೆಚ್, ಮಾತನಾಡಿ, ಹಲವಾರು ಯೋಜನೆಗಳು ಪ್ರಗತಿಯಲ್ಲಿವೆ. ಜಗಳೂರು 27 ಗ್ರಾಮಗಳಿಗೆ ನೀರು ನೀಡುವ ಯೋಜನೆಯನ್ನು ರೂ.275 ಕೋಟಿಯಲ್ಲಿ ತಯಾರಿಸಿ ಅನುಮೋದನೆ ಹಂತದಲ್ಲಿದೆ. ಆದಷ್ಟು ಶೀಘ್ರವಾಗಿ ಮಾಡಲಾಗುವುದು ಎಂದರು.
ವಿವಿಧ ನಿಗಮಗಳಡಿ ಕೈಗೊಂಡಿರುವ ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆಗಳ ಮಾಹಿತಿ ಪಡೆದ ಸಚಿವರು, ಸೂಕ್ತ ಸಮಯಕ್ಕೆ ಸಾಲ ಸೌಲಭ್ಯವನ್ನು ಬ್ಯಾಂಕ್‍ನವರು ನೀಡಬೇಕು. ಸರ್ಕಾರದ ಯಾವುದೇ ಸವಲತ್ತುಗಳಿಗೆ ಬ್ಯಾಂಕಿನವರು ಫಲಾನುಭವಿಗಳ ಸಾಲಕ್ಕೆ ಹೊಂದಾಣಿಕೆ ಮಾಡಬಾರದು. ಈ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಬ್ಯಾಂಕುಗಳಿಗೆ ಸೂಚನೆ ನೀಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಬೆಸ್ಕಾಂ ನಿಂದ ವಿದ್ಯುತ್ ಸಂಪರ್ಕ ಬಾಕಿ ಇದ್ದು ಶೀಘ್ರವೇ ಸಂಬಂಧಿಸಿದ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಶಾಸಕ ಮಾಡಾಳು ವಿರೂಪಾಕ್ಷಪ್ಪನವರು ಮಾತನಾಡಿ, ನರೇಗಾ ಯೋಜನೆಯಡಿ ಅರೆ ಮಲೆನಾಡಿನಲ್ಲಿ ಕೈಗೊಳ್ಳಲಾಗುತ್ತಿರುವ ಅಡಿಕೆ ಬೆಳೆಗೆ ಬಿಪಿಎಲ್ ಕಾರ್ಡುದಾರರಿಂದಲೂ ಸಣ್ಣ ಹಿಡುವಳಿ ಪ್ರಮಾಣ ಪತ್ರ ಕೇಳಲಾಗುತ್ತಿದೆ. ಬಿಪಿಎಲ್ ಇದ್ದರೆ ಈ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ. ಈ ಬಗ್ಗೆ ಜಿ.ಪಂ. ಸಿಇಓ ಸೂಕ್ತ ನಿರ್ದೇಶನ ನೀಡಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯ ಬರಪೀಡಿತವಾಗಿದ್ದ ಜಗಳೂರು ತಾಲ್ಲೂಕಿನಲ್ಲಿ ಈ ಬಾರಿ ಯಥೇಚ್ಚ ಮಳೆಯಾಗಿದೆ. ಜೊತೆಗೆ ನೆರೆ ಭೀತಿ ಇರುವ ಹರಿಹರ ಮತ್ತು ಹೊನ್ನಾಳಿಯಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದೇ ವೇಳೆ ಸೋಪ್ಸ್ & ಡಿಟೆರ್ಜೆಂಟ್ಸ್ ನಿಗಮದ ನೂತನ ಅಧ್ಯಕ್ಷರಾದ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ರಾಜ್ಯ ಪರಿಶಿಷ್ಟ ಪಂಗಡ ವಾಲ್ಮೀಕಿ ನಿಗಮದ ನೂತನ ಅಧ್ಯಕ್ಷ ಎಸ್.ವಿ.ರಾಮಚಂದ್ರಪ್ಪ ಇವರನ್ನು ಜಿಲ್ಲಾಡಳಿತದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೊ.ಲಿಂಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾನಾಯ್ಕ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
