ನಿಯಮ ಉಲ್ಲಂಘಿಸಿದ ಅಧಿಕಾರಿಗಳ ಅಮಾನತ್ತಿಗೆ ಆಗ್ರಹ

ಚಿತ್ರದುರ್ಗ:

    ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಶೇ 60:40 ಅನುಪಾತ ಅನುಸರಿಸದೇ ನಿಯಮ ಉಲ್ಲಂಘನೆ ಮಾಡಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರು ಆಗ್ರಹಿಸಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಾಕಿ ಇರುವ ನರೇಗಾ ಬಿಲ್ ಪಾವತಿ ಕುರಿತು ಜಿಲ್ಲಾ ಪಂಚಾಯಿತಿ ಸದಸ್ಯರು ಚರ್ಚಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ನಾಗೇಂದ್ರನಾಯ್ಕ್ ಮಾತನಾಡಿ, ಹಿರಿಯೂರು ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಹೆಚ್ಚು ಕಾಮಗಾರಿ ನಡೆದಿದೆ. ಎರಡೂ ವರ್ಷ ಕಳೆದರೂ ಕಾಮಗಾರಿಯ ಬಿಲ್ ಪಾವತಿಯಾಗಿಲ್ಲ. ಈ ಕುರಿತು ಪದೇ ಪದೇ ಸಭೆಗಳಲ್ಲಿ ಚರ್ಚಿಸಲಾಗುತ್ತಿದೆ. ಸರ್ಕಾರಕ್ಕೆ ಪತ್ರ ಬರೆದರೂ ಅನುದಾನ ಬರುತ್ತಿಲ್ಲ. ಎರಡು ವರ್ಷಗಳಿಂದ ಕಾಮಗಾರಿ ಬಿಲ್ ಬಾಕಿ ಉಳಿಸಿಕೊಂಡರೆ ಕೆಲಸ ಮಾಡಿದವರು ಏನು ಮಾಡಬೇಕು. ಬಾಕಿ ಉಳಿಸಿಕೊಂಡಿರುವ ನರೇಗಾ ಬಿಲ್ ಪಾವತಿ ಕುರಿತು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒಗೆ ಮನವಿ ಮಾಡಿದರು.

    ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಹೊರಗುತ್ತಿಗೆಯಡಿ ಇಂಜಿನಿಯರ್‍ಗಳನ್ನು ಒಂದೇ ಸಂಸ್ಥೆಯಡಿ ಮುಂದುವರಿಸಲಾಗುತ್ತಿದ್ದು, ಅದನ್ನು ಜಿಲ್ಲಾ ಪಂಚಾಯಿತಿಯಿಂದಲೇ ನೇರವಾಗಿ ಟೆಂಡರ್ ಕರೆದು ಹೊರಗುತ್ತಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

     ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೇಶ ಮಾತನಾಡಿ, ಕಳೆದ ಮೂರು ವರ್ಷಗಳಿಂದ ನರೇಗಾ ಯೋಜನೆಯಡಿಯಲ್ಲಿ ಶೇ 60:40 ಅನುಪಾತ ಉಲ್ಲಂಘನೆ ಆಗಿದೆ. ಕಾಮಗಾರಿ ಕೈಗೊಳ್ಳುವ ಮುನ್ನ ಅನುಪಾತದಲ್ಲಿ ಕ್ರಿಯಾ ಯೋಜನೆ ಮುಂಜೂರಾತಿ ಆಗಿದ್ದರೆ ಮಾತ್ರ ಬಿಲ್ ಪಾವತಿಯಾಗಿದೆ. ನಿಯಮ ಪಾಲನೆಯಾಗದ ಕಾಮಗಾರಿಗಳಿಗೆ ಬಿಲ್ ಪಾವತಿ ಮಾಡಲು ಸಾಧ್ಯವಿಲ್ಲ. ನಿಯಮ ಉಲ್ಲಂಘನೆ ಮಾಡಿದ ಅಧಿಕಾರಿಗಳ ಮಾಹಿತಿಯನ್ನು ಸರ್ಕಾರ ಕೇಳಿದೆ. ಈ ಹಂತದಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಎಂದರು

    ಹೊರಗುತ್ತಿಗೆಯಡಿ ಖಾತ್ರಿ ಕಾಮಗಾರಿ ಅನುಷ್ಠಾನಕ್ಕೆ ಇಂಜಿನಿಯರ್‍ಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಕೆಲವು ವರ್ಷಗಳಿಂದ ಟೆಂಡರ್ ಕರೆಯದೇ ನೇರವಾಗಿ ಒಂದೇ ಸಂಸ್ಥೆ ಮುಂದುವರಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿಯಿಂದಲೇ ನೇರವಾಗಿ ಟೆಂಡರ್ ಕರೆದು ಹೊರಗುತ್ತಿಗೆ ಸಂಸ್ಥೆಯನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಮತ್ತೊಮ್ಮೆ ಪತ್ರ ಬರೆದು ಅನುಮತಿ ಪಡೆಯಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಸಭೆಯ ಗಮನಕ್ಕೆ ತಂದರು.

   ಬೇಜಾಬ್ದಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಿ: ನೆರೆ ಹಾವಳಿಗೆ ತುತ್ತಾದ ಕಟ್ಟಡ, ರಸ್ತೆಗಳು, ಕೆರೆಗಳ ಬಗ್ಗೆ ಎಲ್ಲೆಲ್ಲಿ ಕಾಮಗಾರಿ ಮಾಡಲಾಗಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಕಳೆದ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಕೇಳಲಾಗಿತ್ತು. ಆದಾಗ್ಯೂ ಇದುವರೆಗೂ ಮಾಹಿತಿ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು ಜಿಲ್ಲಾ ಅಧ್ಯಕ್ಷರಿಗೆ ಮನವಿ ಮಾಡಿದರು.

   ಆರ್‍ಓ ಪ್ಲಾಂಟ್‍ಗಳಿಗೆ ಟಿಡಿಎಸ್ ಪ್ರಮಾಣ ಹೆಚ್ಚಳ ಮಾಡಿ: ಕುಡಿಯುವ ನೀರನಲ್ಲಿ ಇಂತಿಷ್ಟು ಪ್ರಮಾಣದ ಟಿಡಿಎಸ್ ಇರಬೇಕಿದ್ದು, ಆದರೆ ಜಿಲ್ಲೆಯ ಕೆಲವು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಶೇ 30 ರಷ್ಟು ಮಾತ್ರ ಟಿಡಿಎಸ್ ಪ್ರಮಾಣವಿದ್ದು, ಇದರಿಂದ ಕೆಲವಾರು ವರ್ಷಗಳ ನಂತರ ತೊಂದರೆಯಾಗುತ್ತದೆ. ಈ ಹಿನ್ನಲೆಯಲ್ಲಿ ನಿಗದಿತ ಪ್ರಮಾಣದಷ್ಟು ಟಿಡಿಎಸ್ ಅನುಪಾತವನ್ನು ನಿರ್ವಹಣೆ ಮಾಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸೂಚಿಸಿದರು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಅನಂತ್ ಹಾಗೂ ಸೌಭಾಗ್ಯ ಬಸವರಾಜನ್ ಸಭೆಯಲ್ಲಿ ಪ್ರಸ್ತಾಪಿಸಿದರು.

   ಇದೇ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿ 5ನೇ ಸ್ಥಾನ ಪಡೆದು ಉತ್ತಮ ಸಾಧನೆ ಮಾಡಿದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿಡಿಪಿಐ ಕೆ. ರವಿಶಂಕರ್ ರೆಡ್ಡಿ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಆತ್ಮೀಯವಾಗಿ ಸನ್ಮಾನಿಸಿದರು.

   ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೌಸಲ್ಯ ತಿಪ್ಪೇಸ್ವಾಮಿ, ತ್ರೀವೇಣಿ ಶಿವಪ್ರಸಾಸ್ ಗೌಡ, ನರಸಿಂಹರಾಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಟಿ.ಯೋಗೇಶ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap