ಬರದ ನಾಡಿಲ್ಲಿ ಉತ್ತರೆ ಅಬ್ಬರ.!

ಚಳ್ಳಕೆರೆ

   ತಾಲ್ಲೂಕಿನಾದ್ಯಂತ ಕಳೆದ ನಾಲ್ಕು ದಿನಗಳ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗಿ ಜನಜೀವ ಅಸ್ಥವ್ಯಸ್ಥವಾಗಿದೆ. ಪ್ರಸ್ತುತ ವರ್ಷದ ಹೆಚ್ಚಿನ ಪ್ರಮಾಣದ ಕಳೆದ ನಾಲ್ಕು ದಿನಗಳಿಂದ ಎಲ್ಲೆಡೆ ಸುರಿದಿದ್ದು, ಯಾವುದೇ ರೀತಿಯ ಜೀವ ಹಾನಿಯಾಗಿದ್ದರೂ ಸಹ ಮಳೆಯ ನೀರು ಕೆಲವೆಡೆ ಮನೆ, ಗುಡಿಸಲು, ಅಂಗಡಿ, ಹೊಲ, ಗದ್ದೆಗಳಿಗೆ ನುಗ್ಗಿ ನಷ್ಟವನ್ನುಂಟು ಮಾಡಿದೆ. ಆದರೆ, ಮಳೆಯ ಆಗಮದಿಂದ ಉಲ್ಲಾಸಿತರಾದ ಇಲ್ಲಿನ ಜನರು ನಷ್ಟದ ಬಗ್ಗೆ ಹೆಚ್ಚು ಚಿಂತಿಸದೆ ಮಳೆಯ ಆಗಮನಕ್ಕಾಗಿ ಸಂತಸ ವ್ಯಕ್ತ ಪಡಿಸಿದ್ದಾರೆ.

    ಸೆ.25 ರಿಂದ ಸೆ.28ರ ತನಕ ನಿರಂತರ ಮಳೆ ಬಂದಿದ್ದು, ಸೆ.27ರ ರಾತ್ರಿ ಬಿದ್ದ ಮಳೆಯ ಪ್ರಮಾಣ ಇಂತಿದೆ. ಚಳ್ಳಕೆರೆ 40.02, ಪರಶುರಾಮಪುರ 34.0, ದೇವರಮರಿಕುಂಟೆ 69.04, ತಳಕು 22.02 ಮತ್ತು ನಾಯಕನಹಟ್ಟಿ 16.06 ಮಳೆಯಾಗಿದೆ. ಪ್ರಸ್ತುತ ದಿನಾಂಕ 27ರ ರಾತ್ರಿ ಬಿದ್ದ ಮಳೆ ಪ್ರಮಾಣ 187 ಎಂ.ಎಂ ಇದ್ದು ಕಳೆದ ಗುರುವಾರ ರಾತ್ರಿ 48.04 ಮಳೆಯಾಗಿದ್ದು, ಎರಡು ದಿನಗಳ ಅವಧಿಯಲ್ಲೇ 230.02 ಮಳೆಯಾಗಿದ್ದು, ಈ ಹಿಂದೆ 343 ಎಂ.ಎಂಯಾಗಿದ್ದು, ಇಲ್ಲಿಯ ತನಕ ತಾಲ್ಲೂಕಿನಾದ್ಯಂತ ಒಟ್ಟು 573.04 ಮಳೆಯಾಗಿರುತ್ತದೆ.

     ಶುಕ್ರವಾರ ಬೆಳಗಿನ ಜಾವ ಸುರಿದ ಮಳೆಗೆ ನಗರದ ಪಾವಗಡ ರಸ್ತೆಯ ಹಳ್ಳ, ರಹೀಂನಗರದ ಹಳ್ಳ ತುಂಬಿ ಹರಿಯುತ್ತಿದ್ದು, ಚಳ್ಳಕೆರೆ ನಗರಕ್ಕೆ ಹೊಂದಿಕೊಂಡಿರುವ ಮೈರಾಡ ಕಾಲೋನಿಯ ಸುಮಾರು 15ಕ್ಕೂ ಹೆಚ್ಚು ಗುಡಿಸಲುಗಳಿಗೆ ರಭಸವಾಗಿ ನೀರು ನುಗ್ಗಿದ್ದು, ಗುಡಿಸಲಲಿದ್ದ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳಿಗಿ ಹಾನಿಯಾಗಿವೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಹಾನಿಯ ಸ್ಥಳವನ್ನು ವೀಕ್ಷಿಸಿ ಜಿಲ್ಲಾಧಿಕಾರಿಗಳಿಗೆ ಕೂಡಲೇ ವರದಿ ಕಳುಹಿಸಿ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಮೈರಾಡ ಕಾಲೋನಿಯ ಲಿಂಗಮ್ಮ, ತಿಮ್ಮಕ್ಕ, ಯಶೋಧಮ್ಮ, ಜಂಭಣ್ಣ, ನೇತ್ರಾವತಿ, ಸುಲೋಚನ, ರೇಣುಕಮ್ಮ, ಮಾರಕ್ಕ, ಅನ್ನಪೂರ್ಣಮ್ಮ, ಶಾಂತಮ್ಮ ಮುಂತಾದರ ಮನೆಗಳಿಗೆ ನೀರು ನುಗ್ಗಿರುತ್ತದೆ.

     ತಾಲ್ಲೂಕಿನ ದೊಡ್ಡೇರಿ ಗ್ರಾಮದ ಶ್ರೀಕನ್ನೇಶ್ವರ ಆಶ್ರಮದ ಮಲ್ಲಪ್ಪಸ್ವಾಮೀಜಿ ತಮ್ಮ ಮಠದ ವ್ಯಾಪ್ತಿಯಲ್ಲಿ ನಿರ್ಮಿಸುವ ಚೆಕ್ ಡ್ಯಾಂ ನೀರಿನಿಂದ ತುಂಬಿ ಹರಿಯುತ್ತಿದ್ದು, ಭೇಟಿ ನೀಡಿ ಹರಿಯುತ್ತಿದ್ದ ಗಂಗೆ ನಮಸ್ಕರಿಸಿದರು. ತಾಲ್ಲೂಕಿನ ದ್ಯಾವರನಹಳ್ಳಿ ಸರ್ಕಾರಿ ಜಮೀನಿನಲ್ಲಿ ನಿರ್ಮಿಸಿದ ಚೆಕ್ ಡ್ಯಾಂ ಹೊಡೆದು ಹೋಗಿದ್ದು ಕಳೆದ ತಿಂಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್‍ಆರ್‍ಇಜಿ ಯೋಜನೆಯಡಿ ಚೆಕ್ ಡ್ಯಾಂನನ್ನು ರಿಪೇರಿಗೊಳಿಸಿದ್ದು, ಶುಕ್ರವಾರ ಬಿದ್ದ ಮಳೆಗೆ ಪುನಃ ಚೆಕ್ ಡ್ಯಾಂ ಹೊಡೆದು ಹೋಗಿದ್ದು, ಸಾರ್ವಜನಿಕರು ಅಸಂತೋಷ ವ್ಯಕ್ತ ಪಡಿಸಿದ್ದಾರೆ.

ಮಳೆಯಿಂದಾದ ಹಾನಿ  

     ದೊಡ್ಡೇರಿ ಗ್ರಾಮದ ರೈತ ಸ್ವಾಮಿ ಎಂಬುವವರ ಜಮೀನಿಗೆ ನೀರು ನುಗ್ಗಿದ್ದು, ಅಲ್ಲಿನ ಟಮೋಟ ಸಂಪೂರ್ಣ ಜಲಾವೃತ್ತವಾಗಿದೆ. ದೊಣೆಹಳ್ಳಿ ಗ್ರಾಮದ ಸಣ್ಣಪ್ಪ ಎಂಬುವವರ ರಿ ಸರ್ವೆ 70/3ರ ಒಂದು ಎಕರೆ ಜಮೀನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಸಂಪೂರ್ಣವಾಗಿ ಮಳೆಗೆ ಕೊಚ್ಚಿಹೋಗಿದ್ದು, 1.50 ಲಕ್ಷ ನಷ್ಟ ಉಂಟಾಗಿದೆ. ಅದೇ ರೀತಿ ತಾಲ್ಲೂಕು ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಕೆರೆಯ ನೀರು ಕೆಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮವಾಗಿ ಎರಡು ಕುರಿ, ಒಂದು ಎಮ್ಮೆ, ಹೊಲದಲ್ಲಿದ್ದ ಈರುಳ್ಳಿ, ಶೇಂಗಾ ಬೆಳೆ ಸಂಪೂರ್ಣ ಆಳಾಗಿದೆ.

    ಕೆ.ಡಿ.ಕೋಟೆ ಗ್ರಾಮದಲ್ಲೂ ಸಹ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಹಿರೇಹಳ್ಳಿ ಗ್ರಾಮದಲ್ಲಿ ಮಳೆಯಿಂದ ಬಸಮ್ಮ ಕೋಂ ಕೊಲ್ಲಾರಯ್ಯ, ಗುರುಸಿದ್ದಪ್ಪ ಕೋಂ ದಡ್ಡಪ್ಪ ಎಂಬುವವರ ಎರಡು ಮನೆಯ ಮೇಲ್ಛಾವಣೆ ಕುಸಿದು ಬಿದ್ದು, 20 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ. ತಾಲ್ಲೂಕಿನ ತಳಕು ಹೋಬಳಿ ಓಬಣ್ಣನಹಳ್ಳಿ ಬೆಲ್ದಾರಹಟ್ಟಿಯಲ್ಲಿ ಅಂಜಿನಮ್ಮ ಎಂಬುವವರ ಮನೆ ಬಿದ್ದು 10 ಸಾವಿರ ನಷ್ಟ ಸಂಭವಿಸಿರುತ್ತದೆ. ತಾಲ್ಲೂಕಿನ ಘಟಪರ್ತಿ ಗ್ರಾಮದಲ್ಲಿ ಲಕ್ಷ್ಮಿದೇವಿ ಕೋಂ ಚಂದ್ರಣ್ಣ, ರತ್ನಮ್ಮ ಕೋಂ ಶಿವಣ್ಣ ಮತ್ತು ಲಕ್ಷ್ಮೀದೇವಿ ಕೋಂ ಹನುಮಂತರೆಡ್ಡಿ ಇವರುಗಳ ಮನೆಗಳ ಗೋಡೆ ಬಿದ್ದು ಸುಮಾರು 60 ಸಾವಿರ ನಷ್ಟ ಸಂಭವಿಸಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link