ಸಮೂಹದ ಜೊತೆಗಿದ್ದೆ ಪ್ರಕಾಶಮಾನರಾದ ವಚನಕಾರರು

ದಾವಣಗೆರೆ:

        12ನೇ ಶತಮಾನದ ಶರಣರು ಸಮೂಹದ ಜೊತೆ ಇದ್ದುಕೊಂಡೇ ಪ್ರಕಾಶಮಾನರಾದರು ಎಂದು ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

        ಇಲ್ಲಿಗೆ ಸಮೀಪದ ಹೆಬ್ಬಾಳು ವಿರಕ್ತಮಠದಲ್ಲಿ ಶುಕ್ರವಾರ ಸಂಜೆ ರುದ್ರೇಶ್ವರರ ಕಾರ್ತಿಕ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಆಕಾಶ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ, ಆಶೀರ್ವಚನ ನೀಡಿದ ಅವರು, ಸಮೂಹದ ಜೊತೆ ಇದ್ದುಕೊಂಡು, ಸಾಮೂಹಿಕ ಸಾಧನೆಯನ್ನು ಇಂದು ಮಠಗಳು, ಸ್ವಾಮೀಜಿಗಳು ಮಾಡುತ್ತಾ ಪ್ರಕಾಶಮಾನರಾಗುತ್ತಿದ್ದಾರೆ ಎಂದು ಮಾತನಾಡಿದರು.

        ಭೂಮಂಡಲದ ಆಚೆ ವಾಯು ಮಂಡಲ, ಸೌರಮಂಡಲ, ಅದರಾಚೆ ತಾರಾಮಂಡಲ ಇದೆ. ಇಂತಹ ಮಂಡಲಗಳ ನಡುವೆ ಮಾನವನ ಬದುಕು ನಡೆಯುತ್ತಿದೆ. ಮಾನವನ ಒಳಗೂ ಒಂದು ನರಮಂಡಲ ಇದೆ. ಈ ನರಮಂಡಳ ಒಳಗೆ ಪ್ರಕಾಶಮಾನವೂ ಇದೆ. ಅದು ಬಹಿರಂಗದ ಪ್ರಕಾಶವನ್ನು ಬೆಳಗಿಸುತ್ತಾ ಪ್ರಕಾಶಮಾನವರಾಗಬೇಕು. ಅಂತರಂಗgದ ಪ್ರಕಾಶದೆಡೆ ಸಾಗಬೇಕಾಗಿದೆ, ಆಧ್ಯಾತ್ಮಿಕವಾದ ಪ್ರಕಾಶಬೇಕು. ನಮ್ಮೊಳಗಿನ ಪ್ರಬುದ್ಧತೆಯ ಹಣತೆಯನ್ನು ಹೊತ್ತಿಸಬೇಕು. ಬಸವ, ಅಲ್ಲಮಪ್ರಭು ಪ್ರಬುದ್ಧತೆಯ ದೀಪ ಬೆಳಗಿಸಿ, ಪ್ರಕಾಶವಾಗಿ ಬೆಳಗಿದರು ಎಂದರು.

       ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಆಕಾಶದೀಪವಾಗಿ ಬಂದವರು ಬಸವಣ್ಣನವರು. 21ನೇ ಶತಮಾನದ ಆಕಾಶದೀಪವಾಗಿ ಡಾ.ಶಿವಮೂರ್ತಿ ಮುರುಘಾ ಶರಣರು ಬಂದಿದ್ದಾರೆ ಎಂದರು.

      ದ್ವೇಷ ಎನ್ನುವ ಕತ್ತಲೆ ನಮ್ಮಲ್ಲಿ ತುಂಬಿಕೊಂಡಿದೆ. ಅದು ಹೋಗಬೇಕು. ಅರಿವಿನ ಬೆಳಕು ಮೂಡಬೇಕು. ಯಾರಿಗೆ ಹೃದಯ ವೈಶಾಲ್ಯತೆ ಇದೆಯೋ ಅವರೇ ನಿಜವಾದ ಶ್ರೀಮಂತರು. ನಾವು ಹಣ, ಆಸ್ತಿ ಮಾಡುವುದಕ್ಕಿಂತಲೂ ಹೃದಯ ವೈಶಾಲ್ಯತೆಯಿಂದ ಶ್ರೀಮಂತರಾಗಬೇಕು. ಶರಣರು ಹೃದಯ ವೈಶಾಲ್ಯತೆಯ ಶ್ರೀಮಂತರಾಗಿದ್ದರು ಎಂದರು.

        ಹಿರಿಯ ಸಾಹಿತಿ ಕೆ.ಎನ್.ಸ್ವಾಮಿ ಮಾತನಾಡಿ, ನಾವುಗಳು ಇಂದು ಕಾಯಕ ಸಂಸ್ಕತಿಯನ್ನು ಮರೆಯುತ್ತಿದ್ದೇವೆ. ಬಸವಾದಿ ಪ್ರಮಥರು ಮೊದಲು ಕಾಯಕ ಮಾಡುತ್ತಿದ್ದರು. ಇದರಿಂದ ಅಂದಿನ ಜನರು ಸುಖಕರ ಜೀವನ ನಡೆಸುತ್ತಿದ್ದರು. ಬಸವಾದಿ ಪ್ರಮಥರ ಆದರ್ಶಗಳಿಂದ ಪ್ರಪಂಚ ಸಮೃದ್ಧವಾಗುತ್ತದೆ ಎಂದರು.

        ಇಂದು ಜನರು ಪರಾವಲಂಬಿಗಳಾಗುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ವಿಶಾದಿಸಿದ ಅವರು, ನಾವು ಸ್ವಾವಲಂಬಿಗಳಾಗಬೇಕು. ನಮ್ಮ ನಡೆ-ನುಡಿ ನಮಗೆ ಭೂಷಣವಾಗಬೇಕು. ಕಾಯಕ ಮತ್ತು ದಾಸೋಹದಿಂದ ಮಾತ್ರ ಸಮಾಜ ಅಭಿವೃದ್ಧಿ ಹೊಂದುತ್ತದೆ ಎಂದರು.

        ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ನಮ್ಮ ಹೃದಯದಲ್ಲಿ ಜ್ಞಾನವೆಂಬ ದೀಪ ಇದೆ. ಅದು ಬೆಳಗಬೇಕು. ದೇಹವೆಂಬ ದೇಗುಲದಲ್ಲಿ ಜ್ಞಾನದ ದೀಪ ಹಚ್ಚಬೇಕು. ಅನಾರೋಗ್ಯಕರವಾದ ದುಶ್ಚಟಗಳನ್ನು ಬಿಟ್ಟು, ಆರೋಗ್ಯಕರ ಸಮಾಜ ನಿರ್ಮಿಸಬೇಕಾಗಿದೆ ಎಂದರು.

       ಸಿಗ್ಗಾಂವಿಯ ಶ್ರೀ ಸಂಗನಬಸವ ಶ್ರೀಗಳು ಮಾತನಾಡಿ, ವೈಭವದ ಜೀವನಕ್ಕೆ ಮಾರು ಹೋಗುವುದರಿಂದ ನಮಗೆ ಯೋಗ ದೂರವಾಗುತ್ತದೆ. ಬಸವಾದಿ ಶರಣರು ವೈಚಾರಿಕ ನೆಲೆಗಟ್ಟಿನ ಮೇಲೆ ಸಮಾಜವನ್ನು ಕಟ್ಟಿದರು ಎಂದರು.

       ಕಾರ್ಯಕ್ರಮದಲ್ಲಿ ಚಿತ್ರದುರ್ಗ ಮುರುಘಾ ಮಠ ವಿದ್ಯಾಪೀಠದ ಕಾರ್ಯದರ್ಶಿ ಪರಮಶಿವಯ್ಯ, ಕಾರ್ಯನಿರ್ವಾಹಣಾಧಿಕಾರಿ ದೊರೆಸ್ವಾಮಿ, ಹೆಬ್ಬಾಳು ಗ್ರಾಮದ ನಿವೃತ್ತ ಶಿಕ್ಷಕ ರುದ್ರಾಚಾರ್ ಸೇರಿದಂತೆ ಮತ್ತಿತರ ಇದ್ದರು. ಬಸವ ಕಲಾಲೋಕದವರು ವಚನ ಪ್ರಾರ್ಥನೆ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link