ಕನಿಷ್ಠ ವೇತನಕ್ಕಾಗಿ ಬಿಸಿಯೂಟ ತಯಾರಕರ ಒತ್ತಾಯ

ದಾವಣಗೆರೆ

          ಕನಿಷ್ಠ ವೇತನ ನಿಗದಿಮಾಡಬೇಕು. ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟ ಪೂರೈಸಲು ಅನುವು ಮಾಡಿಕೊಡುವ ನಿರ್ಧಾರವನ್ನು ಕೈಬಿಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ, ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ಗುರುವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

          ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನಾ ಧರಣಿ ನಡೆಸಿದ ಬಿಸಿಯೂಟ ತಯಾರಕರು ತಮ್ಮ ಬೇಡಿಕೆಗಳನ್ನು ಈಡೇರಿಸದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

          ಈ ಸಂದರ್ಭದಲ್ಲಿ ಮಾತನಾಡಿದ ಎಐಟಿಯುಸಿ ಮುಖಂಡ ಹೆಚ್.ಕೆ.ರಾಮಚಂದ್ರಪ್ಪ, ಕಳೆದ 16 ವರ್ಷಗಳಿಂದ ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 1,18,000 ಮಹಿಳೆಯರು ಅತ್ಯಂತ ಕಡಿಮೆ ವೇತನದಲ್ಲಿ ಕೆಲಸ ಮಾಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಿ, ಉಣಬಡಿಸಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸಲು ಕಾರಣೀಭೂತರಾಗಿದ್ದಾರೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತಿಲ್ಲ ಎಂದು ಆರೋಪಿಸಿದರು.

          ಬಿಸಿಯೂಟ ತಯಾರಿಕರಿಗೆ 18 ಸಾವಿರ ರೂ. ಕನಿಷ್ಠ ವೇತನ ನಿಗದಿ ಮಾಡಬೇಕೆಂದು ಹಲವಾರು ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಾ, ಸರ್ಕಾರಗಳಿಗೆ ಮನವಿ ಸಲ್ಲಿಸುತ್ತಾ ಬಂದರೂ ಸಹ ಸರ್ಕಾರಗಳು, ದುಡಿಯುವ ಮಹಿಳೆಯರನ್ನು ಶಾಶ್ವತವಾಗಿ ಕಡೆಗಣಿಸುತ್ತಾ ಬಂದಿವೆ ಎಂದು ಆರೋಪಿಸಿದರು.

            ಮುಖ್ಯ ಅಡುಗೆಯವರು 2700 ರೂ. ಹಾಗೂ ಅಡುಗೆ ಸಹಾಯಕಿಯರು 2600 ರೂ.ಗಳಿಗೆ ಕಾರ್ಯನಿರ್ವಹಿಸುತ್ತಿದ್ದು, ಈ ಅತ್ಯಲ್ಪ ಸಂಭಾವನೆಯಲ್ಲಿ ಜೀವನ ನಡೆಸುವುದು ಅತ್ಯಂತ ದುಸ್ತರವಾಗಿದೆ. ಅದರಲ್ಲೂ ಕೇಂದ್ರ ಸರ್ಕಾರ ಈ ಬಿಸಿಯೂಟ ನೌಕರರಿಗೆ ನಯಾ ಪೈಸೆ ವೇತನ ಹೆಚ್ಚಳ ಮಾಡಿಲ್ಲ. ಬದಲಿಗೆ ಅಡುಗೆಯವರ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ಫೆಡರೇಷನ್‍ನ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಕೇಂದ್ರ ಸರ್ಕಾರ ಬಿಸಿಯೂಟ ತಯಾರಕರಿಗೆ 18 ಸಾವಿರ ರೂ.ಗಳನ್ನು ಕನಿಷ್ಠ ವೇತನವನ್ನಾಗಿ ಜಾರಿಗೆ ತರಬೇಕು. ಶಾಲಾ ಬಿಸಿಯೂಟ ಪೂರೈಕೆಯನ್ನು ಇಸ್ಕಾನ್ ಹಾಗೂ ಮತ್ತಿತರೆ ಖಾಸಗಿ ಸಂಸ್ಥೆಗಳಿಗೆ ಕೊಡುವ ಹುನ್ನಾರವನ್ನು ತಕ್ಷಣವೇ ಕೈಬಿಡಬೇಕು. ಉದ್ಯೋಗ ಭದ್ರತೆ ಒದಗಿಸಿ, ಬಿಸಿಯೂಟ ತಯಾರಕರನ್ನು ಶಾಲಾ ಸಿಬ್ಬಂದಿಗಳನ್ನಾಗಿ ಪರಿಗಣಿಸಬೇಕು. ಪಿಎಫ್, ಇಎಸ್‍ಐ ಸೌಲಭ್ಯ ಕಲ್ಪಿಸಬೇಕು. 2 ಲಕ್ಷ ರೂ. ಅಪಘಾತ ಹಾಗೂ 5 ಲಕ್ಷ ರೂ. ಮರಣ ಪರಿಹಾರ ನಿಡಬೇಕು. ದಸರಾ ಮತ್ತು ಬೇಸಿಗೆ ರಜೆಯ ಸಂಬಳ ನೀಡಬೇಕು. 3 ಸಾವಿರ ನಿವೃತ್ತಿ ಪಿಂಚಣಿ ಮತ್ತು 2 ಲಕ್ಷ ರೂ. ಇಡುಗಂಡು ಹಣ ಕೊಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು.

         ಪ್ರತಿಭಟನೆಯಲ್ಲಿ ಫೇಡರೇಷನ್‍ನ ರುದ್ರಮ್ಮ ಬೆಳಲಗೆರೆ, ಸಿ.ರಮೇಶ್, ಗುಡಿಹಳ್ಳಿ ಹಾಲೇಶ್, ವನಜಾಕ್ಷಮ್ಮ, ಅರುಣಾ, ಪ್ರಮೀಳಾ ಹರಿಹರ, ಲಲಿತಮ್ಮ ಹೊನ್ನಾಳಿ, ಪದ್ಮ, ಬೊಮ್ಮಕ್ಕ ಜಗಳೂರು, ಚನ್ನಮ್ಮ ಜಗಳೂರು, ಕಣಮಕ್ಕ, ಎಯಟಿಯುಸಿ ಮುಖಂಡರಾದ ಆವರಗೆರೆ ವಾಸು, ಐರಣಿ ಚಂದ್ರು, ಲೋಕಿಕೆರೆ ಅಂಜಿನಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link